'ಹಂಸಲೇಖ ಪರ ಕನ್ನಡ ಚಿತ್ರರಂಗ ಯಾಕೆ ಧ್ವನಿ ಎತ್ತುತ್ತಿಲ್ಲ?': ನಟ ಚೇತನ್ ಆಕ್ರೋಶ
ಸಂಗೀತ ನಿರ್ದೇಶಕ, ನಾದ ಬ್ರಹ್ಮ ಹಂಸಲೇಖ ಅವರು ದಿವಂಗತ ಪೇಜಾವರ ವಿಶ್ವೇಶ ತೀರ್ಥ ಶ್ರೀಗಳ ವಿರುದ್ಧ ನೀಡಿದ ಹೇಳಿಕೆ ದಿನದಿಂದ ದಿನಕ್ಕೆ ಮತ್ತಷ್ಟು ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಹಂಸಲೇಖ ಹೇಳಿಕೆಯನ್ನು ಖಂಡಿಸುವ ವರ್ಗ ಒಂದು ಕಡೆಯಾದರೆ, ಇನ್ನೊಂದು ಕಡೆ ಹಂಸಲೇಖ ಹೇಳಿಕೆ ಬೆಂಬಲ ಸೂಚಿಸುವ ವರ್ಗ ಮತ್ತೊಂದು ಕಡೆ. ಇವೆರಡರ ತಿಕ್ಕಾಟ ಪ್ರತಿ ದಿನ ಹೆಚ್ಚಾಗುತ್ತಲೇ ಇದೆ. ಇಂದು (ನವೆಂಬರ್ 26) ಹಂಸಲೇಖರನ್ನು ಬೆಂಬಲಿಸಿ, ಬೆಂಗಳೂರಿನ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ಬೃಹತ್ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
ನವೆಂಬರ್ 26ರಂದು ಬೆಳಗ್ಗೆ 11 ಗಂಟೆಗೆ ಮೆಜೆಸ್ಟಿಕ್ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕಿನವರೆಗೆ ಜಾಥಾ ನಡೆಸಲು, ಕರ್ನಾಟಕದ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ ಬೃಹತ್ ಜಾಥಾಕ್ಕೆ ಕರೆ ನೀಡಿತ್ತು. ಈ ಕರೆಯ ಮೇಲೆ ಕನ್ನಡದ ನಟ ಚೇತನ್ ಕೂಡ ಹಂಸಲೇಖರನ್ನು ಬೆಂಬಲಿಸಿ, ಈ ಜಾಥಾದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹಂಸಲೇಖ ಬೆಂಬಲಕ್ಕೆ ನಿಲ್ಲದ ಕನ್ನಡ ಚಿತ್ರರಂಗದ ವಿರುದ್ಧ ಕಿಡಿಕಾಡಿದ್ದಾರೆ.

ಹಂಸಲೇಖ ಪರ ಚಿತ್ರರಂಗ ಧ್ವನಿಗೂಡಿಸಿಲ್ಲ ಯಾಕೆ?
ಹಂಸಲೇಖ ಹೇಳಿಕೆಯನ್ನು ಸಮ್ಮತಿಸಿ ನಡೆದ ಜಾಥಾದಲ್ಲಿ ನಟ ಚೇತನ್ ಪಾಲ್ಗೊಂಡಿದ್ದರು. ಈ ವೇಳೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಹಂಸಲೇಖ ಪರ ಚಿತ್ರರಂಗ ನಿಲ್ಲದೆ ಇದ್ದಿದ್ದಕ್ಕೆ ಬೇರೆ ವ್ಯಕ್ತಪಡಿಸಿದರು. "ಹಂಸಲೇಖ ಸರ್ ಅವರು ಸಾಹಿತ್ಯ ವಲಯಕ್ಕೆ ಆಗಿರಬಹುದು, ಸಂಗೀತ ವಲಯಕ್ಕೆ ಆಗಿರಬಹುದು. ಅವರು ಮಾಡಿದ ಕೆಲಸ ದೊಡ್ಡದಿದೆ. ಏನು ನೋವಾಗುತ್ತೆ ಅಂದರೆ, ಎಲ್ಲೋ ಒಂದು ಕಡೆ ಈ ಸಂವಿಧಾನದ ಹಕ್ಕನ್ನು ಉಳಿಸಬೇಕು ಅಂತ ಕನ್ನಡ ಚಿತ್ರರಂಗ ಯಾಕೆ ಧ್ವನಿ ಗೂಡಿಸಿಲ್ಲ.?" ಎಂದು ನಟ ಚೇತನ್ ಪ್ರಶ್ನೆ ಮಾಡಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಕಾಳಜಿ ಇಲ್ಲವೇ?
"ಹಂಸಲೇಖ ಪರವಾಗಿ ಚಿತ್ರರಂಗ ಯಾಕೆ ಮಾತಾಡಿಲ್ಲ. ನಮ್ಮ ಕಾಳಜಿ ಕಡಿಮೆ ಇದೆಯಾ? ಚಿತ್ರರಂಗದಲ್ಲಿ ಧೈರ್ಯ ಕಡಿಮೆ ಇದೆಯಾ? ಸಿನಿಮಾದಲ್ಲಿ ದೊಡ್ಡದಾಗಿ ಎಲ್ಲರೂ ಹೀರೋಗಳು ಹೊಡೆಯುವುದು ಬಡಿಯುವುದು ತೋರಿಸುತ್ತೇವೆ. ಆದರೆ, ಯಾಕೆ ಹಂಸಲೇಖ ಸರ್‌ಗೆ ಈ ತರ ಅನ್ಯಾಯ ಆಗಿದ್ದೂ ಗೊತ್ತಿದ್ದೂ ಗೊತ್ತಿದ್ದೂ, ಜನತೆ ಅವರ ಮಾತು ಒಪ್ಪಲಿ ಬಿಡಲಿ, ಕ್ಷಮೆ ಕೇಳಿ ಆದ್ಮೇಲೆ ಅವರನ್ನು ಬಿಟ್ಟು ಬಿಡಬೇಕು. ಅವರನ್ನು ಯಾವುದೇ ಕಾರಣಕ್ಕೂ ಈ ರೀತಿ ಅಪರಾಧಿ ಮಾಡಿ ಜೈಲಿಗೆ ಹಾಕುವುದನ್ನು ಯಾರೂ ಒಪ್ಪುವುದಿಲ್ಲ. ಅಂತಹದ್ರಲ್ಲಿ ಚಿತ್ರರಂಗ ಯಾಕೆ ನಿಶಬ್ಧವಾಗಿದೆ ಅನ್ನುವುದು ನನಗೆ ಬಹಳ ದುಃಖ ಆಗುತ್ತೆ" ಎಂದು ಹಂಸಲೇಖ ಪರ ಚಿತ್ರರಂಗ ನಿಲ್ಲದೆ ಇದ್ದಿದ್ದಕ್ಕೆ ಚೇತನ್ ಬೇಸರ ಹೊರ ಹಾಕಿದ್ದಾರೆ.

ವಾಕ್ ಸ್ವಾತಂತ್ರ್ಯದ ಪರ ಹೋರಾಟ ಮುಂದುವರೆಯುತ್ತೆ
"ಇದು ನಾವು ಒಪ್ಪೋಕೆ ಆಗಲ್ಲ. ಎಲ್ಲರೂ ಬಂದಿದ್ದೀವಿ. ಹೋರಾಟ ಮುಂದುವರೆಸುತ್ತೇವೆ. ಜಾಥಾ ನಡೆಯುತ್ತೆ. ಅನ್ಯಾಯದ ವಿರುದ್ಧ ಯಾವಾಗಲೂ ಎಲ್ಲರೂ ಸಹ ಧ್ವನಿಗೂಡಿಸುತ್ತೇವೆ. ಕರ್ನಾಟಕ ದೇಶದ ಅಡಿಪಾಯ. ವಾಕ್ ಸ್ವಾತಂತ್ರ್ಯವನ್ನು ಉಳಿಸಿಯೇ ಉಳಿಸುತ್ತೇವೆ." ಅಂತ ಜಾಥಾ ವೇಳೆ ಚೇತನ್ ಆಕ್ರೋಶ ಹೊರ ಹಾಕಿದ್ದಾರೆ.

ಹಂಸಲೇಖ ಪರ ಬೆಂಬಲಿಗರ ಹೋರಾಟ
ಸಂಗೀತ ನಿರ್ದೇಶಕ ಹಂಸಲೇಖ ತಾವಾಡಿದ ಮಾತಿಗೆ ಈಗಾಗಲೇ ಕ್ಷಮೆ ಕೇಳಿದ್ದಾರೆ. ಆದರೆ, ದಿವಂಗತ ಪೇಜಾವರ ಶ್ರೀಗಳ ಭಕ್ತಗಣ ಈ ಕ್ಷಮೆಯನ್ನು ಒಪ್ಪುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಮಾತಿನ ದಾಳಿ ನಡೆಯುತ್ತಲೇ ಇದೆ. ಹೀಗಾಗಿ ದೇಶದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಅಪಾಯವಿದೆ ಎಂದು ಈ ಬೃಹತ್ ಜಾಥಾವನ್ನು ಕೆಲ ಸಂಘಟನೆಗಳು ಹಮ್ಮಿಕೊಂಡಿದ್ದವು. ರಾಜ್ಯದ ಮೂಲೆ ಮೂಲೆಯಿಂದ ಹಂಸಲೇಖರನ್ನು ಬೆಂಬಲಿಸುವವರು ಈ ಜಾಥಾದಲ್ಲಿ ಪಾಲ್ಗೊಂಡಿದ್ದರು.


Click it and Unblock the Notifications











