'ಟಾಕ್ಸಿಕ್'-'ಧುರಂಧರ್ 2' ಥಿಯೇಟರ್‌ಗೆ 10 ಕೋಟಿ ಜನರನ್ನು ಕರೆ ತರುತ್ತಾ? ಏನಿದು ಲೆಕ್ಕಾಚಾರ?
ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಎರಡು ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ 'ಟಾಕ್ಸಿಕ್' ಹಾಗೂ 'ಧುರಂಧರ್ 2'. ಈ ಎರಡೂ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಬಾಕ್ಸಾಫೀಸ್‌ನಲ್ಲಿ ಪೈಪೋಟಿಗೆ ಬಿದ್ದಿವೆ. ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಳಿಸಿ ಹೀರೋಗಳ ಪೈಕಿ ಯಶ್ ಹಾಗೂ ರಣ್‌ವೀರ್ ಸಿಂಗ್ ಇಬ್ಬರೂ ಇದ್ದಾರೆ. ಹೀಗಾಗಿ ಈ ಬಾಕ್ಸಾಫೀಸ್ ಯುದ್ಧವನ್ನು ಟ್ರೇಡ್ ಎಕ್ಸ್‌ಪರ್ಟ್‌ಗಳು ಕುತೂಹಲದಿಂದ ನೋಡುತ್ತಿದ್ದಾರೆ.
ಒಂದು ವೇಳೆ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾಗಳೂ ಬಾಕ್ಸಾಫೀಸ್‌ನಲ್ಲಿ ಗೆದ್ದರೆ ಎಷ್ಟು ಜನರು ಥಿಯೇಟರ್‌ಗೆ ಬರಬಹುದು ಎಂಬ ಲೆಕ್ಕಾಚಾರಗಳು ಕೂಡ ಶುರುವಾಗಿದೆ. ಯಾಕಂದ್ರೆ, ಎರಡೂ ಸಿನಿಮಾಗಳೂ ಆ ಮಟ್ಟಿಗೆ ನಿರೀಕ್ಷೆಗಳನ್ನು ಹೊತ್ತು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿವೆ. ಹೀಗಾಗಿ ಹೊಸ ಲೆಕ್ಕಾಚಾರ ಶುರುವಾಗಿದೆ.

'ಟಾಕ್ಸಿಕ್'ನಲ್ಲಿ ದೊಡ್ಡ ಸ್ಟಾರ್‌ಕಾಸ್ಟ್ ಇದೆ. ಯಶ್ ಜೊತೆಗೆ ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಹುಮಾ ಖುರೇಶಿ ಜೊತೆಗೆ ದೊಡ್ಡ ತಾರಾಬಳಗವೇ ಇದೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಒಂದೊಂದೇ ಪಾತ್ರವನ್ನು ರಿವೀಲ್ ಮಾಡುತ್ತಿದ್ದಾರೆ. ಇದು ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಇನ್ನೊಂದು ಕಡೆ 'ಧುರಂಧರ್'ಗೆ ಸಿಕ್ಕ ಮೆಗಾ ಸಕ್ಸಸ್‌ನಿಂದ 'ಧುರಂಧರ್ 2' ನೋಡುವುದಕ್ಕೆ ಜನರು ಬರುತ್ತಾರೆಂಬ ನಿರೀಕ್ಷೆಯಿದೆ. ಹಾಗಿದ್ದರೆ, ಚಿತ್ರರಂಗದಲ್ಲಿ ಈ ಎರಡು ಸಿನಿಮಾಗಳನ್ನು ಇಟ್ಕೊಂಡು ಏನೆಲ್ಲ ಲೆಕ್ಕಾಚಾರಗಳು ನಡೀತಿವೆ? ತಿಳಿಯುವುದಕ್ಕೆ ಮುಂದೆ ಓದಿ.
ಸಾವಿರ ಕೋಟಿ ಹೀರೋಗಳ ಕಾದಾಟ
ಮಾರ್ಚ್ 19ಕ್ಕೆ ಸಾವಿರ ಕೋಟಿ ಹೀರೋಗಳ ಕಾದಾಟ ನಡೆಯಲಿದೆ. 'ಟಾಕ್ಸಿಕ್' ಒಂದು ಕಡೆ, 'ಧುರಂಧರ್ 2' ಒಂದು ಕಡೆ. ಎರಡೂ ಸಿನಿಮಾಗಳು ಒಟ್ಟಿಗೆ ರಿಲೀಸ್ ಆಗ್ತಿರೋದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರ ಲೆಕ್ಕಾಚಾರವೇ ಬೇರೆಯಿದೆ. ಯಶ್ ಸಿನಿಮಾ 'ಟಾಕ್ಸಿಕ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾ ಚೆನ್ನಾಗಿದ್ದರೆ, ಭಾರತದಾದ್ಯಂತ 10 ಕೋಟಿ ಮಂದಿ ಸಿನಿಮಾ ನೋಡಬಹುದೆಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಲೆಕ್ಕ ಹಾಕಿದ್ದಾರೆ.
ಪ್ರತಿದಿನ 12 ರಿಂದ 15 ಸಾವಿರ ಶೋ
10 ಕೋಟಿ ಮಂದಿ ಸಿನಿಮಾ ನೋಡಲು ಬರುವುದೇ ಆದರೆ, ಪ್ರತಿ ದಿನ ಅಂದಾಜು 12 ಸಾವಿರದಿಂದ 15 ಸಾವಿರ ಶೋಗಳು ಭಾರತದಾದ್ಯಂತ ಪ್ರದರ್ಶನ ಆಗಬೇಕು ಅನ್ನೋ ಲೆಕ್ಕ. ಕರ್ನಾಟಕದ ವಿತರಕ ವಲಯದಲ್ಲಿ ಇಂತಹದ್ದೊಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಂದು ಶೋಗೆ ಸರಾಸರಿ 200 ಟಿಕೆಟ್ ಸೇಲ್ ಆದರೆ, ಪ್ರತಿದಿನ 24 ಲಕ್ಷದಿಂದ 30 ಲಕ್ಷ ಟಿಕೆಟ್‌ಗಳು ಸೇಲ್ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ. ಅಂದರೆ, ಒಂದು ವಾರಕ್ಕೆ 2 ಕೋಟಿಗೂ ಅಧಿಕ ಟಿಕೆಟ್‌ಗಳು ಭಾರತದಲ್ಲಿಯೇ ಸೇಲ್ ಆಗುತ್ತೆ ಎನ್ನುತ್ತಾರೆ ವಿತರಕರು.

ವಿದೇಶದಲ್ಲೂ 5 ಸಾವಿರ ಶೋ
'ಟಾಕ್ಸಿಕ್' ಹಾಗೂ 'ಧುರಂಧರ್ 2' ಸಿನಿಮಾಗಳು ನಾನಾ? ನೀನಾ? ಅಂತ ಸೆಡ್ಡು ಹೊಡೆದು ನಿಂತಿದ್ದಾರೆ. ಇಬ್ಬರೂ ರಿಲೀಸ್ ಡೇಟ್‌ನಿಂದ ಹಿಂದೆ ಸರಿಯುತ್ತಿಲ್ಲ. ಹೀಗಾಗಿ ವಿದೇಶದಲ್ಲಿಯೂ ಈ ಎರಡೂ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ, ಪ್ರತಿದಿನ ಈ ಸಿನಿಮಾ 3500 ರಿಂದ 5000 ಶೋಗಳನ್ನು ವಿದೇಶದಲ್ಲಿ ಪ್ರದರ್ಶನ ಮಾಡಬಹುದು.
ಪ್ರತಿದಿನ ₹45 ಕೋಟಿ ಕಲೆಕ್ಷನ್
ಇನ್ನು ಸಿನಿಮಾದ ಕಲೆಕ್ಷನ್ ಬಗ್ಗೆನೂ ಲೆಕ್ಕಾಚಾರ ಶುರುವಾಗಿದೆ. ಮೊದಲ ದಿನ ಈ ಎರಡೂ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. 'ಟಾಕ್ಸಿಕ್' ಹಾಗೂ 'ಧುರಂಧರ್ 2' ಎರಡೂ ಸಿನಿಮಾಗಳ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ ₹100 ಕೋಟಿಗೂ (ಭಾರತ) ಅಧಿಕ ಆಗಬಹುದೆಂಬ ನಿರೀಕ್ಷೆಯಿದೆ. ಇನ್ನು ಸರಾಸರಿ 150 ರೂಪಾಯಿ ಟಿಕೆಟ್ ಬೆಲೆಯನ್ನು ಇಟ್ಟುಕೊಂಡರೆ ಪ್ರತಿದಿನ ಸರಾಸರಿಯಂತೆ ₹45 ಕೋಟಿಗೂ ಅಧಿಕ ಕಲೆಕ್ಷನ್ ಆಗಬಹುದು ಅನ್ನೋ ವಿತರಕರ ಲೆಕ್ಕಾಚಾರ. ಇದೆಲ್ಲವೂ ಮಾರ್ಚ್ 19ರ ನಂತರ ಹೊರಬೀಳಲಿದೆ.


Click it and Unblock the Notifications











