ಪ್ರಧಾನಿ ಮೋದಿ ಜೊತೆಗಿನ ಔತಣಕೂಟದ ಬಳಿಕ ಯಶ್, ರಿಷಬ್, ವಿಜಯ್ ಕಿರಗಂದೂರು ಪ್ರತಿಕ್ರಿಯೆ ಏನು?
ಪ್ರಧಾನಿ ನರೇಂದ್ರ ಮೋದಿ ಆಗಾಗ ಬಾಲಿವುಡ್ ಸೆಲೆಬ್ರೆಟಿಗಳನ್ನು ಭೇಟಿ ಮಾಡುತ್ತಲೇ ಇರುತ್ತಾರೆ. ಹೀಗಾಗಿ ಭೇಟಿಯಾದ ಸಂದರ್ಭದಲ್ಲೆಲ್ಲಾ ದಕ್ಷಿಣ ಭಾರತದ ತಾರೆಯರೊಂದಿಗೂ ಭೇಟಿ ಮಾಡಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಲೇ ಇತ್ತು.
ಅದರಲ್ಲೂ ಕನ್ನಡದ ಚಿತ್ರರಂಗದ ಸೆಲೆಬ್ರೆಟಿಗಳೊಂದಿಗೂ ಭೇಟಿ ಮಾಡಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗಿತ್ತು. ನಿನ್ನೆ (ಫೆಬ್ರವರಿ 12) ಪ್ರಧಾನಿ ನರೇಂದ್ರ ಮೋದಿ ಸ್ಯಾಂಡಲ್‌ವುಡ್ ತಾರೆಯರು,ಕ್ರಿಕೆಟರ್‌ಗಳು, ಉದ್ಯಮಿಗಳೊಂದಿಗೆ ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಕಾಂತಾರ ಮೂಲಕ ದೇಶಾದ್ಯಂತ ಮನೆ ಮಾತಾಗಿರೋ ರಿಷಬ್ ಶೆಟ್ಟಿ, 'ಕೆಜಿಎಫ್ 2' ಹಾಗೂ 'ಕಾಂತಾರ' ಸಿನಿಮಾಗಳ ನಿರ್ಮಾಪಕ ವಿಜಯ್ ಕಿರಗಂದೂರು ಮೂವರೂ ನರೇಂದ್ರ ಮೋದಿಯನ್ನು ಭೇಟಿ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂವರೂ ಏನಂದ್ರು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಯಶ್ ಪ್ರತಿಕ್ರಿಯೆ ಏನು?
" ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದು ತುಂಬಾನೇ ಖುಷಿ ಆಯ್ತು. ಅವರು ಎಷ್ಟು ಗಮನಕೊಟ್ಟು ಎಲ್ಲವನ್ನೂ ಕೇಳಿಸಿಕೊಂಡರು. ನಮ್ಮ ಚಿತ್ರರಂಗದ ಬಗ್ಗೆ ಅವರಿಗಿರುವ ವಿಷನ್ ಬಗ್ಗೆ ಖುಷಿ ಆಯ್ತು. ಹಾಗೇ ನಮ್ಮ ಬೇಡಿಕೆಗಳು ಏನು? ಅನ್ನೋದನ್ನು ಆಲಿಸಿದ್ರು. ನಾವು ಒಂದು ಇಂಡಸ್ಟ್ರಿಯಾಗಿ ಏನೆಲ್ಲಾ ಮಾಡಬಹುದು? ಅನ್ನೋದನ್ನು ಚರ್ಚೆ ಮಾಡಿದೆವು. ಹಾಗೇ ನಾವು ಏನೆಲ್ಲಾ ಚರ್ಚೆ ಮಾಡಿದ್ದೇವೆ. ನೀವು ಬಂದು ತೆಗೆದುಕೊಳ್ಳಿ ಎಂದಿದ್ದಾರೆ. ಅವರಿಗೆ ನಮ್ಮ ಚಿತ್ರರಂಗದ ಬಗ್ಗೆ ಇರುವ ಚಿಕ್ಕ ಚಿಕ್ಕ ಜ್ಞಾನದ ಬಗ್ಗೆ ತಿಳಿದು ಆಶ್ಚರ್ಯ ಆಯ್ತು. ನಮ್ಮ ಚಿತ್ರರಂಗದ ಬಗ್ಗೆ ಅವರಿಗೆ ದೊಡ್ಡ ಕನಸಿದೆ." ಎಂದು ಪ್ರಧಾನಿ ಭೇಟಿ ಬಳಿಕ ಯಶ್ ಪ್ರತಿಕ್ರಿಯಿಸಿದ್ದಾರೆ.

ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?
" ಇದೊಂತರ ಕನಸು ನನಸಾದ ಕ್ಷಣ. ಪ್ರಧಾನ ಮಂತ್ರಿಯವ್ರನ್ನು ನಾನು ಮಹಾನಾಯಕನಂತೆ ನೋಡುತ್ತೇನೆ. ಅವರನ್ನು ಭೇಟಿ ಮಾಡಿ ತುಂಬಾನೇ ಖುಷಿಯಾಗಿದೆ. ಕನ್ನಡ ಹಾಗೂ ಭಾರತೀಯ ಚಿತ್ರರಂಗದಲ್ಲಿ ಏನು ನಡೆಯುತ್ತಿದೆ? ಕನ್ನಡ ಚಿತ್ರರಂಗಕ್ಕೆ ಏನೇನು ಬೇಕಿದೆ? ಅನ್ನೋ ಬಗ್ಗೆನೂ ಕೇಳಿದ್ರು. ಮುಂದಿನ ದಿನಗಳಲ್ಲಿ ಏನೇನು ಮಾಡುವುದಕ್ಕೆ ಸಾಧ್ಯ ಅನ್ನುವುದನ್ನೂ ಹೇಳಿದ್ರು.'ಕಾಂತಾರ' ಸಿನಿಮಾ ಬಗ್ಗೆನೂ ತುಂಬಾನೇ ಮಾತಾಡಿದ್ರು. ಅದನ್ನೆಲ್ಲಾ ಕೇಳಿ ತುಂಬಾನೇ ಖುಷಿಯಾಗಿದೆ. ಅವರ ಬಾಯಲ್ಲಿ ಹಲವು ಬಾರಿ ಕಾಂತಾರ ಕೇಳಿಬಂದಿದ್ದು ನನಗೆ ತುಂಬಾನೇ ಖುಷಿಕೊಟ್ಟಿದೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

ವಿಜಯ್ ಕಿರಗಂದೂರು ಪ್ರತಿಕ್ರಿಯೆ
"ಪ್ರಧಾನ ಮಂತ್ರಿ ಜೊತೆ ಸುಮಾರು 10 ರಿಂದ 12 ನಿಮಿಷ ಸಮಯ ಕಳೆದಿದ್ದು ಖುಷಿ ಆಯ್ತು. ನಮ್ಮ ಕನ್ನಡ ಚಿತ್ರರಂಗ, ದಕ್ಷಿಣದ ಚಿತ್ರರಂಗ, ಭಾರತೀಯ ಚಿತ್ರರಂಗದ ಬಗ್ಗೆ ತುಂಬಾನೇ ಚೆನ್ನಾಗಿ ಸಲಹೆ ನೀಡಿದರು. ಕೆಲವು ವಿಷಯಗಳನ್ನು ನಾವು ಶೇರ್ ಮಾಡಿದ್ವಿ. 10 ನಿಮಿಷ ಅವರೊಂದಿಗೆ ಮಾತಾಡಿದ್ದು ಪಾಸಿಟಿವ್ ವೈಬ್ ಸಿಕ್ಕಂತಾಗಿದೆ." ಎಂದು ಹೊಂಬಾಳೆ ಸಂಸ್ಥೆಯ ಮಾಲೀಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಏರೋ ಶೋನಲ್ಲಿ ಮೋದಿ ಭೇಟಿ
ಪ್ರಧಾನಿ ನರೇಂದ್ರ ಮೋದಿ ನಿನ್ನೆ (ಫೆಬ್ರವರಿ 12) ರಾತ್ರಿ ಏರೋ ಶೋ ಉದ್ಘಾಟನೆಗಾಗಿ ಬೆಂಗಳೂರಿಗೆ ಬಂದಿದ್ದರು. ರಾಜಭವನದಲ್ಲಿಯೇ ವಾಸ್ತವ್ಯ ಹೂಡಿದ್ದ ಮೋದಿ, ಸಿನಿಮಾ ತಾರೆಯರಿಗೆ, ಕ್ರಿಕೆಟ್ ಆಟಗಾರರಿಗೆ ಹಾಗೂ ಉದ್ಯಮಿಗಳಿಗಾಗಿ ಔತಣಕೂಟವನ್ನು ಆಯೋಜಿಸಿದ್ದರು. ಈ ವೇಳೆ ಈ ಗಣ್ಯರೊಂದಿಗೆ ಆಯಾ ಕ್ಷೇತ್ರದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.


Click it and Unblock the Notifications











