'ಬ್ರಹ್ಮಗಂಟು' ನಟಿ ಶೋಭಿತಾ ಶಿವಣ್ಣ ಗಂಡ ಯಾರು? ಮದುವೆ ಬಳಿಕ ಹೈದರಾಬಾದ್‌ನಲ್ಲಿ ನಲೆಸಿದ್ದೇಕೆ?
ಕನ್ನಡ ಧಾರಾವಾಹಿ ಹಲವು ಧಾರಾವಾಹಿಗಳಲ್ಲಿ ನಟಿಸಿದ ನಟಿ ಶೋಭಿತಾ ಶಿವಣ್ಣ ತಮ್ಮ ಬದುಕನ್ನು ಅಂತ್ಯಗೊಳಿಸಿಕೊಂಡಿದ್ದಾರೆ. ದಿಢೀರನೇ ಶೋಭಿತಾ ಶಿವಣ್ಣ ಸಾವಿನ ಸುದ್ದಿಯನ್ನು ತಿಳಿದು ಕಿರುತೆರೆ ಹಾಗೂ ಚಿತ್ರರಂಗಕ್ಕೆ ಆಘಾತ ಆಗಿದೆ. ಕಿರುತೆರೆಯಲ್ಲಿ ತಮ್ಮ ನಟನೆಯಿಂದ ತನ್ನದೇ ಚಾಪು ಮೂಡಿಸಿದ್ದ ನಟಿ ಶೋಭಿತಾ ಶಿವಣ್ಣ ವಿವಾಹದವರೆಗೂ ಕಿರುತೆರೆಯಲ್ಲಿ ನಟಿಸಿದ್ದರು.
'ಬ್ರಹ್ಮಗಂಟು' ಅಂತಹ ಜನಪ್ರಿಯ ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶೋಭಿತಾ ಶಿವಣ್ಣ ಕಿರುತೆರೆಯಲ್ಲಿ ಯಶಸ್ಸು ಕಂಡಿದ್ದರು. ಸುಮಾರು 12ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ, ಸಿನಿಮಾಗಳಿಗೂ ಬಣ್ಣ ಹಚ್ಚಿದ್ದರು. ಆದರೆ, ವಿವಾಹದ ಬಳಿಕ ಸಿನಿಮಾ ಹಾಗೂ ಕಿರುತೆರೆಯಿಂದ ಅಂತರವನ್ನು ಕಾಯ್ದುಕೊಂಡಿದ್ದರು. ಅಷ್ಟೇ ಅಲ್ಲ. ತಮ್ಮ ಸಹ ಕಲಾವಿದರಿಂದಲೂ ದೂರ ಉಳಿದಿದ್ದರು ಎನ್ನಲಾಗಿದೆ.

2023ರಲ್ಲಷ್ಟೇ ಶೋಭಿತಾ ಶಿವಣ್ಣ ವೈವಾಹಿಕ ಜೀವನಕ್ಕೆ ಮುಂದಾಗಿದ್ದರು. ಆ ವೇಳೆ ಕೂಡ ಅದ್ಧೂರಿಯಾಗಿ ಮದುವೆಯಾದರೂ ಚಿತ್ರರಂಗದ ಕೆಲವೇ ಕೆಲವು ಗಣ್ಯರು ಭಾಗಿಯಾಗಿದ್ದರು. ಆಗಲೂ ಶೋಭಿತಾ ಶಿವಣ್ಣ ತಮ್ಮ ಪತಿಯ ಪರಿಚಯ ಮಾಡಿಕೊಟ್ಟಿರಲ್ಲಿಲ್ಲ. ಅಲ್ಲದೆ ಅವರ ಪತಿಯ ಬಗ್ಗೆ ಸುಳಿವು ಇರಲಿಲ್ಲ. ಅಷ್ಟಕ್ಕೂ ಶೋಭಿತಾ ಪತಿ ಯಾರು? ಅವರ ವೃತ್ತಿ ಏನು? ವಿವಾಹದ ಬಳಿಕ ಹೈದರಾಬಾದ್‌ನಲ್ಲಿ ನೆಲೆಸಿದ್ದು ಯಾಕೆ?
2010ರಲ್ಲಿ ಪ್ರಸಾರ ಆಗಿದ್ದ 'ಕೃಷ್ಣ ರುಕ್ಮಿಣಿ' ಧಾರಾವಾಹಿ ಮೂಲಕ ಶೋಭಿಯಾ ಶಿವಣ್ಣ ಕಿರುತೆರೆ ಪ್ರವೇಶ ಮಾಡಿದ್ದರು. ಅಲ್ಲಿಂದ 'ನಿನ್ನಿಂದಲೇ', 'ಮನಸೆಲ್ಲ ನೀನೇ', ಗಾಳಿಪಟ, ಮಂಗಳಗೌರಿ, ದೀಪವು ನಿನ್ನದೆ ಗಾಳಿಯು ನಿನ್ನದೆ, ಅಮ್ಮಾವ್ರು, ಮನೆದೇವರು ಅಂತಹ ಧಾರಾವಾಹಿಗಳಲ್ಲಿ ನಟಿಸಿದ್ದರು. ಶೋಭಿತಾ ಶಿವಣ್ಣ 30ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರ ವಿವಾಹದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆ ವೇಳೆ ಅವರು ಪತಿ ಹೆಸರು, ವೃತ್ತಿ ಏನು? ಅನ್ನೋದು ಕೂಡ ಗೊತ್ತಾಗಿರಲಿಲ್ಲ.

ಶೋಭಿತಾ ಶಿವಣ್ಣ ವಿವಾಹದ ಬಳಿಕ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ವಿವಾಹದ ಬಳಿಕ ನಟನೆಯಿಂದ ದೂರವಿದ್ದ ನಟಿ ಪತಿಯ ಹೆಸರು ಸುಧೀರ್ ಎನ್ನಲಾಗಿದ್ದು, ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಇದೇ ಕಾರಣಕ್ಕೆ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಹೈದರಾಬಾದ್ ಗಚಿಬೌಲಿಯ ಶ್ರೀರಾಮನಗರ ಕಾಲೋನಿಯಲ್ಲಿ ವಿವಾಹದ ಬಳಿಕ ವಾಸವಿದ್ದು, ಅದೇ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಗಚಿಬೌಲಿಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ. ಶೋಭಿತಾ ಶಿವಣ್ಣ ಪಾರ್ಥೀವ ಶರೀರವನ್ನು ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಅವರ ತವರು ಸಕಲೇಶಪುರಕ್ಕೆ ತೆಗೆದುಕೊಂಡು ಬರಲಾಗುತ್ತೆ. ಶೋಭಿತಾ ಆತ್ಮಹತ್ಯೆಯ ಸುದ್ದಿಯನ್ನು ತಿಳಿದ ಕುಟುಂಬ ಹೈದರಾಬಾದ್‌ಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಅವರ ಸಾವಿಗೆ ನಿಖರವಾಗಿ ಕಾರಣ ಇನ್ನೂ ತಿಳಿದು ಬಂದಿಲ್ಲ.
ಶೋಭಿತಾ ಶಿವಣ್ಣ ಆತ್ಮಹತ್ಯೆಯ ಸುದ್ದಿಯನ್ನು ಕೇಳಿ ಕಿರುತೆರೆ ಲೋಕಕ್ಕೆ ಶಾಕ್ ಆಗಿದೆ. ಇತ್ತೀಚೆಗಷ್ಟೇ ಮಠ ಚಿತ್ರದ ನಿರ್ದೇಶಕ ಗುರುಪ್ರಸಾದ್ ಕೂಡ ಹೀಗೆ ದುಡುಕಿನ ನಿರ್ಧಾರವನ್ನು ತೆಗೆದುಕೊಂಡಿದ್ದರು. ಈಗ ಕನ್ನಡದ ಮತ್ತೊಬ್ಬ ನಟಿ ಶೋಭಿತಾ ಕೂಡ ಜೀವನವನ್ನು ಕೊನೆಯಾಗಿಸಿಕೊಂಡಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಅವರ ಸಾವಿಗೆ ಕಾರಣವೇನು ಅನ್ನೋದು ಗೊತ್ತಾಗಲಿದೆ.


Click it and Unblock the Notifications











