Darshan Fan: ದರ್ಶನ್ ಫ್ಯಾನ್‌ಗೆ ಕಪಾಳ ಮೋಕ್ಷ;ಪೊಲೀಸರ ಮೇಲೆ ದೂರು ಕೊಡ್ತಾರಾ ಅಭಿಮಾನಿ?
ಇಂದು (ಫೆಬ್ರವರಿ 16) ದರ್ಶನ್ ಅವರ 49ನೇ ಹುಟ್ಟಹಬ್ಬ. ಪ್ರತಿ ಬಾರಿ ಅಭಿಮಾನಿಗಳೊಂದಿಗೆ ಬರ್ತ್‌ಡೇಯನ್ನು ಆಚರಿಸಿಕೊಳ್ಳುತ್ತಿದ್ದ ದರ್ಶನ್ ಈ ಬಾರಿ ಜೈಲಿನಲ್ಲಿ ಆಚರಿಸಿಕೊಳ್ಳಬೇಕಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ದರ್ಶನ್ ಜಾಮೀನು ರದ್ದಾದ ಬಳಿಕ ಮತ್ತೆ ಜೈಲು ಸೇರುವಂತಾಗಿತ್ತು. ಬರ್ತ್‌ಡೇ ಒಳಗೆ ಅವರು ಬಿಡುಗಡೆಯಾಗಬಹುದೆಂದು ಅಭಿಮಾನಿಗಳು ನಿರೀಕ್ಷೆ ಮಾಡಿದ್ದರು. ಆದರೆ, ಅವರ ಆಸೆ ಈಡೇರಲಿಲ್ಲ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿ ಇದ್ದರೂ ಅಭಿಮಾನಿಗಳು ಅವರ ಮನೆ ಮುಂದೆ ಬಂದು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಅವರ ಅನುಪಸ್ಥಿತಿಯಲ್ಲಿ ಮನೆ ಮುಂದೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಕಟ್‌ಔಟ್‌ಗಳನ್ನು ಕಟ್ಟಿದ್ದಾರೆ. ಹಾರ ಹಾಕಿ ಅಭಿಷೇಕವನ್ನು ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಕೂಡ ಅಭಿಮಾನಿಗಳು ಸೇರಿಕೊಂಡು ಸೆಲೆಬ್ರೆಟ್ ಮಾಡಿದ್ದಾರೆ.

ಈ ವೇಳೆ ದರ್ಶನ್ ಅಭಿಮಾನಿ ನವೀನ್ ಎಂಬುವವರು ಕಟ್‌ಔಟ್‌ಗೆ ಹಾರ ಹಾಕುವುದಕ್ಕೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಹಾಗೂ ಅಭಿಮಾನಿ ನಡುವೆ ಜಟಾಪಟಿ ನಡೆದಿತ್ತು. ಈ ಸಂದರ್ಭದಲ್ಲಿ ಕೋಪಗೊಂಡ ಪೊಲೀಸ್ ಅಧಿಕಾರಿಯೊಬ್ಬರು ಅಭಿಮಾನಿ ನವೀನ್ ಕಪಾಳಕ್ಕೆ ಬಾರಿಸಿದ್ದರು. ಈ ಘಟನೆ ಬಳಿಕ ನವೀನ್ ಪೊಲೀಸರೊಂದಿಗೆ ವಾಗ್ವಾದಕ್ಕೆ ಬಿದ್ದಿದ್ದರು. ಕಪಾಳಕ್ಕೆ ಹೊಡೆದಿದ್ದಕ್ಕೆ ಪ್ರಶ್ನೆ ಮಾಡಿದ್ದರು. ಹೀಗಾಗಿ ಪೊಲೀಸರ ವಿರುದ್ಧವೇ ದೂರು ನೀಡುವುದಕ್ಕೆ ಮುಂದಾಗಿದ್ದರೆಂಬ ಸುದ್ದಿ ಹಬ್ಬಿತ್ತು. ಈ ಸಂಬಂಧ ಘಟನೆ ಬಗ್ಗೆ ಪ್ರತಿಕ್ರಿಯಿಸಿರೋ ನವೀನ್, ದೂರು ನೀಡುವ ಬಗ್ಗೆನೂ ಮಾತಾಡಿದ್ದಾರೆ.
ಪ್ರತಿ ವರ್ಷ ದರ್ಶನ್ ಬರ್ತ್‌ಡೇಯನ್ನು ಆಚರಿಸುವ ನವೀನ್ ಈ ಬಾರಿ ಕೂಡ ಅದೇ ರೀತಿ ಸಂಭ್ರಮಿಸಿದ್ದರು. "ಚಿಕ್ಕ ವಯಸ್ಸಿನಿಂದಲೂ ನಾವು ದರ್ಶನ್ ಅಭಿಮಾನಿಗಳೇ. ಪ್ರತಿ ವರ್ಷನೂ ಕೇಕ್ ಕಟ್ ಮಾಡಿಸೋದಾಗಲಿ, ಹೂವು ಹಾಕುವುದಾಗಲಿ ಅಥವಾ ನಮ್ಮ ಕೈಯಲ್ಲಿ ಅನ್ನದಾನ ಆಗಲಿ ಮಾಡಿದ್ದೀವಿ. ಈ ವರ್ಷನೂ ಕೂಡ ರಾತ್ರಿ ಬಂದಿದ್ವಿ. ಈ ಬಾರಿ ಕೂಡ ರಾತ್ರಿ ನನ್ನ ಸ್ವಂತ ಖರ್ಚಿನಲ್ಲಿ ಕೇಕ್ ತಂದು ಕಟ್ ಮಾಡಿದ್ದೀವಿ. ಬಾಸ್ ಒಳಗೆ ಇರಬಹುದು. ಆದರೆ, ಅಭಿಮಾನ ಕಮ್ಮಿಯಾಗಿಲ್ಲ." ಎಂದು ನವೀನ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ ಹುಟ್ಟುಹಬ್ಬವನ್ನು ಆಚರಿಸುವಾಗ ಏನು ನಡೀತು ಅನ್ನೋದನ್ನು ಮಾಧ್ಯಮಗಳಿಗೆ ರಿವೀಲ್ ಮಾಡಿದ್ದಾರೆ. "ಈ ಬಾರಿ ಈ ವ್ಯಕ್ತಿ ಬಂದು ನನಗೆ ರಿಕ್ವೆಸ್ಟ್ ಮಾಡಿಕೊಳ್ಳುತ್ತಾರೆ. ನಾನು ದರ್ಶನ್ ಅವರ ಅಭಿಮಾನಿ ಪ್ರತಿ ವರ್ಷನೂ ಬರ್ತೀನಿ. ಈ ಬಾರಿ ಬಾಸ್ ಕಟ್‌ಔಟ್‌ಗೆ ಹಾರ ಹಾಕಿ ಪೂಜೆ ಮಾಡ್ತೀನಿ ಅಂತ ಕೇಳಿಕೊಳ್ಳುತ್ತಾರೆ. ಆಯ್ತು ಬನ್ನಿ ಅಂತ ಕರೆದುಕೊಂಡು ಹೋಗುತ್ತೇನೆ. ಅಲ್ಲೊಬ್ಬರು ಸಿಂಗಲ್ ಸ್ಟಾರ್ ಇರುತ್ತಾರೆ. ಅವರ ಹತ್ತಿರ ರಿಕ್ವೆಸ್ಟ್ ಮಾಡಿಕೊಳ್ಳುತ್ತೇವೆ. ಒಂದೇ ಒಂದು ಹಾರ ಹಾಕುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತೇವೆ. ಆಗ ಅವರು ಡಿಸಿಪಿ ಆರ್ಡರ್ ಇಲ್ಲದೆ ಬಿಡುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾರೆ. ನಾವು ಜಾಸ್ತಿ ಜನ ಇಲ್ಲ. ಇಬ್ಬರೇ ಇರೋದು. ರಿಕ್ವೆಸ್ಟ್ ಮಾಡಿಕೊಳ್ಳುತ್ತಿದ್ದೇವೆ ಅಂದ್ವಿ. ಏಕಾಏಕಿ ಬಂದು ಮೂರು-ನಾಲ್ಕು ಬಾರಿ ಕೆನ್ನೆಗೆ ಹೊಡೆಯುತ್ತಾರೆ." ಎಂದು ಘಟನೆಯನ್ನು ವಿವರಿಸಿದ್ದಾರೆ.
ಹಾಗೇ "ಯಾರ ಹತ್ತಿರನೂ ಕೆಟ್ಟದಾಗಿ ಮಾತಾಡಿಲ್ಲ. ಯಾರಿಗೂ ಮುಟ್ಟೂ ಇಲ್ಲ. ಯಾಕಂದ್ರೆ, ಆನ್ ಡ್ಯೂಟಿಯಲ್ಲಿರುವ ಆಫೀಸರ್ ಅನ್ನು ಮುಟ್ಟುವುದು ತಪ್ಪು ಅಂತ ನಮಗೂ ಗೊತ್ತಿದೆ. ನಾವು ಕೇಳಿಕೊಂಡರೂ ಬಿಟ್ಟಿಲ್ಲ. ತುಂಬಾನೇ ಹೊಡೀತಾರೆ. ಆನಂತರ ಬಂದು ಆರ್‌ಆರ್ ನಗರ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಹರೀಶ್ ಅವರು ಬಂದು ನಮಗೆ ಅವಕಾಶ ಮಾಡಿಕೊಡುತ್ತಾರೆ. ಹೂವಿನ ಹಾರ ಹಾಕುತ್ತೇವೆ. ಪೂಜೆ ಮಾಡುತ್ತೇವೆ. ನಮ್ಮಷ್ಟಕ್ಕೆ ನಾವು ಬರುತ್ತೇವೆ. ಏಕಾಏಕಿ ಬಂದು ಹಲ್ಲೆ ಮಾಡಿದ್ದು ತಪ್ಪು." ಎಂದು ಹೇಳಿಕೊಂಡಿದ್ದಾರೆ.
ಇದೇ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿರುವ ದರ್ಶನ್ ಅಭಿಮಾನಿ ನವೀನ್ ದೂರು ಕೊಡುತ್ತಾರೆಂಬ ಸುದ್ದಿ ಹಬ್ಬಿತ್ತು. ಆದರೆ, ದರ್ಶನ್‌ಗೆ ಕೆಟ್ಟ ಹೆಸರು ಬರುತ್ತೆ ಅನ್ನೋ ಕಾರಣಕ್ಕೆ ದೂರು ನೀಡದೆ ಇರುವುದಕ್ಕೆ ನಿರ್ಧರಿಸಿದ್ದಾರೆ. "ದೂರನ್ನು ಕೊಡಬಹುದು. ಆದರೆ, ಅದು ವರ್ಷಾನುಗಟ್ಟನೆ ನಡೆಯುತ್ತೆ. ಇದರಿಂದ ದರ್ಶನ್ ಅವರಿಗೆ ಕೆಟ್ಟ ಹೆಸರು ಬರುತ್ತೆ. ಈ ಕಾರಣಕ್ಕೆ ನಾನು ದೂರನ್ನು ನೀಡುತ್ತಿಲ್ಲ" ಎಂದು ಅಭಿಮಾನಿ ನವೀನ್ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ.


Click it and Unblock the Notifications











