ದರ್ಶನ್ ಜಾಮೀನು ಅರ್ಜಿ ವಿಚಾರಣೆ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ಅಸರಾಂ ಬಾಪು ಕೇಸ್ ತೆಗೆದಿದ್ದು ಏಕೆ?
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲಿನಲ್ಲಿ ದರ್ಶನ್ ಇದ್ದಾರೆ. ಕಳೆದ ಕೆಲವು ದಿನಗಳಿಂದ ಜಾಮೀನು ನಿರೀಕ್ಷೆಯಲ್ಲಿರುವ ದರ್ಶನ್‌ಗೆ ಇನ್ನು ಒಂದು ದಿನ ಕಾಯುವ ಪರಿಸ್ಥಿತಿ ಎದುರಾಗಿದೆ. ಸೆಷನ್ಸ್ ಕೋರ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ನಿರಾಕರಿಸಲಾಗಿತ್ತು. ಬಳಿಕ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದರು.
ದರ್ಶನ್ ಪರ ವಕೀಲರಾದ ಸಿ ವಿ ನಾಗೇಶ್ ಹಾಗೂ ಎಸ್‌ಪಿಪಿ ಪ್ರಸನ್ನ ಕುಮಾರ್ ಇಬ್ಬರು ನ್ಯಾಯಾಧೀಶರ ಮುಂದೆ ವಾದ ಮತ್ತು ಪ್ರತಿವಾದವನ್ನು ಮಂಡಿಸಿದ್ದರು. ಇಂದು (ಅಕ್ಟೋಬರ್ 29) ಕೂಡ ಇಬ್ಬರು ಹಿರಿಯ ವಕೀಲರ ವಾದ-ಪ್ರತಿವಾದವನ್ನು ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಾಧೀಶರು ಆಲಿಸಿ, ಜಾಮೀನು ಆದೇಶವನ್ನು ನಾಳೆಗೆ (ಅಕ್ಟೋಬರ್ 30) ಕಾಯ್ದಿರಿಸಿದ್ದಾರೆ. ಹೀಗಾಗಿ ದರ್ಶನ್ ಇನ್ನೂ ಒಂದು ದಿನ ಜೈಲಿನಲ್ಲಿ ಕಾಲ ಕಳೆಯಬೇಕಿದೆ.

ದರ್ಶನ್‌ಗೆ ಯಾಕೆ ಜಾಮೀನು ಕೊಡಬೇಕು ಅಂತ ಹಿರಿಯ ವಕೀಲರಾದ ಸಿ ವಿ ನಾಗೇಶ್ ವಾದ ಮಂಡಿಸಿದ್ದರು. ಇನ್ನೊಂದ ಕಡೆ ಎಸ್‌ಪಿಪಿ ಪ್ರಸನ್ನ ಕುಮಾರ್ ಕೂಡ ಪ್ರಬಲವಾಗಿಯೇ ಪ್ರತಿವಾದ ಮಂಡಿಸಿದ್ದರು. ಈ ವೇಳೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿರುವ ಅಸರಾಂ ಬಾಪು ಕೇಸ್ ಅನ್ನು ಪ್ರಸ್ತಾಪ ಮಾಡಿದ್ದರು. ಅಷ್ಟಕ್ಕೂ ಆ ಕೇಸ್ ಏನು? ದರ್ಶನ್ ಜಾಮೀನು ಅರ್ಜಿ ವಿಚಾರಣೆಗೆ ಅಸರಾಂ ಬಾಪು ಕೇಸ್ ಉದಾಹರಣೆ ನೀಡಿದ್ದೇಕೆ ತಿಳಿಯಲು ಮುಂದೆ ಓದಿ.
ದರ್ಶನ್ ಪರ ವಾದ ಮಂಡಿಸಿದ್ದ ಸಿ ವಿ ನಾಗೇಶ್ ವಿಚಾರಣಾಧೀನ ಖೈದಿಗೂ ಚಿಕಿತ್ಸೆ ಪಡೆಯುವ ಹಕ್ಕಿದೆ. ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಸೂಕ್ತ ಚಿಕಿತ್ಸೆಯನ್ನು ಕೊಡಿಸದೇ ಇದ್ದರೆ, ಭವಿಷ್ಯದಲ್ಲಿ ಅವರಿಗೆ ತೊಂದರೆ ಆಗಬಹುದು. ಬೆನ್ನು ನೋವಿದೆ, ಕಾಲು ಮರಗಟ್ಟುತ್ತಿದೆ. ಈ ದೃಷ್ಠಿಯಲ್ಲಿ ಅವರಿಗೆ ಚಿಕಿತ್ಸೆ ಅತ್ಯಗತ್ಯವಿದೆ. ಈ ಕಾರಣಕ್ಕೆ ಮಧ್ಯಂತರ ಜಾಮೀನನ್ನು ನೀಡಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದರು.
ಇತ್ತ ಎಸ್‌ಪಿಪಿ ಪ್ರಸನ್ನ ಕುಮಾರ್ ಅವರು ವೈದ್ಯರು ನೀಡಿದ ವರದಿಯಲ್ಲಿ ಗೊಂದಲಗಳಿವೆ. ಯಾವ ರೀತಿಯ ಶಸ್ತ್ರಚಿಕಿತ್ಸೆ ಮಾಡಬೇಕು? ಚಿಕಿತ್ಸೆಗೆ ಎಷ್ಟು ದಿನ ಬೇಕು? ಎಲ್ಲಿ ಆಪರೇಷನ್ ಮಾಡಬೇಕು ಎಂಬುವುದರ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಆಗ ಸಿ ವಿ ನಾಗೇಶ್ ಅವರು ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಅವರ ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯುತ್ತಾರೆ ವಾದ ಮಂಡಿಸಿದ್ದರು. ಆಗ ಪ್ರಸನ್ನ ಕುಮಾರ್ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲೂ ಸೌಲಭ್ಯವಿದ್ದು ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಪ್ರತಿವಾದ ಮಂಡಿಸಿದ್ದರು.
ಇದೇ ವೇಳೆ ಎಸ್‌ಪಿಪಿ ಪ್ರಸನ್ನ ಕುಮಾರ್ ವೈದ್ಯಕೀಯ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಸರಾಂ ಬಾಪು ಉದಾಹರಣೆ ಕೊಟ್ಟು, ಮೆಡಿಕಲ್ ಬೋರ್ಡ್ ವರದಿ ಅಭಿಪ್ರಾಯ ಬೇಕಿದೆ ಎಂದು ಹೇಳಿದ್ದರು. ಅಷ್ಟಕ್ಕೂ ಎಸ್‌ಪಿಪಿ ಪ್ರಸನ್ನ ಕುಮಾರ್ ಯಾಕೆ ಅಸರಾಂ ಬಾಪು ಉದಾಹರಣೆ ಕೊಟ್ಟರು. ಆ ಕೇಸ್‌ಗೂ ದರ್ಶನ್‌ಗೂ ಏನು ಸಂಬಂಧ?
ಸ್ವಯಂ ಘೋಷಿತ ದೇವಮಾನವ ಅಸರಾಂ ಬಾಪು 2013ರಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದರು.
ಜೈಲು ಸೇರಿದ ಬಳಿಕ ಅಸರಾಂ ಬಾಪು ಅನಾರೋಗ್ಯ ಕಾರಣ ನೀಡಿದ ಮಧ್ಯಂತರ ಜಾಮೀನು ಅರ್ಜಿಯನ್ನು ಕೋರಿದ್ದರು. ಕೇರಳದಲ್ಲಿ ಚಿಕಿತ್ಸೆ ಪಡೆಯಬೇಕಿದೆ. ಆಯುರ್ವೇದ ಚಿಕಿತ್ಸೆಯನ್ನು ಪಡೆಯಬೇಕು ಆ ಕಾರಣಕ್ಕೆ ಮಧ್ಯಂತರ ಜಾಮೀನು ಬೇಕು ಎಂದು ಕೇಳಿದ್ದರು. ಆ ವೇಳೆ ವೈದ್ಯಕೀಯ ವರದಿಯಲ್ಲಿ ಲೋಪ ಕಂಡು ಬಂದಿತ್ತು. ಅಸರಾಂ ಬಾಪು ಕೇಸ್‌ನಲ್ಲಿ ಮೆಡಿಕಲ್ ಬೋರ್ಡ್ ವರದಿಯನ್ನು ಆಧರಿಸಿ ಮಧ್ಯಂತರ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದನ್ನೇ ಉದಾಹರಣೆಯಾಗಿಟ್ಟುಕೊಂಡು ದರ್ಶನ್ ವೈದ್ಯಕೀಯ ವರದಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಾಳೆ ನೀಡುವ ತೀರ್ಪಿನಲ್ಲಿ ಈ ಅಂಶ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ.


Click it and Unblock the Notifications










