ಸಪ್ತಮಿ ಗೌಡ ಟಾಲಿವುಡ್‌ಗೆ ಎಂಟ್ರಿ; ಚೊಚ್ಚಲ ತೆಲುಗು ಸಿನಿಮಾದಲ್ಲಿ 'ಕಾಂತಾರ'ದ ಲೀಲಾ ನೆನಪಾಗ್ತಿರೋದ್ಯಾಕೆ?
'ಕಾಂತಾರ' ಸಿನಿಮಾ ಮೂಲಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಪ್ರೇಕ್ಷಕರಿಗೆ ಈಗಾಗಲೇ ಪರಿಚಯವಿದ್ದಾರೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಾಲಿವುಡ್ ಸಿನಿಮಾದಲ್ಲೂ ನಟಿಸಿ ಬಂದಿದ್ದರು. ಆದರೆ, ಅದ್ಯಾಕೋ ನಿರೀಕ್ಷೆ ಮಾಡಿದಷ್ಟು ಸದ್ದು ಮಾಡಲಿಲ್ಲ. ಈಗ ತೆಲುಗು ಚಿತ್ರರಂಗಕ್ಕೆ ಸಪ್ತಮಿ ಗೌಡ ಎಂಟ್ರಿ ಕೊಟ್ಟಿದ್ದಾರೆ. ಆ ಸಿನಿಮಾದ ಮೊದಲ ಗ್ಲಿಂಮ್ಸ್ ಕೂಡ ಈಗಾಗಲೇ ಹೊರಬಿದ್ದಿದೆ.
ಸಪ್ತಮಿ ಗೌಡ ಸದ್ಯ ಕನ್ನಡದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅವರ ಕೈಯಲ್ಲೀಗ ಎರಡು ಕನ್ನಡ ಸಿನಿಮಾಗಳಿವೆ. ಇದರೊಂದಿಗೆ ತೆಲುಗು ಸಿನಿಮಾ ಕೂಡ ಸೇರಿಕೊಂಡಿದೆ. ಅಂದ್ಹಾಗೆ ಆ ತೆಲುಗು ಚಿತ್ರದ ಹೆಸರು 'ಮೂಡ್ ಆಫ್ ತಮ್ಮುಡು'. ಟಾಲಿವುಡ್‌ನ ಕ್ಯೂಟ್ ಹೀರೋ ನಿತಿನ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ರಿವೀಲ್ ಮಾಡಿರುವ ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಗಮನ ಸೆಳೆದಿದೆ.

ಸಪ್ತಮಿ ಗೌಡಗೆ ಹಳ್ಳಿ ಪಾತ್ರಗಳು ತುಂಬಾನೇ ಸೂಟ್ ಆಗುತ್ತವೆ. ಆ ಕಾರಣಕ್ಕೋ ಏನೋ ಮೊದಲ ತೆಲುಗು ಸಿನಿಮಾದಲ್ಲಿಯೂ ಕೂಡ ಅವರಿಗೆ ಡಿ ಗ್ಲಾಮರಸ್ ಪಾತ್ರವನ್ನೇ ಕೊಟ್ಟಂತೆ ಕಾಣಿಸುತ್ತಿದೆ. ಸದ್ಯ ರಿವೀಲ್ ಆಗಿರುವ ಲುಕ್‌ನಲ್ಲಿ ಸಪ್ತಮಿ ಗೌಡ 'ಕಾಂತಾರ'ದ ಲೀಲಾಳನ್ನೇ ನೆನಪಿಸುತ್ತಾರೆ. ಅಷ್ಟಕ್ಕೂ 'ಮೂಡ್ ಆಫ್ ತಮ್ಮುಡು' ಸಿನಿಮಾದ ಹೈಲೈಟ್ ಏನು? ಸಪ್ತಮಿ ಗೌಡ ಪಾತ್ರ ಹೇಗಿದೆ? ಸಿನಿಮಾ ಯಾವಾಗ ರಿಲೀಸ್? ಇದೆಲ್ಲವನ್ನು ತಿಳಿಯುವುದಕ್ಕೆ ಮುಂದೆ ಓದಿ.
ಕಾಂತಾರದ ಲೀಲಾ ಅಲ್ಲ ರತ್ನಾ
ತೆಲುಗು ಸಿನಿಮಾ 'ಮೂಡ್ ಆಪ್ ತಮ್ಮುಡು' ಸಿನಿಮಾದಲ್ಲಿ ನಟಿ ಸಪ್ತಮಿ ಗೌಡ ಲುಕ್ ರಿವೀಲ್ ಆಗಿದೆ. ಈ ಸಿನಿಮಾದಲ್ಲೂ ಲಂಗ ದಾವಣಿಯನ್ನು ಧರಿಸಿದ್ದಾರೆ. ಮೇಲ್ನೋಟಕ್ಕೆ ಇವರದ್ದು ಡಿ ಗ್ಲಾಮರ್ ರೋಲ್ ಎಂದು ಕಾಣಿಸುತ್ತಿದೆ. ಅಂದ್ಹಾಗೆ, ಈ ಸಿನಿಮಾದಲ್ಲಿ ಸಪ್ತಮಿ ಗೌಡ ಅವರ ಹೆಸರು ರತ್ನಾ. ಈ ಪಾತ್ರದ ಬಗ್ಗೆ ಸಿನಿಪ್ರಿಯರಿಗೆ ಸಿಕ್ಕಾಪಟ್ಟೆ ಕುತೂಹಲವಂತೂ ಹುಟ್ಟಿಕೊಂಡಿದೆ. ಅದಕ್ಕೆ ಹಲವು ಕಾರಣಗಳು ಇವೆ. ಆದರೆ, ಈ ಲುಕ್‌ನಲ್ಲಿ 'ಕಾಂತಾರ'ದ ಲೀಲಾಳೇ ನೆನಪಾಗುತ್ತಾರೆ ಅನ್ನೋದು ವಿಶೇಷ.
ಹಳ್ಳಿ ಹುಡುಗಿ ಪಾತ್ರನಾ?
'ಮೂಡ್ ಆಫ್ ತಮ್ಮುಡು' ಸಿನಿಮಾದಲ್ಲಿ ಸಪ್ತಮಿ ಗೌಡ ಅವರ ದೃಶ್ಯದ ಫೋಟೊಗಳನ್ನು ರಿವೀಲ್ ಮಾಡಲಾಗಿದೆ. ಒಂದು ಕಾಡಿನೊಳಗೆ ಟ್ರೀ ಹೌಸ್ ಮಾದರಿಯ ಮನೆ. ಅದರಲ್ಲಿ ಮೊದಲು ಸಪ್ತಮಿ ಗೌಡ ಒಂದು ತಟ್ಟೆ ಹಾಗೂ ಲೋಟವನ್ನು ಹಿಡಿದುಕೊಂಡು ನಿಂತಿದ್ದಾರೆ. ಅದೇ ಇನ್ನೊಂದು ಫೋಟೊದಲ್ಲಿ ಅದೇ ಲಂಗ ದಾವಣಿಯಲ್ಲಿ ಕಂಪ್ಯೂಟರ್, ಮೈಕ್ ಮುಂದೆ ನಿಂತಿರುತ್ತಾರೆ. ಹೀಗಾಗಿ ಹಳ್ಳಿ ಹುಡುಗಿ ವೇಷದಲ್ಲಿ ಯಾವುದೇ ಮಿಷನ್‌ನಲ್ಲಿ ಭಾಗಿಯಾಗಿರಬಹುದಾ? ಎಂಬ ಅನುಮಾನ ಮೂಡುತ್ತೆ. ಸಪ್ತಮಿ ಗೌಡ ಪಾತ್ರ ಈ ಸಿನಿಮಾದಲ್ಲಿ ಇಂಟ್ರೆಸ್ಟಿಂಗ್ ಆಗಿರುತ್ತೆ ಎಂದು ನಿರೀಕ್ಷೆ ಮಾಡಬಹುದು.
ಕ್ರೀಡಾಪಟುವಾಗಿ ನಿತಿನ್
'ಮೂಡ್ ಆಫ್ ತಮ್ಮುಡು' ಸಿನಿಮಾದಲ್ಲಿ ತಮ್ಮುಡು ಪಾತ್ರದಲ್ಲಿ ನಿತಿನ್ ನಟಿಸಿದ್ದಾರೆ. ಇವರದ್ದು ಇಲ್ಲಿ ಎರಡು ಶೇಡ್. ಮೊದಲ ಶೇಡ್‌ನಲ್ಲಿ ಆರ್ಚರಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುವಿನಂತೆ ಕಾಣಿಸಿಕೊಂಡಿದ್ದಾರೆ. ಅದೇ ಇನ್ನೊಂದು ಪಾತ್ರದಲ್ಲಿ ಪಕ್ಕಾ ರಗಡ್ ಹಳ್ಳಿಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ 'ಮೂಡ್ ಆಫ್ ತಮ್ಮುಡು' ಪ್ರೇಕ್ಷಕರ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಈ ಸಿನಿಮಾಗೆ ನಾನಿ ನಟಿಸಿದ 'ಎಂಸಿಎ' (MCA) ಹಾಗೂ ಪವನ್ ಕಲ್ಯಾಣ್ ನಟಿಸಿದ 'ವಕೀಲ್ ಸಾಬ್' ಸಿನಿಮಾವನ್ನು ನಿರ್ದೇಶಿಸಿದ ವೇಣು ಶ್ರೀರಾಮ್ ಆಕ್ಷನ್ ಹೇಳಿದ್ದಾರೆ. ಅಜನೀಶ್ ಬಿ ಲೋಕನಾಥ್ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ದಿಲ್ ರಾಜು ಹಾಗೂ ಶಿರಿಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಜುಲೈ 4 ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.


Click it and Unblock the Notifications











