ಯಶ್ ಹತ್ತಿರ ರಾಧಿಕಾ ಪಂಡಿತ್ ಸಿನಿಮಾ ಬಗ್ಗೆನೇ ಮಾತಾಡಲ್ಲ ಯಾಕೆ? "ಅದೃಷ್ಟವಂತ" ಅಂತ ಯಶ್ ಹೇಳಿಕೊಂಡಿದ್ದೇಕೆ?
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಹೆಚ್ಚು ಕಡಿಮೆ ಒಟ್ಟಿಗೆ ಸಿನಿಮಾ ಜರ್ನಿಯನ್ನು ಶುರು ಮಾಡಿದ್ದರು. ಒಂದು ಕಡೆ ಯಶ್ ಹೀರೋ ಆಗಿ ಮಿಂಚುತ್ತಿದ್ದರೆ, ಇತ್ತ ರಾಧಿಕಾ ಪಂಡಿತ್ ಹೀರೋಯಿನ್ ಆಗಿ ಹೆಸರು ಮಾಡುತ್ತಿದ್ದರು. ಇಬ್ಬರೂ ತಮ್ಮ ವೃತ್ತಿ ಬದುಕಿನಲ್ಲಿ ತಮ್ಮದೇ ರೀತಿಯಲ್ಲಿ ಯಶಸ್ಸನ್ನು ಕಾಣುತ್ತಾ ಮುಂದೆ ಸಾಗುತ್ತಿದ್ದರು. ಇಬ್ಬರೂ ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸು ಸಿಕ್ಕಿತ್ತು.
ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗ ಕಂಡ ಅತ್ಯುತ್ತಮ ನಟಿ. ಇಂದಿಗೂ ಅವರ ಅಭಿಮಾನಿಗಳು ರಾಧಿಕಾ ಪಂಡಿತ್ ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ಅವರನ್ನು ಸಿನಿಮಾಗಳಲ್ಲಿ ನೋಡಬೇಕು ಅಂತ ಬಯಸುತ್ತಿದ್ದಾರೆ. ಆದರೆ, ವಿವಾಹದ ನಂತರ ರಾಧಿಕಾ ಪಂಡಿತ್ ಸಿನಿಮಾದಿಂದ ದೂರ ಉಳಿದಿದ್ದಾರೆ. ಫ್ಯಾಮಿಲಿ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ.

ಇತ್ತೀಚೆಗೆ ಯಶ್ ಸಂದರ್ಶನ ನೀಡಿದ್ದರು. ಇದರಲ್ಲಿ ತನ್ನ ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಯಶ್ ಮನಬಿಚ್ಚಿ ಮಾತಾಡಿದ್ದಾರೆ. ಅವರ ಬೆನ್ನೆಲುಬಾಗಿ ರಾಧಿಕಾ ಪಂಡಿತ್ ನಿಂತಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಇದೇ ವೇಳೆ ತನ್ನ ಜೊತೆ ರಾಧಿಕಾ ಪಂಡಿತ್ ಸಿನಿಮಾ ಬಗ್ಗೆ ಮಾತಾಡೋದಿಲ್ಲ. ಈ ಸಿನಿಮಾದಿಂದ ಎಷ್ಟು ಹಣ ಬರುತ್ತೆ ಅನ್ನೋದನ್ನು ಕೇಳುವುದಿಲ್ಲ ಎಂದು ಹೇಳಿಕೊಂಡಿದ್ದರು. ಅದರ ಝಲಕ್ ಇಲ್ಲಿದೆ.
ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ದಿ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನ ನೀಡಿದ್ದರು. ಆ ವೇಳೆ ಪತ್ನಿ ರಾಧಿಕಾ ಪಂಡಿತ್ ಹಾಗೂ ಅವರ ಜರ್ನಿಯನ್ನು ಸ್ಮರಿಸಿಕೊಂಡಿದ್ದರು. "ನಾವಿಬ್ಬರೂ ಒಟ್ಟಿಗೆ ಬೆಳೆದು ಬಂದಿದ್ದೇವೆ. ಆ ವಿಚಾರದಲ್ಲಿ ನಾವು ಲಕ್ಕಿ. ನನ್ನ ಸಂಗಾತಿ ಆಗುವುದು ಅಷ್ಟು ಸುಲಭವಲ್ಲ. ನನ್ನ ನಿರ್ಧಾರ ಕಠಿಣವಾಗಿರುತ್ತೆ. ವೃತ್ತಿಯ ಆಯ್ಕೆ ಕ್ರೇಜಿಯಾಗಿರುತ್ತೆ. ಕಳೆದ ಕೆಲವು ವರ್ಷಗಳು ಸಿಕ್ಕಾಪಟ್ಟೆ ಕ್ರೇಜಿಯಾಗಿದೆ. ಕೆಜಿಎಫ್‌ಗೂ ಸಿಕ್ಕಾಪಟ್ಟೆ ಸಮಯವನ್ನು ಕೊಟ್ಟಿದ್ದೇನೆ." ಎಂದು ಯಶ್ ಹೇಳಿಕೊಂಡಿದ್ದಾರೆ.

ಯಶ್ ಗುರಿ, ಆಸೆ, ಆಕಾಂಕ್ಷೆಗಳನ್ನು ರಾಧಿಕಾ ಪಂಡಿತ್ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದಾರೆ ಎಂದು ಯಶ್ ಹೇಳಿದ್ದಾರೆ. "ರಾಧಿಕಾರನ್ನು ಪತ್ನಿಯಾಗಿ ಪಡೆದಿದ್ದು ನನ್ನ ಅದೃಷ್ಟ. ರಾಧಿಕಾ ನನ್ನ ಬಲ. ಅವರು ಯಾವಾಗಲೂ ನನ್ನನ್ನು ಬೆಂಬಲಿಸಿದ್ದಾರೆ. ನನ್ನ ಬಗ್ಗೆ ಅವರಿಗೆ ಚೆನ್ನಾಗಿಯೇ ಗೊತ್ತಿದೆ. ನಾನು ಅವರನ್ನು ಒಬ್ಬ ಗೆಳತಿಯಾಗಿ ನೋಡುತ್ತೇನೆ. ಆ ಮೇಲೆ ಪತ್ನಿ. ಮಕ್ಕಳು, ಪತ್ನಿ ಅದೆಲ್ಲ ಇದೆ. ಫ್ರೆಂಡ್ ಆಗಿ, ಪತ್ನಿಯಾಗಿ ಅವರಿಗೆ ನಾನು ಏನು ಎಂಜಾಯ್ ಮಾಡುತ್ತೇನೆ ಅನ್ನೋದು ಗೊತ್ತಿದೆ." ಎಂದಿದ್ದಾರೆ.
ಈ ಸಂದರ್ಶನದಲ್ಲಿ ಪತ್ನಿ ರಾಧಿಕಾ ಪಂಡಿತ್ ಒಬ್ಬರೇ ಸಿನಿಮಾದಿಂದ ಏನು ಸಿಗುತ್ತೆ? ಎಷ್ಟು ಸಂಪಾದನೆ ಮಾಡುತ್ತೀಯ ಅನ್ನೋ ಬಗ್ಗೆ ಮಾತಾಡುವುದಿಲ್ಲ ಎಂದಿದ್ದಾರೆ. "ಆಕೆ ಒಬ್ಬರೇ ಈ ಸಿನಿಮಾದಿಂದ ನಮಗೇನು ಸಿಗುತ್ತೆ ಅಂತ ಕೇಳುವುದಿಲ್ಲ. ಅಥವಾ ನೀನು ಎಷ್ಟು ಸಂಪಾದನೆ ಮಾಡಿದೆ. ಇದು ಕೆಟ್ಟ ಆಯ್ಕೆನಾ? ಒಳ್ಳೆ ಆಯ್ಕೆನಾ ಅಂತ ಯಾವತ್ತೂ ಕೇಳುವುದಿಲ್ಲ. ಅವರು ಕೇಳುವುದು ಒಂದೇ ನೀನು ಖುಷಿಯಾಗಿದ್ದೀಯಾ ಅಂತ ಅಷ್ಟೇ. ಅವರಿಗಾಗಿ ಸಮಯವನ್ನಷ್ಟೇ ಕೇಳುತ್ತಾರೆ. ಅದು ಈಗ ಸ್ವಲ್ಪ ಕಷ್ಟ ಆಗುತ್ತಿದೆ. ಅದು ಜವಾಬ್ದಾರಿ ಪೂರೈಸುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದೇನೆ." ಎಂದಿದ್ದಾರೆ.
ಯಶ್ ಹೊಸ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿರೆ, ಎಷ್ಟು ದಿನ ದೂರ ಇರಬೇಕಾಗುತ್ತೆ ಅಂತಷ್ಟೇ ರಾಧಿಕಾ ಪಂಡಿತ್ ಕೇಳುತ್ತಾರಂತೆ. ಹಾಗಾಗಿ ರಾಧಿಕಾ ಪಂಡಿತ್ ಅವರನ್ನು ಪತ್ನಿಯಾಗಿ ಪಡೆದಿದ್ದಕ್ಕೆ ತಾನು ಅದೃಷ್ಟವಂತ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.


Click it and Unblock the Notifications











