ಉಪ್ಪಿಯನ್ನು 'ಎಲ್‌ಡಿ' ಅಂತ ಕರೆಯುತ್ತಿದ್ದಿದ್ದು ಏಕೆ? ಶಾಲು ಹೊದ್ದು ಕಾಲೇಜಿಗೆ ಹೋಗುತ್ತಿದ್ದಿದ್ದೇಕೆ?
ರಿಯಲ್ ಸ್ಟಾರ್ ಉಪೇಂದ್ರ ಆಲೋಚನೆಗಳೇ ಬೇರೆ. ಅವರ ನಟಿಸಿದ ಸಿನಿಮಾಗಳಿಗೂ ಹೆಚ್ಚು ಅವರು ನಿರ್ದೇಶಿಸಿದ ಸಿನಿಮಾಗಳಿಗೆ ಹೆಚ್ಚು ಫ್ಯಾನ್ಸ್ ಇದ್ದಾರೆ. ಉಪ್ಪಿ ಆಕ್ಷನ್ ಕಟ್ ಹೇಳಿದ ಸಿನಿಮಾ 'ಯುಎ' ನಿರೀಕ್ಷೆ ಮಾಡಿದಷ್ಟು ಯಶಸ್ಸು ಕಾಣಲಿಲ್ಲ. ಆದರೂ, ಕ್ರೇಜ್ ಏನೂ ಕಮ್ಮಿಯಾಗಿಲ್ಲ. ಉಪೇಂದ್ರ ಹೊಸ ಸಿನಿಮಾ ಅನೌನ್ಸ್ ಮಾಡಿದರೆ, ಮತ್ತೆ ಅದೇ ಕಾತುರದಿಂದ ಕಾದು ಕೂರುವವರೇ ಹೆಚ್ಚಾಗುತ್ತಾರೆ. ಸಿನಿಮಾದಲ್ಲಿ ಚಮತ್ಕಾರ ಮಾಡುವ ಉಪ್ಪಿ ರಿಯಲ್ ಲೈಫ್‌ನಲ್ಲೂ ಅಷ್ಟೇ ಆಕ್ಟಿವ್.
ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ '45' ಸಿನಿಮಾದ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಚಿಕ್ಕದೊಂದು ಟೀಸರ್ ರಿಲೀಸ್ ಆದಾಗ ಉಪ್ಪಿ, ಶಿವಣ್ಣ ಹಾಗೂ ಅರ್ಜುನ್ ಜನ್ಯ ಮೂವರೂ ಬೇರೆ ಬೇರೆ ರಾಜ್ಯಗಳಿಗೆ ತೆರಳಿ ಸಿನಿಮಾ ಪ್ರಚಾರ ಮಾಡಿ ಬಂದಿದ್ದರು. ಆ ವೇಳೆ ಉಪೇಂದ್ರ ಅವರ ಕಾಲೇಜು ದಿನಗಳ ಬಗ್ಗೆ ಮಾತಾಡಿದ್ದರು. ಕಾಲೇಜಿನಲ್ಲಿ ಅವರಿಗೆ ಇಟ್ಟಿದ್ದ ಹೆಸರಿನ ಬಗ್ಗೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು.

ಇದೇ ವೇಳೆ ಡಾ.ರಾಜ್‌ಕುಮಾರ್ ಸಿನಿಮಾದ ಹಾಡೊಂದನ್ನು ರಿಮೇಕ್ ಮಾಡಿ ಹಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಉಪ್ಪಿ ಸಿನಿಮಾಗೆ ಬರುವುದಕ್ಕೂ ಮುನ್ನವೇ ಎಷ್ಟು ಆಕ್ಟೀವ್ ಆಗಿದ್ದರು ಅನ್ನೋದನ್ನು '45' ಸಿನಿಮಾದ ಪ್ರಚಾರಕ್ಕೆಂದು ಚೆನ್ನೈಗೆ ಹೋಗುತ್ತಿದ್ದ ಹೇಳಿದ್ದರು. ಪ್ರೈವೇಟ್ ಜೆಟ್‌ನಲ್ಲಿ ಆಂಕರ್ ಅನುಶ್ರೀ ಚಿಕ್ಕದಾಗಿ ಸಂದರ್ಶನ ಮಾಡಿದ್ದರು. ಅದರ ತುಣುಕನ್ನು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಶೇರ್ ಮಾಡಿದೆ. ಅದರಲ್ಲಿ ಉಪ್ಪಿ ತಮಗೆ ಎಲ್‌ಡಿ ಎಂದು ಏಕೆ ಕರೆಯುತ್ತಿದ್ದರು? ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಉಪೇಂದ್ರ ನಿರ್ದೇಶಿಸಿದ ಮೊದಲ ಸಿನಿಮಾ 'ಎ'ನಲ್ಲಿ ಪ್ರೀತಿ ಪ್ರೇಮ ಪುಸ್ತಕದ ಬದನೇಕಾಯಿ ಎಂದು ಡೈಲಾಗ್ ಬಿಟ್ಟಿದ್ದರು. ಬಳಿಕ ಅವರೇ ರಿಯಲ್ ಲೈಫ್‌ನಲ್ಲಿ ಲವ್ ಮ್ಯಾರೇಜ್ ಆಗಿದ್ದರು. ಇದು ಇಂದಿಗೂ ಅವರ ಅಭಿಮಾನಿಗಳಲ್ಲಿ ಚರ್ಚೆಯಾಗುತ್ತಲೇ ಇರುತ್ತೆ. ಉಪ್ಪಿ ಕೂಡ ಈ ಬಗ್ಗೆ ಅವರದ್ದೇ ಸ್ಟೈಲ್‌ನಲ್ಲಿ ಉತ್ತರ ಕೊಟ್ಟಿದ್ದು ಇದೆ. ಆದರೆ, ಅದನ್ನು ಅರ್ಥ ಮಾಡಿಕೊಳ್ಳಲಾಗದೆ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದು ಕೂಡ ಇದೆ. ಈ ವಿಷಯದ ಬಗ್ಗೆ ಅನುಶ್ರೀ ಪ್ರಶ್ನೆ ಮಾಡಿದ್ದರು. ಅದಕ್ಕೆ ಲವ್ ಫೆಲ್ಯೂರ್ ಬಗ್ಗೆ ಉಪೇಂದ್ರ ಹೀಗೆ ಉತ್ತರಿಸಿದ್ದರು. ಕಾಲೇಜು ದಿನಗಳಲ್ಲಿ ನನಗೆ ಎಲ್‌ಡಿ ಎಂದು ಕರೆಯುತ್ತಿದ್ದರು ಎಂದು ಹೇಳಿದ್ದಾರೆ.
"ಅಯ್ಯೋ ಆ ಟೈಮ್‌ನಲ್ಲಿ ಎಲ್ಲರೂ ನನಗೆ ಬೈಯ್ಯೋರು. ನನಗೆ ಎಲ್‌ಡಿ ಅಂತ ಹೆಸರಿಟ್ಟಿದ್ದರು. ಎಲ್‌ಡಿ ಅಂದರೆ, ಲವ್ ಡಿಸಪಾಯಿಂಟೆಡ್ ಅಂತ. ಇವನು ಲವ್ ಡಿಸಪಾಯಿಂಟ್ ಆದವನು ಅಂದರ್ಥ. ಆ ಟೈಮ್‌ನಲ್ಲೂ ಅಷ್ಟೇ. ನಾನು ಕಾಲೇಜಿಗೆ ಶಾಲ್ ಹೊದ್ದುಕೊಂಡು ಹೋಗುತ್ತಿದ್ದೆ. ಅವಾಗ ಒಂಥರಾ ಫೀಲಿಂಗ್." ಎಂದು ಉಪೇಂದ್ರ ಆಂಕರ್ ಅನುಶ್ರೀಗೆ ಹೇಳಿದ್ದಾರೆ.

ಇದೇ ಫೀಲಿಂಗ್‌ನಲ್ಲಿ ಉಪೇಂದ್ರ ಒಂದು ಹಾಡನ್ನು ಬರೆದಿದ್ದರು. ಅಣ್ಣಾವ್ರು ಸಿನಿಮಾದ 'ಪ್ರೇಮದ ಕಾಣಿಕೆ' ಹಾಡೊಂದನ್ನು ರಿಮೇಕ್ ಮಾಡಿದ್ದರು. ಈ ಸಿನಿಮಾದ ಜನಪ್ರಿಯ ಗೀತೆ "ಬಾನಿಗೊಂದು ಎಲ್ಲೆ ಎಲ್ಲಿದೆ?" ಹಾಡನ್ನು "ಹೆಣ್ಣಿಗೊಂದು ಹೃದಯವೆಲ್ಲಿದೆ? ಅವಳಿಗೆಲ್ಲಿ ಮನಸ್ಸಿದೆ?" ಅಂತ ಬದಲಾಯಿಸಿ ಹಾಡಿದ್ದರು. ಈ ಸಂದರ್ಶನದಲ್ಲಿ ಉಪೇಂದ್ರ ಆ ಹಾಡನ್ನೂ ಹಾಡಿ ಹೇಳಿದ್ದರು. ಆ ರಿಮಿಕ್ಸ್ ಹಾಡು ಹೀಗಿದೆ.
"ಹೆಣ್ಣಿಗೊಂದು ಹೃದಯವೆಲ್ಲಿದೆ? ಅವಳಿಗೆಲ್ಲಿ ಮನಸ್ಸಿದೆ? ಪ್ರೀತಿಸೋ ಕನಸು ಏತಕೆ? ಯೋಚಿಸು.. ನಿಧಾನಿಸು.. ಪ್ರೇಮ ಜೇನ ಚರಂಡಿಗೆ ಏಕೆ ಸುರಿಯುವೆ? ಕಾಗೆಯಲ್ಲಿ ಗಾನ ಕೇಳುವ ಬಯಕೆ ಏತಕೆ? ಹಣದ ಮುಂದೆ ನಿನ್ನ ಪ್ರೇಮ ಏನೂ ಸಾಗದು. ನೀನು ನೆನೆಸಿದಂತೆ ಅವಳು ನಿನ್ನ ಕಾಣಳು. ಆಸೆ ಏತಕೆ? ನಿರಾಸೆ ಏತಕೆ? ಹುಚ್ಚನಾಗದಿರು ನೀನು ಹೆಣ್ಣ ರೂಪಕೆ.." ಎಂದು ಪ್ರೇಮದ ಕಾಣಿಕೆಯ ಹಾಡಿನ ಸಾಲನ್ನೇ ರಿಮಿಕ್ಸ್ ಮಾಡಿ ಹಾಡುತ್ತಿದ್ದದ್ದಾಗಿ ಹೇಳಿಕೊಂಡಿದ್ದಾರೆ.
ಈ ವೇಳೆ ಶಿವಣ್ಣ ಕೂಡ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅವರು '45' ಸಿನಿಮಾದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. "45 ಟೀಸರ್ ಈ ಮಟ್ಟಕ್ಕೆ ಸೌಂಡ್ ಆಗುತ್ತೆ ಎಂದು ಅಂದುಕೊಂಡಿರಲಿಲ್ಲ. ಯಾರೂ ನಿರೀಕ್ಷೆ ಮಾಡಿರಲಿಲ್ಲ. ಒಂದು ಲೆವೆಲ್‌ನಲ್ಲಿ ಅಟ್ರ್ಯಾಕ್ಟ್ ಆಗುತ್ತೆ ಅನ್ನೋದಿತ್ತು. ಆದರೆ, ಬೇರೆ ಭಾಷೆಗಳಲ್ಲೂ ಅಟ್ರ್ಯಾಕ್ಟ್ ಆಗುತ್ತೆ ಅನ್ನೋದು ಗೊತ್ತಿರಲಿಲ್ಲ. ಈ ನಡುವೆ ವೀವ್ಸ್ ಹೇಗಾಗುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಹೇಗೆ ಬೇಕಾದರೂ ಮಾಡಬಹುದು. ಏನೂ ಮಾಡದೇನೆ ಒಳ್ಳೆಯ ರೀತಿಯಲ್ಲಿ ವೀವ್ಸ್ ಆಗೋದು ಕಮೆಂಟ್ಸ್ ಅನ್ನು ನೋಡಿದರೇ ಗೊತ್ತಾಗುತ್ತೆ. ಜನರು ಅಷ್ಟು ಬುದ್ದಿವಂತರು ಇದ್ದಾರೆ." ಎಂದು ಶಿವಣ್ಣ ಹೇಳಿದ್ದಾರೆ.


Click it and Unblock the Notifications











