ಸುಮಲತಾ ಬೆಂಬಲಕ್ಕೆ ಬರಲೇ ಇಲ್ಲ ಯಶ್ ಯಾಕೆ? ಈ ಹಿಂದೆ ರಾಕಿ ಭಾಯ್ ಹೇಳಿದ್ದಿದ್ದೇನು?
ಸುಮಲತಾ ರಾಜಕೀಯ ಪ್ರವೇಶ ಸುಲಭದ್ದಾಗಿರಲಿಲ್ಲ ಅನ್ನೋದು ಗೊತ್ತೇ ಇದೆ. ಇಂದು ಕೂಡ ಅವರ ರಾಜಕೀಯ ಹಾದಿ ಅಂದುಕೊಂಡಷ್ಟು ಸುಲಭವಿಲ್ಲ ಅನ್ನೋದು ಅವರು ತೆಗೆದುಕೊಂಡ ನಿರ್ಧಾರವೇ ಹೇಳುತ್ತಿವೆ. ಸುಮಲತಾ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದಲೇ ಬಿಜೆಪಿ ಪಕ್ಷದಿಂದ ಸ್ಪರ್ಧಿಸಬೇಕೆಂಬ ಆಸೆ ಇಟ್ಟುಕೊಂಡಿದ್ದರು. ಆದರೆ, ಆಸೆ ಈಡೇರಿಲ್ಲ.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡ ದಿನದಿಂದ ಸುಮಲತಾಗೆ ಟಿಕೆಟ್ ಸಿಗುವ ಬಗ್ಗೆ ಅನುಮಾನ ಮೂಡಿತ್ತು. ನಿರೀಕ್ಷೆಯಂತೆ ಮಂಡ್ಯದಿಂದ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಸುಮಲತಾ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬಹುದು ಎಂದು ಅನುಮಾನ ಮೂಡಿತ್ತು. ಕಳೆದ ಕೆಲವು ತಿಂಗಳಿಂದ ಇಷ್ಟೆಲ್ಲ ಗೊಂದಲಗಳು ಇದ್ದವು. ಆ ಸಂದರ್ಭದಲ್ಲಿ ಸುಮಲತಾ ಪಕ್ಕದಲ್ಲಿ ಸದಾ ನಿಂತಿದ್ದು ದರ್ಶನ್.

ಕಳೆದ ಲೋಕಸಭೆ ಚುನಾವಣೆಯಲ್ಲಿ ದರ್ಶನ್ ಹಾಗೂ ಯಶ್ ಇಬ್ಬರು ಜೋಡೆತ್ತುಗಳಂತೆ ಸುಮಲತಾ ಬೆಂಬಲಕ್ಕೆ ನಿಂತಿದ್ದರು. ಇಬ್ಬರು ಅಬ್ಬರದ ಪ್ರಚಾರ ಮಾಡಿ ಸ್ವಾಭಿಮಾನದ ಸ್ಪರ್ಧೆಯಲ್ಲಿ ಸುಮಲತಾರನ್ನು ಗೆಲ್ಲಿಸಿದ್ದರು. ಈ ಬಾರಿ ಕೂಡ ಯಶ್ ಬರಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಸುಮಲತಾ ರಾಜಕೀಯ ನಡೆಯಲ್ಲಿ ಯಶ್ ಮಾತ್ರ ಕಾಣಿಸಿಕೊಳ್ಳಲೇ ಇಲ್ಲ. ಅದ್ಯಾಕೆ ಅನ್ನೋ ಗೊಂದಲ ಅಭಿಮಾನಿಗಳಲ್ಲಿ ಇದ್ದೇ ಇದೆ.
ಸರಿ ಸುಮಾರು ಒಂದು ತಿಂಗಳ ಹಿಂದೆ ಬಿಜೆಪಿಯಿಂದ ಮಂಡ್ಯ ಟಿಕೆಟ್ ಬಯಸಿದ್ದ ಸುಮಲತಾ ಚುರುಕಾಗಿದ್ದರು. ಆ ವೇಳೆ ಬೆಂಬಲಿಗರ ಜೊತೆ ಸಭೆ ಸಮಾರಂಭಗಳನ್ನು ನಡೆಸಿದ್ದರು. ಆ ಸಂದರ್ಭದಲ್ಲಿ ಈ ಬಾರಿ ಕೂಡ ಯಶ್ ನಿಮ್ಮ ಪರ ಪ್ರಚಾರ ಮಾಡಲು ಬರುತ್ತಾರಾ? ಎಂದು ಪ್ರಶ್ನೆ ಮಾಡಲಾಗಿತ್ತು. ಸುಮಲತಾಗೆ ಟಿಕೆಟ್ ಸಿಕ್ಕು ಚುನಾವಣೆಗೆ ನಿಂತಿದ್ದರೂ ಯಶ್ ಪ್ರಚಾರದಲ್ಲಿ ಭಾಗಿಯಾಗುವುದಿಲ್ಲ ಅನ್ನುವ ಸುಳಿವನ್ನು ನೀಡಿದ್ದರು.
"ಯಶ್, ದರ್ಶನ್ ಒಂದು ಮೂವಿ ಮಾಡುತ್ತಿರುತ್ತಾರೆ. ಎಷ್ಟು ಜನ ಅವರನ್ನು ಕಾಯ್ಕೊಂಡು ಇರುತ್ತಾರೆ. ಎಷ್ಟು ಜನರ ಜೀವನ ಡಿಪೆಂಡ್ ಆಗಿರುತ್ತೆ ಅನ್ನೋದು ನನಗೂ ಗೊತ್ತು. 10 ರಿಂದ 20 ದಿನಕ್ಕೆ ಸಂಭಾವನೆ ಎಷ್ಟು ಅನ್ನೋದು ಗೊತ್ತೇ ಇದೆ. ಖಂಡಿತಾ ಅವರು ಬರುತ್ತಾರೆ ಅಂದರೆ ಅದು ನನಗೆ ದೊಡ್ಡ ಶಕ್ತಿಯಾಗಿರುತ್ತೆ." ಎಂದು ಅಂದೇ ಸುಮಲತಾ ಹೇಳಿದ್ದರು.

ಕಳೆದ ಚುನಾವಣೆಯಲ್ಲಿ ದರ್ಶನ್ ಜೊತೆ ಯಶ್ ಕೂಡ 20 ರಿಂದ 25 ದಿನಗಳ ಕಾಲ ಪ್ರಚಾರ ಮಾಡಿದ್ದರು. ಅದೆಷ್ಟೇ ಟೀಕೆಗಳು ಎದುರಾಗಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಜೋಡೆತ್ತುಗಳು ಪ್ರಚಾರ ಮಾಡಿ ಗೆಲ್ಲಿಸಿ, ರೆಬೆಲ್ ಸ್ಟಾರ್ ಅಂಬರೀಶ್ ಋಣವನ್ನು ತೀರಿಸಿದ್ದರು. ಆದರೆ, ಈ ಬಾರಿ ಯಶ್ ಮಾತ್ರ ಸುಮಲತಾ ಅಂತ ಅಷ್ಟೇ ಅಲ್ಲ. ಯಾವುದೇ ರಾಜಕೀಯ ಮುಖಂಡರ ಜೊತೆ ಗುರುತಿಸಿಕೊಂಡಿಲ್ಲ. ಯಾವುದೇ ಪಕ್ಷದ ಪರ ಪ್ರಚಾರ ಮಾಡುವ ಬಗ್ಗೆ ಸುಳಿವು ನೀಡಿಲ್ಲ.
ಇತ್ತೀಚೆಗೆ ಪಾನಿಪುರಿ ಕಿಟ್ಟಿ ಹೊಸ ಜಿಮ್ ಉದ್ಘಾಟನೆಯ ವೇಳೆ ಯಶ್ ಭಾಗಿಯಾಗಿದ್ದರು. ಆ ವೇಳೆ ಕೂಡ ಸುಮಲತಾ ಪರ ಪ್ರಚಾರ ಮಾಡುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಆಗ ಯಶ್ "ಸುಮಾರು ದಿನಗಳಿಂದ ನೋಡಿದ್ದೀರ. ನಾನು ಯಾವುದೇ ರಾಜಕೀಯಕ್ಕೂ ಹೋಗುತ್ತಿಲ್ಲ. ನನ್ನ ಗುರಿ ಬೇರೆಯಿದೆ. ನನ್ನ ಕೆಲಸ ಬೇರೆಯಿದೆ. ಆಕಡೆ ಹೋಗುತ್ತಿರುತ್ತೇನೆ. ನಾನು ಎಲ್ಲೂ ಹೋಗಲ್ಲ." ಎಂದು ಸುಮಲತಾ ಪರ ಪ್ರಚಾರಕ್ಕೆ ತೆರೆ ಎಳೆದಿದ್ದರು.
ಅಲ್ಲದೆ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಸೆಟ್ಟೇರಿದ್ದು, ಇದೇ ತಿಂಗಳಿಂದ ಬೆಂಗಳೂರಿನಲ್ಲಿಯೇ ಶೂಟಿಂಗ್ ಆರಂಭ ಆಗುತ್ತಿದೆ. ಅದಕ್ಕಾಗಿ ಬೃಹತ್ ಸೆಟ್‌ಗಳನ್ನು ಹಾಕಲಾಗಿದೆ. ಒಂದ್ಮೇಳೆ ಸುಮಲತಾ ಚುನಾವಣೆಯಲ್ಲಿ ನಿಂತಿದ್ದರೂ, ಯಶ್ ಪ್ರಚಾರದಲ್ಲಿ ಭಾಗಿಯಾಗ ಸಾಧ್ಯತೆ ತೀರಾ ಕಡಿಮೆ ಇತ್ತು ಎಂದು ಹೇಳಬಹುದು.


Click it and Unblock the Notifications











