"ನಾನು ಎಲ್ಲೇ ಸತ್ತರೂ ಭಸ್ಮವನ್ನು ತೆಗೆದುಕೊಂಡು ಹೋಗಿ ಶೃಂಗೇರಿಯಲ್ಲಿಯೇ ಬಿಡಬೇಕು"- ವಿಜಯಲಕ್ಷ್ಮಿ
'ನಾಗಮಂಗಲ' ಸಿನಿಮಾದ ನಟಿ ವಿಜಯಲಕ್ಷ್ಮಿ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತಾರೆ. ಕಳೆದ ಕೆಲವು ವರ್ಷಗಳಿಂದ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಕೆಲವೊಮ್ಮೆ ತಮ್ಮ ಕಷ್ಟಗಳನ್ನು ನೆನೆದು ಕಣ್ಣೀರು ಹಾಕಿದ್ದರು. ಒಂದು ಕಾಲದಲ್ಲಿ ಟಾಪ್ ಹೀರೋಯಿನ್ ಆಗಿ ಸಕ್ಸಸ್‌ಫುಲ್ ನಟಿಯಾಗಿದ್ದ ವಿಜಯಲಕ್ಷ್ಮಿ ಕೆಲವು ದಿನಗಳಿಂದ ಸಂಕಷ್ಟದಲ್ಲಿ ಇದ್ದಾರೆ. ಹಲವು ವೇಳೆ ತಮ್ಮ ಸಮಸ್ಯೆಗಳನ್ನು ನೆನೆದು ಭಾವುಕರಾಗಿದ್ದರು.
ಈಗ ಮತ್ತೆ ವಿಜಯಲಕ್ಷ್ಮಿ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಪಾಡ್‌ಕಾಸ್ಟ್‌ನಲ್ಲಿ ಮತ್ತೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಬದುಕಿನಲ್ಲಿ ಇರುವ ನೋವುಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಆರ್ಥಿಕ ಪರಿಸ್ಥಿತಿ, ಅಕ್ಕನ ಆರೋಗ್ಯ ಪರಿಸ್ಥಿತಿ ಕುರಿತು ಭಾವುಕರಾಗಿ ಮಾತಾಡಿದ್ದಾರೆ.

ಎಲ್ಲಕ್ಕಿಂತ ಹೆಚ್ಚಾಗಿ ವಿಜಯಲಕ್ಷ್ಮಿ ತಮ್ಮ ಸಾವಿನ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ತಾನು ಸತ್ತಾಗ ತನ್ನ ಆತ್ಮೀಯರು ಹತ್ತಿರದಲ್ಲಿ ಇರಬೇಕು ಎಂದು ಕೇಳಿಕೊಂಡಿದ್ದಾರೆ. ಹಾಗೇ ಪ್ರಕಾಶ್ ರಾಜ್ ಬಳಿ ಮನವಿ ಮಾಡಿಕೊಂಡಿದ್ದನ್ನು ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಪ್ರಕಾಶ್ ರಾಜ್ ಬಳಿ ವಿಜಯಲಕ್ಷ್ಮಿ ಕೋರಿಕೆ ಏನು?
ವಿಜಯಲಕ್ಷ್ಮಿ ಅವರು ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಕೆ.ಬಾಲಚಂದರ್ ಅವರೊಂದಿಗೆ ಕೆಲಸ ಮಾಡಿದ್ದರು. ಅವರು ನಿರ್ಮಾಣದ ಸೀರಿಯಲ್‌ನಲ್ಲಿ ನಟಿಸಿದ್ದರು. ಅವರೇ ವಿಜಯಲಕ್ಷ್ಮಿ ಅವರನ್ನು ಮೊದಲು ತಮಿಳು ಸೀರಿಯಲ್‌ಗೆ ಪರಿಚಯಿಸಿದ್ದರು. 'ಎಥೀರ್ನಿಚಲ್' ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು. ಅದು ತುಂಬಾನೇ ಯಶಸ್ಸು ಕಂಡಿತ್ತು. ಅವರು ತೀರಿ ಹೋದಾಗ ಪ್ರಕಾಶ್ ರಾಜ್ ಅವರನ್ನು ತುಂಬಾ ಹತ್ತಿರದಿಂದ ನೋಡುತ್ತಿದ್ದರು. ಅವರ ಅಂತ್ಯ ಸಂಸ್ಕಾರದ ಕೊನೆಯ ಹಂತದವರೆಗೂ ಪ್ರಕಾಶ್ ರಾಜ ಇದ್ದರು. ಇದನ್ನು ನೋಡಿ ಭಾವುಕರಾದ ವಿಜಯಲಕ್ಷ್ಮಿ ಒಂದು ಮಾತು ಹೇಳಿದ್ದರು.
"ಅಂದು ಪ್ರಕಾಶ್ ರಾಜ್ ಸರ್ ಹತ್ತಿರ ನಾನು ಮಾತಾಡಿದೆ. ನೀವು ಬಾಲಚಂದರ್ ಸರ್ ಅಂತ್ಯ ಸಂಸ್ಕಾರದ ವೇಳೆ ನಡೆದುಕೊಂಡಿದ್ದು ತುಂಬಾನೇ ಹಾರ್ಟ್ ಟಚಿಂಗ್ ಆಗಿತ್ತು. ನನಗೂ ಅದೇ ರೀತಿ ಮಾಡುತ್ತೀರ ಸರ್ ಅಂತ ನಾನು ಕೇಳಿದೆ. ಏನು ವಿಜಯಲಕ್ಷ್ಮಿ ಯಾಕೆ ಹೀಗೆ ಮಾತಾಡುತ್ತಿದ್ದೀರ ಎಂದು ಕೇಳಿದರು. ಹಾಗೆಲ್ಲ ಮಾತಾಡಬಹುದಾ? ಬೇಜಾರಾಗಲ್ವ? ಅಂತ ಕೇಳಿದರು. ಅದರಲ್ಲಿ ತಪ್ಪೇನಿದೆ ಸರ್.. ನಾವು ಬರುವಾಗ ನಮ್ಮ ಸುತ್ತಮುತ್ತ ಫ್ಯಾಮಿಲಿ ಇರುತ್ತಾರೆ. ನಾನು ತೀರಿ ಹೋದಾಗ ನಾನು ಇಷ್ಟಪಡುವವರು ಅಲ್ಲಿ ಇರಬೇಕು ಅಂತ ಹೇಳುತ್ತೇನೆ." ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.

"ಸತ್ಮೇಲೆ ನನ್ನ ಭಸ್ಮ ಶೃಂಗೇರಿಯಲ್ಲಿಯೇ ಬಿಡಬೇಕು"
ಇದೇ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಸಾವಿನ ಬಳಿಕ ಏನು ಮಾಡಬೇಕು ಅಂತನೂ ಹೇಳಿಕೊಂಡಿದ್ದಾರೆ. ಇದು ತುಂಬಾನೇ ಹಾರ್ಟ್ ಟಚಿಂಗ್ ಆಗಿತ್ತು. "ನೀವು ಕರ್ನಾಟಕದಲ್ಲೇ ಇರುತ್ತೀರಾ? ತಮಿಳುನಾಡಿಗೆ ಹೋಗುತ್ತೀರಾ? ಅಂತ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ. ಆ ಗೊಂದಲ ಅವರಿಗೆ ಇದ್ದೇ ಇದೆ. ನನ್ನ ತೀರಿ ಹೋದಾಗ ಅವರಿಗೆ ಶೃಂಗೇರಿಯಲ್ಲೇ ಮಾಡಿದರು. ಅವರಿಗೆ ಕರ್ನಾಟಕ ಅಂದರೆ ತುಂಬಾನೇ ಅಭಿಮಾನ. ನಮ್ಮ ತಾಯಿ ಇಲ್ಲೇ ತೀರಿ ಹೋದರು ಶೃಂಗೇರಿಯಲ್ಲಿ ಮಾಡಿದರು. ನಾನು ಎಲ್ಲೇ ಸತ್ತು ಹೋದರೂ ಇಲ್ಲಿಗೆ ಬರಬೇಕು. ಮತ್ತೆ ಗೊಂದಲ ಇರಬಾರದು ಮಣ್ಣು ಮಾಡಬೇಕಾ? ಸುಡಬೇಕಾ? ಅಂತ. ಸುಡಬೇಕು ಅಂತಲೇ ಹೇಳಿದ್ದೇನೆ. ಭಸ್ಮಯನ್ನು ತೆಗೆದುಕೊಂಡು ಹೋಗಿ ಶೃಂಗೇರಿಯಲ್ಲಿಯೇ ಬಿಡಬೇಕು. ಇದನ್ನು ನಾನು ನನ್ನ ತುಂಬಾ ಕ್ಲೋಸ್ ಫ್ರೆಂಡ್ಸ್ ಹತ್ತಿರ ಹೇಳುತ್ತೇನೆ. ನಾನು ಸತ್ತಾಗ ನೀವೆಲ್ಲರೂ ಬರಬೇಕು ಅಂತ ನನಗೆ ಹತ್ತಿರ ಆದವರಿಗೆ ಹೇಳುತ್ತೇನೆ. ನನ್ನ ಪ್ರಕಾರ ಇದರಲ್ಲಿ ಯಾವುದೇ ತಪ್ಪು ಇಲ್ಲ" ಎಂದು ವಿಜಯಲಕ್ಷ್ಮಿ ಹೇಳಿದ್ದಾರೆ.
"ಸಾವು ಅಂದರೆ ನನಗೆ ಮುಕ್ತಿ"
ನಟಿ ವಿಜಯಲಕ್ಷ್ಮಿ ತನ್ನ ಬದುಕಿನ ನೋವು-ನಲಿವುಗಳ ಬಗ್ಗೆ ಓಪನ್ ಆಗಿ ಮಾಡಿದ್ದಾರೆ. ಅವರ ಆಧ್ಯಾತ್ಮದ ಬಗ್ಗೆ ಹೇಳಿಕೊಂಡಿದ್ದಾರೆ. ಸಾವು ಅಂದರೆ ನೋವು ಅಲ್ಲ, ಅದು ಮುಕ್ತಿ ಎಂದು ಹೇಳಿಕೊಂಡಿದ್ದಾರೆ. "ಎಲ್ಲರೂ ಸಾವನ್ನು ನೋವು ಅಂತಾರಲ್ಲ.. ನನಗೆ ಅದು ಮುಕ್ತಿ. ನಾನು ಸ್ವತಂತ್ರಳಾದೆ ಅನ್ನೋ ಫೀಲಿಂಗ್ ನನಗೆ. ಇದನ್ನ ಕೇಳಿದಾಗ ಏನು ಹೀಗೆ ಹೇಳುತ್ತಿದ್ದಾಳೆ ಅಂತ ಅನಿಸುತ್ತೆ. ಆದರೆ ನಾನು ನನ್ನದೇ ಆದ ಆಧ್ಯಾತ್ಮದ ಹಂತದಲ್ಲಿ ಇದ್ದೀನಿ" ಎಂದು ವಿಜಯಲಕ್ಷ್ಮಿ ಈ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.


Click it and Unblock the Notifications