"ಬಾಂಬೆಗೆ ಬರುತ್ತೀರಿ. ನನ್ನನ್ನು ಭೇಟಿ ಮಾಡದೆ ಹೋಗುತ್ತೀರಿ": ಯಶ್‌ಗೆ ಮರಾಠ ಮಂದಿರ ಮಾಲೀಕನ ಬೇಡಿಕೆ!
ರಾಕಿಂಗ್ ಸ್ಟಾರ್ ಯಶ್ ಕೊನೆಗೂ ತಮ್ಮ 19ನೇ ಸಿನಿಮಾದ ಅಪ್‌ಡೇಟ್ ಹೊತ್ತು ಬರುತ್ತಿದ್ದಾರೆ. ಇಷ್ಟು ಅಭಿಮಾನಿಗಳು ಈ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಕಾದೂ ಕಾದು ಸುಸ್ತಾಗಿದ್ದರು. ಈ ವರ್ಷ ಕೂಡ ಯಶ್ 19ನೇ ಸಿನಿಮಾ ಅನೌನ್ಸ್ ಆಗೋದಿಲ್ಲವೇನೋ ಅಂದುಕೊಂಡಿದ್ದರು. ಅದಕ್ಕೆಲ್ಲ ತೆರೆ ಬೀಳುವ ಹೊತ್ತು ಬಂದಿದೆ.
ಯಶ್ ತಮ್ಮ 19ನೇ ಸಿನಿಮಾ ಟೈಟಲ್ ಅನ್ನು ನಾಳೆ (ಡಿಸೆಂಬರ್ 8) ಅನೌನ್ಸ್ ಮಾಡುತ್ತಿದ್ದಾರೆ. ಆ ಟೈಟಲ್ ಏನು ಅಂತ ನೋಡುವುದಕ್ಕೆ ರಾಕಿಂಗ್ ಫ್ಯಾನ್ಸ್ ಕಾದು ಕೂತಿದ್ದಾರೆ. ಕೇವಲ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗವೇ ಈ ಟೈಟಲ್‌ಗಾಗಿ ಎದುರು ನೋಡುತ್ತಿದೆ.

ಈ ಮಧ್ಯೆ ಮುಂಬೈನ ಐಕಾನಿಕ್ ಮರಾಠ ಮಂದಿರ್ ಹಾಗೂ ಗೈಟಿ ಗ್ಯಾಲಕ್ಸಿ ಚಿತ್ರಮಂದಿರದ ಮಾಲೀಕ ಮನೋಜ್ ದೇಸಾಯಿ ರಾಕಿಂಗ್ ಸ್ಟಾರ್ ಯಶ್‌ರನ್ನು ಭೇಟಿ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಾಂಬೆ ಬರುತ್ತೀರಾ ನನ್ನನ್ನು ಭೇಟಿ ಮಾಡದೇ ಹೋಗುತ್ತೀರ ಎಂದು ಹೇಳಿಕೊಂಡಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಮಾತನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಮರಾಠ ಮಂದಿರ್ ಹಾಗೂ ಗೈಟಿ ಗ್ಯಾಲಕ್ಸಿ ಐಕಾನಿಕ್ ಸಿನಿಮಾಗಳನ್ನು ಪ್ರದರ್ಶನ ಮಾಡಿವೆ. ಇದೇ ಮರಾಠ ಮಂದಿರ್ ಚಿತ್ರಮಂದಿರದಲ್ಲಿ ಶಾರುಖ್ ಖಾನ್ ಸಿನಿಮಾ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ' (DDLJ) 27 ವರ್ಷ ನಿರಂತರ ಪ್ರದರ್ಶನ ಕಂಡಿತ್ತು. ಇದೇ ಚಿತ್ರಮಂದಿರಲ್ಲಿ ಯಶ್ 'ಕೆಜಿಎಫ್' ಸೀರಿಸ್ ಅನ್ನು ಪ್ರದರ್ಶನ ಮಾಡಲಾಗಿತ್ತು.
'ಯಶ್ 19' ಸಿನಿಮಾ ಟೈಟಲ್ ಅನೌನ್ಸ್ ಆಗುತ್ತಿರುವ ಈ ಬೆನ್ನಲ್ಲೇ ಕೆಜಿಎಫ್ ಬಗ್ಗೆ ಪ್ರದರ್ಶನದ ಬಗ್ಗೆ ಮಾತಾಡಿದ್ದಾರೆ. "ಕೆಜಿಎಫ್ ಸಿನಿಮಾವನ್ನು ತುಂಬಾ ಒಳ್ಳೆ ರೀತಿಯಲ್ಲಿ ಪ್ರದರ್ಶನ ಮಾಡಿದ್ದೆವು. ಯಶ್‌ಗೆ ಶುಭಾಶಯವನ್ನು ಹೇಳುತ್ತೇನೆ. ಯಶ್ 19ನೇ ಸಿನಿಮಾಗೆ ಟೈಟಲ್ ಅನೌನ್ಸ್‌ಮೆಂಟ್ ಆಗುತ್ತಿದೆ." ಎಂದು ಥಿಯೇಟರ್ ಮಾಲೀಕ ಮನೋಜ್ ದೇಸಾಯಿ ಹೇಳಿದ್ದಾರೆ.

ಇದೇ ಯೂಟ್ಯೂಬ್ ಸಂದರ್ಶನದಲ್ಲಿ ಬೇಡಿಕೆಯೊಂದನ್ನು ಇಟ್ಟಿದ್ದಾರೆ. "ಯಶ್ ನಿಮ್ಮೊಂದಿಗೆ ನನ್ನದೊಂದು ಬೇಡಿಕೆಯಿದೆ. ನಾನು ನಿಮ್ಮೊಂದಿಗೆ ಮಾತಾಡಿದ್ದೇನೆ. ಅವತ್ತು ಹೇಳಿದ್ದೆ. ಇವತ್ತೂ ಮತ್ತೆ ಹೇಳುತ್ತೇನೆ. ಇಡೀ ವಿಶ್ವ ಗೈಟಿ ಗೆಲಕ್ಸಿಗೆ ಬಂದಿದೆ. ಆದರೆ, ನೀವು ಇದೂವರೆಗೂ ಬಂದಿಲ್ಲ. ಈ ಸಿನಿಮಾ ಗೈಟಿ ಗೆಲಕ್ಸಿಗೆ ಬರಲಿ. ಆ ಸಂದರ್ಭದಲ್ಲಿ ನೀವು ನಮ್ಮ ಚಿತ್ರಮಂದಿರಕ್ಕೆ ಬನ್ನಿ." ಎಂದು ಯಶ್‌ಗೆ ಬೇಡಿಕೆ ಇಟ್ಟಿದ್ದಾರೆ.
"ನೀವು ನನ್ನ ಭೇಟಿ ಮಾಡಲಿ ಅಂತ ಉತ್ಸಾಹದಿಂದ ಕಾಯುತ್ತಿದ್ದೇನೆ. ನಿಮ್ಮೊಂದಿಗೆ ಮಾತಾಡಿ ಖುಷಿಯಾಗಿದೆ. ಆದರೆ, ನಿಮ್ಮನ್ನು ಭೇಟಿ ಮಾಡುವುದಕ್ಕೆ ತುಂಬಾ ಮುಖ್ಯವೆನಿಸಿದೆ. ಬಾಂಬೆಗೆ ಬರುತ್ತೀರಿ. ನನ್ನನ್ನು ಭೇಟಿ ಮಾಡದೆ ಹೋಗುತ್ತೀರಿ. ನಾನು ದೊಡ್ಡ ವ್ಯಕ್ತಿ ಅಲ್ಲ. ಆದರೆ, ಕೆಲವು ಮೌಲ್ಯಗಳನ್ನು ಇಟ್ಟಿಕೊಂಡಿದ್ದೇನೆ. ದಯವಿಟ್ಟು ಬಂದು ನನ್ನನ್ನು ಭೇಟಿ ಮಾಡಿ. ಇಬ್ಬರೂ ಸೇರಿ ಒಂದು ಕಪ್ ಕಾಫಿ ಕುಡಿಯೋಣ." ಎಂದು ಮನವಿ ಮಾಡಿಕೊಂಡಿದ್ದು, ಯಶ್ ಯಾವಾಗ ಭೇಟಿಯಾಗುತ್ತಾರೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











