ಉಪೇಂದ್ರ ಸಿನಿಮಾದಲ್ಲಿ 'ಟೈಟಾನಿಕ್' ಹೀರೋಯಿನ್ ನಟಿಸ್ಬೇಕಿತ್ತಾ? ಆ ಜಾಗಕ್ಕೆ ರವೀನಾ ಟಂಡನ್ ಬಂದಿದ್ದೇಗೆ?
'ಎ' ಸಿನಿಮಾ ಬಳಿಕ ಉಪೇಂದ್ರ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದರು. ಅದು ಉಪ್ಪಿ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ ಆಗಿತ್ತು. ಅದುವೇ 'ಉಪೇಂದ್ರ'. ಮೊದಲ ಸಿನಿಮಾ ಗೆದ್ದಿದ್ದರಿಂದ ಎರಡನೇ ಸಿನಿಮಾ ಬಗ್ಗೆ ಹುರುಪು ಹೆಚ್ಚಿತ್ತು. ಮತ್ತೆ ಹೊಸ ತರಹದ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದರು.
ಉಪೇಂದ್ರ ತಂಡ ಒಟ್ಟಿಗೆ ಸೇರಿಕೊಂಡಿತ್ತು. ಆಗತಾನೇ 'ಎ' ಸಿನಿಮಾಗಾಗಿ ಉಪ್ಪಿಗೆ ಫಿಲ್ಮ್‌ಫೇರ್ ಅವಾರ್ಡ್ ಕೂಡ ಸಿಕ್ಕಿತ್ತು. ಹೀಗಾಗಿ 'ಉಪೇಂದ್ರ' ಸಿನಿಮಾ ತಂಡದ ಕನಸುಗಳು ದೊಡ್ಡದಿದ್ದವು. ಹೀಗಾಗಿ ಒಂದ್ಕಡೆ ಸಿನಿಮಾದ ಮ್ಯೂಸಿಕ್ ನಡೆಯುತ್ತಿತ್ತು. ಮತ್ತೊಂದು ಕಡೆ ಹೀರೋಯಿನ್‌ಗಳ ಆಯ್ಕೆ ನಡೆಯುತ್ತಿತ್ತು.

ಇತ್ತೀಚೆಗೆ ಸಂಗೀತ ನಿರ್ದೇಶಕ ಗುರುಕಿರಣ್ ಗೋಲ್ಡ್‌ಕ್ಲಾಸ್ ವಿತ್ ಮಯೂರ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶ ನೀಡಿದ್ದಾರೆ. ಈ ಸಂದರ್ಶನದಲ್ಲಿ ಗುರುಕಿರಣ್ 'ಟೈಟಾನಿಕ್' ಹೀರೋಯಿನ್ ಕರೆಸುವುದಕ್ಕೆ ಹೊರಟಿದ್ದ ಕಥೆಯನ್ನು ಹಂಚಿಕೊಂಡಿದ್ದಾರೆ. ಅಸಲಿಗೆ ಉಪ್ಪಿ ಜೊತೆ ಕೇಟ್ ವಿನ್ಸ್‌ಲೆಟ್ ನಟಿಸಬೇಕಿತ್ತಾ? ಮಿಸ್ ಆಗಿದ್ದು ಹೇಗೆ? ಈ ಬಗ್ಗೆ ತಿಳಿಯಲು ಮುಂದೆ ಓದಿ.
'ಎ' ಸಿನಿಮಾ ಬಳಿಕ ಗುರುಕಿರಣ್ 'ಉಪೇಂದ್ರ' ಗಾಗಿ ಕಂಪೋಸಿಂಗ್ ಮಾಡುತ್ತಿದ್ದರು. ಅದರಲ್ಲೂ ರವೀನಾ ಟಂಡನ್ ನಟಿಸಿದ್ದ ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಡಿಗೆ ಟ್ಯೂನ್ ಹಾಕಿತ್ತಿದ್ದರು. ಈ ವೇಳೆ ಸಿನಿಮಾಗೆ ಯಾರನ್ನು ನಾಯಕಿಯನ್ನಾಗಿ ಹಾಕಿಕೊಳ್ಳಬೇಕು ಅಂತ ಚರ್ಚೆ ನಡೆದಿತ್ತು. ಆಗ ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್‌ಲೆಟ್ ಕರೆಸಬೇಕು ಅಂತ ಚರ್ಚೆಯಾಗಿದ್ದನ್ನು ನೆನಪಿಸಿಕೊಂಡಿದ್ದಾರೆ.
"ಉಪ್ಪಿಗೆ ಎ ಸಿನಿಮಾ ಫಿಲ್ಮ್ ಫೇರ್ ಅವಾರ್ಡ್ ಬಂದಿತ್ತು. ಆಗ ಮಸ್ತ್ ಮಸ್ತ್ ಹುಡುಗಿ ಬಂದ್ಲು ಕಂಪೋಸ್ ಮಾಡುತ್ತಿದ್ದೆವು. ಆ ಖುಷಿಯಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ್ವಿ. ಅಲ್ಲಿ ನೋಡು.. ಇಲ್ಲಿ ನೋಡು ಅಂದರೆ, ಅವರೆಲ್ಲ ಸೇರಿ ರಾಘವೇಂದ್ರನೇ ಅನ್ನೋರು. ಹೀಗೆ ಮಸ್ತ್ ಮಸ್ತ್ ಹುಡುಗಿ ಬಂದ್ಲು ಮೊದಲು ಕಂಪೋಸ್ ಆಗಿದ್ದು." ಎಂದು ಗುರುಕಿರಣ್ ಹಾಡಿನ ಬಗ್ಗೆ ಮೊದಲು ಮಾತಾಡಿದ್ದರು.

ಈ ವೇಳೆ ಹೀರೋಯಿನ್ ಬಗ್ಗೆ ಚರ್ಚೆ ಆಗಿತ್ತು. ರವೀನಾ ಟಂಡನ್‌ಗೂ ಮುನ್ನ ಟೈಟಾನಿಕ್ ಹೀರೋಯಿನ್ ಕರೆಸುವುದಕ್ಕೆ ಸ್ಕೆಚ್ ಹಾಕಿದ್ದರಂತೆ. "ಮಜಾ ಅಂದರೆ, ಉಪೇಂದ್ರ ಸಿನಿಮಾದಲ್ಲಿ ಹೀರೋಯಿನ್ ಯಾರನ್ನು ಹಾಕೋಣ ಅಂತ ಇದ್ದಿದ್ದು ಗೊತ್ತಾ? ಕೇಟ್ ವಿನ್ಸ್‌ಲೆಟ್, ಟೈಟಾನಿಕ್ ಸಿನಿಮಾ ಹೀರೋಯಿನ್. ಎಲ್ಲಾ ಮಕ್ಕಳ ಆಟ ತರ. ನಮ್ಮ ಪ್ರಡ್ಯೂಸರ್ ಆಯ್ತು ಕರೆಸೋಣ ಅಂದರು. ರವೀನಾ ಟಂಡನ್ ರೋಲ್‌ಗೆ ಕೇಟ್ ವಿನ್ಸ್‌ಲೆಟ್ ಅಂತ ಅಂದ್ಕೊಂಡ್ವಿ. ನಿರ್ಮಾಪಕರು ಆಯ್ತು ಅಂದ್ರು. ಕೊನೆಯಲ್ಲಿ ನಮ್ಮು ಒಂದು ಕೋಟಿ ಬಜೆಟ್ ಅಂದರು." ಎಂದು ಅಂದು ನಡೆದ ತಮಾಷೆಯನ್ನು ನೆನಪಿಸಿಕೊಂಡಿದ್ದಾರೆ.
'ಉಪೇಂದ್ರ' ಸಿನಿಮಾ ಮಾಡುವ ಟೈಮ್‌ನಲ್ಲಿ ಎಲ್ಲರಲ್ಲೂ ದೊಡ್ಡ ದೊಡ್ಡ ಕನಸುಗಳು ಇದ್ದವು. ದೊಡ್ಡ ಮಟ್ಟಕ್ಕೆ ಸಿನಿಮಾ ಮಾಡಬೇಕು ಹೊರಟಿದ್ದರು. ಹಾಗಾಗಿ ಟೈಟಾನಿಕ್ ಹೀರೋಯಿನ್ ಕರೆಸುವ ಆಲೋಚನೆ ಎಲ್ಲಾ ಬಂದಿತ್ತು. "ಉಪೇಂದ್ರ ಸಮಯದಲ್ಲಿ ನಮಗ್ಯಾರಿಗೂ ಏನೂ ಗೊತ್ತಿರಲಿಲ್ಲ. ನಾವೆಲ್ಲ ಮುಗ್ಧರಾಗಿದ್ವಿ. ನಮ್ಮ ಕನಸುಗಳು ಮಾತ್ರ ಸಿಕ್ಕಾಪಟ್ಟೆ ದೊಡ್ಡದಿತ್ತು." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











