ಪವಿತ್ರಾ ಗೌಡ ಬಂಧನದ ಬಳಿಕ ಮಾಜಿ ಪತಿ ಸಂಜಯ್ ಸಿಂಗ್ ಪ್ರತ್ಯಕ್ಷ: ಮಾಜಿ ಪತ್ನಿ ಬಗ್ಗೆ ಹೇಳಿದ್ದೇನು?
ದರ್ಶನ್ ಹಾಗೂ ಪವಿತ್ರಾ ಗೌಡ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ಚಿತ್ರಹಿಂಸೆ ಕೊಟ್ಟು ಮರ್ಡರ್ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್ ಹಾಗೂ ಪವಿತ್ರಾ ಗೌಡರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಮಧ್ಯೆ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಜೊತೆಗಿನ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಕೆಲವು ದಿನಗಳ ಹಿಂದಷ್ಟೇ ಪವಿತ್ರಾ ಗೌಡ ಹಂಚಿಕೊಂಡಿದ್ದರು. ಆ ವೇಳೆ ಪವಿತ್ರಾ ಗೌಡ ಮಾಜಿ ಪತಿಯ ಫೋಟೊಗಳನ್ನು ದರ್ಶನ್ ಪತ್ನಿ ವಿಜಯಲಕ್ಷ್ಮಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಅಲ್ಲಿಂದ ಸಂಜಯ್ ಸಿಂಗ್ ಅನ್ನೋ ಹೆಸರು ಬೆಳಕಿಗೆ ಬಂದಿತ್ತು. ಪವಿತ್ರಾ ಗೌಡಗೆ ದರ್ಶನ್ ಕಾಂಟೆಕ್ಟ್‌ಗೆ ಬರುವ ಮುನ್ನ ಸಂಜಯ್ ಸಿಂಗ್ ಪರಿಚಯ ಆಗಿದ್ದರು. ಅದು ಪ್ರೀತಿಗೆ ತಿರುಗಿ ಮದುವೆ ಕೂಡ ಆಗಿದ್ದರು. ಇಬ್ಬರು ಹೆಣ್ಣು ಮಗಳು ಕೂಡ ಇದ್ದಾರೆ. ಈಗ ಪವಿತ್ರಾ ಗೌಡ ಅರೆಸ್ಟ್ ಆದ ಬೆನ್ನಲ್ಲೇ ಸಂಜಯ್ ಸಿಂಗ್ ಪಬ್ಲಿಕ್ ಟಿವಿಗೆ ತಮ್ಮ ಮದುವೆ, ವಿಚ್ಚೇದನ ಹಾಗೂ ಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಪ್ರತಿಕ್ರಿಯೆ ಹೀಗಿದೆ. " ಹೌದು.. ನಾನು ಯುಪಿಯ ಹುಡುಗ. 2002ರಲ್ಲಿ ಬೆಂಗಳೂರಿಗೆ ಬಂದಿದ್ದೆ. ಆ ಟೈಮ್‌ನಲ್ಲಿ ನನಗೆ ಪವಿತ್ರಾ ಗೌಡ ಪರಿಚಯ ಆಗಿ, ಪ್ರೀತಿ ಆಗಿ, ಮದುವೆ ಆಗಿರೋದು. ಮಗಳ ಜೊತೆ ವರ್ಷಕ್ಕೆ ಒಂದು ಸಾರಿನೋ.. ಎರಡು ವರ್ಷಕ್ಕೆ ಒಂದು ಸಾರಿನೋ ಫೋನ್‌ನಲ್ಲಿ ಮಾತಾಡುತ್ತೀನಿ. ಆದರೆ, ಡೈರೆಕ್ಟ್ ಆಗಿ ಮಾತಾಡೋಕೆ ಆಗಲ್ಲ. ಯಾಕಂದ್ರೆ ಅವಳ ಫೋನ್ ನಂಬರ್ ನನ್ನ ಬಳಿ ಡೈರೆಕ್ಟ್ ಆಗಿಲ್ಲ. ನಮ್ಮ ಅತ್ತೆ ಮಾವನಿಗೆ ಫೋನ್ ಮಾಡಿದರೆ, ಮಗಳ ಬಳಿ ಮಾತಾಡಬಹುದು." ಎಂದು ಹೇಳಿದ್ದಾರೆ.
ಪವಿತ್ರಾ ಗೌಡ ಅರೆಸ್ಟ್ ಆದ ಬಳಿಕ ಮಗಳೊಂದಿಗೆ ಮಾತಾಡಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ. ಆಕೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದಿದ್ದಾರೆ. "ಈ ಘಟನೆ ಬಳಿಕ ಮಗಳ ಹತ್ತಿರ ಮಾತನಾಡಿಲ್ಲ. ಯಾಕಂದ್ರೆ, ಅವಳ ಪರಿಸ್ಥಿತಿ ನನಗೆ ಗೊತ್ತಿದೆ. ಅವಳು ನನ್ನ ಹಾಗೆ. ಅವಳಿಗೆ ಕೋಪ ಬಂದರೆ ಏನ್ ಮಾಡಿಕೊಳ್ತಾಳೋ ಅವಳಿಗೆ ಗೊತ್ತಿಲ್ಲ. ಆ ಟೈಮ್‌ನಲ್ಲಿ ನಾನು ತೊಂದರೆ ಕೊಡುವುದು ಇಷ್ಟ ಪಡುವುದಿಲ್ಲ. " ಎಂದು ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ಹೇಳಿದ್ದಾರೆ.


Click it and Unblock the Notifications











