ಬಾಕ್ಸ್ ಆಫೀಸಲ್ಲಿ ಪುನೀತ್ ಗೆ ಯಾರು ಸಾಟಿಯಿಲ್ಲ
ಯಾರೇ ಕೂಗಾಡಲಿ ಊರೇ ಹೋರಾಡಲಿ ಎಮ್ಮೆ ನಿನಗೆ ಸಾಟಿ ಇಲ್ಲ ಎಂದು ಅಣ್ಣಾವ್ರು 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ ಹಾಡಿ ನಲಿದಿದ್ದರು. ಈಗ ಪುನೀತ್ ರಾಜ್ ಕುಮಾರ್ ಅವರೂ ಅಷ್ಟೇ. ಬಾಕ್ಸ್ ಆಫೀಸಲ್ಲಿ ನನಗೆ ಯಾರು ಸಾಟಿ ಇಲ್ಲ... ನನಗೆ ನಾನೇ ಸಾಟಿ ಎಂದು ಹಾಡುವಂತಾಗಿದೆ.
ಸಮುದ್ರ ಖಣಿ ನಿರ್ದೇಶನದ ಯಾರೇ ಕೂಗಾಡಲಿ ಚಿತ್ರ ಯಶಸ್ವಿ ಮೂರನೇ ವಾರದತ್ತ ಮುನ್ನುಗ್ಗಿದೆ. ಬಿಡುಗಡೆಯಾಗಿರುವ ಎಲ್ಲಾ ಚಿತ್ರಮಂದಿರಗಳಲ್ಲಿ ಸ್ವಲ್ಪವೂ ಶೇಖ್ ಆಗದಂತೆ ಸ್ಥಿರವಾಗಿ ಅಂಟಿಕೊಂಡಿದೆ ಈ ಚಿತ್ರ. ತಮಿಳಿನ ಯಶಸ್ವಿ 'ಪೊರಾಲಿ' ಚಿತ್ರದ ರೀಮೇಕ್ ಆದರೂ ಅಪ್ಪು ಅಭಿಮಾನಿಗಳನ್ನು ಚಿತ್ರ ನಿರಾಸೆಗೊಳಿಸಿಲ್ಲ. [ಯಾರೇ ಕೂಗಾಡಲಿ ಚಿತ್ರ ವಿಮರ್ಶೆ]
ಮೈಸೂರಿನಲ್ಲೂ 'ಯಾರೇ ಕೂಗಾಡಲಿ' ಚಿತ್ರ ಅಬ್ಬರಿಸಿದೆ. ಮೈಸೂರಿನ ಸಂಗಮ್, ಲಕ್ಷ್ಮಿ, ಸತ್ಯಂ, ಡಿಆರ್ ಸಿ ಹಾಗೂ ಮಾದೇಶ್ವರ ಚಿತ್ರಮಂದಿರಗಳಲ್ಲಿ ಕ್ರಮವಾಗಿ ರು. 11.1, ರು.10.4, ರು.11, ರು.10.5 ಹಾಗೂ ರು.4.0 ಲಕ್ಷಗಳನ್ನು ಗಳಿಸಿದೆ. ಮೈಸೂರಿನಲ್ಲಿ ಒಟ್ಟಾರೆ ಮೊದಲ ವಾರದ ಗಳಿಕೆ ರು. 46 ಲಕ್ಷ.ಇನ್ನು ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ಮೊದಲ ವಾರ ರು.10,37,000 ಗಳಿಸಿದೆ. ವಿನಾಯಕ ಚಿತ್ರಮಂದಿರದಲ್ಲಿ ರು.4.15 ಲಕ್ಷ ಗಳಿಸಿದೆ. ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ ರು.16 ಕೋಟಿ ಗಳಿಸಿದೆ 'ಯಾರೇ ಕೂಗಾಡಲಿ'.
ಸರಿಸುಮಾರು ರು.9.8 ಕೋಟಿ ಬಜೆಟ್ ನಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿರುವ ಈ ಚಿತ್ರ ಈಗಾಗಲೆ ಅದರ ದುಪ್ಪಟ್ಟು ಹಣವನ್ನು ಗಳಿಸಿದೆ ಎನ್ನುತ್ತವೆ ಮೂಲಗಳು. ಪುನೀತ್ ರಾಜ್ ಕುಮಾರ್, ಭಾವನಾ, ಯೋಗೀಶ್, ಸಿಂಧು ಲೋಕನಾಥ್, ನಿವೇದಿತಾ, ರವಿಶಂಕರ್, ಮಾಳವಿಕಾ, ಗಿರೀಶ್ ಕಾರ್ನಾಡ್ ಮುಂತಾದವರು ತಾರಾಬಳಗದಲ್ಲಿದ್ದಾರೆ. (ಏಜೆನ್ಸೀಸ್)


Click it and Unblock the Notifications












