'ಟಾಕ್ಸಿಕ್', 'ಡೆವಿಲ್', 'ಮಾಕ್ಸ್', 'ಬೈರತಿ ರಣಗಲ್': ಯಾವ ಸಿನಿಮಾ ಟೈಟಲ್ ಕ್ರೇಜಿಯಾಗಿದೆ?
ಸಿನಿಮಾ ಅಂದ್ಮೇಲೆ ಒಂದು ಟೈಟಲ್ ಇರ್ಬೇಕು. ಆ ಟೈಟಲ್ ಕ್ರೇಜಿಯಾಗಿರಬೇಕು. ಯಾವುದೇ ಚಿತ್ರರಂಗದ ಯಾವುದೇ ಸೂಪರ್‌ಸ್ಟಾರ್‌ಗಳ ಸಿನಿಮಾವಿದ್ದರೂ ಟೈಟಲ್ ಕಡೆಗೆ ಮೊದಲು ಗಮನ ಕೊಡುತ್ತಾರೆ. ತಿಂಗಳಗಟ್ಟಲೆ ತಲೆ ಕೆಡಿಸಿಕೊಂಡು ಟೈಟಲ್ ಹುಡುಕುತ್ತಾರೆ. ಅವುಗಳನ್ನು ಕ್ರಿಯೇಟಿವ್ ಆಗಿ ಡಿಸೈನ್ ಮಾಡಿಸುತ್ತಾರೆ. ಟೈಟಲ್ ಡಿಸೈನ್‌ನಿಂದಲೇ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ.
ಸದ್ಯಕೀಗ ಕನ್ನಡ ಚಿತ್ರರಂಗದಲ್ಲೂ ಸೂಪರ್‌ಸ್ಟಾರ್‌ಗಳ ಸಿನಿಮಾ ಟೈಟಲ್ ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ರಾಕಿಂಗ್ ಸ್ಟಾರ್ ಯಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಸಿನಿಮಾಗಳ ಟೈಟಲ್‌ಗಳೇ ಚಿಂದಿಯಾಗಿವೆ. ಒಂದಕ್ಕಿಂತ ಒಂದು ಕ್ರೇಜಿಯಾಗಿವೆ ಅಂತ ಅನಿಸುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾಗಳಲ್ಲೂ ಅವರ ಅಭಿಮಾನಿಗಳು ಈ ಟೈಟಲ್ ಅನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ರಾಕಿಂಗ್ ಸ್ಟಾರ್ ಯಶ್ ಸಿನಿಮಾ 'ಟಾಕ್ಸಿಕ್', ದರ್ಶನ್ ಸಿನಿಮಾ 'ಡೆವಿಲ್', ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಹಾಗೂ ಶಿವಣ್ಣನ 'ಬೈರತಿ ರಣಗಲ್' ಈ ನಾಲ್ಕು ಸಿನಿಮಾಗಳ ಟೈಟಲ್ ಸಿನಿಪ್ರಿಯರಿಗೆ ಕಿಕ್ ಕೊಡುತ್ತಿದೆ. ವಿಶೇಷ ಅಂದರೆ, ಈ ಎಲ್ಲಾ ಸಿನಿಮಾಗಳ ಟೈಟಲ್ ಕೂಡ ಮಾಸ್ ಆಗಿವೆ ಅನ್ನೋದು ವಿಶೇಷ. ಅಷ್ಟಕ್ಕೂ ಈ ಕ್ರೇಜಿ ಟೈಟಲ್‌ಗಳು ಯಾಕೆ ಇಷ್ಟೊಂದು ಸದ್ದು ಮಾಡುತ್ತಿವೆ? ಇಂಗ್ಲಿಷ್ ಶೀರ್ಷಿಕೆನೇ ಯಾಕೆ? ಅದರ ಹಿಂದಿನ ಲೆಕ್ಕಾಚಾರವೇನು? ತಿಳಿಯೋಣ ಬನ್ನಿ..

ರಾಕಿಂಗ್ ಸ್ಟಾರ್ ಯಶ್ 'ಟಾಕ್ಸಿಕ್'
'ಕೆಜಿಎಫ್ 2' ಬಳಿಕ ರಾಕಿಂಗ್ ಸ್ಟಾರ್ ಯಶ್ ಈಗಾಗಲೇ 19ನೇ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಕಾದೂ ಕಾದು ಸುಸ್ತಾಗಿದ್ದ ಅಭಿಮಾನಿಗಳಿಗೆ 'ಟಾಕ್ಸಿಕ್' ಟೈಟಲ್ ನಿಜವಾಗಲೂ ಕಿಕ್ ಕೊಟ್ಟಿತ್ತು. ಅಷ್ಟಕ್ಕೂ 'ಟಾಕ್ಸಿಕ್' ಅಂತ ಅನೌನ್ಸ್ ಆದಾಗ, ಇಂಗ್ಲಿಷ್ ಟೈಟಲ್ ಯಾಕೆ ಬೇಕಿತ್ತು? ಅನ್ನೋ ಚರ್ಚೆ ಆಗಿದ್ದು ಕೂಡ ಇದೆ. ಸಿನಿಮಾ ಕಥೆ ಹಾಗೂ ಮಾರ್ಕೆಟಿಂಗ್ ಅನ್ನು ಗಮನದಲ್ಲಿಟ್ಟುಕೊಂಡು ಟೈಟಲ್ ಅನೌನ್ಸ್ ಮಾಡುತ್ತಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಎಲ್ಲಾ ಭಾಷೆಯ ಪ್ರೇಕ್ಷಕರಿಗೆ ರಿಚ್ ಆಗಲೆಂದೇ 'ಟಾಕ್ಸಿಕ್' ಇಟ್ಟಿದ್ದು, ಈಗಾಗಲೇ ವಿಶ್ವದೆಲ್ಲೆಡೆ ರೀಚ್ ಆಗಿದೆ.

ದರ್ಶನ್ ಮಾಸ್ ಸಿನಿಮಾ 'ಡೆವಿಲ್'
ದರ್ಶನ್ 'ಕಾಟೇರ'ದಂತಹ ಅಪ್ಪಟ ಕನ್ನಡ ಟೈಟಲ್ ಇಟ್ಟು ಗೆದ್ದ ಬಳಿಕ ಅವರದ್ದೇ ಮತ್ತೊಂದು ಮಾಸ್ ಸಿನಿಮಾ ಅನೌನ್ಸ್ ಆಗಿದೆ. ಅದುವೇ 'ಡೆವಿಲ್; ದಿ ಹೀರೊ'. ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಕ್ರೇಜಿಯಾಗಿ ಟ್ರೆಂಡ್ ಆಗುತ್ತಿರೋದು 'ಡೆವಿಲ್' ಟೈಟಲ್. ಮಿಲನ ಪ್ರಕಾಶ್ ನಿರ್ದೇಶಿಸುತ್ತಿರುವ ಈ ಸಿನಿಮಾದ ಫಸ್ಟ್ ಲುಕ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ 'ಡೆವಿಲ್' ಟೈಟಲ್ ಕಿಕ್ ಕೊಡುತ್ತಿದೆ. ಈ ಟೈಟಲ್‌ನಿಂದ ಇದೊಂದು ಪಕ್ಕಾ ಮಾಸ್ ಸಿನಿಮಾ ಅನ್ನೋದನ್ನು ಸಾರಿ ಹೇಳಲಾಗಿದೆ. ಸದ್ಯ 'ಡೆವಿಲ್' ಟೈಟಲ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ.

ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್'
'ವಿಕ್ರಾಂತ್ ರೋಣ'ದಂತಹ ಪ್ಯಾನ್ ಇಂಡಿಯಾ ಸಿನಿಮಾ ಬಳಿಕ ಕಿಚ್ಚ ಸುದೀಪ್ ಸಮಯ ತೆಗೆದುಕೊಂಡು ಮತ್ತೊಂದು ಸಿನಿಮಾ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ತಮಿಳು ನಿರ್ಮಾಪಕರು ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಟೈಟಲ್ ಏನಿರಬಹುದು ಕುತೂಹಲದಿಂದ ಇರುವಾಗ 'ಮ್ಯಾಕ್ಸ್' ಅನ್ನೋ ಟೈಟಲ್ ಅನೌನ್ಸ್ ಆಗಿತ್ತು. ಕಿಚ್ಚ ಮಾಸ್‌ಗೆ ಮಾಸ್ ಲುಕ್ ಕೊಟ್ಟು ತಮ್ಮ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದ್ದರು. ಆದರೆ, ಲುಕ್ ಅಷ್ಟೇ ಸದ್ದು ಮಾಡಿದ್ದು 'ಮ್ಯಾಕ್ಸ್' ಟೈಟಲ್.

ಶಿವಣ್ಣನ ಸಿನಿಮಾ 'ಬೈರತಿ ರಣಗಲ್'
ಸೆಂಚುರಿ ಸ್ಟಾರ್ ಶಿವಣ್ಣ ಖದರ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶಿವಣ್ಣ ಟೈಟಲ್ ಬಗ್ಗೆ ಅಷ್ಟು ಗಮನ ಕೊಡುತ್ತಾರೋ ಇಲ್ವೋ ಗೊತ್ತಿಲ್ಲ. ಆದರೆ, ಈಗ ನಟಿಸುತ್ತಿರುವ ಸಿನಿಮಾದ ಟೈಟಲ್ ಸಿನಿಪ್ರಿಯರನ್ನು ಸೆಳೆದಿದೆ. ಶಿವಣ್ಣ ಸೈಲೆಂಟ್ ಆಗಿ ಮಾಸ್ ಲುಕ್ ಕೊಟ್ಟು ಗೆದ್ದಿದ್ದ ಮಫ್ತಿಯ ಪ್ರೀಕ್ವೆಲ್ ಈ 'ಬೈರತಿ ರಣಗಲ್'. ಸ್ಯಾಂಡಲ್‌ವುಡ್‌ನ ಮಾಸ್ ಟೈಟಲ್‌ಗಳಲ್ಲಿ 'ಬೈರತಿ ರಣಗಲ್' ಟೈಟಲ್ ಕೂಡ ಒಂದು.


Click it and Unblock the Notifications











