ಅಪ್ಪು ಮಾಡಬೇಕಿದ್ದ 'ದ್ವಿತ್ವ' ಸಿನಿಮಾ ಈಗಾಗಲೇ ಬಂದು ಹೋಯ್ತಾ? ಏನಂತಾರೆ ಪವನ್ ಕುಮಾರ್?
ಪುನೀತ್ ರಾಜ್‌ಕುಮಾರ್ ಬಾಳಲ್ಲಿ ವಿಧಿ ಕೆಟ್ಟ ಆಟ ಆಡದೇ ಹೋಗಿದ್ದರೇ, ಅವರ ವೃತ್ತಿ ಬದುಕಿನಲ್ಲೊಂದು ವಿಶಿಷ್ಠ ಸಿನಿಮಾವನ್ನು ನೋಡಬಹುದಿತ್ತು. ಸೂಪರ್‌ಸ್ಟಾರ್ ಆಗಿದ್ದರೂ ಹಲವು ಬಾರಿ ಅಪ್ಪು ವಿಶಿಷ್ಠ ಪ್ರಯತ್ನಕ್ಕೆ ಕೈ ಹಾಕಿದ್ದರು. ಕೆಲವು ಸಿನಿಮಾಗಳಲ್ಲಿ ಯಶಸ್ಸು ಕಂಡಿದ್ದರು. ಅಂತಹದ್ದರಲ್ಲಿ 'ಪೃಥ್ವಿ', 'ಮೈತ್ರಿ' ಹಾಗೂ 'ಗಂಧದ ಗುಡಿ' ಸಿನಿಮಾ ಕೂಡ ಸಾಲಿನಲ್ಲಿ ನಿಲ್ಲುತ್ತವೆ. ಪುನೀತ್ ಅಗಲುವ ಮುನ್ನ ಇಂತಹದ್ದೇ ಮತ್ತೊಂದು ಪ್ರಯತ್ನಕ್ಕೆ ಕೈ ಹಾಕಿದ್ದರು.
ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದೆ ಬಂದಿದ್ದರೆ, 'ಲೂಸಿಯಾ' ಪವನ್ ಕುಮಾರ್ ನಿರ್ದೇಶನ ಮಾಡಬೇಕಿತ್ತು. ಅದುವೇ 'ದ್ವಿತ್ವ'. ಈ ಸಿನಿಮಾ ಇನ್ನೇನು ಸೆಟ್ಟೇರಬೇಕು ಅನ್ನುವಾಗಲೇ ಅಪ್ಪು ಬಾಳಲ್ಲಿ ದುರ್ವಿಧಿ ಆಟವಾಡಿತ್ತು. ಎಲ್ಲವೂ ಸರಿಯಾಗಿದ್ದಿದ್ದರೆ, ಒಂದು ಅಪರೂಪದ ಕಾಂಬಿನೇಷನ್‌ನಲ್ಲಿ 'ದ್ವಿತ್ವ' ಸಿನಿಮಾವನ್ನು ನೋಡಬಹುದಿತ್ತು.

'ದ್ವಿತ್ವ' ಬಾಕ್ಸಾಫೀಸ್‌ನಲ್ಲಿ ಗೆಲ್ಲುತ್ತಿತ್ತೋ? ಸೋಲುತ್ತಿತ್ತೋ? ಅದು ಬೇರೆ ಮಾತು. ಆದರೆ, ದೊಡ್ಮೆನೆ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ವಿಶಿಷ್ಠ ಪಾತ್ರದಲ್ಲಿ ಖಂಡಿತಾ ನೋಡುತ್ತಿದ್ದರು. ಅಪ್ಪು ಅಗಲಿ ಇಷ್ಟು ವರ್ಷಗಳಾದ್ಮೇಲೆ ಅವರು ನಟಿಸಬೇಕಿದ್ದ 'ದ್ವಿತ್ವ' ಸ್ಕ್ರಿಪ್ಟ್ ಏನಾಯ್ತು? ಬೇರೆ ಫಾರ್ಮೆಟ್‌ನಲ್ಲಿ ಬಂದ ಹೋಯ್ತಾ? ಈ ಬಗ್ಗೆ 'ಲೂಸಿಯಾ' ಖ್ಯಾತಿಯ ಪವನ್ ಕುಮಾರ್ ಫಿಲ್ಮಿಬೀಟ್ ಕನ್ನಡಗೆ ರಿವೀಲ್ ಮಾಡಿದ್ದಾರೆ.
ಅಪ್ಪುಗೆ ಆಗಿಬರಲಿಲ್ಲ 'ದ್ವಿತ್ವ'
ಪುನೀತ್ ರಾಜ್‌ಕುಮಾರ್‌ಗೆ ಒಂದು ಸಿನಿಮಾ ಮಾಡಬೇಕು ಅಂತ ಪವನ್ ಕುಮಾರ್ ಚರ್ಚೆ ಮಾಡುತ್ತಲೇ ಇದ್ದರು. ಆಗ ಬಹಳ ದಿನಗಳಿಂದ ಮನಸ್ಸಿನಲ್ಲಿಯೇ ಇದ್ದ 'ದ್ವಿತ್ವ' ಕಥೆಯನ್ನು ರೆಡಿ ಮಾಡಿದ್ದರು. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಸಿನಿಮಾ. ಥೈಲ್ಯಾಂಡ್‌ನಲ್ಲಿ ಮುವಾಥಾಯ್ ಕಲಿಯುವ ವೇಳೆ ಈ ಕಥೆಯನ್ನು ಮಾಡಿದ್ದು, ಅಲ್ಲಿಂದಲೇ ಸ್ಕ್ರಿಪ್ಟ್ ಅನ್ನು ಅಪ್ಪುಗೆ ಕಳಿಸಿದ್ದರಂತೆ. ಅದನ್ನು ನೋಡಿ ಅಪ್ಪು ಇಷ್ಟ ಬಳಿಕ 'ದ್ವಿತ್ವ'ಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಅಷ್ಟರಲ್ಲೇ ದುರ್ಘಟನೆ ನಡೆದು ಹೋಯ್ತು. ಕಂಪ್ಲೀಟ್ ರೆಡಿಯಿದ್ದ ಸ್ಕ್ರಿಪ್ಟ್ ಏನಾಯ್ತು? ಈ ಪ್ರಶ್ನೆ ಪವನ್ ಕುಮಾರ್ ಏನಂತಾರೆ?
"50 ವರ್ಷ ಆದರೂ ಈ ಪ್ರಶ್ನೆ ಕೇಳಬಹುದು"
ಅಪ್ಪು ಮಾಡಲಾಗದ 'ದ್ವಿತ'ವನ್ನು ಪವನ್ ಏನು ಮಾಡಿದರು? ಈ ಪ್ರಶ್ನೆಗೆ ಪವನ್ ಕುಮಾರ್ ಉತ್ತರ ಹೀಗಿದೆ. "ದ್ವಿತ್ವ ಸಿನಿಮಾ ಬಗ್ಗೆ ನನಗೆ 50 ವರ್ಷ ಆದರೂ ಕೇಳಬಹುದು ಅನಿಸುತ್ತೆ. ಅದು ಬೇರೆ ಫಾರ್ಮೆಟ್‌ನಲ್ಲಿ ಬರಬಹುದೇನೋ? ಅದು ಬೇರೆ ಹೆಸರಲ್ಲಿ ಬಂದು ಹೋದರೂ ಜನರಿಗೆ ಈಗಾಗಲೇ ಬಂದು ಹೋಗಿದೆ ಅಂತ ಗೊತ್ತಾಗಿರಲ್ಲ. ಹಾಗಂತ ದ್ವಿತ್ವ ಇನ್ನೂ ಬಂದಿಲ್ಲ. ಮುಂದೆ ಹೀಗೆ ಆಗಬಹುದೇನೋ ಅಂತ ಹೇಳಿದೆ ಅಷ್ಟೇ. ಸದ್ಯಕ್ಕಂತೂ ಆ ಬಗ್ಗೆ ಯೋಚನೆ ಮಾಡಿಲ್ಲ. ಮುಂದಕ್ಕೆ ಏನಾಗುತ್ತೋ ನೋಡೋಣ." ಎನ್ನುತ್ತಾರೆ.

"ಟೈಟಲ್ ಇನ್ನೂ ಹಾಗೇ ಇದೆ"
'ದ್ವಿತ್ವ' ಟೈಟಲ್ ಇಟ್ಕೊಂಡು ಶಾರ್ಟ್ ಫಿಲ್ಮ್ ಮಾಡಿದ್ದು, ಆ ಬಗ್ಗೆ ತನಗೆ ತಕರಾರು ಯಾವುದೂ ಇಲ್ಲ ಅಂತಾರೆ. "ಟೈಟಲ್ ಇನ್ನೂ ನನ್ನ ಬಳಿಯೇ ಇದೆ. ಯಾರೋ ಅದೇ ಹೆಸರನ್ನು ಇಟ್ಟುಕೊಂಡು ಶಾರ್ಟ್ ಫಿಲ್ಮ್ ಮಾಡಿದ್ರಂತೆ. ನಾನು ಟೈಟಲ್ ಬಗ್ಗೆ ಪೊಸೆಸಿವ್ ಆಗಿಲ್ಲ. ಏನೋ ಒಂದು ಪ್ರಾಜೆಕ್ಟ್ ಅಂತ ಮಾಡುವುದಕ್ಕೆ ಹೋದ್ವಿ. ಅದು ಹಾಗೆ ಎಂಡ್ ಆಯ್ತು. ಮುಂದೆ ಅದು ಏನಾಗುತ್ತೆ ನೋಡೋಣ." ಎನ್ನುತ್ತಾರೆ ಪವನ್ ಕುಮಾರ್.
ದ್ವಿತ್ವ ಸ್ಕ್ರಿಪ್ಟ್ ಏನಾಯ್ತು?
"ಸ್ಟೋರಿ ಸ್ಕ್ರೀನ್ ಪ್ಲೇ ಎಲ್ಲಾ ರೆಡಿಯಿದೆ. ಅದು ಸದ್ಯಕ್ಕೆ ಇನ್ನೂ ಹಾಗೇ ಇದೆ ಅಷ್ಟೇ. ನೋಡೋಣ ಆ ಸಿನಿಮಾಗೆ ಯಾವಾಗ ಟೈಮ್ ಕೂಡಿ ಬರುತ್ತೋ ಅದು ಆಗ ಆಗುತ್ತೆ ಅಷ್ಟೇ. ದ್ವಿತ್ವವನ್ನು ಸೀರಿಸ್ ತರಾನೂ ಮಾಡಬಹುದು. ಅದಕ್ಕೂ ಚರ್ಚೆಗಳನ್ನು ಮಾಡಿದ್ದೀವಿ. ಯಾವ ಫ್ಲಾಟ್‌ಫಾರ್ಮ್ ಓಪನ್ ಆಗುತ್ತೆ ಅಂತ ನೋಡಬೇಕು." ಎಂದು ನಟ-ನಿರ್ದೇಶಕ ಪವನ್ ಕುಮಾರ್ ಫಿಲ್ಮಿಬೀಟ್ ಕನ್ನಡಕ್ಕೆ ಹೇಳಿದ್ದಾರೆ.


Click it and Unblock the Notifications











