"ನಾನು ಶುದ್ಧ ಶಾಪಗ್ರಸ್ತ ಗಂಧರ್ವ"; ನಾದ ಬ್ರಹ್ಮ ಹಂಸಲೇಖ ಹೇಳಿದ ಈ ಮಾತಿನ ಅರ್ಥವೇನು?
ನಾದ ಬ್ರಹ್ಮ ಹಂಸಲೇಖ ಸಂಗೀತದಲ್ಲಷ್ಟೇ ಅಲ್ಲ, ಮಾತುಗಾರಿಕೆಯಲ್ಲೂ ಮೇಲು ಅನ್ನೋದು ಈಗಾಗಲೇ ಗೊತ್ತಿದೆ. ಹಂಸಲೇಖ ಅವರ ಇತ್ತೀಚೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ "ನಾನು ಶುದ್ಧ ಶಾಪಗ್ರಸ್ತ ಗಂಧರ್ವ" ಎಂದು ಹೇಳಿಕೊಂಡಿದ್ದಾರೆ.
ಹಿರಿಯ ಪತ್ರಕರ್ತರಾದ ಆರ್.ಜಯಕುಮಾರ್ ಅವರು ಬರೆದ 'ಗಾಂಧಿ ಮರೆತ ನಾಡಿನಲ್ಲಿ' ಹಾಗೂ 'ಕಾಡು ಹಾದಿಯ ಬೆಳಕಿನ ಜಾಡು' ಎಂಬ ಕೃತಿಗಳನ್ನು ಮಾನವ ಬಂಧುತ್ವ ವೇದಿಕೆ ಆಶ್ರಯದ ಮೂಲಕ ಲೋಕಾರ್ಪಣೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ನಾದ ಬ್ರಹ್ಮ ಹಂಸಲೇಖ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆ ವೇಳೆ ಆಡಿದ ಮಾತುಗಳ ಬಗ್ಗೆ ಈಗ ಚರ್ಚೆಯಾಗುತ್ತಿವೆ.

ಇದೇ ವೇದಿಕೆಯಲ್ಲಿ ಹಿರಿಯ ಪತ್ರಕರ್ತರಾದ ಆರ್.ಜಯಕುಮಾರ್ ಅವರ ಪುಸ್ತಕಗಳ ಬಗ್ಗೆ ಮಾತಾಡುವಾಗ, "ಶಾಪಗ್ರಸ್ತ ಗಂಧರ್ವ..", "13ನೇ ಮಗುವಾಗಿ ಜನಿಸಿದ ವಿಷಯವನ್ನು ತಮ್ಮದೇ ಶೈಲಿಯಲ್ಲಿ ವಿವರಿಸಿದ್ದಾರೆ. ಅಷ್ಟಕ್ಕೂ ಈ ವೇದಿಕೆಯಲ್ಲಿ ಹಂಸಲೇಖ ಆಡಿದ ಮಾತೇನು? ಅನ್ನುವುದನ್ನು ತಿಳಿಯಲು ಮುಂದು ಓದಿ.
ನಾದ ಬ್ರಹ್ಮ ಹಂಸಲೇಖ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನಾನು ಶುದ್ಧ ಶಾಪಗ್ರಸ್ತ ಗಂಧರ್ವ ಅಂತ ಹೇಳಿಕೊಂಡಿದ್ದಾರೆ. ಅದ್ಯಾಕೆ ಹೀಗಂದುಕೊಂಡೆ ಅನ್ನೋದಕ್ಕೆ ವಿವರಣೆ ಕೊಟ್ಟಿದ್ದಾರೆ. "ನಾನು ನಿಜವಾಗಿಯೂ ಪುರುಷೋತ್ತಮ್ ಸರ್ ಹೇಳಿದ ಹಾಗೆ ನಾನು ಶಾಪಗ್ರಸ್ತ ಗಂಧರ್ವನೇ. ಈ ಶಾಪಗ್ರಸ್ತ ಗಂಧರ್ವ ಯಾರು ಅಂದರೆ, ಅದನ್ನು ಬಿಡಿಸಿ ನೋಡಿದರೆ, ಅದು ಶೂದ್ರರಿಗೆ ಇಟ್ಟಂತಹ ಹೆಸರು ಅದು." ಎಂದಿದ್ದಾರೆ.
ಹಾಗೇ ಶಾಪಗ್ರಸ್ತ ಗಂಧರ್ವ ಅನ್ನುವ ಪದ ಹುಟ್ಟಿದ್ದೇಗೆ ಅನ್ನುವುದನ್ನು ವಿವರಿಸಿದ್ದಾರೆ. "ದ ರಾ ಬೇಂದ್ರೆಯವರು ನಮ್ಮ ಅಜ್ಜ, ಅವರು ದೊಡ್ಡವರು ಅದು ಬೇರೆ. ಅವರಿಗೆ ಡಾ. ಗಂಗೂಬಾಯಿ ಹಾನಗಲ್ ಅಂದರೆ ಬಲು ಇಷ್ಟ. ಏ ಬಾರಮ್ಮ ತಂಗಿ ಸೋದರಿ ಅಂತ ಮಾತಾಡುತ್ತಾರೆ. ಆಕೆಗೆ ದೊರೆತ ಸನ್ಮಾನಗಳು ಗೊತ್ತೇ ಇದೆ. ಇಷ್ಟೆಲ್ಲ ಆದರೂ ಕೂಡ ಬೇಂದ್ರೆ ಅಜ್ಜ, ಹೇ ಬಾರವ್ವ ಇಲ್ಲಿ. ನಿನ್ನ ಗಂಟಲಿನಾಗ, ಒಬ್ಬ ಶಾಪಗ್ರಸ್ತ ಗಂಧರ್ವ ಕುಂತಾನೆ ಕಣವ್ವ ಅಂದರು. ಅಂದರೆ, ಅದು ಹೇಗಾದರೂ ತೋಡಿಕೊಳ್ಳಬೇಕೋ.. ಅಥವಾ ಆ ಹೆಸರು ನಿನಗೆ ಸೂಕ್ತ ಅಂತ ಹೇಳಿದರೋ.. ಅದೇನು ಹವ್ಯಾಸ ಅಂತ ಗೊತ್ತಿಲ್ಲ. ಒಟ್ಟಿನಲ್ಲಿ ದಪ್ಪ ಗಂಟಲಿನ, ಕಪ್ಪು ಬಣ್ಣದ ಮತ್ತು ಸಂಕೋಚದಲ್ಲಿ ಸಂತೋಷವನ್ನು ತೋರಿಸುವ ಈ ಕರಿಜನಾಂಗ ಇದ್ದಾರಲ್ಲ ಇವರು ಎಲ್ಲಿದ್ದರೂ ಇವರು ಶಾಪಗ್ರಸ್ತರು. ನನಗೇನು ಅನುಮಾನವಿಲ್ಲ. ನಾನು ಶುದ್ಧ ಶಾಪಗ್ರಸ್ತ ಗಂಧರ್ವ." ಎಂದಿದ್ದಾರೆ.

ಹಾಗೇ ತಮ್ಮ ಹುಟ್ಟಿನ ಬಗ್ಗೆನೂ ಅವರದ್ದೇ ಶೈಲಿಯಲ್ಲಿ ಹೇಳಿಕೊಂಡಿದ್ದಾರೆ. "ನಮ್ಮ ವಂಶವೃಕ್ಷ ತೆಗೆದರೆ ಎಲ್ಲರೂ ಕರಿಯರೇ ಇದ್ದಾರೆ. ಸೊಟ್ಟ ಪಟ್ಟಗೆ ಇದ್ದಾರೆ. ಯಾವುದೂ ನಮ್ಮ ಹತ್ತಿರ ಕ್ರಾಸ್ ಬ್ರೀಡ್ ಇಲ್ಲ. ನನ್ನ ಅಪ್ಪ ಹೇಳಿದರು. ಮನೆ ಮುಂದೆ ಸೀಗೆ ಬೇಲಿ ಹಾಕಬೇಡ. ಪೊಲೀಸಿನವರ ಸಹವಾಸ ಮಾಡಬೇಡ, ಇನ್ನೊಬ್ಬನಿಗೆ ಜಾಮೀನು ಹಾಕಬೇಡ, ದೇಹಿ ಆಗಬೇಡ, ಸರ್ಕಾರಕ್ಕೆ ಮೋಸ ಮಾಡಬೇಡ, ಜಗತ್ ಪ್ರಖ್ಯಾತಿ ಆಗು. ಅಂದ್ರೆ ದೊಡ್ಡ ಮನುಷ್ಯ ಆಗು ಅಂತ. ಹಾಗೆ ಅಂದ್ಕೊಂಡು ಅಂದ್ಕೊಂಡು ಪ್ರಯೋಗ ಮಾಡಿದರು. ಅವರಿಗೆ ಬರೀ 13 ಮಕ್ಕಳು. 13 ಪ್ರಯೋಗಗಳಾದ ಮೇಲೆ ಒಬ್ಬ ಗಂಗರಾಜು ಹುಟ್ಟಿದ. ಅಂದರೆ, ಮ್ಯೂಸಿಕಲ್ ಇರೋದೆ 12 ನೋಟ್‌ಗಳು. ನಾನು ಎಕ್ಸ್‌ಟ್ರಾ ನೋಟ್." ಎಂದು ಹೇಳುತ್ತಾ ತಮ್ಮ ಸಂಗೀತದ ಸಾಧನೆಯನ್ನು ವಿವರಿಸಿದ್ದಾರೆ. ಅದೆಲ್ಲ ವಂಶಿಯತೆಯಿಂದ ಸಾಧ್ಯವಾಯಿತು ಎಂದು ಹೇಳಿದ್ದಾರೆ.


Click it and Unblock the Notifications











