'ಸು ಫ್ರಮ್ ಸೋ' ಯಾವ್ಯಾವ ಭಾಷೆಯಲ್ಲಿ ಯಾವ್ಯಾವಾಗ ರಿಲೀಸ್ ಆಗುತ್ತೆ? ವಿದೇಶದಲ್ಲಿ ಯಾವಾಗ ರಿಲೀಸ್?
ಮತ್ತೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕನ್ನಡ ಸಿನಿಮಾ ಸದ್ದು ಮಾಡುತ್ತಿದೆ. 'ಸು ಫ್ರಮ್ ಸೋ' ದೂರದ ಊರಿಗೆ ಪಯಣ ಮಾಡುವುದಕ್ಕೆ ಸಜ್ಜಾಗಿ ನಿಂತಿದೆ. ಅದಕ್ಕೆ ಬೇಕಿರೋ ತಯಾರಿಗಳನ್ನೂ ಮಾಡಿಕೊಳ್ಳುತ್ತಿದೆ. ಈಗಾಗಲೇ ಪರಭಾಷೆಯಲ್ಲಿ ನಿರ್ಮಾಣ ಸಂಸ್ಥೆಗಳು ಬಂದು ಸಿನಿಮಾ ನೋಡಿ ಮೆಚ್ಚಿಕೊಂಡು ವ್ಯವಹಾರವನ್ನೂ ಮುಗಿಸಿವೆ. ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತಿದ್ದಂತೆ ಮೂರು ಭಾಷೆಯ ಜನಪ್ರಿಯ ನಿರ್ಮಾಣ ಸಂಸ್ಥೆಗಳು ಸಿನಿಮಾ ರಿಲೀಸ್‌ಗೆ ಮುಂದೆ ಬಂದಿವೆ.
ಸಿಂಪಲ್ ಆಗಿ ಬಂದು ಅಬ್ಬರಿಸುತ್ತಿರೋ 'ಸು ಫ್ರಮ್ ಸೋ' ಇನ್ನು ಪರಭಾಷೆಯಲ್ಲಿಯೂ ಸದ್ದು ಮಾಡಲಿದೆ. ಥಿಯೇಟರ್ ಮುಂದೆ ಅಭಿಮಾನಿಗಳ ಕೂಗಾಟವಿಲ್ಲದೆ, ನೂರಡಿ ಕಟೌಟ್ ಹಾಕದೇ, ಹಾಲಿನ ಅಭಿಷೇಕ ಮಾಡದೇ, ಹೊಡಿ ಬಡಿ ದೃಶ್ಯಗಳಿಲ್ಲದೆ, ಡಬ್ಬಲ್ ಮೀನಿಂಗ್ ಡೈಲಾಗ್‌ಗಳಿಲ್ಲದೆ, ಹೀರೋ ಎಂಟ್ರಿ ಬೇರೆ ಮಾತು, ಹೀರೋನೇ ಇಲ್ಲದೆ, ವಿದೇಶದಲ್ಲಿ ಹೀರೋ ಹೀರೋಯಿನ್ ಡ್ಯಾನ್ಸ್ ಇಲ್ಲದೆ, ಅರೆಬೆತ್ತಲೆ ಐಟಂ ಹಾಡುಗಳಿಲ್ಲದೆ ಗೆದ್ದು ಬೀಗಿದ ಸಿನಿಮಾಗೆ ಪರಭಾಷೆಯಲ್ಲಿ ಹೇಗೆ ರೆಸ್ಪಾನ್ಸ್ ಬರುತ್ತೆ ಅನ್ನೋದೇ ಕುತೂಹಲ.

ಸದ್ಯ 'ಸು ಫ್ರಮ್ ಸೋ' ಸಿನಿಮಾ ನೋಡಿದವರು ಮಲಯಾಳಂ ಪ್ಲೇವರ್ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಮಲಯಾಳಂನಲ್ಲಿ 'ಸು ಫ್ರಮ್ ಸೋ'ಗೆ ಒಂದೊಳ್ಳೆ ರೆಸ್ಪಾನ್ಸ್ ಸಿಗಬಹುದು. ಆದರೆ, ತೆಲುಗು ರಾಜ್ಯಗಳಲ್ಲಿ ಹಾಗೂ ಹಿಂದಿ ಬೆಲ್ಟ್‌ನಲ್ಲಿ ಈ ಸಿನಿಮಾವನ್ನು ಇಷ್ಟ ಪಡುತ್ತಾರಾ? ಕಾಮಿಡಿ ಅರ್ಥ ಮಾಡಿಕೊಳ್ಳಬಹುದಾ? ಎಂಬ ಪ್ರಶ್ನೆಯಂತೂ ಇದೆ. ಹಾಗಿದ್ದರೆ, ಯಾವ್ಯಾವ ಭಾಷೆಯಲ್ಲಿ? ಯಾವಾಗ? ಯಾರು ರಿಲೀಸ್ ಮಾಡುತ್ತಾರೆ? ಅನ್ನೋದನ್ನು ನೋಡುವುದಾದರೆ,
ಮಲಯಾಳಂ ವರ್ಷನ್ ಯಾವಾಗ?
'ಸು ಫ್ರಮ್ ಸೋ' ಕನ್ನಡದಲ್ಲಿ ಹಿಟ್ ಆದರೆ, ಮಲಯಾಳಂನಲ್ಲಿ ರಿಲೀಸ್ ಆಗುತ್ತೆ ಅನ್ನೋದು ಮೊದಲೇ ನಿರ್ಧಾರ ಆಗುತ್ತಿತ್ತು. ಯಾಕಂದ್ರೆ ರಾಜ್ ಬಿ ಶೆಟ್ಟಿ ಈಗಾಗಲೇ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅವರಿಗೆ ಮಲಯಾಳಂ ಭಾಷೆಯ ಅರಿವಿದೆ. ಇದೇ ವೇಳೆ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದ್ದರಿಂದ ದುಲ್ಖರ್ ಸಲ್ಮಾನ್ ಈ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಆಗಸ್ಟ್ 1 ರಿಂದ ಮಲಯಾಳಂನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ.
ತೆಲುಗಿ ವರ್ಷನ್ ಯಾವಾಗ?
ತೆಲುಗಿನಲ್ಲೂ ಡಬ್ಬಿಂಗ್ ಕೆಲಸ ಶುರುವಾಗಿದೆ ಎಂದು ಹೇಳಲಾಗುತ್ತಿದೆ. 'ಪುಷ್ಪ 2', 'ರಂಗಸ್ಥಳಂ' ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್ ತೆಲುಗಿನಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲಿದ್ದಾರೆ. ಈಗಾಗಲೇ ಡಬ್ಬಿಂಗ್ ಕೆಲಸ ನಡೆಯುತ್ತಿದೆ. ಮಲಯಾಳಂನಲ್ಲಿ ಬಿಡುಗಡೆಯಾದ ಒಂದು ವಾರದ ಬಳಿಕ ಅಂದರೆ, ಆಗಸ್ಟ್ 7ನೇ ತಾರೀಕು ಸಿನಿಮಾ ಬಿಡುಗಡೆಯಾಗುತ್ತಿದೆ.

ಹಿಂದಿ ವರ್ಷನ್ ಯಾವಾಗ?
'ಸು ಫ್ರಮ್ ಸೋ' ಸಿನಿಮಾ ಹಿಂದಿ ಭಾಷೆಗೂ ಡಬ್ ಆಗುತ್ತಿದೆ. ಈಗಾಗಲೇ ಕನ್ನಡದಲ್ಲಿಯೇ ಸಿನಿಮಾ ನೋಡಿ ಯೂಟ್ಯೂಬರ್‌ಗಳು ಪಾಸಿಟಿವ್ ರಿವ್ಯೂ ಕೊಟ್ಟಿದ್ದಾರೆ. ಹೀಗಾಗಿ 'ಕೆಜಿಎಫ್ 2', 'ಕಾಂತಾರ'ದಂತಹ ಕನ್ನಡ ಸಿನಿಮಾಗಳನ್ನು ವಿತರಣೆ ಮಾಡಿರುವ ಅನಿಲ್ ತಡಾನಿ ಈ ಸಿನಿಮಾವನ್ನು ಹಿಂದಿ ಏರಿಯಾಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ಈ ಸಿನಿಮಾ ಡಬ್ಬಿಂಗ್ ಕೆಲಸಗಳು ಕೂಡ ನಡೆಯುತ್ತಿವೆ ಎನ್ನಲಾಗಿದೆ. ಆದರೆ, ರಿಲೀಸ್ ಡೇಟ್ ಇನ್ನೂ ಅನೌನ್ಸ್ ಮಾಡಿಲ್ಲ.
ವಿದೇಶದಲ್ಲಿ ರಿಲೀಸ್ ಯಾವಾಗ?
'ಸು ಫ್ರಮ್ ಸೋ' ಸಿನಿಮಾಗೆ ವಿದೇಶದಲ್ಲೂ ಬೇಡಿಕೆ ಇದೆ. ಕರ್ನಾಟಕದಲ್ಲಿ ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಂದಲೂ ಬೇಡಿಕೆ ಬಂದಿದೆ. ಹೀಗಾಗಿ ವಿದೇಶದಲ್ಲೂ ದೊಡ್ಡ ಮಟ್ಟಕ್ಕೆ ಬಿಡುಗಡೆ ಮಾಡುವುದಕ್ಕೂ ಸಿದ್ಧತೆಗಳು ನಡೆಯುತ್ತಿದೆ. ಆಗಸ್ಟ್ 1ಕ್ಕೆ ಜರ್ಮನಿ, ಯುಎಸ್‌ಎಯ ಪ್ರಮುಖ ನಗರಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಹಾಗೇ ಆಗಸ್ಟ್ 7ರಂದು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ನಲ್ಲಿ ರಿಲೀಸ್ ಆಗುತ್ತಿದೆ.


Click it and Unblock the Notifications











