ಹಿರಿಯ ನಟಿ ಲೀಲಾವತಿ ಜೊತೆ ತಳುಕು ಹಾಕೊಂಡಿರೋ ಮಹಾಲಿಂಗ ಭಾಗವತರ್ ಯಾರು? ಹಿನ್ನೆಲೆ ಏನು?
ಕಳೆದ ಕೆಲವು ದಿನಗಳಿಂದ ಹಿರಿಯ ನಟಿ ಲೀಲಾವತಿ ಹಾಗೂ ವಿನೋದ್ ರಾಜ್ ಇಬ್ಬರ ಬಗ್ಗೆನೇ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಅಣ್ಣಾವ್ರ ಕುಟುಂಬಕ್ಕೆ ತೀರ ಹತ್ತಿರವಾಗಿದ್ದ ವ್ಯಕ್ತಿ ಪ್ರಕಾಶ್ ರಾಜ್ ಮೇಹು. ಇವರು ಸಿಡಿಸಿದ ಬಾಂಬ್ ಈಗ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಹಿರಿಯ ನಟ ಲೀಲಾವತಿ ಹಾಗೂ ಡಾ.ರಾಜ್‌ಕುಮಾರ್ ನಡುವಿನ ಸಂಬಂಧ ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇಬ್ಬರೂ ತಮ್ಮ ನಡುವಿನ ಸಂಬಂಧದ ಬಗ್ಗೆ ಮುಕ್ತವಾಗಿ ಎಲ್ಲೂ ಮಾತಾಡಿಲ್ಲ. ಆದರೂ, ದಶಕಗಳಿಂದ ಲೀಲಾವತಿ ಹಾಗೂ ಅಣ್ಣಾವ್ರ ನಡುವಿನ ಸಂಬಂಧದ ಬಗ್ಗೆ ತೆರೆಮರೆಯಲ್ಲಿ ಚರ್ಚೆಯಾಗಿದ್ದೂ ಇದೆ.

ಈಗ ಪ್ರಕಾಶ್ ರಾಜ್ ಮೇಹು ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ಅವರ ಕೌಟುಂಬಿಕ ರಹಸ್ಯವನ್ನು ಹೊರಹಾಕಿದ್ದರು. ವಿನೋದ್ ರಾಜ್ ಮದುವೆ ಆಗಿರುವ ವಿಷಯ. ಅವರಿಗೆ ಒಬ್ಬ ಮಗನಿರುವ ವಿಷಯವನ್ನು ಸಾಕ್ಷಿ ಸಮೇತ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ ಮಾಡಿದ್ದರು. ಇಲ್ಲಿಂದ ಶುರುವಾಗಿದ್ದ ಚರ್ಚೆಯೀಗ ಮಹಾಲಿಂಗ ಭಾಗವತರ್ ಅವರೆಗೂ ಬಂದು ನಿಂತಿದೆ. ಅಸಲಿಗೆ ಯಾರೀ ಮಹಾಲಿಂಗ ಭಾಗವತರ್?
ಪ್ರಕಾಶ್ ರಾಜ್ ಮೇಹು ಪ್ರಸ್ತಾಪಿಸಿದ್ದ 2 ವಿಷಯಗಳೇನು?
ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ವಿನೋದ್ ರಾಜ್ ಅವರಿಗೆ ಸಂಬಂಧಿಸಿದ ಕೆಲವು ದಾಖಲೆ ಹಾಗೂ ಫೋಟೊವನ್ನು ಪೋಸ್ ಮಾಡಿದ್ದರು. ಬಳಿಕ ಎರಡು ವಿಷಯಗಳನ್ನು ಪ್ರಸ್ತಾಪ ಮಾಡಿದ್ದರು. ಮೊದಲನೆಯದು "ವಿನೋದ್ ರಾಜ್ ಮದುವೆಯನ್ನೇ ಆಗದೆ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ. ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ." ಎಂದು ಪ್ರಸ್ತಾಪಿಸಿದ್ದರು.

ಎರಡನೆಯದು "ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು.ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚನ್ನೈ ಆಸ್ತಿಯ ಪತ್ರ. ತಮಿಳು ಭಾಷೆಯಲ್ಲಿದೆ. ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ" ಎಂದು ಮಹಾಲಿಂಗ ಭಾಗವತರ್ ಅವರ ಬಗ್ಗೆ ಪ್ರಸ್ತಾಪಿಸಿದ್ದರು. ಹಾಗಿದ್ದರೆ, ಮಹಾಲಿಂಗ ಭಾಗವತರ್ ಅವರ ಹಿನ್ನೆಲೆಯೇನು?
ಮಹಾಲಿಂಗ ಭಾಗವತರ್ ಯಾರು?
ಲೀಲಾವತಿಯವರ ಪತಿ ಮಹಾಲಿಂಗ ಭಾಗವತರ್ ಅಂತ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಲೀಲಾವತಿ ಅವರ ಹೆಸರು ಮಹಾಲಿಂಗ ಭಾಗವತರ್ ಅವರೊಂದಿಗೆ ಓಡಾಡುತ್ತಿದೆ. ಅಸಲಿಗೆ ಈ ವ್ಯಕ್ತಿ ಹಿನ್ನೆಲೆಯೇನು? ಮಹಾಲಿಂಗ ಭಾಗವತರ್ ಕೂಡ ಸಿನಿಮಾರಂಗಕ್ಕೆ ಸೇರಿದವರೇ ಆಗಿದ್ದಾರೆ.
ಇವರೂ ಕೂಡ ಒಬ್ಬ ನಟ. ಚಿತ್ರರಂಗಕ್ಕೆ ಕಾಲಿಡುವ ಮೊದಲು ನಾಟಕ ಕಂಪನಿ ನಡೆಸುತ್ತಿದ್ದರು. ಅಲ್ಲದೆ ನಟಿ ಲೀಲಾವತಿಯವರನ್ನು ಗುರುತಿಸಿ ರಂಗಭೂಮಿಗೆ ಕರೆದುಕೊಂಡು ಬಂದವರು ಇವರೇ ಎಂದು ವರದಿಯಾಗಿದೆ. ನಷ್ಟದಿಂದ ನಾಟಕ ಕಂಪನಿ ಮುಚ್ಚಿದಾಗ, ಸುಬ್ಬಯ್ಯ ನಾಯ್ಡು ನಾಟಕ ಕಂಪನಿ ಸೇರಿಕೊಂಡರು. ಅಲ್ಲೇ ನಟನೆಯಲ್ಲಿ ಅವಕಾಶಗಳನ್ನು ಗಿಟ್ಟಸಿಕೊಂಡರು. ಹೀಗಾಗಿ ನಾಟಕ ಕಂಪನಿಯಲ್ಲಿ ಕೆಲಸ ಮಾಡುವಾಗಿನಿಂದಲೇ ಮಹಾಲಿಂಗ ಭಾಗವತರ್ ನಟಿ ಲೀಲಾವತಿಗೆ ಪರಿಚಯವಿತ್ತು ಎನ್ನಲಾಗಿದೆ.
ಲೀಲಾವತಿ ಜೊತೆ ಮೈಸೂರಿನಿಂದ ಮದ್ರಾಸಿಗೆ
ಸುಬ್ಬಯ್ಯ ನಾಯ್ಡು ನಾಟಕ ಕಂಪನಿಯಲ್ಲೂ ಕೆಲಸ ಕಡಿಮೆ ಆಯಿತು. ಈ ವೇಳೆ ನಟಿ ಲೀಲಾವತಿ ಜೊತೆ ನಟಿಸೋ ಹಂಬಲದಿಂದ ಮೈಸೂರಿನಿಂದ ಮದ್ರಾಸಿನ ಕಡೆಗೆ ಪಯಣ ಬೆಳೆಸಿದ್ದರು. ಇದೇ ವೇಳೆ ಲೀಲಾವತಿಯವರಿಗೆ ಸಿನಿಮಾಗಳಲ್ಲಿ ಅವಕಾಶ ಕೊಡಿಸಲು ಶ್ರಮಿಸಿದ್ದರು ಅಂತಾನೂ ಹೇಳಲಾಗುತ್ತಿದೆ.
ಸದ್ಯ ಪ್ರಕಾಶ್ ರಾಜ್ ಮೇಹು ಅವರ ಸ್ಟೋಟಕ ಮಾಹಿತಿ ಚಿತ್ರರಂಗದಲ್ಲಿ ಮತ್ತೆ ಸಂಚಲನ ಸೃಷ್ಟಿಸುತ್ತಿದೆ. ಪ್ರಕಾಶ್ ರಾಜ್ ಮೇಹು ಬಳಿಕ ಸ್ವತ: ಲೀಲಾವತಿಯರು ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ವಿನೋದ್ ರಾಜ್ ಕೂಡ ಖಾರವಾಗಿಯೇ ಯ್ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











