ಒಂದು ವೇಳೆ ಕನ್ನಡ ತಾರೆಯರು ಸಚಿವ ಸಂಪುಟದಲ್ಲಿದ್ದರೆ.. ಯಾರಿಗೆ ಯಾವ ಖಾತೆ?
ರಾಜ್ಯದಲ್ಲಿ ಚುನಾವಣೆ ಬಿಸಿ ಜೋರಾಗಿದೆ. ರಾಜಕೀಯ ಪಕ್ಷಗಳು ಒಂದು ದಿನವೂ ಬಿಡದಂತೆ ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಧುಮುಕಿದ್ದಾರೆ.
ಈ ಮಧ್ಯೆ ಸ್ಯಾಂಡಲ್‌ವುಡ್ ತಾರೆಯರು ಕೂಡ ಚುನಾವಣಾ ಕಣಕ್ಕೆ ಇಳಿದಿರೋ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದ ಉದ್ದಗಲಕ್ಕೂ ಬಿಸಿ ಎನ್ನದೆ ಸುತ್ತುತ್ತಿದ್ದಾರೆ. ಈ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೀಗೊಂದು ಆಲೋಚನೆ ಓಡಾಡುತ್ತಿದೆ. ಒಂದು ವೇಳೆ ಸ್ಯಾಂಡಲ್‌ವುಡ್ ತಾರೆಯರು ಸಚಿವರಾದರೆ, ಯಾರಿಗೆ ಯಾವ್ಯಾವ ಖಾತೆ ಸಿಗುತ್ತೆ? ಇಂತಹದ್ದೊಂದು ಕಲ್ಪನೆಯಲ್ಲಿ ಕನ್ನಡದ ಯಾವ್ಯಾವ ತಾರೆಯರು ಮಂತ್ರಿಗಳಾಗುತ್ತಾರೆ? ಅನ್ನೋ ಪಟ್ಟಿ ಇಲ್ಲಿದೆ.

ಮುಖ್ಯಮಂತ್ರಿ ಚಂದ್ರು - ಸಿಎಂ
ನೀವೆನಾದರೂ ಸ್ಯಾಂಡಲ್‌ವುಡ್ ಕ್ಯಾಬಿನೆಟ್ ಮಿನಿಸ್ಟರ್‌ಗಳ ಪಟ್ಟಿಯನ್ನು ನೋಡಿದರೆ ನಿಜಕ್ಕೂ ಅಚ್ಚರಿ ಪಡೋದು ಗ್ಯಾರಂಟಿ. ಕನ್ನಡ ಫಿಲ್ಮ್ ಕಮ್ಯೂನಿಟಿ ಅನ್ನೋ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಇಂತಹದ್ದೊಂದು ವಿಶಿಷ್ಟ ಕಲ್ಪನೆಯಲ್ಲಿ ಸ್ಯಾಂಡಲ್‌ವುಡ್ ಕ್ಯಾಬಿನೆಟ್ ಮಿನಿಸ್ಟರ್ ಪಟ್ಟಿಯನ್ನು ಹೊರಬಿಟ್ಟಿದೆ.
ಸ್ಯಾಂಡಲ್‌ವುಡ್‌ನ ಸದಾ ಮುಖ್ಯಮಂತ್ರಿ ಯಾರು ಅಂತ ವಿಶೇಷವಾಗಿ ಹೇಳಬೇಕಿಲ್ಲ. ಅವರ ಹೆಸರಲ್ಲೇ ಮುಖ್ಯಮಂತ್ರಿ ಇದೆ. ಹೀಗಾಗಿ ಸಿಎಂ ಪಟ್ಟವನ್ನು ಮುಖ್ಯಮಂತ್ರಿ ಚಂದ್ರು ಅವರಿಗೆ ನೀಡಲಾಗಿದೆ.

ಅನಂತ್‌ನಾಗ್-ಗೃಹ ಸಚಿವ
ಸ್ಯಾಂಡಲ್‌ವುಡ್‌ನ ಸುಂದರ ನಟ ಅನಂತ್‌ನಾಗ್. ಸಿನಿಮಾ ಅಷ್ಟೇ ಅಲ್ಲ. ಅನಂತ್‌ನಾಗ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ಜೆ ಹೆಚ್ ಪಟೇಲ್ ಸರ್ಕಾರದಲ್ಲಿ ಅನಂತ್‌ನಾಗ್ ಎಂಎಲ್‌ಸಿ, ಎಂಎಲ್‌ಎ ಆಗಿದ್ದರು. ಹಾಗೇ ಬೆಂಗಳೂರು ನಗರಾಭಿವೃದ್ದಿ ಸಚಿವರು ಕೂಡ ಆಗಿದ್ದರು. ಹೀಗಾಗಿ ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಗೃಹಖಾತೆ ನೀಡಬಹುದು ಎಂದು ಅಭಿಪ್ರಾಯ ಪಟ್ಟಿದೆ.

ರವಿಚಂದ್ರನ್ - ಮಹಿಳಾ ಸಬಲೀಕರಣ & ಮಕ್ಕಳ ಕಲ್ಯಾಣ ಸಚಿವ
ಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಸೇರಿಸಿಕೊಳ್ಳಲಾಗಿದೆ. 'ಪ್ರೇಮಲೋಕ' ಸೇರಿದಂತೆ ರೊಮ್ಯಾಂಟಿಕ್ ಸಿನಿಮಾಗಳ ಮೂಲಕ ಸಿನಿಪ್ರೇಮಿಗಳನ್ನು ರಂಜಿಸಿದ್ದಾರೆ. ಹೀಗಾಗಿ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣ ಸಚಿವ ಖಾತೆಯನ್ನು ನೀಡಲಾಗಿದೆ. ಈ ಖಾತೆಯನ್ನು ಕ್ರೇಜಿಸ್ಟಾರ್ ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯವಿದೆ.

ಕಿಚ್ಚ ಸುದೀಪ್-ಕ್ರೀಡಾ ಸಚಿವ
ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದರು. ಕೆಲವು ದಿನಗಳ ಹಿಂದೆ ಸುದೀಪ್‌ಗೆ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಅನ್ನೋ ಗುಲ್ಲೆದ್ದಿತ್ತು. ಈಗ ಬಿಜೆಪಿ ಪರವಾಗಿಯೇ ಸುದೀಪ್ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಸುದೀಪ್‌ಗೆ ಸಿನಿಮಾದ ಜೊತೆ ಜೊತೆಗೆ ಕ್ರಿಕೆಟ್‌ನಲ್ಲಿ ಆಸಕ್ತಿ ಹೆಚ್ಚು ಇರುವುದರಿಂದ ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಕ್ರೀಡಾ ಸಚಿವನಾಗಬಹುದು.

ಶ್ರೀನಗರ ಕಿಟ್ಟಿ - ಅಬಕಾರಿ ಸಚಿವ
ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಶ್ರೀನಗರ ಕಿಟ್ಟಿಗೆ ಅಬಕಾರಿ ಖಾತೆ ನೀಡಲಾಗಿದೆ. ಯಾಕೆ ಇದೇ ಖಾತೆ ಕೊಟ್ಟರು ಅನ್ನೋದಕ್ಕೆ ಕಾರಣ ಇದೂ ಇರಬಹುದು. ದುನಿಯಾ ಸೂರಿ ನಿರ್ದೇಶಿಸಿದ 'ಇಂತಿ ನಿನ್ನ ಪ್ರೀತಿಯ' ಸಿನಿಮಾ ನೋಡಿ ಅಬಕಾರಿ ಖಾತೆ ಫಿಕ್ಸ್ ಮಾಡಿರುವ ಸಾಧ್ಯತೆಯಿದೆ.

ವಿಜಯ್ ಕಿರಗಂದೂರು- ಹಣಕಾಸು ಸಚಿವ
ಇಡೀ ದೇಶವೇ ತಿರುಗಿ ನೋಡುವಂತಹ ಸಿನಿಮಾ ಮಾಡಿರೋ ಹೊಂಬಾಳೆ ಫಿಲ್ಮ್ಸ್ ಮಾಲೀಕ ವಿಜಯ್ ಕಿರಗಂದೂರು. ಇವರಿಗೆ ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಹಣಕಾಸು ಖಾತೆಯನ್ನು ನೀಡಲಾಗಿದೆ.

ರಕ್ಷಿತ್ ಶೆಟ್ಟಿ- ಬಂದರು & ಮೀನುಗಾರಿಕೆ ಸಚಿವ
ಸ್ಯಾಂಡಲ್‌ವುಡ್‌ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಇವರು ಕರಾವಳಿ ಕಡೆಯವರು. ಹಾಗೇ ಮಂಗಳೂರಿನ ಸಂಸ್ಕೃತಿ ಬಗ್ಗೆ ಅಪಾರ ಅಭಿಮಾನ ಹೊಂದಿದವರು. ಈ ಕಾರಣಕ್ಕೆ ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಇವರಿಗೆ ಬಂದರು ಮತ್ತು ಮೀನುಗಾರಿಕೆ ಖಾತೆಯನ್ನು ನೀಡಲಾಗಿದೆ.

ದರ್ಶನ್- ಪಶು ಸಂಗೋಪನೆ & ಅರಣ್ಯ ಸಚಿವ
ಚಾಲೆಂಜಿಂಗ್‌ಸ್ಟಾರ್ ದರ್ಶನ್ ಬಗ್ಗೆ ಎಲ್ಲರಿಗೂ ಗೊತ್ತು. ದರ್ಶನ್‌ಗೆ ಸಿನಿಮಾ ಜೊತೆಗೆ ಪ್ರಾಣಿ ಪಕ್ಷಿಗಳು, ಕಾಡು-ಮೇಡು ಅಂದರೆ ತುಂಬಾನೇ ಇಷ್ಟ. ಹೀಗಾಗಿ ಡಿ ಬಾಸ್‌ಗೆ ಸ್ಯಾಂಡಲ್‌ವುಡ್ ಕ್ಯಾಬಿನೆಟ್‌ನಲ್ಲಿ ಪಶು ಸಂಗೋಪನೆ ಹಾಗೂ ಅರಣ್ಯ ಖಾತೆಯನ್ನು ನೀಡಲಾಗಿದೆ.

ಯಶ್-ನೀರಾವರಿ ಸಚಿವ
'ಕೆಜಿಎಫ್' ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರೋ ರಾಕಿಂಗ್ ಸ್ಟಾರ್ ಯಶ್‌ಗೆ ವಿದೇಶ ವ್ಯವಹಾರಗಳ ಖಾತೆಯನ್ನು ನೀಡಲಾಗಿದೆ. ಆದರೆ, ರಾಜ್ಯದ ಮಂತ್ರಿ ಮಂಡಲದಲ್ಲಿ ವಿದೇಶ ವ್ಯವಹಾರ ಖಾತೆ ಇಲ್ಲ. ಈ ಕಾರಣಕ್ಕೆ ನೀರಾವರಿ ಖಾತೆಯನ್ನು ನೀಡಬಹುದು. ಯಾಕಂದ್ರೆ, ಯಶೋಮಾರ್ಗ ಮೂಲಕ ಹಲವೆಡೆ ಕೆರೆ ಹೂಳೆತ್ತುವ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ನೀರಾವರಿ ಖಾತೆ ಹೆಚ್ಚು ಸೂಕ್ತ.


Click it and Unblock the Notifications











