ಜೂನಿಯರ್‌ಗೆ ನಾಮಕರಣ ಯಾವಾಗ?: ಮಗನಿಗೆ ಹೆಸರಿಡುವ ಬಗ್ಗೆ ಯಶ್ ಹೇಳಿದ್ದೇನು?
ಯಶ್-ರಾಧಿಕಾ ಪಂಡಿತ್ ಜೋಡಿಯ ಎರಡನೆಯ ಮಗು ಹೇಗಿದೆ? ಅಭಿಮಾನಿಗಳ ಕುತೂಹಲವನ್ನು ಆರು ತಿಂಗಳ ಬಳಿಕ ಇತ್ತೀಚೆಗೆ ತಣಿಸಿದ್ದರು. ಅಕ್ಟೋಬರ್‌ನಲ್ಲಿ ಜನಿಸಿದ ಮುದ್ದಾದ ಮಗನಿಗೆ ಆರು ತಿಂಗಳು ತುಂಬಿದ ಸಂದರ್ಭದಲ್ಲಿ ಅದರ ಫೋಟೊವನ್ನು ಬಹಿರಂಗಪಡಿಸಿದ್ದರು. ಜತೆಗೆ ಐರಾ ಹಾಗೂ ಮಗನ ಜತೆಗಿನ ಚೆಂದದ ಸಂಸಾರದ ಚಿತ್ರ ಹಂಚಿಕೊಂಡಿದ್ದರು. ಈ ಫೋಟೊಗಳು ಈಗ ವೈರಲ್ ಆಗಿದೆ.
Recommended Video
ಚಿತ್ರೀಕರಣದಲ್ಲಿ ಬಿಜಿಯಾಗಿರುತ್ತಿದ್ದ ಯಶ್ ಅವರಿಗೆ ಲಾಕ್ ಡೌನ್ ಅವಧಿಯಲ್ಲಿ ಮಕ್ಕಳ ಜತೆಗೆ ಕಾಲಕಳೆಯಲು ಅವಕಾಶ ಸಿಕ್ಕಿದೆ. ಅವರ ಜತೆಗಿನ ಒಡನಾಟ ಕೂಡ ಹೆಚ್ಚಿದೆ. ಮಗಳು ಐರಾ ಜತೆಗಿನ ಕೆಲವು ವಿಡಿಯೋಗಳನ್ನು ಯಶ್ ಮತ್ತು ರಾಧಿಕಾ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಪೋಸ್ಟ್ ಮಾಡುತ್ತಿದ್ದರು. ಯಶ್‌ಗೆ ಐರಾ ಊಟ ಮಾಡಿಸುವ ವಿಡಿಯೋ ಅಭಿಮಾನಿಗಳ ಮೆಚ್ಚುಗೆ ಗಳಿಸಿತ್ತು. ಮಕ್ಕಳ ಜತೆಗೆ ಕಾಲ ಕಳೆಯುತ್ತಿರುವುದರ ಬಗ್ಗೆ ಯಶ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಮುಂದೆ ಓದಿ...

ದಿನ ನಿತ್ಯ ಊಟ ಮಾಡಿಸುತ್ತಾಳೆ
'ಇದು ಅದ್ಭುತ ಘಟ್ಟ. ಮಕ್ಕಳು ತುಂಬಾ ಖುಷಿಯನ್ನು ನೀಡುವುದಷ್ಟೇ ಅಲ್ಲ, ನನಗೆ ವಿಭಿನ್ನ ಬದುಕನ್ನೂ ನೀಡುತ್ತಿವೆ. ಈ ಸಮಯವನ್ನು ಅವರೊಂದಿಗೆ ಬಹಳ ಸಂತೋಷದಿಂದ ಕಳೆಯುತ್ತಿದ್ದೇನೆ. ಎಲ್ಲಕ್ಕಿಂತ ನನಗೆ ಊಟ ಮಾಡಿಸುವುದನ್ನು ಐರಾ ತನ್ನ ದೈನಂದಿನ ಕೆಲಸವನ್ನಾಗಿಸಿಕೊಂಡಿದ್ದಾಳೆ. ಆಕೆ ನನಗೆ ಅಮ್ಮನಾಗಿಬಿಟ್ಟಿದ್ದಾಳೆ. ಹೆಣ್ಣುಮಕ್ಕಳು ಯಾವಾಗಲೂ ಹಾಗೆಯೇ' ಎಂದಿದ್ದಾರೆ ಯಶ್.

ದಿನವಿಡೀ ಓಡುತ್ತಿರುತ್ತಾಳೆ
'ದಿನವಿಡೀ ಆಕೆ ಓಡುತ್ತಲೇ ಇರುತ್ತಾಳೆ. ಲಾಕ್ ಡೌನ್ ಕಾರಣದಿಂದಾಗಿ ನಾವು ಎಲ್ಲಿಗೂ ಹೊರಗೆ ಹೋಗುತ್ತಿಲ್ಲ. ಯಾರೂ ಮನೆಯಿಂದ ಹೊರಗೆ ಹೋಗುತ್ತಿಲ್ಲ ಎಂಬುದನ್ನು ಅವಳೂ ಗ್ರಹಿಸಿದ್ದಾಳೆ. ಹೀಗಾಗಿ ಯಾರಾದರೂ ಹೊರಗೆ ಹೋಗುವ ಸಮಯ ಬಂದಾಗ ಅಥವಾ ಯಾರಾದರೂ ಗೇಟ್ ತೆಗೆದಾಗ ಆಕೆ ಹೊರಗೆ ಓಡಿ ಕುಣಿಯಲು ಸಿದ್ಧಳಾಗುತ್ತಾಳೆ' ಎಂದಿದ್ದಾರೆ.

ಮಗಳಿಗಾಗಿ ವಾಕಿಂಗ್ ಹೋಗುತ್ತೇವೆ
'ಅಂತಹ ಸಂದರ್ಭದಲ್ಲಿ ಆಕೆ ತನ್ನ ಶೂಗಳನ್ನು ಸಹ ಸಿದ್ಧಮಾಡಿಕೊಂಡುಬಿಡುತ್ತಾಳೆ. ಆಕೆಯ ಉತ್ಸಾಹ ಕಂಡು ನಾವು ಹೊಸ ದಿನಚರಿಯನ್ನು ಪ್ರಾರಂಭಿಸಿದ್ದೇವೆ. ನಾವೇ ಆಕೆಯನ್ನು ದಿನವೂ ಒಂದು ಸುತ್ತು ವಾಕ್‌ಗೆ ಕರೆದುಕೊಂಡು ಹೋಗುತ್ತೇವೆ. ಅದು ಆಕೆಯ ಖುಷಿಯನ್ನು ಹೆಚ್ಚಿಸುತ್ತದೆ' ಎಂದು ತಿಳಿಸಿದ್ದಾರೆ.

ಅವನ ಜತೆಯೇ ಮಲಗಬೇಕು
'ಮಗ ಬಹಳ ಬೇಡಿಕೆಗಳನ್ನು ಮಾಡುತ್ತಾನೆ. ಅದನ್ನು ನಾನು ಮಾಡದ ಹೊರತು ಅವನು ಮಲಗುವುದಿಲ್ಲ. ನಾನು ಮತ್ತು ರಾಧಿಕಾ ಇಬ್ಬರೂ ಅವನ ಜತೆಗೇ ಮಲಗಬೇಕು. ಒಂದು ವೇಳೆ ಅವರು ಮಲಗುವ ಸಮಯಕ್ಕಿಂತ ತಡವಾದರೂ ನಾವು ಮಲಗುವವರೆಗೂ ಅವರು ಎಚ್ಚರವಾಗಿಯೇ ಇರುತ್ತಾನೆ. ಅಷ್ಟೇ ಅಲ್ಲ. ಮಧ್ಯರಾತ್ರಿ ಎದ್ದು, ತನಗೆ ಬೇಕಾದಾಗೆಲ್ಲ ಜೋರಾಗಿ ಸದ್ದು ಮಾಡುತ್ತಾನೆ' ಎಂದು ಮಗನ ಆಟದ ಬಗ್ಗೆ ಹೇಳಿದ್ದಾರೆ.

ಸದ್ಯಕ್ಕೆ ನಾಮಕರಣವಿಲ್ಲ
ಜೂನಿಯರ್ ಯಶ್‌ಗೆ ಹೆಸರು ಇಡುವುದು ಯಾವಾಗ? ಏನೆಂದು ಹೆಸರಿಡುತ್ತೀರಿ? ಹೀಗೆಂದು ಸಾವಿರಾರು ಮೆಸೇಜ್‌ಗಳು ಇಬ್ಬರಿಗೂ ಬಂದಿದೆ. 'ಸಾಮಾನ್ಯವಾಗಿ ಏಳು ಅಥವಾ ಒಂಬತ್ತನೇ ತಿಂಗಳ ಸಮಯದಲ್ಲಿ ನಾಮಕರಣ ಕಾರ್ಯಕ್ರಮ ಮಾಡಲಾಗುತ್ತದೆ. ಆದರೆ ಈಗಿನ ಪರಿಸ್ಥಿತಿ ಚೆನ್ನಾಗಿಲ್ಲ. ಹೀಗಾಗಿ ಕೆಲವು ದಿನ ಕಾದು ಏನಾಗುತ್ತದೆಯೋ ನೋಡಬೇಕು' ಎಂದು ಯಶ್ ತಿಳಿಸಿದ್ದಾರೆ.

ಜನರು ನಮ್ಮ ಕುಟುಂಬದಂತೆ
'ಈ ಸಂದರ್ಭದಲ್ಲಿ ನಾಮಕರಣ ಮಾಡುವುದು ಸರಿಯಲ್ಲ. ಎಲ್ಲವೂ ಸರಿಹೋದ ಬಳಿಕ ಒಂದಷ್ಟು ಸಮಯದ ನಂತರ ಮಾಡೋಣ ಎಂದು ಅಂದುಕೊಂಡಿದ್ದೇವೆ. ಮಗನ ಫೋಟೊ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಅನೇಕರು ಕೇಳುತ್ತಿದ್ದರು. ಕೆಲವೊಮ್ಮೆ ಜನರು ತೀರಾ ಕುತೂಹಲಿಗಳಾಗಿರುತ್ತಾರೆ. ನಾವು ಅವರನ್ನು ಕುಟುಂಬದವರಂತೆಯೇ ಪರಿಗಣಿಸಿರುತ್ತೇವೆ. ನಮ್ಮ ಜೀವನದ ಸಂಗತಿಗಳನ್ನು ಅವರೊಂದಿಗೆ ಹಂಚಿಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ. ಹೀಗಾಗಿ ಆರು ತಿಂಗಳು ತುಂಬಿದ ಸಂದರ್ಭದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆವು' ಎಂದು ಹೇಳಿದ್ದಾರೆ.


Click it and Unblock the Notifications











