ಶಿವಣ್ಣನಿಗೆ ಶಿವರಾಜ್‌ಕುಮಾರ್ ಅಂತ ಹೆಸರಿಡುವಂತೆ ಸೂಚಿಸಿದ್ದು ಯಾರು? ಹುಟ್ಟಿದ ಹೆಸರು ಬದಲಿಸಿದ್ದೇಕೆ?
ಸ್ಯಾಂಡಲ್‌ವುಡ್‌ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಖದರ್ ಬೇರೆನೇ ಇದೆ. ಎನರ್ಜಿಗೆ ಇನ್ನೊಂದು ಹೆಸರೇ ಶಿವಣ್ಣ ಅನ್ನೋದು ಹೊಸ ವಿಷಯವೇನೂ ಅಲ್ಲ. ಕೆಲವು ಪಾತ್ರಗಳನ್ನು ಇವರು ಬಿಟ್ಟರೆ ಬೇರೆ ಯಾರೂ ಮಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಪವರ್‌ಫುಲ್ ಆಗಿರುತ್ತೆ. ಅದಕ್ಕೆ ಇಂದಿಗೂ ಅಭಿಮಾನಿಗಳು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಶಿವಣ್ಣನನ್ನು ಮೆರೆಸುತ್ತಿದ್ದಾರೆ.
ಶಿವಣ್ಣ ನಟಿಸದ ಸಿನಿಮಾಗಳೇ ಇಲ್ಲ. ಎಂತಹದ್ದೇ ಪಾತ್ರವಿದ್ದರೂ ಎಲ್ಲದಕ್ಕೂ ಜೈ. ಲವ್ ಸ್ಟೋರಿ, ರೊಮ್ಯಾಂಟಿಕ್ ಸಿನಿಮಾಗಳು, ಕಾಮಿಡಿ, ಆಕ್ಷನ್, ಅಂಡರ್‌ವರ್ಲ್ಡ್ ಪ್ರಕಾರದ ಸಿನಿಮಾಗಳನ್ನು ಸಲೀಸಾಗಿ ಮಾಡಿಬಿಡಬಲ್ಲ ನಟ. ವರ್ಷಕ್ಕೆ ಕಮ್ಮಿ ಅಂದರೂ ಎರಡೆರಡು ಸಿನಿಮಾಗಳನ್ನು ಅಭಿಮಾನಿಗಳಿಗೆ ಕೊಡುವ ಏಕೈಕ ನಟ ಅಂದರೆ, ಅದು ಶಿವರಾಜ್‌ಕುಮಾರ್.

ಭಾರತೀಯ ಚಿತ್ರರಂಗದಲ್ಲಿ ಶಿವರಾಜ್‌ಕುಮಾರ್ ಅನ್ನೋದು ಒಂದು ಪವರ್‌ಫುಲ್ ಹೆಸರು. ಅದೇ ಈಗ ಇವರನ್ನು ನಾಗರಾಜು ಶಿವಪುಟ್ಟಸ್ವಾಮಿ ಅಂತ ಕರೆಯುವುದಕ್ಕೆ ಯಾರಾದರೂ ಇಷ್ಟ ಪಡುತ್ತಾರಾ? ಹೌದು, ಶಿವರಾಜ್‌ಕುಮಾರ್ ಅನ್ನುವುದು ಅವರು ಹುಟ್ಟಿದ ಹೆಸರು ಅಲ್ಲ. ಸಿನಿಮಾರಂಗಕ್ಕೆ ಎಂಟ್ರಿ ಕೊಡಬೇಕು ಅನ್ನುವಾಗ ಇಟ್ಟಿದ್ದ ಹೆಸರು. ಅಸಲಿಗೆ ಈ ಸಕ್ಸಸ್‌ಫುಲ್ ಹೆಸರನ್ನು ಕೊಟ್ಟಿದ್ದು ಯಾರು? ಯಾವ ಸಂದರ್ಭದಲ್ಲಿ ಹೆಸರಿಟ್ಟರು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕೆಲವು ವ್ಯಕ್ತಿಗಳು ಜೀವನದಲ್ಲಿ ಸಕ್ಸಸ್‌ಫುಲ್ ಆಗುವುದಕ್ಕೆ ಅವರ ಹೆಸರುಗಳು ಕೂಡ ಹೆಚ್ಚಿನ ಪಾತ್ರವಹಿಸುತ್ತವೆ. ವಿಶೇಷ ಅನ್ನುವಂತಹ ಹೆಸರುಗಳು ಅವರ ಹಣೆಬರಹವನ್ನು ಬರೆಯುತ್ತವೆ. ಅವರು ಹುಟ್ಟಿದ ಹೆಸರುಗಳು ಬೇರೆ ಇರುತ್ತವೆ. ಬಳಿಕ ಅವರ ಹೆಸರನ್ನು ಬದಲಿಸಿಕೊಂಡಾಗ ಯಶಸ್ಸು ಅವರನ್ನು ಹುಡುಕಿಕೊಂಡು ಬಂದ ಉದಾಹರಣಗಳು ಕನ್ನಡ ಚಿತ್ರರಂಗದಲ್ಲಿ ಸಿಗುತ್ತವೆ.
ಇದರಲ್ಲಿ ಶಿವರಾಜ್‌ಕುಮಾರ್ ಕೂಡ ಒಂದು. ಅಣ್ಣಾವ್ರು ತಮ್ಮ ಹಿರಿಯ ಪುತ್ರನಿಗೆ ತಂದೆಯ ಹೆಸರು ಸೇರಿಕೊಳ್ಳುವಂತೆ ಇಟ್ಟಿದ್ದರು. ರಾಜ್‌ಕುಮಾರ್ ತಂದೆಯ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ. ಹೀಗಾಗಿ ಆ ಹೆಸರು ತಮ್ಮ ಮಗನಲ್ಲೂ ಇರಬೇಕು ಅನ್ನುವ ಕಾರಣಕ್ಕೆ ನಾಗರಾಜು ಶಿವಪುಟ್ಟಸ್ವಾಮಿ ಅಂತ ಇಟ್ಟಿದ್ದರು. ಶಿವಣ್ಣ ಕಾಲೇಜು ಮುಗಿಸುವವರೆಗೂ ನಾಗರಾಜು ಶಿವಪುಟ್ಟಸ್ವಾಮಿ ಎಂದೇ ಅವರನ್ನು ಬಲ್ಲವರು ಕರೆಯುತ್ತಿದ್ದರು.

ಶಿಕ್ಷಣ ಮುಗಿಸಿ ಇನ್ನೇನು ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಅನ್ನುವಾಗ ಹೆಸರು ಬದಲಿಸುವ ಬಗ್ಗೆ ಚರ್ಚೆ ಆಗಿತ್ತು. ಡಾ.ರಾಜ್‌ಕುಮಾರ್ ಅವರ ಸ್ನೇಹಿತರಾಗಿದ್ದ ರಾಮಸ್ವಾಮಿ ಎಂಬುವವರು ಮಗನ ಹೆಸರು ಬದಲಿಸುವಂತೆ ಸಲಹೆ ನೀಡಿದ್ದರು. ಮಗನ ಹೆಸರಿನ ಜೊತೆ ಅಣ್ಣಾವ್ರ ಹೆಸರನ್ನು ಸೇರಿಸುವುಂತೆ ಸಲಹೆ ನೀಡಿದ್ದರು. ಆ ವೇಳೆ ಅಣ್ಣಾವ್ರಿಗೂ ಅದು ಸರಿ ಅನಿಸಿ, ಸ್ನೇಹಿತ ರಾಮಸ್ವಾಮಿ ಸಲಹೆಯಂತೆ ತಮ್ಮ ಹಿರಿಯ ಪುತ್ರ ನಾಗರಾಜು ಶಿವಪುಟ್ಟಸ್ವಾಮಿಯ ಹೆಸರನ್ನು ಶಿವರಾಜ್‌ಕುಮಾರ್ ಅಂತ ಇಡುವುದಕ್ಕೆ ಒಪ್ಪಿದ್ದರು.
ಮೊದಲ ಸಿನಿಮಾ 'ಆನಂದ್' ಟೈಟಲ್ ಕಾರ್ಡ್ ಮೇಲೆ ಶಿವಪುಟ್ಟಸ್ವಾಮಿ ಬದಲು ಶಿವರಾಜ್‌ಕುಮಾರ್ ಅಂತ ಮುದ್ರೆ ಬಿದ್ದಿತ್ತು. ಅಲ್ಲಿಂದ ಶಿವರಾಜ್‌ಕುಮಾರ್ ಅನ್ನೋ ಹೆಸರು ಚಿತ್ರರಂಗದಲ್ಲಿ ಬೆಳೆಯುತ್ತಾ ಹೋಯ್ತು. ಹ್ಯಾಟ್ರಿಕ್ ಸ್ಟಾರ್ ಆದರು, ಬಳಿಕ ಸೆಂಚುರಿ ಸ್ಟಾರ್ ಆದರು. ಈಗ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಅಣ್ಣನಾಗಿ ಶಿವಣ್ಣ ಆಗಿದ್ದಾರೆ. ಹೀಗೆ ಒಂದು ಹೆಸರು ಬದಲಾವಣೆ ಇಲ್ಲಿವರೆಗೂ ಯಶಸ್ಸು ಕೊಡುತ್ತಲೇ ಬಂದಿದೆ.


Click it and Unblock the Notifications











