'KGF 2' ಸಿನಿಮಾ ವೀಕ್ಷಣೆ ವೇಳೆ ಥಿಯೇಟರ್ ಒಳಗೆ ಶೂಟ್‌ಔಟ್: ಯುವಕನಿಗೆ ಗುಂಡು
'ಕೆಜಿಎಫ್ 2' ಸಿನಿಮಾ ನೋಡಲು ಹೋದ ಯುವಕನ ಮೇಲೆ ಥಿಯೇಟರ್ ಒಳಗೆ ಸಿನಿಮೀಯ ರೀತಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದೆ. ನಿನ್ನೆ( ಏಪ್ರಿಲ್ 19) ರಾತ್ರಿ 10.30ಕ್ಕೆ ಈ ಘಟನೆ ನಡೆದಿದ್ದು, ಚಿತ್ರಮಂದಿರ ಒಳಗೆ 'ಕೆಜಿಎಫ್ 2' ಸಿನಿಮಾ ನೋಡುವಾಗ ಈ ಘಟನೆ ನಡೆದಿದೆ.
ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ 'ಕೆಜಿಎಫ್ 2' ಸಿನಿಮಾ ರಾತ್ರಿ 9 ಗಂಟೆ ಶೊ ಪ್ರದರ್ಶನ ಆಗುತ್ತಿತ್ತು. ಈ ವೇಳೆ ಸರಿ ಸುಮಾರು 10.30ರ ವೇಳೆಗೆ ಶೂಟ್‌ಔಟ್ ಪ್ರಕರಣ ನಡೆಡಿದೆ. ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ 28 ವರ್ಷದ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಗುಂಡೇಟು ತಿಂದು ಗಾಯಗೊಂಡಿರುವ ಪ್ರೇಕ್ಷಕ.
ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಪ್ರೇಕ್ಷಕ
ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದ ಒಳಗೆ ಶೂಟ್‌ಔಟ್ ವೇಳೆ ವಸಂತಕುಮಾರ ಸಣ್ಣಕಲ್ಲಪ್ಪ ಶಿವಪುರ ಗಂಭೀರವಾಗಿ ಗಾಯಗೊಂಡಿದ್ದಾನೆ. ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಇನ್ನು ಗುಂಡು ಹಾರಿಸಿದ ವ್ಯಕ್ತಿ ಪರಾರಿಯಾಗಿದ್ದು, ಆ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ವಸಂತ ಕುಮಾರ್ ನಿನ್ನೆ (ಏಪ್ರಿಲ್ 19) ತನ್ನ ನಾಲ್ವರು ಸ್ನೇಹಿತರೊಂದಿಗೆ 'ಕೆಜಿಎಫ್ 2' ಸಿನಿಮಾ ವೀಕ್ಷಣೆ ಮಾಡಲು ಚಿತ್ರಮಂದಿರಕ್ಕೆ ತೆರಳಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದ ಬಳಿಕ ಶೂಟ್‌ಔಟ್ ಘಟನೆ ನಡೆದಿದೆ.
ಶೂಟ್‌ಔಟ್‌ಗೆ ಕಾರಣವೇನು?
ವಸಂತ ಕುಮಾರ ಹಾಗೂ ಆತನ ಸ್ನೇಹಿತರು ಕೃಷಿಕರು. ಬೆಳಗ್ಗೆಯಿಂದ ಹೊಲದಲ್ಲಿ ಕೆಲಸ ಮಾಡಿದ್ದರು. ಬಳಿಕ ರಾತ್ರಿ 9 ಗಂಟೆ ಶೋ ನಾಲ್ವರು ಸ್ನೇಹಿತರೊಂದಿಗೆ 'ಕೆಜಿಎಫ್ 2' ಸಿನಿಮಾ ವೀಕ್ಷಿಸಲು ಥಿಯೇಟರ್‌ಗೆ ತೆರಳಿದ್ದರು. ಈ ವೇಳೆ ವಸಂತಕುಮಾರ ಮುಂದಿನ ಕುರ್ಚಿಯ ಮೇಲೆ ಕಾಲಿಟ್ಟಿದ್ದ. ಕಾಲನ್ನು ತೆಗೆಯುವಂತೆ ಆರೋಪಿ ಹೇಳಿದ್ದ. ಈ ವೇಳೆ ಇಬ್ಬರ ನಡುವೆ ಜೋರಾಗಿ ಗಲಾಟೆ ನಡೆದಿತ್ತು ಎನ್ನಲಾಗಿದೆ.

Recommended Video

ಈ ಗಲಾಟೆ ಬಳಿಕ ಆರೋಪಿ ಚಿತ್ರಮಂದಿರದಿಂದ ಹೊರಗೆ ಹೋಗಿದ್ದ. 10 ನಿಮಿಷದ ಬಳಿಕ ಒಳಗೆ ಬಂದು ವಸಂತಕುಮಾರ ಮೇಲೆ ಮೂರು ಸುತ್ತು ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ. ಎರಡು ಗುಂಡು ಕಾಲಿಗೆ ಬಿದ್ದಿದ್ದು, ಇನ್ನೊಂದು ಮಿಸ್ ಫೈಯರ್ ಆಗಿತ್ತು. ಈ ಘಟನೆ ಬಳಿಕ ಜನರು ಚಿತ್ರಮಂದಿರದಿಂದ ಓಡಿ ಹೋಗಿದ್ದಾರೆ. ಆರೋಪಿ ಪರಾರಿಯಾಗಿದ್ದು, ಶಿಗ್ಗಾವಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.


Click it and Unblock the Notifications











