ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಗೆದ್ದ ಕನ್ನಡಿಗನಿಗೆ ಶುಭ ಕೋರಿದ ರಾಕಿ ಭಾಯ್; ಯಾರು ನಿರ್ದೇಶಕ
ವಿಶ್ವದ ಪ್ರತಿಷ್ಠಿತ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಬಾರಿ ಕನ್ನಡಿಗನ ಹೆಸರು ಸದ್ದು ಮಾಡುತ್ತಿದೆ. ಇತ್ತೀಚೆಗೆ ನಡೆದ ಕಾನ್ ಚಲನ ಚಿತ್ರೋತ್ಸವದಲ್ಲಿ ಕನ್ನಡಿಗ ನಿರ್ದೇಶಿಸಿದ್ದ ಕಿರು ಚಿತ್ರ 'ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ' ಆಯ್ಕೆ ಆಗಿತ್ತು. ಕನ್ನಡದ ಜಾನಪದ ಕಥೆಯನ್ನು ಇಟ್ಟುಕೊಂಡು ಹೆಣೆದ ಕಥೆಗೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಅಂದ್ಹಾಗೆ ಕಾನ್ ಅಂತ ಪ್ರತಿಷ್ಠಿತ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದ ಮೊದಲ ಕನ್ನಡಿಗನ ಕಿರುಚಿತ್ರ ಎನ್ನಲಾಗಿದೆ. ಈ ಕಿರು ಚಿತ್ರವನ್ನು ಮೈಸೂರಿನ ಯುವ ಪ್ರತಿಭೆ ಚಿದಾನಂದ್ ನಾಯ್ಕ್ ಆಕ್ಷನ್ ಕಟ್ ಹೇಳಿದ್ದರು. ಈ ಶಾರ್ಟ್ ಫಿಲ್ಮ್ ಕೇವಲ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನ ಕಂಡಿದ್ದಷ್ಟೇ ಅಲ್ಲ. ಪ್ರತಿಷ್ಠಿತ 'ಲಾ ಸಿನೆಫ್' ಪ್ರಶಸ್ತಿಯನ್ನು ಪಡೆದುಕೊಂಡಿದೆ.

ಕನ್ನಡಿಗ ಚಿದಾನಂದ್ ನಾಯ್ಕ್ ನಿರ್ದೇಶಿಸಿದ 'ಸನ್ ಫ್ಲವರ್ಸ್ ವರ್ ದ ಫಸ್ಟ್ ಒನ್ಸ್ ಟು ನೋ' ಕಿರುಚಿತ್ರ ಗೆದ್ದಿದ್ದಕ್ಕೆ ರಾಕಿಂಗ್ ಸ್ಟಾರ್ ಯಶ್ ಖುಷಿ ವ್ಯಕ್ತಪಡಿಸಿದ್ದಾರೆ. ಕನ್ನಡಿಗನ ಸಾಧನೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಕೆಜಿಎಫ್ 2 ನಟ ಯಶ್ ಮಾಡಿದ ಈ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ವಿಶ್ವದಾದ್ಯಂತ ಇರುವ ಫಿಲ್ಮ್ ಇನ್‌ಸ್ಟಿಟ್ಯೂಟ್‌ಗಳಿಂದ ಸುಮಾರು 2263 ಕಿರು ಚಿತ್ರಗಳನ್ನು ಕಳುಹಿಸಿ ಕೊಡಲಾಗಿತ್ತು. ಇದರಲ್ಲಿ 18 ಕಿರು ಚಿತ್ರಗಳು ಆಯ್ಕೆ ಆಗಿದ್ದವು. 14 ಲೈವ್ ಆಕ್ಷನ್ ಸಿನಿಮಾಗಳು ಹಾಗೂ 4 ಆನಿಮೆಷನ್ ಸಿನಿಮಾಗಳು ಇದ್ದವು. ಈ 18 ಸಿನಿಮಾಗಳ ಪೈಕಿ 'ಸನ್‌ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ' ಕಿರುಚಿತ್ರ ಕೂಡ ಒಂದಾಗಿತ್ತು.
'ಸನ್‌ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ' ಸಿನಿಮಾ ಸ್ಟೋರಿ ಕನ್ನಡದ ಜನಪ್ರಿಯ ಜಾನಪದ ಕಥೆಯಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿದೆ. ಹಳ್ಳಿಯ ಕೋಳಿಯನ್ನು ವಯಸ್ಸಾದ ಮುದುಕಿ ಕದಿಯುವ ಕಥೆಯಾಗಿದ್ದು, ನಂತರ ಆ ಹಳ್ಳಿಯಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಅನ್ನೋದೇ ಕಥೆ. ಈ ಕಿರುಚಿತ್ರವನ್ನು ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ಮಾಣ ಮಾಡಿದೆ.
ಮೂಲತ: ಮೈಸೂರಿನವರಾದ ಚಿದಾನಂದ್ ನಾಯ್ಕ್ ನಿರ್ದೇಶಿಸಿದ ಈ ಸಿನಿಮಾ ಪ್ರಶಸ್ತಿ ಗೆದ್ದಿದ್ದಕ್ಕೆ ರಾಕಿಂಗ್ ಸ್ಟಾರ್ ಎಕ್ಸ್ ಖಾತೆಯ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
"ಸನ್‌ಫ್ಲವರ್ಸ್ ವರ್ ದಿ ಫಸ್ಟ್ ಒನ್ಸ್ ಟು ನೋ ಕಿರುಚಿತ್ರ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ 'ಲಾ ಸಿನೆಫ್' ಪ್ರಶಸ್ತಿಯನ್ನು ಗೆದ್ದಿದ್ದಕ್ಕೆ ಚಿದಾನಂದ್ ನಾಯ್ಕ್ ಅವರಿಗೆ ಅಭಿನಂದನೆಗಳು. ಕನ್ನಡದ ಜಾನಪದವನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಕ್ಕೆ ಹಾಗೂ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಕ್ಕಾಗಿ ನಿಮ್ಮ ಮೇಲೆ ಹೆಮ್ಮೆಯಾಗುತ್ತಿದೆ" ಎಂದು ಯಶ್ ತನ್ನ ಎಕ್ಸ್ ಖಾತೆಯಲ್ಲಿ ಬರೆದು ಶುಭಕೋರಿದ್ದಾರೆ.
ಕಾನ್ ಚಿತ್ರೋತ್ಸವದಲ್ಲಿ ಕನ್ನಡಿಗ ನಿರ್ದೇಶಿಸಿದ ಸಿನಿಮಾ ಸದ್ದು ಮಾಡಿದೆ. ಹಾಗೇ ಇವರೊಂದಿಗೆ ಸೂರಜ್ ಠಾಕೂರ್ ಛಾಯಾಗ್ರಹಣ, ಮನೋಜ್ ವಿ ಸಂಕಲನ, ಅಭಿಷೇಕ್ ಕದಮ್ ಅವರ ಧ್ವನಿ ಮುದ್ರಣ ಮಾಡಿದ್ದಾರೆ. ಈ ನಾಲ್ಕು ಜನರ ತಂಡ FTII ನಲ್ಲಿ ಕಲಿಯುತ್ತಿದ್ದ ಒಂದು ವರ್ಷದ ಕೋರ್ಸ್‌ನ ಪ್ರಾಜೆಕ್ಟ್ ಸಲುವಾಗಿ ಮಾಡಿದ ಕಿರುಚಿತ್ರವಾಗಿತ್ತು.


Click it and Unblock the Notifications











