"ಯಾರದ್ದೋ ಒಬ್ಬರ ಸಿನಿಮಾ ಸೋತರೆ ಖುಷಿ ಪಡುವವರಲ್ಲಿ ನಾನೊಬ್ಬ ಇದ್ದೀನಿ": ರಾಜ್ ಬಿ ಶೆಟ್ಟಿ ಹೀಗಂದಿದ್ಯಾಕೆ?
ಸ್ಯಾಂಡಲ್‌ವುಡ್ ಮಟ್ಟಿಗೆ ರಾಜ್ ಬಿ ಶೆಟ್ಟಿ ಒಂದು ವಿಶಿಷ್ಠ ಪ್ರತಿಭೆ. 'ಒಂದು ಮೊಟ್ಟೆಯ ಕಥೆ'ಯಿಂದ ಶುರುವಾಗಿದ್ದ ರಾಜ್ ಬಿ ಶೆಟ್ಟಿಯ ಜರ್ನಿ ಇಲ್ಲಿವರೆಗೂ ಮುಂದುವರೆಯುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ರಾಜ್ ತಮ್ಮ ಪ್ರತಿಭೆಯನ್ನು ಜನರ ಮುಂದೆ ತೋರಿಸುತ್ತಲೇ ಇರುತ್ತಾರೆ. ಈಗ ಅವರ ಮತ್ತೊಂದು ಸಿನಿಮಾ 'ರೂಪಾಂತರ' ಬಿಡುಗಡೆಗೆ ಸಜ್ಜಾಗಿ ನಿಂತಿದೆ.
'ರೂಪಾಂತರ' ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ಗಮನ ಸೆಳೆದಿದೆ. ಇದೂ ಕೂಡ ರಾಜ್ ಬಿ ಶೆಟ್ಟಿಯ ವಿಶಿಷ್ಠ ಸಿನಿಮಾಗಳ ಸಾಲಿಗೆ ಸೇರುತ್ತಿದೆ. ಈ ಸಿನಿಮಾ ಇದೇ ಜುಲೈ 26ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಸಂದರ್ಶನಗಳನ್ನು ನೀಡುತ್ತಿದ್ದಾರೆ.

ಇತ್ತೀಚೆಗೆ ರ್‍ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ರಾಜ್ ಬಿ ಶೆಟ್ಟಿ ಸಂದರ್ಶನ ನೀಡಿದ್ದು, ಈ ವೇಳೆ ಎಲ್ಲರಂತ ತನಗೂ ಆಸೆ, ದುರಾಸೆ, ಅಸೂಯೆಗಳು ಇವೆ. ಯಾರದ್ದೋ ಒಬ್ಬರ ಸಿನಿಮಾ ಸೋತರೆ ಖುಷಿ ಪಡುವವರಲ್ಲಿ ನಾನೊಬ್ಬ ಇದ್ದೀನಿ ಎಂದು ಹೇಳಿಕೊಂಡಿದ್ದಾರೆ. ಅಸಲಿಗೆ ಯಾಕೆ ಈ ಮಾತು ಬಂತು? ರಾಜ್ ಬಿ ಶೆಟ್ಟಿಯ ಈ ಮಾತಿನ ಅರ್ಥವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
"ಎಲ್ಲರಿಗೂ ಇರುವ ಸಮಸ್ಯೆ ನನಗಿದೆ"
ರ್‍ಯಾಪಿಡ್ ರಶ್ಮಿ ಜೊತೆಗಿನ ಸಂದರ್ಶನದಲ್ಲಿ ರಾಜ್ ಬಿ ಶೆಟ್ಟಿ ತಮ್ಮ ಲೈಫ್ ಬಗ್ಗೆ, ಮಾನಸಿಕ ಸ್ಥಿತಿಯ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. "ನಾನು ತುಂಬಾ ಸಾಮಾನ್ಯ. ಎಲ್ಲರಂತೆ ನಾನು. ಎಲ್ಲರಿಗೆ ಇರುವಂತಹ ಸಮಸ್ಯೆ ನನಗೂ ಇದೆ. ಅದೇ ದುರಾಸೆ, ಅದೇ ಅಸೂಯೆ ಎಲ್ಲದೂ ನನ್ನಲ್ಲಿ ಇದೆ. ಬ್ಯೂಟಿ ಏನಂದರೆ, ಇತ್ತೀಚೆಗೆ ನಾನು ಎಲ್ಲವನ್ನೂ ಎಂಜಾಯ್ ಮಾಡುತ್ತಿದ್ದೇನೆ. ಅದು ಓಕೆ." ಎಂದು ಹೇಳಿದ್ದಾರೆ.
ಯಾಕೀ ಮಾತು?
ಇದೇ ಸಂದರ್ಶನದಲ್ಲಿ ಯಾರದ್ದೋ ಸಿನಿಮಾ ಸೋತರೆ ಖುಷಿ ಪಡುವವರಲ್ಲಿ ನಾನೊಬ್ಬ ಇದ್ದೀನಿ ಎಂದು ಹೇಳಿಕೊಂಡಿದ್ದಾರೆ. "ಯಾರದ್ದೋ ಒಬ್ಬರ ಸಿನಿಮಾ ಸೋತರೆ ಖುಷಿ ಪಡುವವರಲ್ಲಿ ನಾನೊಬ್ಬ ಇದ್ದೀನಿ. ಬೇಕು ಅಂತ ಆಗುತ್ತಾ? ಅದು ಗೊತ್ತಿಲ್ಲ. ಆದರೆ, ಎಲ್ಲೋ ಒಂದು ಕಡೆ ಮೂವ್ ಆಗುತ್ತೆ. ಆಗಬಾರದು ಅಂತ ಗೊತ್ತಿದೆ. ಹಾಗಂತ ನಾನೇನು ಆಕ್ಷನ್ ಮಾಡುವುದಿಲ್ಲ. ಅವರಿಗೇನೋ ತೊಂದರೆ ಆಗಬೇಕು ಅಂತ ಶೇರ್ ಮಾಡುವುದಿಲ್ಲ. ಸೆಲೆಬ್ರೆಟ್ ಮಾಡುವುದೆಲ್ಲ ಮಾಡುವುದಿಲ್ಲ. ನನಗೆ ಗೊತ್ತಿದೆ ನನ್ನ ಮನಸ್ಸು ಈಗ ಆರೋಗ್ಯಕರವಾಗಿಲ್ಲ ಅಂತ. ಹಾಗಾಗಿ ಆ ಆಲೋಚನೆಗಳು ಬಂದಾಗ ನಾನು ಮುಂದುವರೆಸುವುದಿಲ್ಲ. ಯಾರಾದರೂ ಮುಂದುವರೆಸುತ್ತಾರೆ ಅಂದರೆ, ನನ್ನದೇನು ದೂರು ಇಲ್ಲ." ಎಂದಿದ್ದಾರೆ.
"ನನ್ನ ಲೈಫ್ ಸೆಲೆಬ್ರೆಟ್ ಮಾಡ್ಬೇಕು"
ರಾಜ್ ಬಿ ಶೆಟ್ಟಿ ತನ್ನ ಲೈಫ್ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ. ಬದುಕಿನಲ್ಲಿ ಖುಷಿಯಾಗಿ ಇರಬೇಕು. ಬದುಕನ್ನು ಎಂಜಾಯ್ ಮಾಡಬೇಕು ಅನ್ನೋ ಆಸೆ ಅಂತ ಸಂದರ್ಶನದಲ್ಲಿ ಹೇಳಿದ್ದಾರೆ. "ನನಗೆ ನನ್ನ ಲೈಫ್ ಅನ್ನು ಎಂಜಾಯ್ ಮಾಡಬೇಕು. ನನ್ನ ಲೈಫ್ ಅನ್ನು ಸೆಲೆಬ್ರೆಟ್ ಮಾಡಬೇಕು. ಆ ಮೇಲೆ ಹೋಗಬೇಕು ಅಷ್ಟೇ" ಎಂದಿದ್ದಾರೆ.
"ಧ್ಯಾನ ಮಾಡಿದರೆ ಕೆಲಸ ಮಾಡಲ್ಲ"
"ಮೆಡಿಟೇಷನ್ ಮಾಡಲ್ಲ. ಮಾಡುವುದಕ್ಕೆ ಶುರು ಮಾಡಿದರೆ ನಾನು ಕೆಲಸ ಮಾಡಲ್ಲ. ಮೆಡಿಟೇಷನ್ ಮಾಡುವುದಲ್ಲ ಆಗೋದು. ಧ್ಯಾನ ಅನ್ನೋದು ನೀವು ಏನೂ ಮಾಡದೇ ಇರುವ ಪರಿಸ್ಥಿತಿಯಲ್ಲಿ ಆಗುವಂತಹ ಒಂದು ಕ್ರಿಯೆ ಅಥವಾ ಪಡೆದುಕೊಳ್ಳುವ ಒಂದು ನಿರಾಳತೆ ಅಂತ ಕರೆಯಬಹುದು. ನೀವು ಏನೇ ಮಾಡಿದರೂ ಅದರ ವಿರುದ್ಧ ಅಂತ ನಾನು ಅಂದುಕೊಳ್ಳುತ್ತೇನೆ" ಎಂದು ರಾಜ್ ಬಿ ಶೆಟ್ಟಿ ಹೇಳಿಕೊಂಡಿದ್ದಾರೆ.


Click it and Unblock the Notifications











