ಪುನೀತ್ ರಾಜ್‌ಕುಮಾರ್ ಸಾವಿನ ಸುದ್ದಿ ಕೇಳಿಯೂ ಮೃತದೇಹ ನೋಡಲು ಶಕೀಲಾ ಬರಲಿಲ್ಲ ಏಕೆ?
ಶಕೀಲಾ ದಕ್ಷಿಣ ಭಾರತದ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿದ್ದಾರೆ. 80ರ ದಶಕದಲ್ಲಿ ನಟಿ ಶಕೀಲಾ ಯಶಸ್ಸಿನ ಉತ್ತುಂಗದಲ್ಲಿದ್ದರು. ಈ ವೇಳೆ ದಕ್ಷಿಣ ಭಾರತದಲ್ಲಿ ತನ್ನದೇ ಅಭಿಮಾನಿ ಬಳಗವನ್ನು ಹುಟ್ಟುಹಾಕಿದ್ದ ಕೆಲವೇ ನಟಿಯರಲ್ಲಿ ಶಕೀಲಾ ಕೂಡ ಒಬ್ಬರಾಗಿದ್ದರು. ಸುಮಾರು 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಶಕೀಲಾ ಕನ್ನಡ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ.
ಶಕೀಲಾ ಸದ್ಯ ಸ್ಯಾಂಡಲ್‌ವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಹೆಸರು 'ಡವ್ ಮಾಸ್ಟರ್'. ದಕ್ಷಿಣ ಭಾರತದ ನಟಿ ಜೊತೆ ಕನ್ನಡದ ಹಾಸ್ಯ ನಟ ತಬಲಾ ನಾಣಿ ಕೂಡ ನಟಿಸುತ್ತಿದ್ದಾರೆ. 'ಡವ್ ಮಾಸ್ಟರ್' ಸಿನಿಮಾದ ಚಿತ್ರೀಕರಣ ಕೂಡ ಆರಂಭ ಆಗಿದ್ದು, ಈ ವೇಳೆ ಶಕೀಲಾ ಅಕ್ಟೋಬರ್ 29ರಂದು ಅಪ್ಪು ಅಗಲಿದ ದಿನ ಅವರ ಮೃತದೇಹ ನೋಡಲು ಯಾಕೆ ಬಂದಿಲ್ಲ ಎಂಬ ವಿಷಯವನ್ನು ರಿವೀಲ್ ಮಾಡಿದ್ದಾರೆ.

ಅಪ್ಪು ಮೃತದೇಹ ನೋಡಲು ಶಕೀಲಾ ಯಾಕೆ ಬಂದಿಲ್ಲ?
ಶಕೀಲಾ ಕೇವಲ ತೆಲುಗು-ತಮಿಳು ಭಾಷೆಗಳಲ್ಲಿ ಮಾತ್ರ ನಟಿಸಿಲ್ಲ. ಕನ್ನಡದ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದ ಜೊತೆನೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಶಕೀಲಾ ಪವರ್‌ಸ್ಟಾರ್ ಪುನೀತ್ ಅಗಲಿಕೆಯ ಸುದ್ದಿ ಕೇಳಿ ಶಾಕ್ ಆಗಿದ್ದರು. ಆದರೆ, ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಕೊನೆಯ ಬಾರಿ ಅಪ್ಪು ಮೃತದೇಹ ನೋಡಲು ಯಾಕೆ ಬಂದಿಲ್ಲ ಎಂಬ ಕಾರಣವನ್ನೂ ಶಕೀಲಾ ನೀಡಿದ್ದಾರೆ. " ನನಗೆ ತುಂಬಾನೇ ಬೇಜಾರುಗುತ್ತಿದೆ. ಪುನೀತ್ ರಾಜ್‌ಕುಮಾರ್ ಅಗಲಿದ ದಿನ ನಾನು ಅಲ್ಲಿಗೆ ಹೋಗಲು ಸಾಧ್ಯವಾಗಿಲ್ಲ. ಆ ವೇಳೆ ನನ್ನ ಆರೋಗ್ಯ ಸರಿಯಿರಲಿಲ್ಲ. ಆ ದಿನ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. " ಎಂದು ಶಕೀಲಾ ತಿಳಿಸಿದ್ದಾರೆ.

ಅಪ್ಪು ಸಮಾಧಿಗೆ ಶಕೀಲಾ ವಿಸಿಟ್
ಪುನೀತ್ ರಾಜ್‌ಕುಮಾರ್ ಅವರ ಅಗಲಿದ ಬಳಿಕ ಅವರ ಸಮಾಜಮುಖಿ ಕೆಲಸಗಳು ಒಂದೊಂದಾಗೇ ಬೆಳಕಿಗೆ ಬರುತ್ತಿದೆ. ಇದು ಬಗ್ಗೆ ನಟಿ ಶಕೀಲಾ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಅಪ್ಪು ಅಗಲಿದ ದಿನ ಮೃತದೇಹ ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಡಿಸೆಂಬರ್ 23ರಂದು ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. " ಇಡೀ ಡವ್ ಮಾಸ್ಟರ್ ತಂಡ ನಾಳೆ ಪುನೀತ್ ರಾಜ್‌ಕುಮಾರ್ ಸಮಾಧಿ ಬಳಿಗೆ ಹೋಗಲಿದ್ದೇವೆ. ಅಲ್ಲಿ ಅವರಿಗೆ ಸಮಾಧಿಗೆ ನಮ್ಮ ನಮನವನ್ನು ಅರ್ಪಿಸಲಿದ್ದೇವೆ." ಎಂದಿದ್ದಾರೆ ಶಕೀಲಾ.

ಅಪ್ಪು ಮನೆ ದಾಟಿ ನಮ್ಮ ಮನೆಗೆ ಹೋಗಬೇಕಿತ್ತು
"ನಾನು ಚೆನ್ನೈನಲ್ಲಿ ಅವರ ಮನೆಯ ಪಕ್ಕದಲ್ಲಿಯೇ ವಾಸವಿದ್ದೆ. ಅವರ ಮನೆಯನ್ನು ದಾಟಿಯೇ ನಾನು ನನ್ನ ಮನೆಗೆ ಹೋಗಬೇಕಿತ್ತು. ನಾನು ನಿಜವಾಗಿಯೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನಗೆ ಕೆಲವೊಮ್ಮೆ ದೇವರು ಎಲ್ಲಿದ್ದಾನೆ ಅಂತ ಅನಿಸಿಬಿಡುತ್ತೆ. ಪುನೀತ್ ರಾಜ್‌ಕುಮಾರ್ ಜನರಿಗಾಗಿ ಏನೆಲ್ಲಾ ಮಾಡಿದ್ದಾರೆ. ಅದು ಅವರು ಹೋದ ಮೇಲೆ ಗೊತ್ತಾಗಿದೆ. ಅವರನ್ನು ಮತ್ತೆ ಹೇಗೆ ಕರೆದುಕೊಂಡು ಬರುವುದು ಅನ್ನುವುದೇ ಗೊತ್ತಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಈ ಸಂದರ್ಭದಲ್ಲಿ ಬೇಡಿಕೊಳ್ಳುತ್ತಿದ್ದೇನೆ." ಎಂದು ಶಕೀಲಾ ಹೇಳಿದ್ದಾರೆ.

ಶಕೀಲಾ ಬಯೋಪಿಕ್ ವರ್ಕ್‌ಔಟ್ ಆಗಿಲ್ಲ
ಕನ್ನಡದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಶಕೀಲಾ ಬಯೋಪಿಕ್ ನಿರ್ದೇಶಿಸಿದ್ದರು. ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರಿಚಾ ಚಡ್ಡಾ ನಟಿಸಿದ್ದರು. ಆದರೆ, ಈ ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಆದರೆ, ಆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿಲ್ಲ. ಈ ಬಗ್ಗೆನೂ ಶಕೀಲಾ ಮಾತಾಡಿದ್ದು, ಬಯೋಗ್ರಫಿ ಚೆನ್ನಾಗಿ ಮೂಡಿ ಬಂದಿಲ್ಲವೆಂದು ನಟಿ ಶಕೀಲಾ ತಿಳಿಸಿದ್ದಾರೆ.


Click it and Unblock the Notifications











