20 ವರ್ಷದ ಹಿಂದೆ ವಿಷ್ಣುವರ್ಧನ್ ಮನೆಗೆ ಅಣ್ಣಾವ್ರು ಹೊರಟಿದ್ದಾಗ, ನಡೆದಿದ್ದೇನು!
ಡಾ.ವಿಷ್ಣುವರ್ಧನ್ ವೃತ್ತಿ ಜೀವನದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು 'ಯಜಮಾನ'. ಇಸವಿ 2000ರಲ್ಲಿ ಬಿಡುಗಡೆಯಾದ ಈ ಸಿನಿಮಾವನ್ನು ಆರ್. ಶೇಷಾದ್ರಿ ಮತ್ತು ರಾಧಾ ಭಾರತಿ ನಿರ್ದೇಶಿಸಿದ್ದರು.
Recommended Video
ತಮಿಳಿನಲ್ಲಿ ಭಾರೀ ಸದ್ದುಮಾಡಿದ ವಿಕ್ರಮನ್ ನಿರ್ದೇಶನದ, ವಿಜಯಕಾಂತ್ ಪ್ರಮುಖ ಭೂಮಿಕೆಯಲ್ಲಿದ್ದ 'ವಾನತೈಪೋಲಾ' ಸಿನಿಮಾದ ರಿಮೇಕ್ ಸಿನಿಮಾ ಯಜಮಾನ ಚಿತ್ರದ ನಿರ್ಮಾಪಕರು ಕೆ.ಮುಸ್ತಫಾ ಮತ್ತು ಮೆಹರುನ್ನೀಸಾ ರೆಹಮಾನ್.
ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾದ ಯಶಸ್ಸು ಕನ್ನಡ ಚಿತ್ರೋದ್ಯಮದ ದಿಕ್ಕನ್ನೇ ಬದಲಿಸಿತ್ತು. ಎ,ಬಿ,ಸಿ ಎಲ್ಲಾ ಸೆಂಟರ್ ಗಳಲ್ಲಿ ನಿರ್ಮಾಪಕರ ಜೋಳಿಗೆಯನ್ನು ಭರ್ಜರಿಯಾಗಿ ತುಂಬಿಸಿದ ಸಿನಿಮಾ ಇದಾಗಿತ್ತು.
ಚಿತ್ರದ ನಿರ್ಮಾಪಕರಾದ ರೆಹಮಾನ್ ಸಿನಿಮಾದ ಕೆಲವೊಂದು ಅಪರೂಪದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಬ್ಲ್ಯಾಕ್ ಟಿಕೆಟ್ ಮಾರಿಕೊಂಡು ಮನೆ ಮಾಡಿದವರು, ಅಣ್ಣಾವ್ರ ಈ ಸಿನಿಮಾವನ್ನು ನೋಡಿದ್ದು, ಮುಂತಾದ ವಿಚಾರಗಳನ್ನು ರೆಹಮಾನ್ ಹೇಳಿದ್ದಾರೆ. ಅತ್ಯಂತ ಕುತೂಹಲಕಾರಿ ವಿಷಯ ಮುಂದಿದೆ:

ವಿಜಯಕಾಂತ್ ಅಭಿನಯದ ವಾನತೈಪೋಲಾ
ಯುಗಾದಿ ಸಿನಿಮಾವನ್ನು ಮಾಡೋಣವೆಂದು ನಾನು ಮತ್ತು ನಿರ್ದೇಶಕರಾದ ಶೇಷಾದ್ರಿ ನಿರ್ಧರಿಸಿದ್ದೆವು. ಚಿತ್ರಕ್ಕೆ ಖುಷ್ಬೂ ಅವರನ್ನು ನಾಯಕಿಯನ್ನಾಗಿ ಮಾಡಲು, ರವಿ ಶ್ರೀವತ್ಸ ಅವರ ಜೊತೆ ಮಾತುಕತೆಗೆ ಚೆನ್ನೈಗೆ ಹೋಗಿದ್ದೆವು. ಅವರು ಕಥೆ ಕೇಳಿ, ಎರಡು ದಿನ ಬಿಟ್ಟು ಬನ್ನಿ ಎಂದು ಹೇಳಿದ್ದರು. ಮತ್ತೆ ಬೆಂಗಳೂರಿಗೆ ಹೋಗಿ ಬರುವುದು ಏನಕ್ಕೆ ಎಂದು ಚೆನ್ನೈನಲ್ಲೇ ಉಳಿದುಕೊಂಡೆವು. ಆ ವೇಳೆ, ವಿಜಯಕಾಂತ್ ಅಭಿನಯದ ವಾನತೈಪೋಲಾ ಚಿತ್ರ ಬಿಡುಗಡೆಯಾಗಿತ್ತು.

ಕುಮಾರಸ್ವಾಮಿ ಖಾಲಿ ಚೆಕ್ ನೀಡಿ, ಚಿತ್ರದ ರೈಟ್ಸ್ ಗೆ ಪ್ರಯತ್ನಿಸಿದ್ದರು
ಆ ಚಿತ್ರವನ್ನು ನಾನು, ರವಿ ಶ್ರೀವತ್ಸ ಇಬ್ಬರೂ ಮೊದಲ ಶೋ ನೋಡಿದೆವು. ಚಿತ್ರ, ತಮಿಳಿಗಿಂತ ಕನ್ನಡಕ್ಕೆ ಸೂಟ್ ಆಗುತ್ತೆ ಎಂದು ಮಧ್ಯಾಹ್ನದ ಹೊತ್ತಿಗೆ ಆಸ್ಕರ್ ಫಿಲಂಸ್ ಕಚೇರಿಗೆ ಹೋಗಿ, ಚಿತ್ರದ ರೈಟ್ಸ್ ನಮಗೇ ಕೊಡಬೇಕು, ಬ್ಲ್ಯಾಂಕ್ ಚೆಕ್ ಕೊಡುತ್ತೇನೆ ಎಂದು ಹೇಳಿದೆ. ಎರಡ್ಮೂರು ವಾರಗಳ ಸಮಯವನ್ನು ತೆಗೆದುಕೊಂಡು, ಚಿತ್ರದ ರೈಟ್ಸ್ ಅನ್ನು ನಮಗೆ ಕೊಟ್ಟರು. ಅಷ್ಟೊತ್ತಿಗೆ ನಮ್ಮ ಗಾಂಧಿನಗರದಿಂದ ಹಲವು ನಿರ್ಮಾಪಕರು ಚಿತ್ರದ ರೈಟ್ಸ್ ಗೆ ಚೆನ್ನೈಗೆ ಬಂದು ಹೋಗಿದ್ದರು. ಎಚ್.ಡಿ.ಕುಮಾರಸ್ವಾಮಿ ಖಾಲಿ ಚೆಕ್ ನೀಡಿ, ಚಿತ್ರದ ರೈಟ್ಸ್ ಗೆ ಪ್ರಯತ್ನಿಸಿದ್ದರು.

ವಿಷ್ಣು ಸರ್ ಮನೆಗೆ ಹೋಗಿ ಅವರ ಕಾಲ್ಶೀಟ್ ತೆಗೆದುಕೊಂಡೆವು
ಹನ್ನೊಂದು ಲಕ್ಷಕ್ಕೆ ಚಿತ್ರದ ರೈಟ್ಸ್ ಪಡೆದುಕೊಂಡ ನಂತರ ವಿಷ್ಣು ಸರ್ ಮನೆಗೆ ಹೋಗಿ ಅವರ ಕಾಲ್ಶೀಟ್ ತೆಗೆದುಕೊಂಡೆವು. ಆರ್ಟಿಸ್ಟ್ ಗಳನ್ನು ಫೈನಲ್ ಮಾಡಿ, ಚಿಕ್ಕಮಗಳೂರು ಪಕ್ಕ ಆಲ್ದೂರಿನಲ್ಲಿ ಸೆಟ್ ಹಾಕಿದೆವು. ಎಲ್ಲಾ ಚಿತ್ರೀಕರಣ ನಡೆಸಿ, ಎರಡು ಹಾಡನ್ನು ನೇಪಾಳದಲ್ಲಿ ಚಿತ್ರೀಕರಿಸಲು ಅಲ್ಲಿಗೆ ಹೋದೆವು. ಒಂದು ಹಾಡಿನ ಶೂಟಿಂಗ್ ಮುಗಿಯುತ್ತಿದ್ದಾಗ, ಬೆಂಗಳೂರಿನಿಂದ ಫೋನ್ ಬಂತು, ಅಣ್ಣಾವ್ರು ಕಿಡ್ನಾಪ್ ಆದರು ಎಂದು. ಅಲ್ಲಿಂದ ವಾಪಸ್ ಬಂದೆವು.

ಅಣ್ಣಾವ್ರು ಬಿಡುಗಡೆಯಾದ ಸುದ್ದಿ ಬಂತು
ನೂರು ದಿನದ ನಂತರ ಬಾಕಿ ಉಳಿದ ಸಿನಿಮಾದ ಶೂಟಿಂಗ್ ಅನ್ನು ಚೆನ್ನೈ ಬೀಚ್ ನಲ್ಲಿ ಮುಗಿಸಿ, ಕುಂಬಳಕಾಯಿ ಹೊಡೆದಾಗ, ಅಣ್ಣಾವ್ರು ಬಿಡುಗಡೆಯಾದ ಸುದ್ದಿ ಬಂತು. ಚಿತ್ರದ ಆಡಿಯೋ ರೈಟ್ಸ್ ಆನಂದ್ ಆಡಿಯೋದವರು ಒಂಬತ್ತು ಲಕ್ಷಕ್ಕೆ ತೆಗೆದುಕೊಂಡರು. ಯಜಮಾನ ಸಿನಿಮಾದ ಆಡಿಯೋ, ಆ ಸಮಯದಲ್ಲಿ ಎಂಟು ಕೋಟಿ ಕಲೆಕ್ಷನ್ ಮಾಡಿತ್ತು. ಚಿತ್ರವನ್ನು ಎಲ್ಲಾ ಡಿಸ್ಟ್ರಿಬ್ಯೂಟರ್ ಗಳಿಗೆ ಮಾರಿದ್ದೆ. ಮೈನ್ ಥಿಯೇಟರ್ ಅಪರ್ಣ ಮತ್ತು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಯಿತು.

ಬಾದಾಮಿ ಹೌಸ್
ಉಡುಪಿ, ಕೋಲಾರ, ಚಳ್ಲಕೆರೆಯಲ್ಲೂ ಚಿತ್ರ ದಾಖಲೆ ಮಾಡಿತು. ಆ ವೇಳೆ ನನಗೆ ಅಣ್ಣಾವ್ರ ಮನೆಯಿಂದ ಫೋನ್ ಬಂತು. ನಿಮ್ಮ ಸಿನಿಮಾ ನೋಡಬೇಕೆಂದು ಆಸೆಯಾಗಿದೆ, ಸಿನಿಮಾ ತೋರಿಸುತ್ತೀರಾ ಎಂದು ಕೇಳಿದರು. ಅಣ್ಣಾ ನೀವು ನನ್ನ ಸಿನಿಮಾ ನೋಡೋದೆ ಭಾಗ್ಯ ಎಂದು ಬಾದಾಮಿ ಹೌಸ್ ನಲ್ಲಿ ಸಿನಿಮಾ ಅರೇಂಜ್ ಮಾಡಿದೆವು. ನಾನು ಅವರ ಕುಟುಂಬದ ಐದಾರು ಜನ ಸಿನಿಮಾ ನೋಡುತ್ತಾರೆ ಎಂದು ಅಂದುಕೊಂಡಿದ್ದೆ.

ರಾಜ್ ನೋಡಿ ವರದಣ್ಣ ಅಳುವುದು, ವರದಣ್ಣನ ನೋಡಿ ಅಣ್ಣಾವ್ರು ಅಳೋದು
ರಾಜಣ್ಣನ ಮನೆಯಲ್ಲಿ ಊಟ ಮಾಡಿ, ಅಣ್ಣಾವ್ರಿಗೆ ಸಿನಿಮಾ ತೋರಿಸಲು ಕರೆದುಕೊಂಡು ಹೋದೆ. ಇಡೀ ಬಾದಾಮಿ ಹೌಸ್ ಫುಲ್ ಆಗಿತ್ತು. ಇಡೀ ಅಣ್ಣಾವ್ರ ಕುಟುಂಬ ಸಿನಿಮಾ ನೋಡಲು ಬಂದಿತ್ತು. ಇಂಟರ್ವಲ್ ವರೆಗೆ ನಾನು ಅಣ್ಣಾವ್ರ ಕಡೆಯೇ ನೋಡುತ್ತಿದ್ದೆ. ರಾಜ್ ಕುಮಾರ್ ನೋಡಿ ವರದಣ್ಣ ಅಳುವುದು, ವರದಣ್ಣನ ನೋಡಿ ಅಣ್ಣಾವ್ರು ಅಳೋದು ನಡೆಯುತ್ತಿತ್ತು. ಸಿನಿಮಾ ಮುಗಿದ ಮೇಲೆ, ಅಣ್ಣಾವ್ರು ಹಾಗೇ ಕಣ್ಮುಚ್ಚಿ ಕೂತು ನಂತರ ನನ್ನ ಕರೆದರು.

ವಿಷ್ಣುವರ್ಧನ್ ತುಂಬಾ ಚೆನ್ನಾಗಿ ನಟಿಸಿದ್ದಾರೆ
ಅಣ್ಣಾವ್ರು ನನ್ನ ಬೆನ್ನು ತಟ್ಟಿ ಕನ್ನಡ ಚಿತ್ರರಂಗಕ್ಕೆ ಅದ್ಭುತ ಸಿನಿಮಾವನ್ನು ನೀಡಿದ್ದೀರಿ. ವಿಷ್ಣುವರ್ಧನ್ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಒಂದು ವೇಳೆ, ವಿಷ್ಣು ಪಾತ್ರವನ್ನು ನಾನು ಮಾಡಿದರೂ, ಇಷ್ಟು ಚೆನ್ನಾಗಿ ಮಾಡುತ್ತಿರಲಿಲ್ಲ. ವಿಷ್ಣು ಮನೆಗೆ ನಡೀರಿ ಹೋಗೋಣ, ಅವರಿಗೆ ಅಭಿನಂದಿಸೋಣ ಎಂದು ಅಣ್ಣಾವ್ರು ಹೇಳಿದರು.

ದೇವರು ನನ್ನ ಮನೆಗೆ ಬರಬಾರದು, ದೇವಸ್ಥಾನಕ್ಕೆ ನಾವು ಹೋಗಬೇಕು
ನಾನು ಕೂಡಲೇ ವಿಷ್ಣು ಅಣ್ಣನಿಗೆ ಫೋನ್ ಮಾಡಿ, ಅಣ್ಣಾವ್ರು ನಿಮ್ಮ ಮನೆಗೆ ಬರಬೇಕು ಎಂದು ಹೇಳುತ್ತಿದ್ದಾರೆ. ಆಗ ವಿಷ್ಣು ಸರ್, ನಾನು ಶ್ರೀರಂಗಪಟ್ಟಣದಲ್ಲಿ ಇದ್ದೇನೆ. ಅವರಿಗೆ ಫೋನ್ ಕೊಡು ಎಂದರು. ದೇವರು ನನ್ನ ಮನೆಗೆ ಬರಬಾರದು, ದೇವಸ್ಥಾನಕ್ಕೆ ನಾವು ಹೋಗಬೇಕು ಎಂದು ವಿಷ್ಣು ಸರ್, ವಿನಮ್ರತೆಯಿಂದ ಅಣ್ಣಾವ್ರಿಗೆ ಹೇಳಿದರು. ಅಂತಹ ಇಬ್ಬರು ಮಹಾನ್ ಕಲಾವಿದರು ನನ್ನ ಸಿನಿಮಾದ ಬಗ್ಗೆ ಮಾತನಾಡಿದು ನನ್ನ ಭಾಗ್ಯ ಎಂದು ನಿರ್ಮಾಪಕ ರೆಹಮಾನ್, ಇಪ್ಪತ್ತು ವರ್ಷದ ಹಿಂದಿನ ಘಟನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ.


Click it and Unblock the Notifications











