ಸುದೀಪ್, ದರ್ಶನ್, ಧ್ರುವ, ಗಣೇಶ್ ಅಭಿಮಾನಿಗಳು ಸಿನಿಮಾ ನೋಡ್ಲೇಬೇಕು; ನಮ್ಗೆ ಯಶ್ ಆಸ್ತಿ ಆಗ್ತಾನೋ ಇಲ್ಲವೋ ಫ್ಯಾನ್ಸ್ ಆಸ್ತಿ
ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಇಳಿದಿರೋದು ಈಗ ಹೊಸ ವಿಷಯವಲ್ಲ. ಅವರು ನಿರ್ಮಿಸಿದ ಚೊಚ್ಚಲ ಸಿನಿಮಾ 'ಕೊತ್ತಲವಾಡಿ' ಈಗಾಗಲೇ ರೆಡಿಯಾಗಿದ್ದು ರಿಲೀಸ್‌ಗೆ ರೆಡಿಯಾಗಿದೆ. ಕಳೆದ ಕೆಲವು ದಿನಗಳಿಂದ ರಾಕಿ ಭಾಯ್‌ಯ ಅಮ್ಮನ ಸಂದರ್ಶನ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಛಲಕ್ಕೆ ಕೆಲವರು ಮೆಚ್ಚುಗೆ ಸೂಚಿಸಿದ್ದಾರೆ. ಮತ್ತೆ ಕೆಲವರು ಸಿನಿಮಾ ನಿರ್ಮಾಣ ಬೇಕಿರಲಿಲ್ಲ ಎಂದು ಹೇಳಿದ್ದೂ ಇದೆ.
ಸುಮಾರು ಎರಡೂ ವರ್ಷಗಳಿಂದ ತೆರೆಮರೆಯಲ್ಲಿ 'ಕೊತ್ತಲವಾಡಿ' ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದರು. ಆದರೆ, ಈ ವಿಷಯ ಯಾರಿಗೂ ಗೊತ್ತಿರಲಿಲ್ಲ. ಚಿಕ್ಕದೊಂದು ಸುಳಿವನ್ನೂ ಬಿಡದೆ ಸಿನಿಮಾವನ್ನು ನಿರ್ಮಾಣ ಮಾಡಿ ಮುಗಿಸಿದ್ದರು. ಇನ್ನು ಅಮ್ಮನ ಸಿನಿಮಾ ಪ್ರಚಾರಕ್ಕೆ ಯಶ್ ಅಖಾಡಕ್ಕೆ ಇಳಿಯಬಹುದೆಂಬ ನಿರೀಕ್ಷೆಯಿತ್ತು. ಆದರೆ, ಪುಷ್ಪ ಅರುಣ್ ಕುಮಾರ್ ತಮ್ಮ ಮಗ ಯಶ್ ಹೆಸರನ್ನು ಎಲ್ಲೂ ಬಳಸುವುದಕ್ಕೆ ಇಚ್ಛೆ ಪಡುತ್ತಿಲ್ಲ.

ಯಶ್ ಹೆಸರು ಬಳಸಿಕೊಳ್ಳದೆ ಸಿನಿಮಾವನ್ನು ರಿಲೀಸ್ ಮಾಡಬೇಕು ಅನ್ನೋ ಹಠ. ಆದರೆ, ಇದು ಜನರಿಗೆ ಬೇರೆ ರೀತಿಯ ಸಂದೇಶ ರವಾನೆಯಾಗುತ್ತಿದೆ. ಅಮ್ಮ ಮಗನ ನಡುವೆ ಮನಸ್ತಾಪವಿದೆ. ಅದಕ್ಕೆ ಯಶ್ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ ಎನ್ನುವ ಕಮೆಂಟ್‌ಗಳು ಬರುತ್ತಿವೆ. ಈ ಮಧ್ಯೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್, ದರ್ಶನ್, ಧ್ರುವ, ಗಣೇಶ್, ಉಪೇಂದ್ರ ಅಭಿಮಾನಿಗಳು 'ಕೊತ್ತಲವಾಡಿ' ಸಿನಿಮಾ ನೋಡ್ಬೇಕು. ಯಶ್ ನಮಗೆ ಆಸ್ತಿ ಆಗ್ತಾನೋ ಇಲ್ವೋ? ಅಭಿಮಾನಿಗಳೇ ನಮಗೆ ಆಸ್ತಿ ಎಂದು ಹೇಳಿಕೊಟ್ಟಿದ್ದಾರೆ.
ಮುಂದೆ ಓದಿ
ಅಮ್ಮ ಸಿನಿಮಾ ಮಾಡಿದರೆ ಯಶ್‌ಗೆ ಡಿಸ್ಟರ್ಬ್ ಆಗುತ್ತಾ?
ಯಶ್ ಇದ್ದಾನೆ ಅನ್ನೋದನ್ನು ಬಿಟ್ಟು ಕೆಲಸ ಮಾಡ್ಬೇಕು ಎಂದಿದ್ದೇಕೆ?
ಯಶ್ ಆಸ್ತಿ ಆಗುತ್ತಾನೋ ಇಲ್ಲವೋ ಫ್ಯಾನ್ಸ್ ಆಸ್ತಿ ಎಂದು ಹೇಳಿದ್ದೇಕೆ?
ಅಮ್ಮನಿಗೆ ಸಿನಿಮಾ ಮೇಕಿಂಗ್ ಬಗ್ಗೆ ಯಶ್ ಹೇಳಿಕೊಟ್ಟಿದ್ದು ಏನು?
ಯಶ್ ಅಮ್ಮ ಪುಷ್ಪ ಅರುಣ್ ಕುಮಾರ್ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದರಿಂದ ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದರು. ಅದಕ್ಕೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಿರುಗೇಟು ಕೊಟ್ಟಿದ್ದಾರೆ.
"ಈಗಲೇ ಜನ ಎಷ್ಟೊಂದು ಮಾತಾಡುತ್ತಾರೆ. ಮಗ ದುಡಿಯುತ್ತಿದ್ದ. ಅಮ್ಮನಿಗೆ ಬೇಕಿತ್ತಾ? ಅಂತೆಲ್ಲ ಮಾತಾಡುತ್ತಾರೆ. ನಾವು ಕೆಲಸ ಮಾಡಿದ್ದೀವಿ. ಧೈರ್ಯವಾಗಿ ಕೂತಿದ್ದೀವಿ. ಜನರು ತೆಗೆದುಕೊಳ್ಳುವುದು, ಬಿಡುವುದು ಅವರು ನಮಗೆ ಕೊಡುವ ಗಿಫ್ಟ್. ಸಿನಿಮಾ ಮಾಡುವುದಕ್ಕೆ ಸುದ್ದಿ ಮಾಡಿದರೆ, ಇವರು ಯಾಕೆ ಸಿನಿಮಾ ಮಾಡುತ್ತಿದ್ದಾರೆ? ಇವರಿಗೆ ಮೇಕಿಂಗ್ ಗೊತ್ತಾ? ಇಂತಹದ್ದೆಲ್ಲ ಪ್ರಶ್ನೆಗಳು ಬರುತ್ತವೆ. ಇದು ಯಶ್‌ಗೆ ಎಲ್ಲೋ ಒಂದು ಕಡೆ ಡಿಸ್ಟರ್ಬ್ ಆಗುತ್ತೆ. ಈಗ ಅದು ಆಗುತ್ತಿದೆ. ಆದ್ರೀಗ ಮುಂದಿನ ತಿಂಗಳು ಸಿನಿಮಾ ರಿಲೀಸ್ ಮಾಡುತ್ತೇವೆ. ಇದನ್ನು ಬಿಡುತ್ತೇವೆ. ಮುಂದಿನ ಕೆಲಸ ಶುರು ಮಾಡುತ್ತೇವೆ. ಈ ಸಿನಿಮಾ ಶುರುವಾಗಿ ಎರಡು ಎರಡೂವರೆ ವರ್ಷ ಆಗಿದೆ. ಯಶ್ ತುಂಬಾ ದೊಡ್ಡ ಸ್ಥಾನದಲ್ಲಿ ಇದ್ದಾನೆ. ಅವನಿಂದಲೇ ನಾವು ಈ ಸಿನಿಮಾದ ಪಬ್ಲಿಸಿಟಿಯನ್ನು ಜಾಸ್ತಿ ಮಾಡುವುದಕ್ಕೆ ಹೋಗಿಲ್ಲ." ಎಂದು ಯಶ್ ಅಮ್ಮ ಹೇಳಿದ್ದಾರೆ.
"ಅವರವರ ಶಂಖ ಅವರವರೇ ಊದ್ಬೇಕು"
"ನಿಮ್ಮ ಪತ್ನಿಗೆ ರಾಗಿ ಮುದ್ದೆ ಮಾಡುವುದಕ್ಕೆ ಬರಲ್ಲ ಅಂದ್ಕೊಳ್ಳಿ. ಇವತ್ತು ನಾನು ಹೇಳಿಕೊಡುತ್ತೇನೆ. ಅವರು ಕಲಿತುಕೊಳ್ಳಬೇಕು. ನಾನೇ ದಿನ ಹೋಗಿ ಮುದ್ದೆ ಮಾಡಿಕೊಡುವುದಕ್ಕೆ ಆಗುತ್ತಾ? ಇವರು ಹೇಳಿಕೊಟ್ಟಿದ್ದನ್ನು ನಾನು ಕಲಿತಿದ್ದೇನೆ. ಮುಂದಿನ ಸಿನಿಮಾಗೂ ಮಾಡುತ್ತೇನೆ. ಒಂದು ದಿನ ಯಶ್ ಬರುತ್ತಾನೆ. ಎರಡು ದಿನ ಯಶ್ ಬರುತ್ತಾನೆ. ಮೂರು ದಿನ ಬರುತ್ತಾನೆ. ನಾನು ಕಲಿಯಲೇ ಇಲ್ಲಾ ಅಂದರೆ ಹೇಗೆ? ಯಶ್ ಇದ್ದಾನೆ ಅನ್ನೋದನ್ನು ಬಿಟ್ಟು ಕೆಲಸ ಮಾಡಬೇಕು. ನಮ್ಮ ಮನೆಯಲ್ಲಿ ಅದನ್ನು ಕಲಿಸಿದ್ದೇವೆ. ಯಾರೂ ಯಾರಿಗೂ ಡಿಪೆಂಡ್ ಆಗಬಾರದು. ಅವರವರ ಶಂಖ ಅವರವರೇ ಊದಿಕೊಳ್ಳಬೇಕು." ಎನ್ನುತ್ತಾರೆ ಪುಷ್ಪ ಅರುಣ್ ಕುಮಾರ್.
ಯಶ್ ಆಸ್ತಿ ಆಗುತ್ತಾನೋ ಇಲ್ಲವೋ ಫ್ಯಾನ್ಸ್ ಆಸ್ತಿ
ಯಶ್‌ರಿಂದ ತಮ್ಮ ಸಿನಿಮಾ ಪ್ರಚಾರ ಮಾಡಿಸದೇ ಹೋದರೂ, ಅಭಿಮಾನಿಗಳು ನೋಡಲೇಬೇಕು ಎಂದು ಹೇಳಿದ್ದರು. ಇಷ್ಟೇ ಕನ್ನಡದ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಬಂದು ಸಿನಿಮಾ ನೋಡ್ಬೇಕು ಎಂದು ಮನವಿ ಮಾಡಿದ್ದಾರೆ. "ಇದೆಲ್ಲವನ್ನು ಬಿಟ್ಟರೆ ಯಶ್ ಫ್ಯಾನ್ಸ್ ಬಂದು ಸಿನಿಮಾ ನೋಡಲೇಬೇಕು. ಸುದೀಪ್, ದರ್ಶನ್, ನಮ್ ಧ್ರುವ ಸರ್ಜ, ಗಣೇಶ್, ಉಪೇಂದ್ರ ಅವರ ಅಭಿಮಾನಿಗಳು ಬರಬೇಕು. ಅವರು ಬರಲಿಲ್ಲ ಅಂದರೆ, ನಾವು ಮನೆಗೆ ಬಾಗಿಲು ಹಾಕಿಕೊಂಡು ಹೋಗೋದೇ. ಅವರೇ ನಮ್ಮ ಆಸ್ತಿ. ನಮಗೆ ಯಶ್ ಆಸ್ತಿ ಆಗುತ್ತಾನೋ ಇಲ್ಲವೋ ಅಭಿಮಾನಿಗಳಂತೂ ಆಸ್ತಿ ನಮಗೆ." ಎಂದಿದ್ದಾರೆ.
ಇದೇ ಸಂದರ್ಶನದಲ್ಲಿ ಸಿನಿಮಾ ತಂಡದ ಶ್ರಮವನ್ನು ಹಾಡಿ ಹೊಗಳಿದ್ದಾರೆ. "ಸಿನಿಮಾ ಏನು ಕೇಳುತ್ತೋ ಅದನ್ನು ಕೊಡಲೇಬೇಕು. ಅದು ನಮ್ಮ ಬಾಸ್ ಹೇಳಿಕೊಟ್ಟಿದ್ದು. ನಮ್ಮ ಹೀರೋ. ಅವರು ಸಿನಿಮಾಗೋಸ್ಕರ ಎಷ್ಟು ಕಷ್ಟ ಪಡುತ್ತಾರೆ ಗೊತ್ತಾ? ದಿನ ಬೆಳಗ್ಗೆ ರಾತ್ರಿ ನಿದ್ದೆ ಮಾಡುವುದಿಲ್ಲ. ಅವನಿಗೆ ಆ ಛಲ ಇರೋದು. ಅದಕ್ಕೆ ಅವನು ಗೆದ್ದಿರೋದು. ನನಗೆ ಗೊತ್ತಿರೋದು ಹೇಳ್ತೀನಿ. ಅದನ್ನು ಮಾಡುವುದಕ್ಕೆ ಹುಡುಗರು ರೆಡಿ ಇದ್ದಾರೆ. ಒಳ್ಳೆಯ ಲೈಟ್ ಹಾಕಿ ಅವರ ಮನೆ ಮದುವೆ ಮಾಡುತ್ತಿಲ್ವಲ್ಲ. ನಮ್ಮ ಸಿನಿಮಾ ಮಾಡುತ್ತಿದ್ದಾರೆ." ಎಂದು ಬೆನ್ನು ತಟ್ಟಿದ್ದಾರೆ.


Click it and Unblock the Notifications











