ದರ್ಶನ್‌ಗೆ 6 ವಾರ ಮಧ್ಯಂತರ ಜಾಮೀನು; ಪವಿತ್ರಾ ಗೌಡಗೆ ಪರಪ್ಪನ ಅಗ್ರಹಾರ ಜೈಲೇ ಗತಿನಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಕೊನೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಕಳೆದ ಹಲವು ದಿನಗಳಿಂದ ಜಾಮೀನಿಗಾಗಿ ಎದುರು ನೋಡುತ್ತಿದ್ದ ದರ್ಶನ್ ಕೊನೆಗೂ ತಾತ್ಕಾಲಿಕ ರಿಲೀಫ್ ಸಿಕ್ಕಂತೆ ಆಗಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ. ಈ ಬೆನ್ನಲ್ಲೇ ದರ್ಶನ್ ಇಂದು (ಅಕ್ಟೋಬರ್ 30) ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದರು. ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ಸುಮಾರು 131 ದಿನಗಳ ಕಾಲ ಇದ್ದ ದರ್ಶನ್ ನಿಟ್ಟುಸಿರು ಬಿಟ್ಟಿದ್ದಾರೆ. ದಾಸ ಏನೋ ಹೊರಬಂದಿದ್ದೇನೋ ಆಯ್ತು. ಪವಿತ್ರಾ ಗೌಡ ಕಥೆಯೇನು? ಅವರಿಗೂ ಜಾಮೀನು ಸಿಗುತ್ತಾ? ಜಾಮೀನು ಸಿಗುವುದು ಅಷ್ಟು ಸುಲಭವೇ? ಇಂತಹದ್ದೊಂದು ಪ್ರಶ್ನೆ ಎದುರಾಗಿದೆ.

ದರ್ಶನ್ ಅನಾರೋಗ್ಯ ಕಾರಣ ನೀಡಿ ಹೈಕೋರ್ಟ್‌ನಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದರೆ, ಪವಿತ್ರಾ ಗೌಡ ಜಾಮೀನು ಪಡೆಯುವುದಕ್ಕೆ ಯಾವ ಕಾರಣ ಕೊಡುತ್ತಾರೆ? ಸದ್ಯ ಅವರ ಜಾಮೀನು ಅರ್ಜಿ ಯಾವ ಹಂತದಲ್ಲಿದೆ? ದರ್ಶನ್ ಹಿಂದೆನೇ ಪವಿತ್ರಾ ಗೌಡಗೂ ಜಾಮೀನು ಸಿಕ್ಕಿಬಿಡುತ್ತಾ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ದರ್ಶನ್ ಬಳ್ಳಾರಿ ಜೈಲಿಗೆ ಹೋಗುತ್ತಿದ್ದಂತೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಾ ಹೋಗಿತ್ತು. ಬಳ್ಳಾರಿ ಜೈಲಿನಲ್ಲಿಯೇ ದರ್ಶನ್‌ಗೆ ಚಿಕಿತ್ಸೆ ಕೊಡಿಸಲಾಗಿತ್ತು. ವಿಮ್ಸ್ ಆಸ್ಪತ್ರೆ ವೈದ್ಯರು ಜೈಲಿಗೆ ಬಂದು ಫಿಸಿಯೋಥೆರಪಿ ಮಾಡಿದ್ದರು. ಆದರೂ, ನೋವು ಹೆಚ್ಚಾಗಿತ್ತು. ಹೀಗಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಎಂಆರ್‌ಐ ಹಾಗೂ ಸಿಟಿ ಸ್ಕ್ಯಾನಿಂಗ್ ಕೂಡ ಮಾಡಿಸಲಾಗಿತ್ತು. ಆ ಬಳಿಕ ಸಮಸ್ಯೆಯಿರುವುದು ಪತ್ತೆಯಾಗಿತ್ತು.
ಇದೇ ಕಾರಣವನ್ನು ಇಟ್ಟುಕೊಂಡು ದರ್ಶನ್ ಪರ ವಕೀಲರು ಹೈಕೋರ್ಟ್‌ನ ನ್ಯಾಯಾಧೀಶರ ಮುಂದೆ ವಾದವನ್ನು ಮಂಡಿಸಿದ್ದರು. ಆರೋಗ್ಯದ ದೃಷ್ಠಿಯನ್ನು ಗಮನದಲ್ಲಿ ಇಟ್ಟುಕೊಂಡು ಮಧ್ಯಂತರ ಜಾಮೀನನ್ನು ನೀಡಲಾಗಿದೆ. ಆದರೆ, ಪವಿತ್ರಾ ಗೌಡ ಕಥೆಯೇನು? ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲನೇ ಆರೋಪಿಯಾಗಿರುವ ಪವಿತ್ರಾ ಗೌಡ ಜಾಮೀನು ಸಿಗುತ್ತಾ? ಜಾಮೀನು ಸಿಗೋದು ಅಷ್ಟು ಸುಲಭನಾ? ಅನ್ನೋ ಪ್ರಶ್ನೆ ಎದುರಾಗಿದೆ.
ದರ್ಶನ್‌ಗಿಂತ ಮುನ್ನವೇ ಪವಿತ್ರಾ ಗೌಡ ಜಾಮೀನಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಅವರ ಜಾಮೀನು ಅರ್ಜಿ ವಜಾ ಆಗಿತ್ತು. ಈಗ ಪವಿತ್ರಾ ಗೌಡ ಅರ್ಜಿ ಹೈಕೋರ್ಟ್‌ನಲ್ಲಿದ್ದು, ನವೆಂಬರ್ 7ಕ್ಕೆ ವಿಚಾರಣೆ ಕೈಗೆತ್ತಿಗೊಳ್ಳಲಿದ್ದಾರೆ. ಹಾಗೇ ಪೊಲೀಸರ ಬಳಿ ಜಾಮೀನು ನಿರಾಕರಣೆಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆಯನ್ನೂ ನೀಡಲಾಗಿದೆ. ಹೀಗಾಗಿ ಪವಿತ್ರಾ ಗೌಡ ಭವಿಷ್ಯ ಕೂಡ ನವೆಂಬರ್ 7ರಂದು ನಿರ್ಧಾರ ಆಗಲಿದೆ.
ಈ ಹಿಂದೆ ಪವಿತ್ರಾ ಗೌಡ ಅರ್ಜಿ ವಜಾ ಆಗಿದ್ದಕ್ಕೆ ಹಲವು ಕಾರಣಗಳಿವೆ. ಪವಿತ್ರಾ ಗೌಡ ವಿರುದ್ಧ ಸಿಕ್ಕಿರುವ ಸಾಕ್ಷ್ಯಗಳು ಪ್ರಮುಖ ಪಾತ್ರ ವಹಿಸಿದ್ದವು. ಅಲ್ಲದೇ ರೇಣುಕಾಸ್ವಾಮಿ ಹತ್ಯೆಗೆ ಪ್ರಕರಣದಲ್ಲಿ ಪ್ರಚೋದನೆ ನೀಡಿದವರಲ್ಲಿ ಇವರೇ ಪ್ರಮುಖ ಸ್ಥಾನದಲ್ಲಿದ್ದಾರೆ. ಅಲ್ಲದೆ ತಾಂತ್ರಿಕ ಸಾಕ್ಷಿಗಳು ಕೂಡ ಅವರ ಪರವಾಗಿಯೇ ಇರುವುದರಿಂದ ಜಾಮೀನನ್ನು ನಿರಾಕರಣೆ ಮಾಡಲಾಗಿತ್ತು. ಏನಕ್ಕೂ ನವೆಂಬರ್ 7ರಂದು ತೆರೆಬೀಳಲಿದೆ.


Click it and Unblock the Notifications











