ಈ ದಡ್ಡನನ್ನು ಇನ್ಮೇಲೆ ಬುದ್ಧಿವಂತ ಅಂತ ಕರೀಬೇಡಿ"; ಉಪೇಂದ್ರ ಹೀಗಂದಿದ್ಯಾಕೆ?
ರಿಯಲ್‌ಸ್ಟಾರ್ ಉಪೇಂದ್ರ ಎರಡು ದೋಣಿ ಮೇಲೆ ಕಾಲಿಟ್ಟಿರೋದು ಗೊತ್ತೇ ಇದೆ. ಒಂದ್ಕಡೆ ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಇನ್ನೊಂದು ಕಡೆ ಪ್ರಜಾಕೀಯದ ಬಗ್ಗೆನೂ ತಲೆ ಕೆಡಿಸಿಕೊಂಡಿದ್ದಾರೆ. ಪ್ರಜಾಕೀಯ ಶುರು ಮಾಡಿದಾಗ, ಉಪ್ಪಿ ಕಲ್ಪನೆಗಳನ್ನು ಕೇಳಿ ವಾವ್ಹ್ ಎನಿಸಿದ್ದವು. ಇದನ್ನು ಸರಿಯಾಗಿ ಅನುಷ್ಠಾನಕ್ಕೆ ತಂದರೆ, ಜಾದು ಮಾಡಬಹುದು ಎಂಬುದು ಹಲವರ ಅನಿಸಿಕೆಯಾಗಿತ್ತು.
ಉಪೇಂದ್ರ ಪ್ರಜಾಕೀಯ ಪರಿಕಲ್ಪನೆಯೊಂದಿಗೆ ಬಂದಾಗ ವೇಗವಾಗಿ ಮುನ್ನುಗ್ಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಅಂದಿನಿಂದ ಸುಮಾರು ಎರಡು ಮೂರು ಚುನಾವಣೆಗಳನ್ನು ಎದುರಿಸಿದ್ದು, ಚುನಾವಣೆ ಮೇಲೆ ವಿಶೇಷ ಪ್ರಭಾವ ಬೀರುವಲ್ಲಿ ಸೋತಿದ್ದಾರೆ. ಚುನಾವಣೆ ಬಂದಾಗ ಮಾತ್ರ ಉಪ್ಪಿ ಆಕ್ಟಿವ್ ಆಗುತ್ತಾರೆ ಅಂತ ಅವರ ಬೆಂಬಲಿಗರು ಹೇಳಿದ್ದೂ ಉಂಟು.

ಪ್ರಜಾಕೀಯ ನಿಜಕ್ಕೂ ರಾಜಕೀಯದ ಪರಿಕಲ್ಪನೆಗಿಂತ ತುಂಬಾನೇ ವಿಭಿನ್ನ. ಹೀಗಿರುವಾಗ ಉಪ್ಪಿಯ ಆಲೋಚನೆಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ತುಂಬಾನೇ ಕಸರತ್ತು ಮಾಡಬೇಕು. ಹೀಗಾಗಿ, ಟ್ರೋಲಿಗರು ಈ ಬಾರಿಯ ಆಂಧ್ರ ಪ್ರದೇಶದ ವಿಧಾನ ಸಭೆ ಚುನಾವಣೆ ಬಳಿಕ ಪವನ್ ಕಲ್ಯಾಣ್ ಶೇ.100ರಷ್ಟು ಫಲಿತಾಂಶ ಪಡೆದ ಬಳಿಕ ಉಪ್ಪಿಯನ್ನು ಗೆಲ್ಲಿಸೋದ್ಯಾವಾಗ ಅಂತ ಟ್ರೋಲ್ ಮಾಡಿದ್ದರು. ಅದಕ್ಕೆ ಉಪ್ಪಿ ತಮ್ಮದೇ ಸ್ಟೈಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ಪವನ್ ಕಲ್ಯಾಣ್ ಅವರನ್ನು ಗೆಲ್ಲಿಸುವುದಕ್ಕೆ ತೆಲುಗು ಜನರು 14 ವರ್ಷ ತೆಗೆದುಕೊಂಡರು. ಉಪೇಂದ್ರ ಅವರನ್ನು ಗೆಲ್ಲಿಸಲು ಕನ್ನಡಿಗರು ಇನ್ನೆಷ್ಟು ವರ್ಷ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ." ಎಂಬ ಪೋಸ್ಟ್ ಹರಿದಾಡುತ್ತಿತ್ತು. ಅದನ್ನೇ ಉಪ್ಪಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು ಇನ್ಮುಂದೆ ತಮ್ಮನ್ನು ಬುದ್ಧಿವಂತ ಅಂತ ಕರೀಬೇಡಿ ಎಂದಿದ್ದಾರೆ.
"ವಾಹ್ ಮೈ ಡಿಯರ್ ಪ್ರಜಾಪ್ರಭುಗಳೇ ವಾಹ್... ಉಪೇಂದ್ರ ಸೋಲು ಗೆಲವು ಬಗ್ಗೆ ತುಂಬಾ ಚಿಂತೆ ಮಾಡ್ತಿದೀರ. ಎಂತಾ ನಿಸ್ವಾರ್ಥ ! ಎಂತಾ ತ್ಯಾಗ ಮನೋಭಾವ ! ನಿಮ್ಮೆಲ್ಲರ ಪಾದಕ್ಕೆ ಅಡ್ ಬಿದ್ದೆ.. ಡೋಂಟ್ ವರೀ... ನಾನ್ ಗೆಲ್ಬೇಕು ಅಂತ ಅನ್ನಿಸಿದಾಗ ಯಾವುದಾದರೂ ರಾಜಕೀಯ ಪಕ್ಷ ಸೇರಿ ನೀವ್ ಹೇಳ್ದಾಗೆಲ್ಲಾ ಮಾಡ್ತೀನಿ. ಗೆದ್ದೇ ಗೆಲ್ತೀನಿ.. ನೀವ್ ಗೆಲ್ಲೋದ್ ಯಾವಾಗ ಅಂತ ನೀವ್ ಯೋಚನೆ ಮಾಡ್ರಪ್ಪೋ.. ನೆಕ್ಸ್ಟ್ ಎಲೆಕ್ಷನ್‌ನಲ್ಲಿ ನನಗ್ ಕೆಲ್ಸಾ ಕೊಡ್ತೀರ ಅಂದ್ರೆ ನಿಲ್ತೀನಿ. ಆಗ್ಲೂ, ನೀವ್ ಎಮೋಸನಲ್ ಪ್ರಚಾರ ಮಾಡ್ರೀ... ಸಭೆ ಸಮಾರಂಭ ಎಲ್ಲಾ ಮಾಡ್ರೀ.. ಕಷ್ಟ ಪಡ್ರೀ... ಆಮೇಲ್ ಐದು ವರ್ಸ ನೀವೇನ್ ಬೇಕಾದ್ರೂ ಮಾಡ್ಕಳಿ, ನಾವ್ ಕೇಳಕ್ ಬರಲ್ಲ ಅಂದ್ರೆ.. ಉಸ್.. ಏನ್ ಬರೀಬೇಕೋ ಗೊತ್ತಾಗ್ತಿಲಿರಪ್ಪೋ..
ಈ ದಡ್ ನನ್ ಮಗಂಗೇ ಯಾವೋನಾದ್ರ ಇನ್ ಮೇಲೆ ಬುದ್ದಿವಂತಾ ಅಂದ್ರೇ ಅಷ್ಟೇ.. ಸೆಂದಾಗಿರಕ್ಕಿಲ್ಲಾ.." ಎಂದು ಉಪೇಂದ್ರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಉಪ್ಪಿಯ ಈ ಪೋಸ್ಟ್ ನೋಡಿ ನೆಟ್ಟಿಗರು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. ಉಪೇಂದ್ರಗೆ ಹಲವು ಸಲಹೆಗಳನ್ನು ನೀಡುತ್ತಿದ್ದಾರೆ. ಕೆಲವರು ಉಪ್ಪಿಯ ಬೆಂಬಲಕ್ಕೂ ಬಂದಿದ್ದಾರೆ. ಮತ್ತೆ ಕೆಲವರು ಫೀಲ್ಡ್‌ಗೆ ಇಳಿಯಬೇಕು ಎಂದಿದ್ದಾರೆ. "ಸುಮ್ನೆ ಮನೇಲಿ ಇದ್ಕೊಂಡು ನಿಮ್ಮ ಪಕ್ಷ ಇದು ನೀವೆ ಗೆಲ್ಲಿಸಿ ಅಂತ ಇದ್ರೆ ಯಾರು ಗೆಲ್ಸಲ್ಲ ಸರ್.. ಫೀಲ್ಡ್‌ಗೆ ಇಳಿಬೇಕು. ಅವಾಗಲೇ ನಮ್ಮ ಜನಕ್ಕೆ ಅರ್ಥ ಆಗೋದು. ರಿಯಲ್ ಪವರ್ ಸ್ಟಾರ್ ಅಂದ್ರೆ ಪವನ್ ಕಲ್ಯಾಣ್. ನೀವು ಸಹ ಇದೇ ರೀತಿ ಪುಟಿದು ಏದ್ದೇಳಿ. ನಿಮಗೆ ಇನ್ನು ಸಾಮರ್ಥ್ಯ ಹೆಚ್ಚಿದೆ." ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಮತ್ತೊಬ್ಬರು "ಅವರ ತತ್ವಕ್ಕೂ ನಿಮ್ಮ ತತ್ವಕ್ಕೂ ತುಂಬಾ ವ್ಯತ್ಯಾಸ ಇದೆ" ಇನ್ನೊಬ್ಬರು ಹೇಳಿದ್ದಾರೆ. ಹಾಗೇ "ಆದ್ರೆ ಪವನ್ ಕಲ್ಯಾಣ್ ಮಾಡಿದಷ್ಟು ಕಾಲು ಭಾಗ ಮಾಡಿದ್ರೆ ಉಪ್ಪಿ ಸರ್ ಯಾವಾಗ್ಲೋ ಸಿಎಂ ಆಗಿರೋರು" ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.


Click it and Unblock the Notifications











