ಕಿಡಿಗೇಡಿಗಳು ಚಪ್ಪಲಿ ಎಸೆದ ಬಳಿಕ ದರ್ಶನ್ ಹೇಳಿದ ಮಾತೇನು? ಫ್ಯಾನ್ಸ್ ಭಾವುಕರಾಗಿದ್ದೇಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆ (ಡಿಸೆಂಬರ್ 18) ತಮ್ಮ 'ಕ್ರಾಂತಿ' ಸಿನಿಮಾದ ತಂಡದೊಂದಿಗೆ ಹೊಸಪೇಟೆಗೆ ಹೋಗಿದ್ದರು. ಅಲ್ಲಿ 'ಕ್ರಾಂತಿ' ಚಿತ್ರದ ಎರಡನೇ ಹಾಡು 'ಬೊಂಬೆ ಬೊಂಬೆ..'ಯನ್ನು ರಿಲೀಸ್ ಮಾಡಿದ್ದಾರೆ.
ದರ್ಶನ್ ಹೊಸಪೇಟೆ ಬರುತ್ತಿರೋ ಅನ್ನೋ ವಿಷಯ ಗೊತ್ತಾಗುತ್ತಿದ್ದಂತೆ ಅಪ್ಪು ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿತ್ತು. 'ಕ್ರಾಂತಿ' ಪೋಸ್ಟರ್ ಹಾಗೂ ಬ್ಯಾನರ್ ಮುಂದೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಅಪ್ಪು ಕಟೌಟ್ ನಿಲ್ಲಿಸಿದ್ದರು. ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಹಾಗೇ 'ಕ್ರಾಂತಿ' ವೇದಿಕೆ ಮೇಲೆ ಅಪ್ಪು ಬ್ಯಾನರ್ ಹಿಡಿದು ಜೈಕಾರ ಹಾಕಿದ್ದರು.
ದರ್ಶನ್ ವೇದಿಕೆಗೆ ಬರುವ ಮುನ್ನ ಅಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಅಪ್ಪು ಫ್ಯಾನ್ಸ್ ಸಮಾಧಾನಗೊಂಡರು. ಇನ್ನೇನು ಫ್ಯಾನ್ಸ್ ವಾರ್ ಕಡಿಮೆ ಆಯ್ತು ಅನ್ನೋವಾಗಲೇ ದರ್ಶನ್ ಮೇಲೆ ಯಾರೋ ಕಿಡಿಗೇಡಿ ಚಪ್ಪಲಿ ಎಸೆದಿದ್ದಾನೆ. ಆ ಬಳಿಕ ದರ್ಶನ್ ಆಡಿದ ಮಾತುಗಳು ಅಭಿಮಾನಿಗಳ ಮೆಚ್ಚುಗೆ ಗಳಿಸುತ್ತಿದೆ.

ದರ್ಶನ್ ಮೇಲೆ ಚಪ್ಪಲಿ ಎಸೆತ
'ಕ್ರಾಂತಿ' ಸಿನಿಮಾದ "ಬೊಂಬೆ ಬೊಂಬೆ.." ಹಾಡಿನ ಬಗ್ಗೆ ಮಾತಾಡಲು ರಚಿತಾ ರಾಮ್ ಮುಂದೆ ಬಂದಿದ್ದರು. ಇನ್ನೇ ರಚಿತಾ ಮಾತು ಆರಂಭಿಸಬೇಕು ಅನ್ನುವಷ್ಟರಲ್ಲಿಯೇ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾನೆ. ತಕ್ಷಣಕ್ಕೆ ಸಂಭಾಳಿಸಿಕೊಂಡ ದರ್ಶನ್ ತಾಳ್ಮೆಯಿಂದಲೇ ಅಭಿಮಾನಿಗಳಿಗೆ ಮಾತನ್ನು ಹೇಳಿದ್ದರು. ದರ್ಶನ್ ಆಡಿದ ಆ ಮಾತು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

ದರ್ಶನ್ ಆಡಿದ ಮಾತೇನು?
ದರ್ಶನ್ ಮೇಲೆ ಚಪ್ಪಲಿ ಎಸೆದ ವಿಡಿಯೋ ವೈರಲ್ ಆಗುತ್ತಿದೆ. ಹಾಗೆ ಇನ್ನೊಂದು ವಿಡಿಯೋ ಕೂಡ ಅಷ್ಟೇ ವೈರಲ್ ಆಗುತ್ತಿದೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಬಳಿಕ ಅಭಿಮಾನಿಗಳಿಗೆ ಏನು ಹೇಳಿದ್ರು? ಅನ್ನೋ ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಂದ್ಹಾಗೆ ದರ್ಶನ್ ಅಭಿಮಾನಿಗಳಿಗೆ "ತಪ್ಪೇನಿಲ್ಲ ಚಿನ್ನ ಪರ್ವಾಗಿಲ್ಲ" ಎಂದು ಹೇಳಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ದೊಡ್ಡವರಾದ್ರಿ ಎಂದು ಹೇಳುತ್ತಿದ್ದಾರೆ.

ದರ್ಶನ್ ಫ್ಯಾನ್ಸ್ ಆಕ್ರೋಶ
ಈ ಘಟನೆ ನಡೆಯುತ್ತಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. "ಚಪ್ಪಾಳೆ ತಟ್ಟುವ ಕೈಗೆ ಚಪ್ಪಲಿ ಬಂದಾಗ, ಮಲೀನವಾಗಿದ್ದು ಆ ಕೈಗಳೇ ಹೊರತು ಕಲಾವಿದನಲ್ಲ" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. " ಇಡೀ ಜಗತ್ತೇ ನಿಮ್ಮ ವಿರುದ್ಧ ನಿಂತರೂ ಆ ಜಗತ್ತಿನ ವಿರುದ್ಧ ನಾವು ನಿಲ್ಲುತ್ತೇವೆ." ಎಂದು ಇನ್ನೊಬ್ಬರು ಕಮೆಂಟ್ ಮಾಡುತ್ತಿದ್ದಾರೆ.

WeStandWithDboss ಅಭಿಯಾನ ಆರಂಭ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಬಳಿಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. #WeStandWithDboss ಅಭಿಯಾನವನ್ನು ಶುರು ಮಾಡಿದ್ದಾರೆ. " ಒಗ್ಗಟ್ಟಿನಲ್ಲಿ ಬಲ ಇದೆ. ಅಂದು ಹತ್ತು ನರಿಗಳು ಸೇರಿ ಒಂದು ಸಿಂಹವನ್ನು ಬೇಟೆಯಾಡಲು ಸಾಧ್ಯವಿಲ್ಲ" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡಿದ ಕಿಡಿಗೇಡಿಗಳ ವಿರುದ್ಧವೂ ಅಭಿಮಾನಿಗಳು ಕಿಡಿಕಾಡುತ್ತಿದ್ದಾರೆ.


Click it and Unblock the Notifications











