'ಜಾಕಿ' ಫೈಯರ್ ಫೈಟ್; ರವಿವರ್ಮಾ-ಡಿಫ್ರೆಂಡ್ ಡ್ಯಾನಿ ನಡುವೆ ಬೆಂಕಿ ಹೊತ್ತಿಕೊಂಡಿದ್ದೇಕೆ?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಲುವಾಗಿ ನಾಳೆ (ಮಾರ್ಚ್ 15) 'ಜಾಕಿ' ಸಿನಿಮಾ ಮತ್ತೆ ರಿಲೀಸ್ ಆಗುತ್ತಿದೆ. 14 ವರ್ಷಗಳ ಬಳಿಕ ಈ ಸಿನಿಮಾ ಮರು ಬಿಡುಗಡೆಯಾಗುತ್ತಿರುವುದರಿಂದ ಅಭಿಮಾನಿಗಳು ಸಂಭ್ರಮದ ಮೂಡಿನಲ್ಲಿ ಇದ್ದಾರೆ. ಆದರೆ, ಇದೇ ವೇಳೆ ಈ ಸಿನಿಮಾಗಾಗಿ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದ ರವಿವರ್ಮಾ ಹಾಗೂ ಡಿಫ್ರೆಂಟ್ ಡ್ಯಾನಿ ನಡುವೆ ಮತ್ತೆ ಕಿತ್ತಾಟ ಶುರುವಾಗಿದೆ.
'ಜಾಕಿ' ಸಿನಿಮಾದಲ್ಲಿ ಡೇಂಜರಸ್ ಫೈಟ್ ಸೀಕ್ವೆನ್ಸ್ ಇವೆ. ಅಂದು ಆ ಸಾಹಸ ದೃಶ್ಯಗಳು ಆಕ್ಷನ್ ಪ್ರಿಯರ ಮೈನವಿರೇಳಿಸುವಂತೆ ಮಾಡಿತ್ತು. ಪುನೀತ್ ರಾಜ್‌ಕುಮಾರ್ ಡೂಪ್ ಇಲ್ಲದೆ ಆಕ್ಷನ್ ಸೀಕ್ವೆನ್ಸ್‌ನಲ್ಲಿ ತೊಡಗಿಸಿಕೊಂಡಿದ್ದರು. ಇದರಲ್ಲಿ ಬೆಂಕಿ ಫೈಟ್ ಸಿನಿಪ್ರಿಯರನ್ನುಸೆಳೆದಿತ್ತು. ಈ ಫೈಟ್ ಸೀಕ್ವೆನ್ಸ್ ವಿಚಾರವಾಗಿ ಮತ್ತೆ ಸಾಹಸ ನಿರ್ದೇಶಕರಾದ ಡಿಫ್ರೆಂಟ್ ಡ್ಯಾನಿ ಹಾಗೂ ರವಿವರ್ಮಾ ನಡುವೆ ಕಿತ್ತಾಟ ಶುರುವಾಗಿದೆ.

ಅಷ್ಟಕ್ಕೂ ಬೆಂಕಿ ಫೈಟ್ ಕಂಪೋಸ್ ಮಾಡಿದ್ದ ಕ್ರೆಡಿಟ್ ಅನ್ನು ರವಿವರ್ಮಾ ತೆಗೆದುಕೊಂಡಿದ್ದಕ್ಕೆ ಡಿಪ್ರೆಂಟ್ ಡ್ಯಾನಿ ಗರಂ ಆಗಿದ್ದಾರೆ. ಅಸಲಿಗೆ ವೈಮನಸ್ಸು ಇಂದು ಶುರುವಾಗಿದ್ದಲ್ಲ. ರವಿವರ್ಮಾ ಮತ್ತು ಡಿಫ್ರೆಂಡ್ ಡ್ಯಾನಿ ನಡುವೆ ಶೀತಲ ಸಮರ 2013ರಿಂದಲೇ ಶುರುವಾಗಿತ್ತು. ಆ ವರ್ಷ ರವಿವರ್ಮಾ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗಂತ ಡಿಫ್ರೆಂಡ್ ಡ್ಯಾನಿಗೆ ಅಸೂಯೆನಾ? ಇದ್ದರೂ ಇರಬಹುದು. ಇಲ್ಲದೆಯೂ ಇರಬಹುದು. ಆದರೆ, ಇವರಿಬ್ಬರ ಶೀತಲ ಸಮರಕ್ಕೆ ಅಸಲಿ ಕಾರಣ 2010ರಲ್ಲಿ ತೆರೆಕಂಡಿದ್ದ 'ಜಾಕಿ' ಸಿನಿಮಾದ ಬೆಂಕಿ ಫೈಟ್.
2013ರಲ್ಲಿ ಪ್ರಭುದೇವ ನಿರ್ದೇಶಿಸಿದ 'ಆರ್ ರಾಜ್‌ಕುಮಾರ್' ಸಿನಿಮಾ ತೆರೆಕಂಡಿತ್ತು. ಈ ಸಿನಿಮಾಗೆ ರವಿವರ್ಮಾ ಆಕ್ಷನ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಈ ಸಿನಿಮಾಗೆ ರವಿವರ್ಮಾ 'ಜಾಕಿ' ಸಿನಿಮಾ ಬೆಂಕಿ ಫೈಟ್ ನಾನೇ ಮಾಡಿದ್ದು ಅಂತ ಪ್ರಭುದೇವ ಬಳಿ ಹೇಳಿಕೊಂಡು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಈ ಫೈಟ್ ಅನ್ನು ನಿರ್ದೇಶನ ಮಾಡಿದ್ದು ನಾನು ಅನ್ನೋದು ಡ್ಯಾನಿ ವಾದ. ಆದರೆ, ನಿಜಕ್ಕೂ ಬೆಂಕಿ ಫೈಟ್ ಕಂಪೋಸರ್ ನಾನೇ ಅಂತ ಹೇಳಿ ರವಿವರ್ಮಾ ಅವಕಾಶ ಗಿಟ್ಟಿಸಿಕೊಂಡರೇ? ಇದನ್ನು ಪ್ರಭುದೇವ ಸ್ಪಷ್ಟ ಪಡಿಸಿದ ಮೇಲೆ ಉತ್ತರ ಸಿಗುತ್ತೆ.
ರವಿವರ್ಮಾ ಬಗ್ಗೆ 2013ರಿಂದ ಇದೇ ವಿಚಾರಕ್ಕೆ ಅಸಮಧಾನವಿದ್ದರೂ, ಅದು ಹೊರಗೆ ಬರೋದಕ್ಕೆ ಒಂದು ದುರ್ಘಟನೆ ನಡೆಯಬೇಕಾಯ್ತು. 2017ರಲ್ಲಿ 'ಮಾಸ್ತಿ ಗುಡಿ' ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ಮಾಡುವಾಗ ನಟರಾದ ಅನಿಲ್ ಹಾಗೂ ಉದಯ್ ದುರಂತದಲ್ಲಿ ಸಾವನ್ನಪ್ಪಿದ್ದರು. ಈ ವೇಳೆ ಡಿಫ್ರೆಂಟ್ ಡ್ಯಾನ್ ಆ ಸಿನಿಮಾದ ಸಾಹಸ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ರವಿವರ್ಮಾ ವಿರುದ್ಧ ತಿರುಗಿಬಿದ್ದಿದ್ದರು. ರವಿವರ್ಮಾ ಅವರದ್ದೇ ತಪ್ಪು ಅನ್ನುವ ಅರ್ಥದಲ್ಲಿ ಡಿಫ್ರೆಂಡ್ ಡ್ಯಾನಿ ಮಾಧ್ಯಮಗಳ ಮುಂದೆ ಮಾತಾಡಿದ್ದರು. ಇಲ್ಲಿಂದ ರವಿವರ್ಮಾ ಹಾಗೂ ಡಿಫ್ರೆಂಡ್ ಡ್ಯಾನಿ ನಡುವೆ ಶಾಶ್ವತವಾಗಿ ಬಿರುಕು ಬಿಟ್ಟುಕೊಂಡಿತ್ತು.

ಈಗ ಮತ್ತೆ 'ಜಾಕಿ' ಸಿನಿಮಾ ರಿಲೀಸ್ ಆಗುತ್ತಿರುವ ಈ ಸಮಯದಲ್ಲಿ ರವಿವರ್ಮಾ ಆಕ್ಷನ್ ಸೀಕ್ವೆನ್ಸ್ ಬಗ್ಗೆ ಸಂದರ್ಶನ ನೀಡಿದ್ದರು. ಇದು ಡಿಫ್ರೆಂಟ್ ಡ್ಯಾನಿಯನ್ನು ಮತ್ತೆ ರೊಚ್ಚಿಗೆಬ್ಬಿಸಿತ್ತು. ಈ ಬಾರಿ ಬೆಂಕಿ ಫೈಟ್ ಬಗ್ಗೆ ರವಿವರ್ಮಾ ಮಾತಾಡದೇ ಇದ್ದರೂ, ಡಿಫ್ರೆಂಟ್ ಡ್ಯಾನಿ ಹೆಸರನ್ನು ತೆಗೆದು ಮಾತಾಡಿದ್ದರು. ಇದರಿಂದ ರೊಚ್ಚಿಗೆದ್ದ ಡ್ಯಾನಿ ಬೆಂಕಿ ಫೈಟ್ ಬಗ್ಗೆ ಕಹಾನಿಯನ್ನು ಹೊರಹಾಕಿದ್ದಾರೆ. ಅದೀಗ ರವಿವರ್ಮಾ ಕೊಲೆ ಬೆದರಿಕೆಬ ಹಾಕಿದ್ದಾರೆ ಅನ್ನೋವರೆಗೂ ಬಂದು ನಿಂತಿದೆ.
ಸಾಹಸ ನಿರ್ದೇಶಕರಾದ ರವಿವರ್ಮಾ ಹಾಗೂ ಡಿಫ್ರೆಂಟ್ ಡ್ಯಾನಿ ನಡುವಿನ ಈ ಕಿತ್ತಾಟ ಅದೆಲ್ಲಿಗೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಇತ್ತ ಅಪ್ಪು ನಟಿಸಿದ 'ಜಾಕಿ' ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬಹುತೇಕ ಎಲ್ಲಾ ಶೋಗಳಿಗೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಮಾರ್ಚ್ 15ರಂದು ಥಿಯೇಟರ್‌ಗಳಲ್ಲಿ 'ಜಾಕಿ' ಅಬ್ಬರ ಹೇಗಿರುತ್ತೆ ಅನ್ನೋದನ್ನು ನೋಡುವುದೇ ಹಬ್ಬ.


Click it and Unblock the Notifications











