'ಕ್ಯಾಪ್ಟನ್ ಮಿಲ್ಲರ್' ಟ್ರೈಲರ್‌ನಲ್ಲಿ ಶಿವಣ್ಣ ಎಲ್ಲಿ? 'ಜೈಲರ್' ನೋಡಿ ಹೆದರಿದ್ರಾ ಧನುಷ್?
'ಜೈಲರ್' ಆಯ್ತು, ಈಗ ಶಿವಣ್ಣನ ಮತ್ತೊಂದು ತಮಿಳು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಸೂಪರ್‌ಸ್ಟಾರ್ ರಜನಿಕಾಂತ್ ಪಾತ್ರಕ್ಕೆ ಸೆಡ್ಡು ಹೊಡೆದಿದ್ದ ಶಿವಣ್ಣನ ಖದರ್ ನೋಡಿ ತಮಿಳರು ಫಿದಾ ಆಗಿದ್ದರು. ಅದಕ್ಕಾಗಿಯೇ ಈಗ ಕನ್ನಡಿಗರು ಹಾಗೂ ತಮಿಳರು 'ಕ್ಯಾಪ್ಟನ್ ಮಿಲ್ಲರ್'ಗಾಗಿ ಕಾದು ಕೂತಿದ್ದಾರೆ.
ಅಂದ್ಹಾಗೆ, 'ಕ್ಯಾಪ್ಟನ್ ಮಿಲ್ಲರ್' ತಮಿಳು ಸಿನಿಮಾ ರಸಿಕರಿಗೆ ಬಹುನಿರೀಕ್ಷಿತ ಸಿನಿಮಾ. ಯಾಕಂದ್ರೆ, ಇದು ಧನುಷ್ ಅಭಿನಯದ 49ನೇ ಸಿನಿಮಾ. ಅದೇ ಕನ್ನಡಿಗರಿಗೂ ಇದು ಎಕ್ಸ್‌ಪೆಕ್ಟೆಡ್ ಸಿನಿಮಾ. ಯಾಕಂದ್ರೆ, ಇದರಲ್ಲಿ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿಯೇ ನಟಿಸಿದ್ದಾರೆ. ಈಗಾಗಲೇ 'ಜೈಲರ್' ಸಿನಿಮಾದಲ್ಲಿ ಶಿವಣ್ಣ ಖದರ್ ನೋಡಿದವರಿಗೆ 'ಕ್ಯಾಪ್ಟರ್ ಮಿಲ್ಲರ್' ಯಾವಾಗ ನೋಡುತ್ತೇವೋ ಅಂತ ಅನಿಸಿರೋದಂತೂ ನಿಜ.

ಆದರೆ, ಕನ್ನಡಿಗರಿಗೆ ಸಿನಿಮಾ ನೋಡುವುದಕ್ಕಿಂತ ಮುನ್ನವೇ ನಿರಾಸೆ ಆಗಿಬಿಟ್ಟಿದೆ. ಅದಕ್ಕೆ ಕಾರಣ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾದ ಟ್ರೈಲರ್. ಇಂದು (ಜನವರಿ 6) ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ತಮಿಳು ಅಷ್ಟೇ ಅಲ್ಲ ಕನ್ನಡ ಭಾಷೆಯಲ್ಲಿಯೂ ಟ್ರೈಲರ್ ಅನ್ನು ಚಿತ್ರತಂಡ ರಿಲೀಸ್ ಮಾಡಿದೆ. ಹೀಗಿದ್ದರೂ ಕನ್ನಡಿಗರಿಗೆ ಸಮಾಧಾನ ಆಗಿಲ್ಲ.
ಶಿವಣ್ಣನದ್ದು ಒಂದೇ ಫ್ರೇಮ್!
'ಕ್ಯಾಪ್ಟನ್ ಮಿಲ್ಲರ್' ಟ್ರೈಲರ್‌ನಲ್ಲಿ ಶಿವಣ್ಣ ಕೇವಲ ಒಂದೇ ಒಂದು ಫ್ರೇಮ್‌ನಲ್ಲಿ ಬಂದು ಹೋಗುತ್ತಾರೆ. ಕಳೆದ ಬಾರಿ ರಿಲೀಸ್ ಮಾಡಿದ ಟೀಸರ್‌ನಲ್ಲೇ ಶಿವಣ್ಣ ಹೆಚ್ಚು ಸಮಯ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾದ ಟ್ರೈಲರ್‌ನಲ್ಲೇ ಶಿವಣ್ಣ ಒಂದು ಫ್ರೇಮ್‌ನಲ್ಲಷ್ಟೇ ಬಂದು ಹೋಗಿದ್ದು ಯಾಕೆ ಕನ್ನಡಿಗರಿಗೆ ಇಷ್ಟ ಆಗುತ್ತಿಲ್ಲ. ಟ್ರೈಲರ್‌ನಲ್ಲಿ ಶಿವಣ್ಣನನ್ನು ರಿವೀಲ್ ಮಾಡದೇ ಇರೋಕೆ ಕಾರಣವೇನು? ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ಸಿಗೋದು ಅನುಮಾನ.
ನೆಟ್ಟಿಗರಂತೂ 'ಕ್ಯಾಪ್ಟನ್ ಮಿಲ್ಲರ್' ಟ್ರೈಲರ್ ನೋಡಿ ಶಿವಣ್ಣ ಮಾಯಾವಾಗಿದ್ದಾರೆ ಅಂತ ಕಮೆಂಟ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವೇದಿಕೆ ಮೇಲೆ ಶಿವಣ್ಣನನ್ನು ಧನುಷ್ ಹಾಡಿ ಹೊಗಳಿದ್ದರು. ಅಲ್ಲದೆ ಈ ಸಿನಿಮಾ ಶಿವಣ್ಣ ಪಾತ್ರವೂ ಪ್ರಮುಖವಾಗಿದೆ ಎಂದೇ ಹೇಳಲಾಗಿತ್ತು. ಇಷ್ಟೆಲ್ಲ ಇದ್ದರೂ, ಟ್ರೈಲರ್‌ನಲ್ಲಿ ಶಿವಣ್ಣನನ್ನು ಯಾಕೆ ಹೆಚ್ಚಾಗಿ ತೋರಿಸಿಲ್ಲ ಅಂತ ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಧನುಷ್‌ಗೆ ಭಯ ಆಗಿದ್ಯಾ?
'ಜೈಲರ್' ಸಿನಿಮಾ ಬಂದು ಹೋಗೋದು ಕೇವಲ 8 ರಿಂದ 10 ನಿಮಿಷ ಅಷ್ಟೇ. ಆದರೆ, ಶಿವಣ್ಣ ಪಾತ್ರವೇ ಹೈಲೈಟ್ ಆಗಿತ್ತು. ಸಿನಿಮಾದಲ್ಲಿ ನೋಡಿದವರಿಗೆ ಶಿವಣ್ಣ ಖದರ್ ತುಂಬಾನೇ ಇಷ್ಟ ಆಗಿತ್ತು. 'ಜೈಲರ್' ರಿಲೀಸ್ ಆಗುತ್ತಿದ್ದಂತೆ ತಮಿಳಿಗರು ಸೆಂಚುರಿ ಸ್ಟಾರ್ ಲುಕ್, ಖದರ್ ಬಗ್ಗೆನೇ ಹೆಚ್ಚು ಮಾತಾಡುವುದಕ್ಕೆ ಶುರು ಮಾಡಿದ್ದರು.
'ಕ್ಯಾಪ್ಟನ್ ಮಿಲ್ಲರ್'ನಲ್ಲೂ ಹೀಗೆ ಆಗಬಹುದು. ಈಗಾಗಲೇ ರಿವೀಲ್ ಆಗಿರೋ ಶಿವಣ್ಣನ ಲುಕ್ ನೋಡಿದರೆ, ಮತ್ತೊಮ್ಮೆ ತಮಿಳುನಾಡಿನಲ್ಲಿ ಹವಾ ಎಬ್ಬಿಸೋ ಲಕ್ಷಣಗಳು ಎದ್ದು ಕಾಣುತ್ತಿವೆ. ಈ ಕಾರಣಕ್ಕೆ ಟ್ರೈಲರ್‌ನಲ್ಲಿ ಧನುಷ್ ಪಾತ್ರವನ್ನೇ ಹೆಚ್ಚು ಹೈಲೈಟ್ ಮಾಡಿರಬಹುದು ಮಾತುಗಳು ಕೂಡ ಕೇಳಿಬರುತ್ತಿವೆ.
ರಿಲೀಸ್ ಯಾವಾಗ?
ಧನುಷ್ 49ನೇ ಸಿನಿಮಾ 'ಕ್ಯಾಪ್ಟನ್ ಮಿಲ್ಲರ್' ಪೊಂಗಲ್‌ಗೆ ಬಿಡುಗಡೆಯಾಗುತ್ತಿದೆ. 2024, ಜನವರಿ 12ರಂದು 'ಕ್ಯಾಪ್ಟನ್ ಮಿಲ್ಲರ್' ವಿಶ್ವದಾದ್ಯಂತ ತೆರೆ ಕಾಣಲಿದೆ. ಧನುಷ್ ಹಾಗೂ ಶಿವಣ್ಣ ಕ್ರೇಜಿ ಕಾಂಬಿನೇಷನ್ ನೋಡುವುದಕ್ಕೆ ಸಿನಿಪ್ರೇಮಿಗಳಂತೂ ತುದಿಗಾಲಲ್ಲಿ ನಿಂತಿದ್ದಾರೆ. ಟ್ರೈಲರ್ ಪ್ರಾಮಿಸಿಂಗ್ ಆಗಿದ್ದು, ಶಿವಣ್ಣ ಒಂದು ಫ್ರೇಮ್‌ನಲ್ಲಿ ಬಂದು ಹೋಗೋದನ್ನು ಅಭಿಮಾನಿಗಳು ಸಹಿಸಿಕೊಳ್ಳುತ್ತಿಲ್ಲ ಅಷ್ಟೇ.
ಇನ್ನು ಈ ಸಿನಿಮಾವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ಧನುಷ್ ಜೊತೆಗೆ ಪ್ರಿಯಾಂಕಾ ಮೋಹನನ್ ನಾಯಕಿಯಾಗಿ ನಟಿಸಿದ್ದಾರೆ. ಬಿಡುಗಡೆಗೂ ಮುನ್ನವೇ ಸಿನಿಮಾ 100 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಆರಂಭಿಸಿದೆ.


Click it and Unblock the Notifications











