ಕೆಚ್ಚೆದೆಯ ಕಿಚ್ಚ ಕಂಡಂತೆ ಹೇಗಿದೆ ಯುವ - ಹವಾ ? ಯುವರಾಜ್ ಕುಮಾರ್ ಬಗ್ಗೆ ಸುದೀಪ್ ಹೇಳಿದ್ದೇನು ?
ಯಾರು ಏನೇ ಹೇಳಲಿ ಯುವರಾಜ್ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ ಯುವ ಗೆದ್ದಿದೆ ಅನ್ನುವುದು ದೊಡ್ಮನೆಯ ಅಭಿಮಾನಿಗಳ ಅಭಿಮಾನದ ಮಾತು. ಇದಕ್ಕೆ ಪೂರಕವಾಗಿ ಯುವ ರಾಜ್ಯದೆಲ್ಲೆಡೆ ಯಶಸ್ವೀ ಪ್ರದರ್ಶನವನ್ನ ಕಾಣ್ತಿದೆ. ಎರಡು ವಾರಗಳನ್ನ ಪೂರೈಸಿ, ಮೂರನೇ ವಾರಕ್ಕೆ ಕಾಲಿಟ್ಟಿದೆ.
ಇನ್ನೂ.. ಚಿತ್ರತಂಡ ಕೂಡ, ಮೊನ್ನೆಯಷ್ಟೇ.. ಯುವ ಚಿತ್ರದ ಪತ್ರಿಕಾಗೋಷ್ಠಿ ಆಯೋಜಿಸಿ ಚಿತ್ರಕ್ಕೆ ಕನ್ನಡಿಗರಿಂದ ಸಿಕ್ತಿರುವ ಪ್ರೀತಿಗೆ ಮನ ತುಂಬಿ ಬಂದಿದೆ ಎಂದು ಹೇಳಿದೆ. ಎರಡು ವಾರ ಕಳೆದು ಮೂರನೇ ವಾರದಲ್ಲಿಯೂ ಜನ ಕುಟುಂಬ ಸಮೇತ ಬಂದು ಸಿನಿಮಾ ನೋಡುತ್ತಿದ್ದಾರೆ, ಚಿತ್ರ ಗೆದ್ದಿದೆ ಅನ್ನುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂಬರ್ಥದಲ್ಲಿ ಮಾತನಾಡಿ ಸಂಭ್ರಮವನ್ನೂ ಪಟ್ಟಿದೆ.
ಇದರ ನಡುವೆ, ಯುವ ಹವಾ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತನಾಡಿದ್ದಾರೆ. ಯುವರಾಜ್ ಕುಮಾರ್ ಅವರ ಶ್ರಮ..ಶ್ರದ್ದೆಗೆ ಸಂಪೂರ್ಣ ಅಂಕ ಕೊಟ್ಟಿದ್ದಾರೆ. ಇಡೀ ಚಿತ್ರತಂಡಕ್ಕೆ ಶುಭಾಶಯವನ್ನೂ ಹೇಳಿದ್ದಾರೆ ಕಿಚ್ಚ ಸುದೀಪ್.
ಹೌದು, ಸ್ವಲ್ಪ ತಡವಾದರೂ ಸರಿ ಯುವರಾಜ್ ಕುಮಾರ್ ಅವರ ಮೊದಲ ಕನಸು ಯುವ ಚಿತ್ರವನ್ನ, ಕಣ್ತುಂಬಿಕೊಂಡಿರುವ ಸುದೀಪ್, ಯುವರಾಜ್ ಕುಮಾರ್ ಅವರ ಡ್ಯಾನ್ಸ್ ಕಂಡು ಬೆಕ್ಕಸ ಬೆರಗಾಗಿದ್ದಾರೆ. ಇದಕ್ಕೆ ಕೈಗನ್ನಡಿಯೆಂಬಂತೆ ನೃತ್ಯ ನಿಮ್ಮ ರಕ್ತದಲ್ಲಿಯೇ ಇದೆ ಎಂದಿರುವ ಸುದೀಪ್, ಬೆಳ್ಳಿಪರದೆಯಲ್ಲಿ ಸೊಗಸಾಗಿ ಕಾಣ್ತೀರಾ ಎಂದು ಯುವಗೆ ಅಭಿನಂದನೆ ಸಲ್ಲಿಸಿದ್ದಾರೆ. ಯುವ ಸಾಮರ್ಥ್ಯವನ್ನ ಹೊರ ತಂದಿದ್ದಕ್ಕಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರನ್ನೂ ಕೂಡ ಮನಸಾರೆ ಶ್ಲಾಘಿಸಿದ್ದಾರೆ ಅಭಿನಯ ಚಕ್ರವರ್ತಿ ಸುದೀಪ್.

ಇನ್ನೂ ಯುವರಾಜ್ ಕುಮಾರ್ ಹೀಗೆ ಬಂದು ಹಾಗೇ ಹೋಗಲು ಬಂದಿಲ್ಲ ಎಂದಿರುವ ಸುದೀಪ್, ನೀವು ಉಳಿಯಲು ಇಲ್ಲಿದ್ದೀರಿ ಎಂದಿದ್ದಾರೆ. ತಮಗಾಗಿ ವಿಶೇಷ ಪ್ರದರ್ಶನವನ್ನ ಆಯೋಜಿಸಿದ್ದಕ್ಕೆ ಹೊಂಬಾಳೆ ಸಂಸ್ಥೆಗೆ ಧನ್ಯವಾದವನ್ನೂ ಹೇಳಿದ್ದಾರೆ.
ತಮ್ಮ ಮನದ ಮಾತುಗಳಿಗೆ ಅಕ್ಷರದ ರೂಪ ನೀಡಿ, ತಮ್ಮ ಸಾಮಾಜಿಕ ಜಾಲತಾಣದಲ್ಲಿ.. ಯುವ ಚಿತ್ರದ ಬಗ್ಗೆ ಸುದೀಪ್ ಬರೆದುಕೊಂಡ ಬೆನ್ನಲ್ಲಿಯೇ, ದೊಡ್ಮನೆಯ ಭಕ್ತಗಣ ಸುದೀಪ್ ಅವರಿಗೆ ಧನ್ಯವಾದ ಹೇಳುತ್ತಿದೆ. ಇನ್ನೂ ಯುವನ ಸಿರಿ ಸಪ್ತಮಿಗೌಡ ನಿಮ್ಮ ಪ್ರೋತ್ಸಾಹಕ್ಕೆ ಸದಾ ಆಭಾರಿ ಎಂದಿದ್ದಾರೆ.

ಕನ್ನಡದ ಕಲಾ ಪ್ರೇಮಿಗಳಿಗೆ ಧನ್ಯವಾದ ತಿಳಿಸಿದ್ದ ಯುವ
ಯುವ ಚಿತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆಯ ಫಲವಾಗಿ, ಮೊನ್ನೆ ಆಯೋಜಿಸಲಾಗಿದ್ದ ಸಕ್ಸಸ್ ಮೀಟ್‌ನಲ್ಲಿ ಮಾತನಾಡಿದ್ದ ಯುವರಾಜ್ ಕುಮಾರ್ ಪ್ರಥಮವಾಗಿ ನಾನು ನನಗೆ ಅವಕಾಶ ನೀಡಿದ ಹೊಂಬಾಳೆ ಸಂಸ್ಥೆಯ ವಿಜಯ್ ಕಿರಗಂದೂರ್ ಅವರಿಗೆ, ನಿರ್ದೇಶಕ ಸಂತೋಷ್ ಆನಂದರಾಮ್ ಅವರಿಗೆ ಕೃತಜ್ಞತೆ ತಿಳಿಸುತ್ತೇನೆ ಎಂದಿದ್ದರು.
ನನ್ನ ಸಹ ಕಲಾವಿದರ ಹಾಗೂ ತಂತ್ರಜ್ಞರ ಪ್ರೋತ್ಸಾಹವನ್ನು ಈ ಸಮಯದಲ್ಲಿ ನೆನೆಯುತ್ತೇನೆ ಎಂದಿದ್ದರು. ಇನ್ನೂ ಮೊದಲ ಚಿತ್ರದಲ್ಲಿ ನನ್ನಿಂದೇನಾದರೂ ಸಣ್ಣಪುಟ್ಟ ತಪ್ಪಾಗಿದ್ದರೆ ಮುಂದಿನ ಚಿತ್ರಗಳಲ್ಲಿ ಸರಿ ಪಡಿಸಿಕೊಳ್ಳುತ್ತೇನೆ ಎಂದಿದ್ದ ಯುವರಾಜ್ ಕುಮಾರ್ ಜನ ಫ್ಯಾಮಿಲಿ ಸಮೇತ ಬಂದು ಚಿತ್ರವನ್ನು ನೋಡುತ್ತಿರುವುದು ಬಹಳ ಖುಷಿಯಾಗಿದೆ. ಈ ಮೂಲಕ ರಾಜ್ಯದ ಜನತೆಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೈ ಮುಗಿದಿದ್ದರು.
ಒಟ್ನಲ್ಲಿ ಯುವರಾಜ್ ಕುಮಾರ್ ಅಭಿನಯದ ಮೊದಲ ಸಿನಿಮಾ ಯುವ ಗೆದ್ದಿದೆ ಎಂದು ವಿಜಯ್ ಕಿರಗಂದೂರ್ ನೇತೃತ್ವದ ಹೊಂಬಾಳೆ ಸಂಸ್ಥೆ ಹೇಳಿದೆ. ಸಾಮಾಜಿಕ ಜಾಲತಾಣದ ಮೂಲಕ ಸುದೀಪ್ ಅವರಿಂದ ಶುಭಾಶಯದ ಪತ್ರವೂ ಬಂದಿದೆ. ಎರಡು ವಾರ ಯಶಸ್ವೀ ಪ್ರದರ್ಶನ ಕಂಡ ಸಿನಿಮಾ, ಮೂರನೇ ವಾರಕ್ಕೆ ಲಗ್ಗೆ ಇಟ್ಟಿದೆ.


Click it and Unblock the Notifications












