5 ವರ್ಷದ ಹಿಂದೆ ಸುಮಲತಾ ಬೆಂಬಲಿಸಿದ್ದ ದರ್ಶನ್; ಈಗ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರವೇಕೆ?
2024ರ ಲೋಕಸಭೆ ಚುನಾವಣೆ ಪರ ಜೋರಾಗಿ ನಡೆಯುತ್ತಿದೆ. ಬಿಸಿಲನ್ನೂ ಲೆಕ್ಕಿಸದೇ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಈ ಬಾರಿ ಕುತೂಹಲ ಮೂಡಿಸುತ್ತಿರುವುದು ದರ್ಶನ್ ಪ್ರಚಾರ. ಇದೇ ಐದು ವರ್ಷಗಳ ಹಿಂದೆ ಸುಮಲತಾ ಪರ ಪ್ರಚಾರ ಮಾಡಿ ಬೆಂಬಲಕ್ಕೆ ನಿಂತಿದ್ದ ದರ್ಶನ್ ಈ ಬಾರಿ ದಿಕ್ಕು ಬದಲಿಸಿದ್ದಾರೆ.
ಇತ್ತೀಚೆಗಷ್ಟೇ "ಸುಮಲತಾ ಬಾವಿಗೆ ಹಾರು ಅಂದರೂ ಹಾರುತ್ತೇನೆ" ಎಂದು ಹೇಳಿದ್ದ ದರ್ಶನ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಸುಮಲತಾ ಮಂಡ್ಯದಿಂದ ಸ್ಪರ್ಧೆ ಮಾಡುವುದಕ್ಕೆ ನಿರ್ಧರಿಸಿದ್ದರು. ಆದರೆ, ಮೈತ್ರಿ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿಗೆ ಟಿಕೆಟ್ ಸಿಕ್ಕಿತ್ತು.

ಈ ಕಾರಣಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ ಪರ ದರ್ಶನ್ ಹಾಗೂ ಸುಮಲತಾ ಪ್ರಚಾರ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ದರ್ಶನ್ ಅಚ್ಚರಿ ಎಂಬಂತೆ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕೆ ಇಳಿದಿದ್ದಾರೆ. ಇದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿರೋದಂತೂ ನಿಜ.
ದರ್ಶನ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರೋದು ಏಕೆ? ದರ್ಶನ್ ಮಂಡ್ಯದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಕ್ಕೆ ಸುಮಲತಾ ಅವರೇ ಸಲಹೆ ನೀಡಿದ್ರಾ? ಎಚ್‌ಡಿಕೆ ವಿರುದ್ಧ ಸುಮಲತಾ ತೆರೆಮರೆಯಲ್ಲಿ ಸಮರ ಸಾರಿದ್ದಾರಾ? ಎಚ್‌ಡಿಕೆ ಪರ ಸುಮಲತಾ ಪ್ರಚಾರ ಮಾಡುವುದಿಲ್ಲವೇ? ಹೀಗೆ ಒಂದಿಷ್ಟು ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ದರ್ಶನ್ ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವುದರಿಂದ ಚುನಾವಣೆ ಕಾವು ಕಳೆಗಟ್ಟಿದೆ. ದರ್ಶನ್ ನೋಡುವುದಕ್ಕೆ ಜನರು ಬೀದಿಗೆ ಬಂದಿದ್ದಾರೆ. ಬಿಸಿಲು ಎನ್ನದೆ ದರ್ಶನ್ ಮಾತಗಳನ್ನು ಕೇಳುವುದಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಆದರೆ, ರಾಜಕೀಯ ವಲಯದಲ್ಲಿ ದರ್ಶನ್ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದಕ್ಕೆ ನೂರೆಂಟು ಲೆಕ್ಕ ಹಾಕುತ್ತಿದ್ದಾರೆ.

ಇನ್ನೊಂದು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಪರ ಸುಮಲತಾ ಇನ್ನೂ ಪ್ರಚಾರ ಮಾಡುತ್ತಿಲ್ಲ. ಅದ್ಯಾವಾಗ ಪ್ರಚಾರ ಅಖಾಡಕ್ಕೆ ಇಳಿಯುತ್ತಾರೋ ಗೊತ್ತಿಲ್ಲ. ಸದ್ಯ ಮೌನವಾಗಿಯೇ ಇರುವ ಸುಮಲತಾ ಈ ಹಿಂದೆ ಬಿಜೆಪಿಯ ನಾಯಕರು ಹೇಳಿದರೆ, ಪ್ರಚಾರ ಮಾಡುವುದಾಗಿ ಹೇಳಿದ್ದರು. ಆದರೆ, ಬಿಜೆಪಿ ವಲಯದಲ್ಲಿ ಸುಮಲತಾ ಪ್ರಚಾರ ಮಾಡುವ ಬಗ್ಗೆ ಯಾವ ರೀತಿ ಚರ್ಚೆ ಆಗುತ್ತಿದೆಯೋ ಇನ್ನು ರಿವೀಲ್ ಆಗಿಲ್ಲ.
ಇತ್ತ ಮಂಡ್ಯದ ಕ್ರಾಂಗೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಪ್ರಚಾರಕ್ಕಿಳಿದಿರುವ ದರ್ಶನ್ ಈ ಬಗ್ಗೆ ಕ್ಲಾರಿಟಿ ಕೊಡುವ ಪ್ರಯತ್ನ ಮಾಡಿದ್ದರು. ಮಂಡ್ಯದ ಜನರನ್ನು ಉದ್ದೇಶಿ, ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ ಮಾಡುತ್ತಿರೋದ್ಯಾಕೆ ಅಂತ ಬಹಿರಂಗವಾಗಿಯೇ ಹೇಳಿದ್ದಾರೆ.
"ನಾನು ಮೊದಲೇ ಹೇಳುತ್ತೇನೆ. ಯಾವುದೇ ಪಕ್ಷದ ಪರ ಬರಲ್ಲ. ಬರೋದೂ ಇಲ್ಲ. ಬರೀ ವ್ಯಕ್ತಿಗಳು ಅಷ್ಟೇನೆ. ಏನಕ್ಕೆ ಅಂದರೆ, ಇದೇ ಐದು ವರ್ಷಗಳ ಕೆಳಗಡೆ ನರೇಂದ್ರಣ್ಣ ಮಾಡಿದ ಸಹಾಯವನ್ನು ಇವತ್ತಿಗೂ ನೆನೆಸಿಕೊಳ್ಳುತ್ತೇನೆ. ಮೊದಲೇ ನಮ್ಮ ಉದಯ್ ಗೌಡರು ಹೇಳಿದ್ದರು. ಏನಾದರೂ ನಮ್ಮ ಸುಮಮ್ಮಂಗೆ ಆಗಲಿಲ್ಲ ಅಂದರೆ, ನೀವು ನಮಗೆ ಸಹಾಯ ಮಾಡಬೇಕು ಅಂತ. ಫಸ್ಟ್ ಕಮ್ ಫಸ್ಟ್ ಸರ್ವ್ ಅಂದ್ಮೇಲೆ ಕೇಳಲೇಬೇಕಲ್ವ ಅಣ್ಣ. ನಾನು ಕೇಳಿಕೊಳ್ಳುವುದು ಇಷ್ಟೇ. ಇದೇ ಲೋಕಸಭೆ ಚುನಾವಣೆಯಲ್ಲಿ ಸ್ಟಾರ್ ಚಂದ್ರು ನಿಂತಿದ್ದಾರೆ. ತಮ್ಮ ಅಮೂಲ್ಯವಾದ ಮತವನ್ನು ನೀಡಿ ಕೇಳಿಕೊಳ್ಳುತ್ತೇನೆ." ಎಂದು ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ್ ಪ್ರಚಾರದ ವೇಳೆ ಮನವಿ ಮಾಡಿಕೊಂಡಿದ್ದಾರೆ.


Click it and Unblock the Notifications











