'ಕೆಜಿಎಫ್ 2' ಬಿಡುಗಡೆ ದಿನವೇ ಕೇರಳದಲ್ಲಿ 'ಕೆಜಿಎಫ್ 1' ರೀ-ರಿಲೀಸ್: ಹೆಂಗೈತೆ ಕ್ರೇಜ್?
ಸದ್ದಿಲ್ಲದೆ 'ಕೆಜಿಎಫ್ ಚಾಪ್ಟರ್ 2' ಬಿಡುಗಡೆ ಸಜ್ಜಾಗುತ್ತಿದೆ. ದೇಶದ ಉದ್ದಗಲಕ್ಕೂ 'ಕೆಜಿಎಫ್ 2' ಸಿನಿಮಾವನ್ನು ಮೊದಲ ದಿನವೇ ನೋಡಲು ಕಾತರರಾಗಿದ್ದಾರೆ. ಕರ್ನಾಟಕದಲ್ಲಿ 'ಕೆಜಿಎಫ್ 2' ಕ್ರೇಜ್ ಸಹಜ. ಆದರೆ, ಪಕ್ಕದ ಕೇರಳದಲ್ಲಿ ಈಗಾಗಲೇ 'ಕೆಜಿಎಫ್ 2' ಸಿನಿಮಾ ತೋರಿಸುವುದಕ್ಕೆ ವೇದಿಕೆ ಸಜ್ಜಾಗಿದೆ. ಕೇರಳದ ಮೂಲೆ ಮೂಲೆಯಲ್ಲಿರುವ ಯಶ್ ಅಭಿಮಾನಿಗಳು ಈ ಸಿನಿಮಾ ಬಿಡುಗಡೆ ದಿನ ಏನೆಲ್ಲಾ ತಯಾರಿಗಳನ್ನು ಮಾಡಿಕೊಳ್ಳಬೇಕೋ ಅದನ್ನೆಲ್ಲಾ ಮಾಡಿಕೊಳ್ಳುತ್ತಿದ್ದಾರೆ.
'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನು ಉಡೀಸ್ ಮಾಡುವುದು ಪಕ್ಕಾ. ಕೆಜಿಎಫ್ ಚಾಪ್ಟರ್ 1 ದಾಖಲೆಯನ್ನೇ 'ಕೆಜಿಎಫ್ 2' ಬಹುತೇಕ ಉಡೀಸ್ ಮಾಡುತ್ತೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಈ ಮಧ್ಯೆ ಬೇರೆ ಬೇರೆ ರಾಜ್ಯಗಳಲ್ಲಿ 'ಕೆಜಿಎಫ್ 2' ಬಗ್ಗೆ ದಿನದಿಂದ ದಿನಕ್ಕೆ ಕ್ರೇಜ್ ಹೆಚ್ಚಾಗುತ್ತಲೇ ಇದೆ. ಇದೀಗ ಕೇರಳದ ಯಶ್ ಅಭಿಮಾನಿಗಳು 'ಕೆಜಿಎಫ್ 2' ರಿಲೀಸ್ ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಆ ಪಟ್ಟಿ ಇಲ್ಲಿದೆ ನೋಡಿ.

'ಕೆಜಿಎಫ್ ಚಾಪ್ಟರ್ 1' ರಿ-ರಿಲೀಸ್
'ಕೆಜಿಎಫ್ 2' ಏಪ್ರಿಲ್ 14ರಂದು ವಿಶ್ವದಾದ್ಯಂತ ಏಕಕಾಲಕ್ಕೆ ಎಲ್ಲಾ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಆದರೆ, ಕೇರಳದ ಅಲೆಪ್ಪಿಯಲ್ಲಿರುವ ಯಶ್ ಅಭಿಮಾನಿಗಳು ಬೆಳಗ್ಗೆ 4 ಗಂಟೆಯಿಂದಲೇ ಕೆಜಿಎಫ್ ಸಂಭ್ರಮಕ್ಕೆ ಸಜ್ಜಾಗಿದ್ದಾರೆ. ಬೆಳಗ್ಗೆ 4 ಗಂಟೆಗೆ 'ಕೆಜಿಎಫ್ ಚಾಪ್ಟರ್ 1' ಮರುಬಿಡುಗಡೆಯಾಗಲಿದೆ. ಕೆಜಿಎಫ್ ಚಾಪ್ಟರ್ 1 ನೋಡಿದ ಬಳಿಕವೇ 'ಕೆಜಿಎಫ್ 2' ಸಿನಿಮಾ ನೋಡಲು ನಿರ್ಧರಿಸಿದ್ದಾರೆ. ಹೀಗಾಗಿ ಬೆಳಗ್ಗೆ 8 ಗಂಟೆಗೆ 'ಕೆಜಿಎಫ್ 2' ರಿಲೀಸ್ ಆಗಲಿದೆ.

ಪ್ರತಿ ಶೋ ಒಂದು ವರ್ಗಕ್ಕೆ ಮೀಸಲು
'ಕೆಜಿಎಫ್ 2' ರಿಲೀಸ್ ದಿನ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 2.30ರ ಶೋ ಅನ್ನು ಅಭಿಮಾನಿಗಳಿಗಾಗಿ ಮೀಸಲಿರಿಸಿದ್ದಾರೆ. ಹಾಗೇ ಮತ್ತೊಂದು ಮೂರು ಗಂಟೆ ಪ್ರದರ್ಶನವನ್ನು ಮಾನಸಿಕವಾಗಿ ಹಾಗೂ ದೈಹಿಕ ವಿಶೇಷ ಚೇತನರಿಗಾಗಿ ಈ ಶೋವನ್ನು ಮೀಸಲಿರಿಸಿದೆ. ಹೀಗೆ ಒಂದೊಂದು ಶೋವನ್ನು ಒಬ್ಬೊಬ್ಬರಿಗೆ ಮೀಸಲು ಇರಿಸಲಾಗಿದೆ. ಇದು ಆರಂಭದ ದಿನಗಳ ಲೆಕ್ಕಚಾರ ಅಷ್ಟೇ. ಬಿಡುಗಡೆ ದಿನ ಸನಿಹವಾಗುತ್ತಿದ್ದಂತೆ ಮತ್ತಷ್ಟು ಹೊಸ ಹೊಸ ಕಾರ್ಯಕ್ರಮಗಳನ್ನು ಅನೌನ್ಸ್ ಆಗಬಹುದು.

ಪೃಥ್ವಿರಾಜ್‌ರಿಂದ 'ಕೆಜಿಎಫ್ 2' ವಿತರಣೆ
ಕಳೆದ ವರ್ಷವೇ 'ಕೆಜಿಎಫ್ 2' ಚಿತ್ರವನ್ನು ಕೇರಳದಲ್ಲಿ ವಿತರಣೆ ಮಾಡುವ ಹಕ್ಕನ್ನು ಪೃಥ್ವಿರಾಜ್ ಸುಕುಮಾರನ್ ಪಡೆದಿದ್ದರು. 'ಕೆಜಿಎಫ್ 2' ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಹೊಂಬಾಳೆ ಫಿಲಂಸ್ ಸಜ್ಜಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದೆ. ಈ ಕಾರಣಕ್ಕೆ ದೊಡ್ಡ ಪ್ರೊಡಕ್ಷನ್ ಹೌಸ್‌ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಲ್ಲಿ ಕೇರಳದಲ್ಲಿ ಪೃಥ್ವಿರಾಜ್ ಕಪೂರ್ ಜೊತೆ ಕೈ ಜೋಡಿಸಿದೆ.

ಪೃಥ್ವಿರಾಜ್‌ರಿಂದ ಕೆಜಿಎಫ್ 2 ವೀಕ್ಷಣೆ
ಕೆಲವು ದಿನಗಳ ಹಿಂದೆ ಪೃಥ್ವಿರಾಜ್ ಕಪೂರ್ 'ಕೆಜಿಎಫ್ 2' ಸಿನಿಮಾವನ್ನು ವೀಕ್ಷಿಸಿದ್ದಾರೆ. ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರ್ ಈ ಸಿನಿಮಾವನ್ನು ವಿತರಕ ಪೃಥ್ವಿರಾಜ್ ಸುಕುಮಾರನ್‌ಗೆ ಸಿನಿಮಾ ತೋರಿಸಿದ್ದರು. ಈ ಸಿನಿಮಾ ನೋಡಿದ ಬಳಿಕ 'ಕೆಜಿಎಫ್ 2' ಅದ್ಭುತ ಎಂಬಂತೆ ಪ್ರತಿಕ್ರಿಯಿಸಿದ್ದಾರೆ. ಪ್ರಶಾಂತ್ ನೀಲ್ ಈ ಸಿನಿಮಾ ಮೂಲಕ ಹೊಸ ಸ್ಟ್ಯಾಂಡರ್ಡ್ ಅನ್ನು ತಂದಿದ್ದಾರೆ ಎಂದು ಸುಕುಮಾರನ್ ಹೇಳಿದ್ದರು. ಹೀಗಾಗಿ 'ಕೆಜಿಎಫ್ 2' ಬಗ್ಗೆ ಮತ್ತಷ್ಟು ಕ್ರೇಜ್ ಹೆಚ್ಚಿದೆ.


Click it and Unblock the Notifications











