ಭಟ್ಟರ ಮೀಸೆ ಪ್ರಸಂಗ: 'ಗರಡಿ' ಮನೆ ಸೇರಿದ್ಮೇಲೆ ಹಂಗಿದ್ದವರು.. ಹಿಂಗ್ಯಾಕೆ ಆದ್ರು?
ಯೋಗರಾಜ್ ಭಟ್ ಎರಡನೇ ಬಾರಿ 'ಗಾಳಿಪಟ' ಹಾರಿಸಿದ ಮೇಲೆ ಆಕಾಶದಲ್ಲೇ ತೇಲಾಡುತ್ತಿದ್ದಾರೆ. ಸದ್ಯ 'ಗರಡಿ' ಮನೆಯಲ್ಲಿ ಬ್ಯುಸಿಯಾಗಿರೋ ಭಟ್ರು ಶಿವಣ್ಣ ಹಾಗೂ ಪ್ರಭುದೇವಗೂ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಒಟ್ನಲ್ಲಿ ಎರಡೆರಡು ಸಿನಿಮಾಗಳಲ್ಲಿ ಭಟ್ರು ಭಯಂಕರ ಬ್ಯುಸಿ.
ಇತ್ತೀಚೆಗೆ ಯೋಗರಾಜ್ ಭಟ್ಟರು ಸ್ಟೈಲ್ ಬದಲಾಗಿತ್ತು. ಮೀಸೆ ಹೊತ್ತು, ಸ್ಮೈಲ್ ಕೊಡುತ್ತಾ ತಿರುಗಾಡುತ್ತಿದ್ದವರು ದಿಢೀರನೇ ಮೀಸೆ ತೆಗೆದು ಸಿನಿಪ್ರಿಯರ ಮುಖದಲ್ಲಿ ಮಂದಹಾಸ ಮೂಡಿಸಿದ್ದರು. ಅಷ್ಟಕ್ಕೂ ಭಟ್ರ ಈ ದಿಢೀರ್ ಬದಲಾವಣೆಗೆ ಏನು ಕಾರಣ ಅಂತ ಕೆಲವರು ತಲೆಗೆ ಹುಳ ಬಿಟ್ಕೊಂಡು ಸುಸ್ತಾಗಿದ್ದರು.

ಮೀಸೆ ತೆಗೆದು ಇದ್ದಕ್ಕಿದ್ದಂತೆ ಒಂದು ಪತ್ನಿ,ಮಗಳ ಜೊತೆ ಒಂದು ವಿಡಿಯೋ ಮಾಡಿ ಅಚ್ಚರಿ ಮೂಡಿಸಿದ್ದರು. ಇದ್ಯಾಕೆ ಅಂತ ಒಂದಿಷ್ಟು ದಿನ ಭಟ್ರು ಹೇಳಿಲ್ಲ. ಕೇಳೋಕೆ ಅವರು ಸಿಕ್ಕೂ ಇರಲಿಲ್ಲ. ಈಗ ಕೊನೆಗೂ ಭಟ್ಟರ ಮೀಸೆ ಪ್ರಸಂಗಕ್ಕೆ ಒಂದು ಮ್ಯಾಟರ್ ಸಿಕ್ಕೇಬಿಟ್ಟಿದೆ.
ಮೀಸೆ ತೆಗೆದಿದ್ಯಾಕೋ..?
ಯೋಗರಾಜ್ ಭಟ್ರು ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರನ್ನು ಈ ಅವತಾರದಲ್ಲಿ ನೋಡಿದವರಿಲ್ಲ. ಬಹುಶ: ಈಗ ಕನ್ನಡ ಚಿತ್ರರಂಗವೇ ಆಶ್ಚರ್ಯದಿಂದ ನೋಡುತ್ತಿರಬಹುದು. ತಲೆಗೆ ಹುಳ ಬಿಟ್ಟುಕೊಂಡಿರಬಹುದು. ಗೊತ್ತಾಗದೇ ಪರಪರ ಅಂತ ಕೆರೆದುಕೊಂಡಿರಬಹುದು. ಮುಂಗಾರು ಮಳೆಯಲ್ಲಿ ಮಿಂದು ಬಂದಿರಬಹುದು. ಗಾಳಿಪಟ ಹಾರಿಸಿ ನೋಡಿರಬಹುದು.

ಇಷ್ಟೊಂದು ಬಿಲ್ಡಪ್ ಕೊಟ್ಮೇಲೆ ಹಂಗಿದ್ದವರು.. ಹಿಂಗ್ಯಾಕೆ ಆದ್ರು ಅಂತ ಹೇಳ್ತಿಲ್ವಲ್ಲ ಅಂತ ಅಂದುಕೊಳ್ಳಬೇಡಿ. ಭಟ್ರು ಅವರೇ ನಿರ್ದೇಶಿಸುತ್ತಿರೋ ಸಿನಿಮಾದಲ್ಲಿ ಆಕ್ಟಿಂಗ್ ಮಾಡುತ್ತಿದ್ದಾರಂತೆ. ಅದಕ್ಕೆ ಮೀಸೆಗೆ ಬ್ಲೇಡ್ ಬಿದ್ದಿದೆ ಅನ್ನೋದು ಪ್ರಾಥಮಿಕ ಮಾಹಿತಿ. ಈ ಬಗ್ಗೆ ವರದಿನೂ ಆಗಿದೆ.
ಆಕ್ಟಿಂಗ್ ಹೊಸದಲ್ಲ.. ಮೀಸೆ ತೆಗೆದಿದ್ದು ಹೊಸದು
ಇತ್ತೀಚೆಗೆ ಅವರೇ ನಿರ್ದೇಶನದ 'ಗರಡಿ' ಸಿನಿಮಾದ ಪ್ರೆಸ್ ಮೀಟ್‌ಗೆ ತಮಟೆ ಹೊಡೆದುಕೊಂಡು ವೇದಿಕೆ ಮೇಲೇರಿದ್ದಾರೆ. ಆಗಲೂ ಕೆಲವರು ಭಟ್ರು ನೋಡಿ ತಲೆ ಕೆರೆದುಕೊಂಡಿದ್ದು ಇದೆ. ಹಾಗಂತ ಕನ್ಫ್ಯೂಸ್ ಆಗಬೇಡಿ. 'ಗರಡಿ'ಗಾಗಿ ಮೀಸೆ ತೆಗೆದಿದ್ದಲ್ಲ. ಶಿವಣ್ಣ ಹಾಗೂ ಪ್ರಭುದೇವ ಸಿನಿಮಾಗಾಗಿ ಮೀಸೆಗೆ ಬ್ಲೇಡ್ ಹಾಕಿದ್ದಾರೆ ಅನ್ನೋದು ಮ್ಯಾಟರ್
ಹೌದು.. ಭಟ್ರಿಗೆ ಬಣ್ಣ ಹಚ್ಚೋದು.. ಅದನ್ನು ಅಳಿಸಿ ಆಕ್ಷನ್ ಕಟ್ ಅನ್ನೋದು ಹೊಸದಲ್ಲ. ಈ ಹಿಂದೆ ಚಿತ್ರ-ವಿಚಿತ್ರ ಪಾತ್ರ ಮಾಡಿದ್ದು ನೋಡಿದ್ದೇವೆ. ಆದರೆ, ಅವರದ್ದೇ ನಿರ್ದೇಶನದಲ್ಲಿ 'K ಕರಟಕ D ದಮನಕ' ಸಿನಿಮಾ ಅಜ್ಜಯ್ಯ ಅನ್ನೋ ಪಾತ್ರ ಮಾಡ್ತಿದ್ದಾರಂತೆ. ಅದಕ್ಕೆ ಗಡ್ಡ, ಮೀಸೆ ಎರಡೂ ಇರಬಾರದಂತೆ. ಅದಕ್ಕೆ ತೆಗೆದುಬಿಟ್ಟಿದ್ದಾರೆ. ಇದು ಭಟ್ಟರ ಮೀಸೆ ಪ್ರಸಂಗ. ಸ್ವಲ್ಪ ಲೇಟ್ ಆಗಿ ರಿವೀಲ್ ಆಗಿದೆ.
ಭಟ್ಟರಿಗೆ ರಾಕ್‌ಲೈನ್ ಪ್ರಡ್ಯೂಸರ್
ಭಟ್ಟರು 'ಮುಂಗಾರು ಮಳೆ', 'ಗಾಳಿಪಟ' ಅಂತ ಟೈಟಲ್ ಇಡುತ್ತಿದ್ದವರು. ಅದ್ಯಾಕೋ ತಲೆ ಕೆಡಿಸೋ ಟೈಟಲ್ ಇಟ್ಟಿದ್ದಾರೆ. ಚಿಕ್ಕದಾಗಿ 'ಕೆಡಿ' ಅಂತ ಕರೆಯೋಣ ಅಂದರೆ, ಜೋಡಿ ಪ್ರೇಮ್ 'ಕೆಡಿ' ಅಂತ ಕರ್ಕೊಂಡಿದ್ದಾರೆ. ಈಗ ಸಿನಿಪ್ರಿಯರ ಬೇರೆ ದಾರಿ ಇಲ್ಲದೆ 'ಕರಟಕ ದಮನಕ' ಅಂತ ಕರೆಯಲೇಬೇಕು.
ರಾಕ್‌ಲೈನ್ ವೆಂಕಟೇಶ್ ಪ್ರಡ್ಯೂಸರ್.. ಶಿವಣ್ಣ, ಪ್ರಭುದೇವ ಲೀಡ್ ರೋಲ್‌ನಲ್ಲಿದ್ದಾರೆ. ಇವರ ಮಧ್ಯೆ ಯೋಗರಾಜ್ ಭಟ್ಟರು ಅಜ್ಜಯ್ಯನಾಗಿ ಮೀಸೆ ತೆಗೆದ ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ. ಇತ್ತ ರಾಕ್‌ಲೈನ್ ವೆಂಕಟೇಶ್ ಕೂಡ ವಿಶೇಷ ಪಾತ್ರದಲ್ಲಿ ನಟಿಸುತ್ತಾರಂತೆ. ಸದ್ಯ ಶೂಟಿಂಗ್ ನಡೀತಿದೆ. ಮುಗಿದ್ಮೇಲೆ ಎಲ್ಲಾ ರಿವೀಲ್ ಆಗುತ್ತೆ.


Click it and Unblock the Notifications











