ಉಪೇಂದ್ರ ತಾಯಿಯಾಗಿ ಗಮನ ಸೆಳೆದ ಹೆಗ್ಗೋಡಿನ ಸುಂದರಿ; 'ಯುಐ' ನಟಿ ಮೇದಿನಿ ಕೆಳಮನೆ ಹಿನ್ನೆಲೆಯೇನು?
ರಿಯಲ್‌ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಸಿನಿಮಾ ಅಷ್ಟೇ ಮಾತಾಡುವುದಿಲ್ಲ. ಬದಲಿಗೆ ಆ ಸಿನಿಮಾದಲ್ಲಿ ನಟಿಸಿದ ಪಾತ್ರಗಳು ಕೂಡ ಮಾತಾಡುತ್ತವೆ. ಈ ಹಿಂದೆ ನಿರ್ದೇಶಿಸಿದ ಪಾತ್ರಗಳು ಕೂಡ ಟ್ರೆಂಡಿಂಗ್‌ನಲ್ಲಿ ಇದ್ದವು. ಈ ಬಾರಿ 'ಯುಐ' ಸಿನಿಮಾದಲ್ಲೂ ಉಪ್ಪಿಯನ್ನು ಬಿಟ್ಟು ಮತ್ತೊಂದು ಪಾತ್ರ ಸದ್ದು ಮಾಡುತ್ತಿದೆ. ಅದು ಮತ್ಯಾವುದೂ ಅಲ್ಲ ಉಪೇಂದ್ರ ಅವರ ತಾಯಿ ಪಾತ್ರ.
'ಯುಐ'ನಲ್ಲಿ ಉಪೇಂದ್ರ ಅವರ ತಾಯಿಯ ಪಾತ್ರದಲ್ಲಿ ನಟಿಸಿದವರು ಮೇದಿನಿ ಕೆಳಮನೆ. ಈ ಪಾತ್ರ ಯಾಕೆ ಅಷ್ಟೊಂದು ಚರ್ಚೆಯಾಗುತ್ತಿದೆ ಅನ್ನೋದಕ್ಕೆ ಕಾರಣವಿದೆ. 'ಯುಐ' ಕಥೆ ಹುಟ್ಟಿಕೊಳ್ಳುವುದಕ್ಕೆ ಕಾರಣವೇ ಈ ಪಾತ್ರ. ಇನ್ನೊಂದು ಕಾರಣ ಮೇದಿನಿ ಕೆಳಮನೆ ತನ್ನ ವಯಸ್ಸಿಗೂ ಮೀರಿದ ಪಾತ್ರದಲ್ಲಿ ಕಾಣಿಸಿಕೊಂಡಿರುವುದು.

ಉಪೇಂದ್ರ ನಿರ್ದೇಶಿಸಿದ ಸಿನಿಮಾದಲ್ಲಿ ನಟಿಸುವುದೇ ಒಂದು ಸವಾಲು. ಅದರಲ್ಲೂ ತನ್ನ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸುವುದು ಅಂದರೆ, ಒಬ್ಬ ಕಲಾವಿದೆ ಅದಕ್ಕಿಂತ ದೊಡ್ಡ ಸವಾಲು ಇನ್ನೊಂದು ಬೇಕೆ? 'ಯುಐ'ನಲ್ಲಿ ತನ್ನ ಪಾತ್ರವನ್ನು ಅಷ್ಟೇ ಸೊಗಸಾಗಿ ನಿಭಾಯಿಸಿ ಸಿನಿಪ್ರಿಯರ ಮನಸ್ಸು ಗೆದ್ದಿರುವ ನಟಿ ಮೇದಿನಿ ಕೆಳಮನೆ ಬಗ್ಗೆ ನಿಮಗೆಷ್ಟು ಗೊತ್ತು?
ಮೇದಿನಿ ಕೆಳಮನೆಗೆ 'ಯುಐ' ಮೊದಲ ಸಿನಿಮಾವೇನು ಅಲ್ಲ. ಇದಕ್ಕೂ ಮುನ್ನ 'ಪೆಪೆ' ಸಿನಿಮಾದ ಪಾತ್ರದ ಮೂಲಕವೂ ಗಮನ ಸೆಳೆದಿದ್ದರು. ಮೇದಿನಿ ಕೆಳಮನೆ ಮೂಲತಃ ಹೆಗ್ಗೋಡಿನವರು. ಈ ನಟಿ ನಟನೆಯಲ್ಲಿ ತರಬೇತಿ ಪಡೆದು ಸಿನಿಮಾಗೆ ಬಂದಿದ್ದಾರೆ. ನವದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿ ಪಡೆದಿದ್ದಾರೆ.
ಪದವಿ ಬಳಿಕ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅನುರಾಧಾ ಕಪೂರ್, ಅಭಿಲಾಷ್ ಪಿಳ್ಳೈ ಮತ್ತು ಒವ್ಲ್ಯಕುಲಿ ಕೊಜಾಕುಲಿ ಮೊದಲಾದ ಪ್ರಖ್ಯಾತ ನಿರ್ದೇಶಕರು ಮತ್ತು ನಾಟಕಕಾರರೊಂದಿಗೆ ವಿವಿಧ ನಾಟಕಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ದೆಹಲಿ ಹಾಗೂ ಮುಂಬೈನಲ್ಲಿ ಹಲವು ನಾಟಕಗಳಲ್ಲಿ ನಟಿಸಿದ್ದಾರೆ. ಜೊತೆ ಕಿರುತೆರೆ, ಟಿವಿ, ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಹೆಗ್ಗೋಡಿನಂತಹ ಪರಿಸರದಲ್ಲಿ ಬೆಳೆದಿದ್ದರಿಂದ ಸಹಜವಾಗಿ ನಾಟಕದ ಕಡೆ ಒಲವು ಬೆಳೆದಿತ್ತು. ಅದೇ ಮುಂದೆ ಸಿನಿಮಾದವರೆಗೂ ಕರೆದುಕೊಂಡು ಬಂದಿದೆ. ಅಂದ್ಹಾಗೆ ಡ್ರಾಮದಲ್ಲಿ ಪದವಿ ಅಷ್ಟೇ ಅಲ್ಲ. ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದಿದ್ದಾರೆ. ತಮ್ಮ ಸಹೋದರನ ಜೊತೆ ಸೇರಿ 'ದಾಳಿ' ಹಾಗೂ 'ಮುಕ್ತ' ಎಂಬ ಎರಡು ಕನ್ನಡದ ಕಿರುಚಿತ್ರ ಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಇದೂವರೆಗೂ ಇವರು ಆಯ್ಕೆ ಮಾಡಿಕೊಂಡಿರುವ ಪಾತ್ರಗಳು ಕೂಡ ಅಷ್ಟೇ ವಿಭಿನ್ನವಾಗಿವೆ. ಶೈಲಜಾ ಪಡಿಂದಳ ನಿರ್ದೇಶನದ 'ನಾನು ಲೇಡೀಸ್' ಇವರು ನಟಿಸಿದ ಚೊಚ್ಚಲ ಸಿನಿಮಾ. ಇದು ಇಬ್ಬರು ಹುಡುಗಿಯರ ಪ್ರೀತಿಯ ಹೇಳೀದ ಮೊದಲ ಕನ್ನಡ ಲೆಸ್ಬಿಯನ್ ಸಿನಿಮಾ. ಹೀಗಾಗಿ ಮೊದಲ ಸಿನಿಮಾದಲ್ಲೇ ಚಾಲೆಂಜಿಂಗ್ ಪಾತ್ರದಲ್ಲಿ ನಟಿಸಿದ್ದರು. ಆ ನಂತ್ರ ನಟೇಶ್ ಹೆಗ್ಡೆ ನಿರ್ದೇಶಿಸಿ, ರಿಷಬ್ ಶೆಟ್ಟಿ ನಿರ್ಮಿಸಿದ್ದ 'ಪೆಡ್ರೊ'ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಹಾಗಂತ ಕೇವಲ ಕನ್ನಡ ಅಷ್ಟೇ ಅಲ್ಲ. ಬಾಲಿವುಡ್ ಅಂಗಳದಲ್ಲಿಯೂ ಮೇದಿನಿ ಕೆಳಮನಿ ಮೋಡಿ ಮಾಡಿದ್ದಾರೆ. ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ನಿರ್ದೇಶನದ 'ದೋಬಾರಾ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮೇದಿನಿ ನಟಿಸಿದ್ದರು. ಸದ್ಯ ಮತ್ತೊಬ್ಬ ಬಾಲಿವುಡ್ ನಿರ್ದೇಶಕ ಹಂಸಲ್ ಮೆಹ್ತಾ ನಿರ್ದೇಶನದ 'ಗಾಂಧಿ - ಬಿಫೋರ್ ಇಂಡಿಯಾ' ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ವಿನಯ್ ರಾಜಕುಮಾರ್ 'ಪೆಪೆ' ಸಿನಿಮಾದಲ್ಲಿ ಇವರ ಪಾತ್ರ ನೋಡಿ ಸಿನಿಪ್ರಿಯರು ಹೌಹಾರಿದ್ದರು. ಹಾಗೇ 'ಬಿಟಿಎಸ್', ಈಗ 'ಯುಐ' ಮೂಲಕ ಸದ್ದು ಮಾಡುತ್ತಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಯಾವುದೇ ಕಟ್ಟಿಪಾಡುಗಳಿಗೆ ಅಂಟಿಕೊಳ್ಳದೆ ಇರುವುದು ಮೇದಿನಿ ಕೆಳಮನೆಯ ವಿಶೇಷತೆ.


Click it and Unblock the Notifications











