'ಡೆಡ್ಲಿ ಸೋಮ 2' ನಲ್ಲಿ ದಾಸ ಮತ್ತು ದರ್ಶನ್; ನಿರ್ದೇಶಕರ ಮಾಸ್ಟರ್ ಪ್ಲ್ಯಾನ್!
ನೈಜ ಘಟನೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡುವ ನಿರ್ದೇಶಕರಲ್ಲಿ ರವಿ ಶ್ರೀವತ್ಸ ಕೂಡ ಒಬ್ಬರು. ಅದಕ್ಕೆ 'ಡೆಡ್ಲಿ ಸೋಮ', 'ಮಾದೇಶ'ದಂತಹ ಸಿನಿಮಾಗಳು ಉದಾಹರಣೆಯಾಗಿ ಸಿಗುತ್ತವೆ. ಒಂದಿಷ್ಟು ದಿನ ಸೈಲೆಂಟ್ ಆಗಿದ್ದ ರವಿ ಶ್ರೀವತ್ಸ ಮತ್ತೆ ಅಖಾಡಕ್ಕೆ ಇಳಿದಿದ್ದರು. 'ಡೆಡ್ಲಿ ಸೋಮ 2' ಸಿನಿಮಾದ ನಿರ್ದೇಶನಕ್ಕೆ ಕೈ ಹಾಕಿದ್ದರು. ಆ ಸಿನಿಮಾ ಈಗ ಮುಕ್ತಾಯದ ಹಂತದಲ್ಲಿ ಇದೆ.
'ಡೆಡ್ಲಿ ಸೋಮ 2' ಸಿನಿಮಾ ಹಲವು ಕಾರಣಗಳಿಗೆ ಇಂಟ್ರೆಸ್ಟಿಂಗ್ ಆಗಿದೆ. ಬಹಳ ದಿನಗಳ ಬಳಿಕ ಬೆಂಗಳೂರಿನ ಪ್ರಮುಖ ರಸ್ತೆಗಳ ಬೀದಿಯಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಿದ್ದಾರೆ. ಇದನ್ನು ಮಿಸ್ ಮಾಡಿಕೊಂಡಿದ್ದ ಜನರಿಗೆ ದಿಢೀರನೇ ಅಚ್ಚರಿ ಆಗಿದ್ದೂ ಇದೆ. ಮತ್ತೊಂದು ಕಡೆ ಈ ಸಿನಿಮಾದ ಎರಡು ಪಾತ್ರಗಳು. ಅದು ದರ್ಶನ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ಹೌದು, 'ಡೆಡ್ಲಿ ಸೋಮ 2' ಸಿನಿಮಾದಲ್ಲಿ ಬರುವ ಎರಡು ಪಾತ್ರಗಳಿಗೆ ದಾಸ ಹಾಗೂ ದರ್ಶನ್ ಎಂಬ ಎರಡು ಹೆಸರುಗಳನ್ನು ಇಡಲಾಗಿದೆ. ಈಗಾಗಲೇ ನಿರ್ದೇಶಕ ರವಿ ಶ್ರೀವತ್ಸ ಅದಕ್ಕೆ ಕಾರಣ ದರ್ಶನ್ ಮೇಲಿನ ಅಭಿಮಾನ ಅಂತಲೂ ಹೇಳಿದ್ದಾರೆ. ಹಾಗೇ ಈ ಎರಡು ಹೆಸರುಗಳನ್ನು ಯಾಕೆ ಬಳಸಿಕೊಂಡಿದ್ದೇನೆ ಅನ್ನೋದಕ್ಕೆ ಈಗಾಗಲೇ ಕಾರಣಗಳನ್ನೂ ಕೊಟ್ಟಿದ್ದಾರೆ.
ಮೊದಲಿಗೆ 'ಡೆಡ್ಲಿ ಸೋಮ 2' ಅಂತ ಟೈಟಲ್ ಇಟ್ಟಿದ್ದೇಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಡೆಡ್ಲಿ ಸೋಮ ಆಯ್ತು, ಡೆಡ್ಲಿ 2 ಆಯ್ತು, ಡೆಡ್ಲಿ 3 ಮಾಡೋಣ ಅಂತಾನೇ ಪ್ಲಾನ್ ಮಾಡಿದ್ವಿ. ಆ ವೇಳೆಗೆ ದೆಡ್ಲಿ ಕಿಲ್ಲರ್ ಅದು ಇದು ಅಂತೆಲ್ಲ ಬಂದು ಹೋಯ್ತು. ಯಾರನ್ನ ಕಾಪಾಡಿದೆಯೋ ಇಲ್ಲವೋ ಗೊತ್ತಿಲ್ಲ. ಡೆಡ್ಲಿ ಸೋಮ ಅಂತು ನನ್ನನ್ನು ಕಾಪಾಡಿದೆ. ಅದರ ನೆರಳಿನಲ್ಲಿಯೇ ಹೋಗೋಣ ಅಂತ ಹೇಳಿ, ಈ ಸಿನಿಮಾವನ್ನು ಡೆಡ್ಲಿ ಸೋಮ ಭಾಗ ಎರಡು ಅಂತಾನೇ ಇಡುತ್ತಿದ್ದೇವೆ." ಎಂದು ರವಿ ಶ್ರೀವತ್ಸ ಹೇಳಿದ್ದಾರೆ.

ಇನ್ನು ಈ ಸಿನಿಮಾ 'ಡೆಡ್ಲಿ ಸೋಮ' ಸಿನಿಮಾ ಮುಗಿದಲ್ಲಿಂದ ಆರಂಭ ಆಗುತ್ತಿರುವುದರಿಂದ ಪ್ರೇಕ್ಷಕರಿಗೆ ಹಿಡಿಸಬಹುದು ಎಂಬ ನಂಬಿಕೆಯಲ್ಲಿದ್ದಾರೆ. "ಡೆಡ್ಲಿ 2 ನಲ್ಲಿ ದೇವರಾಜ್ ಸರ್ ಒಂದು ಡೈಲಾಗ್ ಇರುತ್ತೆ. ಇವನು ಯಾರು ಸೋಮ ಅಂತ ಹೇಳಿದರೆ, ಸೋಮನನ್ನು ಎನ್‌ಕೌಂಟರ್ ಮಾಡಿದ ದಿವಸ, ಅದೇ ಹೆಸರಿನಲ್ಲಿರುವ ಸೋಮಶೇಖರ ಮತ್ತೊಂದು ಮರ್ಡರ್ ಮಾಡಿದ. ಬಾಯ್ತಪ್ಪಿ ಇವನು ಯಾರಪ್ಪ ಮತ್ತೊಬ್ಬ ಸೋಮ ಹುಟ್ಕೊಂಡ. ಅವನು ಡೆಡ್ಲಿ ಆಗಿ ಹೋದ ಅಂತ ಹೇಳುತ್ತಾರೆ. ಇಲ್ಲಿ ಏನು ಮಾಡುತ್ತಿದ್ದೇವೆ ಅಂದರೆ, ಸೋಮ ಎನ್‌ಕೌಂಟರ್ ಆದ ನಂತರ, ಎಲ್ಲರಿಗೂ ಗೊತ್ತಿರುತ್ತೆ ಸೋಮನ ಹೆಂಡ್ತಿ ತುಂಬು ಗರ್ಭಿಣಿ. ಸೋಮನ ಹೆಂಡತಿ ಮೂರು ತಿಂಗಳು ಇರುವಾಗಲೇ ಅಶೋಕ್ ಕುಮಾರ್ ಅವರು ಎನ್‌ಕೌಂಟರ್ ಮಾಡಿದ್ದರು. ಈಗ ಅಲ್ಲಿಂದ ಸಿನಿಮಾವನ್ನು ಶುರು ಮಾಡುತ್ತಿರೋದ್ರಿಂದ ಅಧಿಕೃತವಾಗಿ ಡೆಡ್ಲಿ ಸೋಮ ಪಾರ್ಟ್ 2 ಅಂತ ಟೈಟಲ್ ಇಡುವುದು ಬೆಸ್ಟ್ ಅಂತ ಅನಿಸಿತು. ಅದಕ್ಕೆ ಈ ಹೆಸರು ಇಟ್ಟಿದ್ದೀವಿ ಅಷ್ಟೇ. " ಎನ್ನುತ್ತಾರೆ ನಿರ್ದೇಶಕರು.
ಈ ಸಿನಿಮಾವನ್ನು ದರ್ಶನ್‌ಗೆ ಡೆಡಿಕೇಟ್ ಮಾಡುತ್ತಿದ್ದಾರೆ. ಇದೇ ವೇಳೆ ನಾಯಕ ದೀಕ್ಷಿತ್ ಪಾತ್ರಕ್ಕೆ ದಾಸ ಹಾಗೂ ದರ್ಶನ್ ಅಂತ ಹೆಸರು ಇಟ್ಟಿದ್ದೇಕೆ? ಅನ್ನೋದನ್ನು ನಿರ್ದೇಶಕರು ಹೇಳಿದ್ದಾರೆ. "ದೀಕ್ಷಿತ್‌ಗೆ ಇಲ್ಲಿ ಎರಡು ಶೇಡ್ ಇದೆ. ಸೋಮನಿಗೆ ಇಬ್ಬರು ಮಕ್ಕಳಾ ಅನ್ನೋದರಿಂದ ಶುರು ಮಾಡುತ್ತಿದ್ದೇವೆ. ನಾನು ಮತ್ತು ದೀಕ್ಷಿತ್ ಈ ಸಿನಿಮಾವನ್ನು ದರ್ಶನ್ ಸರ್‌ಗೆ ಡೆಡಿಕೇಟ್ ಮಾಡುತ್ತಿದ್ದೇವೆ. ಯಾಕಂದ್ರೆ, ಒಂದು ದೀಕ್ಷಿತ್ ಬಂದು ದಾಸ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ದೀಕ್ಷಿತ್ ದರ್ಶನ್ ಐಪಿಎಸ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಒಂದಷ್ಟು ವಿಷಯಗಳಿವೆ." ಎಂದು ರವಿ ಶ್ರೀವತ್ಸ ಹೇಳುತ್ತಾರೆ.
ನಿರ್ದೇಶಕ ರವಿ ಶ್ರೀವತ್ಸ ಅವರಿಗೆ ದರ್ಶನ್ ಪೊಲೀಸ್ ಆಫೀಸರ್ ಆಗಿ ಇಷ್ಟ. ದಾಸ ಹಾಗೂ ದರ್ಶನ್ ಅಂತ ಪಾತ್ರಗಳಿಗೆ ಹೆಸರು ಇಡುವುದಕ್ಕೆ ಇದೂ ಕಾರಣ. "ನನಗೆ ದರ್ಶನ್ ಪೊಲೀಸ್ ಆಫೀಸರ್ ಆಗಿಯೂ ಪ್ರೇರಣೆ. ಇರಲಿ ನನ್ನ ಎರಡೂ ಪಾತ್ರಗಳು ಒಂದು ಕುದುರೆಯಾಗಿ ಓಡಲಿ. ಅದಕ್ಕಾಗಿ ಒಂದ್ಕಡೆ ದಾಸ, ಇನ್ನೊಂದ್ಕಡೆ ದರ್ಶನ್ ಅಂತ ಮಾಡಿದ್ದೀನಿ ಅಷ್ಟೇ." ಎನ್ನುತ್ತಾರೆ.
ಇನ್ನು ಈ ಎರಡು ಪಾತ್ರಗಳಲ್ಲಿ ನಟಿಸುತ್ತಿರುವ ಹೀರೋ ದೀಕ್ಷಿತ್ ಕೂಡ ತಮ್ಮ ಪಾತ್ರಗಳ ಬಗ್ಗೆ ರಿವೀಲ್ ಮಾಡಿದ್ದಾರೆ. "ಇದರಲ್ಲಿ ಎರಡು ಶೇಡ್ ಇದೆ. ಮೊದಲನೇ ಶೇಡ್ ಬಂದು ದಾಸ ಅಂತ ಹೇಳಿ. ಅದು ರೌಡಿ ಗೆಟಪ್ ಬರುತ್ತೆ. ಎರಡನೇ ಗಟಪ್ ಬಂದು ದರ್ಶನ್ ಐಪಿಎಸ್ ಅಂತ. ದಾಸ ಆಗಿದ್ದವನು ದರ್ಶನ್ ಐಪಿಎಸ್ ಹೇಗೆ ಆಗುತ್ತಾನೆ ಅನ್ನೋದು ನಮ್ಮ ಸಿನಿಮಾದ ಒಂದು ಪ್ರಮುಖ ಅಂಶ" ಎನ್ನುತ್ತಾರೆ ದೀಕ್ಷಿತ್.
"ದೀಕ್ಷಿತ್ ನನಗೆ ಗಿಫ್ಟ್ ಇದ್ದಂತೆ. ಆ ಹುಡುಗ ನನಗೆ ಟೈಗರ್ ಗಲ್ಲಿಯಲ್ಲಿ ಬಂದು ನಿಂತಾಗ, ಒಂದು ಲೆಕ್ಕದಲ್ಲಿ ಇದ್ದ. ಅವನು 6.1 ಅಡಿ ಇದ್ದಾನೆ. ಅವನು ದರ್ಶನ್ ಸರ್ ಅವರ ಪ್ರತಿ ಬಿಂಬಿ ಇದ್ದಂತೆ ಎಂದು ಈಸಿಯಾಗಿ ಹೇಳುತ್ತೇನೆ. ಅವನ ನಡೆ, ನುಡಿ, ಆ ಹೈಟು, ಆ ಪರ್ಸನಾಲಿಟಿ ಇದೆಯಲ್ಲ ಅದನ್ನು ಆ ದೇವರು ಮಾತ್ರ ವರವಾಗಿ ಕೊಡುತ್ತಾರೆ. ಅದನ್ನ ಬಳಸಿಕೊಂಡು ಭದ್ರವಾಗಿ ಕಾಲನ್ನು ಊರಿ ನಿಲ್ಲಬೇಕು. ಈ ಹುಡುಗ ಅದನ್ನು ಅಳವಡಿಸಿಕೊಂಡು ಏನಾದರೂ ಮಾಡುತ್ತಾನೆ." ಎಂದು ನಿರ್ದೇಶಕ ರವಿ ಶ್ರೀವತ್ಸ ಭವಿಷ್ಯ ನುಡಿದಿದ್ದಾರೆ.
ಇನ್ನು ದರ್ಶನ್‌ಗೆ ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದ ಕತೆಯನ್ನು ಹೇಳಿಕೊಂಡಿದ್ದಾರೆ. "ಯಾವಾಗಲೋ ಒಮ್ಮೆ ದರ್ಶನ್‌ಗಾಗಿ ಕಥೆಯನ್ನು ಮಾಡಿದೆ. ಅದು ಆಗಲಿಲ್ಲ. ಹಾಗಾಗಿ ನಾನು ಬಿಟ್ಟೇ ಬಿಟ್ಟೆ. ಎಲ್ಲರನ್ನೂ ಪ್ರೀತಿಸಬೇಕು ಅಷ್ಟೇ. ಎಲ್ಲರೊಂದಿಗೆ ಕೆಲಸ ಮಾಡಬೇಕು ಅಂತ ಅಂದುಕೊಳ್ಳಬಾರದು. ನಾನು ನನ್ನ ಯಜಮಾನನ ಜೊತೆಗೇನೆ ಕೆಲಸ ಮಾಡಲಿಲ್ಲ. ನನ್ನ ಯಜಮಾನನ್ನು ಪೂಜಿಸಿದಷ್ಟು ನಾನು ನನ್ನ ತಂದೆಯನ್ನೂ ಪೂಜಿಸಲಿಲ್ಲ. ತಾಯಿಯನ್ನೂ ಪೂಜಿಸಲಿಲ್ಲ. ನನ್ನ ಯಜಮಾನ ನನಗೆ ಜೀವನವನ್ನು ಕೊಟ್ಟರು. ಭದ್ರ ಬುನಾದಿಯನ್ನು ಹಾಕಿಕೊಟ್ಟರು. ನಾನು ಇಲ್ಲಿ ನಿಂತಿರುವುದಕ್ಕೆ ನಮ್ಮ ಯಜಮಾನ ಒಬ್ಬರೇ." ಎಂದು ವಿಷ್ಣುವರ್ಧನ್ ಹಾಗೂ ದರ್ಶನ್ ಅವರ ಬಗ್ಗೆ ಫಿಲ್ಮಿ ಫಸ್ಟ್‌ನಲ್ಲಿ ಮಾತಾಡಿದ್ದಾರೆ.
" ಹೀರೋಗಳು ಒಂದು ಲೆವೆಲ್‌ಗೆ ಬಂದ್ಮೇಲೆ ನಾನು ಅವರು ಹೀರೋಯಿಸಂ ಜೊತೆ ಡೀಲ್ ಮಾಡುವುದಕ್ಕೆ ಆಗುವುದಿಲ್ಲ. ದೂರದಿಂದ ನೋಡಿ ದರ್ಶನ್ ಅವರನ್ನು ಖುಷಿ ಪಡಬೇಕು ಅಷ್ಟೇ. ನನಗೆ ದರ್ಶನ್ ಅವರು ಬೇಬಿಯ ಹಾಗೆ ಅಷ್ಟೇ. ನನಗೆ ಅವರವರ ಮನೆಯಲ್ಲಿ ಎರಡೆರಡು ದಿನ ಇದ್ದು ಬರಬೇಕು ಅನ್ನೋ ಆಸೆ ಅಷ್ಟೇ. ನಾನು ಸುದೀಪ್ ಸರ್ ಜೊತೆ ಮೂರು ಸಿನಿಮಾಗೆ ರೈಟರ್, ಕೋ ಡೈರೆಕ್ಟರ್ ಹಾಗೇ ವೆಲ್‌ವಿಶರ್ ಆಗಿ ಮಾಡಿದ್ದೀನಿ. ನನಗೆ ಅವರಿಗೆ ನಿರ್ದೇಶನ ಮಾಡಬೇಕು ಅಂತ ಅನಿಸಲೇ ಇಲ್ಲ. ಶಿವಣ್ಣನ ಜೊತೆ ಅಳಕ್ ಪುಳಕ್‌ನಲ್ಲಿ ಒಂದು ಸಿನಿಮಾ ಸಿಕ್ತು. ಅದು ಬಿಟ್ಟರೆ, ಮತ್ತೆ ಮಾಡಲಿಲ್ಲ. ಹೀರೊಗಳ ಜೊತೆ ಸಿನಿಮಾ ಮಾಡುವುದು ತುಂಬಾನೇ ಕಷ್ಟ. ಮೆಂಟಲಿ ತುಂಬಾನೇ ಟಾರ್ಚರ್. ಕಷ್ಟ ಆಗುತ್ತೆ. ಹಾಗಾಗಿ ಆಸೆಯೇ ಹುಟ್ಟಿಕೊಳ್ಳಲಿಲ್ಲ." ಎನ್ನುತ್ತಾರೆ ರವಿ ಶ್ರಿವತ್ಸ.


Click it and Unblock the Notifications











