ಪವನ್ ಕುಮಾರ್ 'ಧೂಮಂ' ಸಿನಿಮಾ ಮಾಡೋಕೆ ಕಾರಣ 'LIC'ಕಂಪನಿ; ಇದು ನಿಜಕ್ಕೂ ಶಾಕಿಂಗ್!
ಸಿನಿಮಾವನ್ನು ವಿಭಿನ್ನವಾಗಿ ನೋಡುವ ನಿರ್ದೇಶಕರಲ್ಲಿ ಪವನ್ ಕುಮಾರ್ ಕೂಡ ಒಬ್ಬರು. 'ಲೂಸಿಯಾ', 'ಯೂಟರ್ನ್' ಅಂತಹ ಸಿನಿಮಾಗಳು ಬಿಡುಗಡೆಯಾಗಿ ವರ್ಷಗಳೇ ಕಳೆದಿದ್ದರೂ, ಆ ಸಿನಿಮಾಗಳನ್ನು ಇನ್ನೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಪವನ್ ಕುಮಾರ್ ಸಿನಿಮಾಗಳಿಗಾಗಿ ಕಾದು ಕೂರು ಒಂದು ವರ್ಗ ಕೂಡ ಇದೆ.
ಹಾಗಂತ ಪವನ್ ನಿರ್ದೇಶಿಸಿದ ಎಲ್ಲಾ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟ ಆಗಿದೆ ಅನ್ನುವಂತೆಯೂ ಇಲ್ಲ. ಆದರೆ, ರೆಗ್ಯೂಲರ್ ಸಿನಿಮಾ ಅಂತೂ ಆಗಿರುವುದಿಲ್ಲ ಅನ್ನೋದನ್ನು ನಿಸ್ಸಂದೇಹವಾಗಿ ಹೇಳಬಹುದು. ಕೆಲವು ತಿಂಗಳ ಹಿಂದಷ್ಟೇ ನಿರ್ದೇಶಿಸಿದ 'ಧೂಮಂ' ಇಂತಹ ಸಿನಿಮಾಗಳಲ್ಲಿ ಸಾಲಿನಲ್ಲಿ ನಿಲ್ಲುತ್ತಿದೆ. ಅಂದ್ಹಾಗೆ ಇದು ಮಲಯಾಳಂ ಸಿನಿಮಾ ಆಗಿದ್ದರಿಂದ ನಿರೀಕ್ಷೆ ಸ್ವಲ್ಪ ಹೆಚ್ಚೇ ಇತ್ತು.

ಪವನ್ ಕುಮಾರ್ 'ಧೂಮಂ' ಬಾಕ್ಸಾಫೀಸ್‌ನಲ್ಲಿ ಸೋತಿದೆ. ಮಲಯಾಳಂನ ಅದ್ಭುತ ನಟ ಫಹಾದ್ ಫಾಸಿಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪವನ್ ಕುಮಾರ್ ಅಂತ ನಿರ್ದೇಶಕ ಆಕ್ಷನ್ ಕಟ್ ಹೇಳಿದ್ದರೂ, ಈ ಸಿನಿಮಾವನ್ನು ಜನರು ಇಷ್ಟ ಪಡದೆ ಇರುವುದಕ್ಕೆ ಅವರದ್ದೇ ಕಾರಣಗಳು ಇತ್ತು. ಈ ಸಿನಿಮಾ ಥಿಯೇಟರ್‌ಗೆ ಬಂದು ಬಹುಬೇಗನೇ ಮಾಯವಾದರೂ, ಮತ್ತೆ ಇದೇ ಸಿನಿಮಾ ಬಗ್ಗೆ ಹೇಳುತ್ತಿರುವುದಕ್ಕೆ ಪವನ್ ಕುಮಾರ್ ಅವರೇ ಕಾರಣ.
ಹಾಗಂತ 'ಧೂಮಂ 2' ಏನಾದರೂ ಸೆಟ್ಟೇರುತ್ತಾ? ಅನ್ನೋ ಪ್ರಶ್ನೆಗೆ ಉತ್ತರ ಖಂಡಿತಾ ಅಲ್ಲ. ಪವನ್ ಕುಮಾರ್ 'ಧೂಮಂ' ಸಿನಿಮಾವನ್ನು ಯಾಕೆ ಮಾಡಿದರು. ಈ ಸಿನಿಮಾದ ಹಿಂದಿರುವ ಪ್ರಬಲವಾದ ಕಾರಣ ಏನು? ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಅದನ್ನೀಗ ಸ್ವತ: ನಿರ್ದೇಶಕರೇ ಅನಾವಣ ಮಾಡಿದ್ದಾರೆ. ಇದು ನಿಜಕ್ಕೂ ಆತಂಕ ಹುಟ್ಟಿಸುತ್ತದೆ. 'ಧೂಮಂ' ಸಿನಿಮಾ ಸೋತಿರಬಹುದು. ಆದರೆ, ಈ ಸಿನಿಮಾ ಮೇಕಿಂಗ್ ಹಿಂದಿನ ಕಾರಣ ಮಾತ್ರ ಭಯಾನಕ.

ಪವನ್ ಕುಮಾರ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ "ನಾನ್ಯಾಕೆ ಧೂಮಂ ಸಿನಿಮಾದ ಕಥೆಯನ್ನು ಹೇಳುವುದಕ್ಕೆ ಬಯಸಿದ್ದೆ?" ಅನ್ನುವುದನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ. "ನಿಮಗೆ ನೋ ಸ್ಮೋಕಿಂಗ್ ರೂಲ್ಸ್ ಮತ್ತು ರೆಗ್ಯೂಲೇಷನ್ ಬಗ್ಗೆ ಗೊತ್ತಲ್ಲವೇ?.. ಹೀಗೆ ಮಾಡಿ, ಗೂಗಲ್‌ನಲ್ಲಿ ಐಟಿಸಿ ಕಂಪನಿಯಲ್ಲಿ ಅತೀ ಹೆಚ್ಚು ಶೇರುಗಳನ್ನು ಹೊಂದಿರುವವರು ಯಾರು ಎಂದು ಹುಡುಕಿ. ಅದರಲ್ಲಿ ಎರಡನೆಯವರು ಯಾರು ಎಂದು ನೋಡಿ. ಈ ಸಿನಿಮಾ ಮಾಡುವುದಕ್ಕೆ ಅದೂ ಒಂದು ಕಾರಣ" ಎಂದು ಪವನ್ ಕುಮಾರ್ ಇನ್‌ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.
ಪವನ್ ಕುಮಾರ್ ಕೊಟ್ಟಿರುವ ಸೂಚನೆಗಳನ್ನು ಪಾಲಿಸುತ್ತಾ ಹೋದರೆ, ಸಿಗರೇಟು ಉತ್ಪಾದನೆ ಮಾಡುವ ಐಟಿಸಿ ಕಂಪನಿಯ ಅತೀ ಹೆಚ್ಚು ಶೇರ್‌ಗಳನ್ನು ಖರೀದಿ ಮಾಡಿರುವ ಎರಡನೇ ಕಂಪನಿ ಎಲ್‌ಐಸಿ (LIC).ಐಟಿಸಿ ಕೇವಲ ಸಿಗರೇಟು ಉತ್ಪಾದನೆಯನ್ನಷ್ಟೇ ಮಾಡುವುದಿಲ್ಲ. ಹೋಟೆಲ್, ಆಹಾರ ಸೇರಿದಂತೆ ಹತ್ತು ಹಲವು ಉದ್ಯಮಗಳನ್ನು ಮುನ್ನೆಡೆಸುತ್ತಿದೆ. ಆದರೆ, ಐಟಿಸಿ ಅಂದ ಕೂಡಲೇ ಮೊದಲ ನೆನಪಿಗೆ ಬರುವುದೇ ಸಿಗರೇಟು.
ಇನ್ನೊಂದು ಕಡೆ ಜನರ ಜೀವಕ್ಕೆ ಬೆಲೆ ನೀಡುವ ಎಲ್‌ಐಸಿ ಕಂಪನಿ. ಭಾರತದ ಅತೀ ದೊಡ್ಡ ಇನ್ಶ್ಯೂರೆನ್ಸ್ ಕಂಪನಿ ಎನಿಸಿಕೊಂಡಿರುವ ಎಲ್‌ಐಸಿ, ಅದೇ ಜನರ ಪ್ರಾಣಕ್ಕೆ ಸಂಚಕಾರ ತರುವ ಸಿಗರೇಟ್ ಕಂಪನಿಯ ಶೇರುಗಳನ್ನು ಖರೀದಿ ಮಾಡಿದೆ. ಸಿಗರೇಟು ಸೇದುವುದರಿಂದ ಜನರು ಸಾಯುತ್ತಾರೆ ಅನ್ನೋದು ಗೊತ್ತಿದ್ದರೂ, ಎಲ್‌ಐಸಿ ಅಂತ ಕಂಪನಿ ಐಟಿಸಿಯ 189 ಕೋಟಿಗೂ ಅಧಿಕ ಶೇರುಗಳನ್ನು ಯಾಕೆ ಖರೀದಿ ಮಾಡಿದೆ? ಈ ಪ್ರಶ್ನೆಗೆ ಪವನ್ ಕುಮಾರ್ 'ಧೂಮಂ'ನಲ್ಲಿ ಉತ್ತರ ಕೊಡಲು ಯತ್ನಿಸಿದ್ದರು. ಅದನ್ನೇ ಈಗ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ. ಅಂದ್ಹಾಗೆ ಈಗ ಈ ಸಿನಿಮಾವನ್ನು ಯೂಟ್ಯೂಬ್‌ನಲ್ಲೂ ನೋಡಬಹುದು.


Click it and Unblock the Notifications











