ಯೋಗರಾಜ್ ಭಟ್ರು ಟೈಟಲ್.. ಸಿಂಪಲ್ ಸುನಿ ಬ್ಯಾನರ್: 'ಜಂಗಲ್ ಮಂಗಲ್' ಸಿನಿಮಾ ಕಥೆಯೇನು?
ಜುಲೈನಲ್ಲಿ ಮತ್ತೊಂದು ಯುವ ಪ್ರತಿಭೆಯ ಸಿನಿಮಾ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಯಶ್ ಶೆಟ್ಟಿ ನಾಯಕನಾಗಿ ನಟಿಸಿರುವ 'ಜಂಗಲ್ ಮಂಗಲ್' ರಿಲೀಸ್‌ಗೆ ಸಜ್ಜಾಗಿದ್ದು, ಭರ್ಜರಿಯಾಗಿ ಪ್ರಚಾರದಲ್ಲಿ ಮಾಡುತ್ತಿದ್ದೆ. ವಿಶೇಷ ಅಂದರೆ, ಈ ಸಿನಿಮಾದ ಹಿಂದೆ ಸ್ಯಾಂಡಲ್‌ವುಡ್‌ನ ಇಬ್ಬರು ನಿರ್ದೇಶಕರು ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದ್ದಾರೆ. ಅದನ್ನೇ ಈ ತಂಡ ಸಿನಿಮಾ ಇವೆಂಟ್‌ನಲ್ಲಿ ನೆನಪಿಸಿಕೊಂಡಿದೆ.
ಕನ್ನಡದ ಚಿತ್ರರಂಗದಲ್ಲಿ ಯುವ ಪ್ರತಿಭೆಗಳ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಅದಕ್ಕೆ ಬೆಂಬಲವಾಗಿ ಸೂಪರ್‌ಸ್ಟಾರ್‌ಗಳಿಂದ ಹಿಡಿದು ತಂತ್ರಜ್ಞರು ನಿಲ್ಲುತ್ತಾರೆ. ಮೊದಲಿನಿಂದಲೂ ಈ ಪ್ರಕ್ರಿಯೆ ಬೆಳೆದುಕೊಂಡೇ ಬಂದಿದೆ. ಅದರಲ್ಲೂ ಇತ್ತೀಚೆಗೆ ಕನ್ನಡದ ಸೂಪರ್‌ಸ್ಟಾರ್‌ಗಳು ಯುವ ಪ್ರತಿಭೆಗಳಿಗೆ ಸಪೋರ್ಟ್ ನೀಡುತ್ತಿದ್ದಾರೆ. ಹಾಗೇ ಸ್ಟಾರ್ ನಿರ್ದೇಶಕರು ಕೂಡ ಸಪೋರ್ಟ್ ಮಾಡುತ್ತಿದ್ದಾರೆ. ಅದರಲ್ಲಿ 'ಜಂಗಲ್ ಮಂಗಲ್' ಕೂಡ ಒಂದು.

ಕನ್ನಡ ಚಿತ್ರರಂಗ ಸೋಲಿನ ಸುಳಿಗೆ ಸಿಲುಕಿ ಒದ್ದಾಡುತ್ತಿದೆ. ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ. ಸೂಪರ್‌ಸ್ಟಾರ್ ಸಿನಿಮಾಗಳು ಅಖಾಡಕ್ಕೆ ಇಳಿಯುವುದಕ್ಕೆ ಹಿಂದೇಟು ಹಾಕುತ್ತಿವೆ. ಹೀಗಿರುವಾಗ ಹೊಸಬರ ಹಾಗೂ ಯುವ ಪ್ರತಿಭೆಯ ಸಿನಿಮಾಗಳು ಒಂದರ ಹಿಂದೊಂದು ರಿಲೀಸ್ ಆಗುತ್ತಿವೆ. ಇದೇ ಜುಲೈ 04ರಂದು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ಉದಯೋನ್ಮುಖ ನಟ ಯಶ್ ಶೆಟ್ಟಿ ನಾಯಕನಾಗಿರುವ 'ಜಂಗಲ್ ಮಂಗಲ್' ಕೂಡ ತೆರೆಕಾಣುತ್ತಿದೆ. ಈ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿಯನ್ನು ಹಂಚಿಕೊಂಡಿದೆ.
'ಜಂಗಲ್ ಮಂಗಲ್' ಸಿನಿಮಾಗೆ ನಿರ್ದೇಶಕದ ರಕ್ಷಿತ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆ. ಈ ಸಿನಿಮಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ಕತೆಯಿದೆ. ಅದನ್ನು ನಿರ್ದೇಶಕ ರಕ್ಷಿತ್ ಕುಮಾರ್ ಅವರೇ ಹೇಳಿದ್ದಾರೆ. "ನಮ್ಮ ಸಿನಿಮಾದ ಟ್ರೈಲರ್ ನೋಡಿದ ಯೋಗರಾಜ್ ಭಟ್ ಅವರು ಈ ಚಿತ್ರಕ್ಕೆ ಜಂಗಲ್ ಮಂಗಲ್ ಎಂದು ಹೆಸರಿಡಿ ಎಂದರು. ಸಿನಿಮಾ ಮೆಚ್ಚಿಕೊಂಡ ಮತ್ತೊಬ್ಬ ನಿರ್ದೇಶಕ ಸಿಂಪಲ್ ಸುನಿ ತಮ್ಮ ಸುನಿ ಸಿನಿಮಾಸ್ ಬ್ಯಾನರ್ ಮೂಲಕ ಚಿತ್ರವನ್ನು ಅರ್ಪಿಸಲು ಮುಂದಾದರು" ಎಂದು ನಿರ್ದೇಶಕರು ಹೇಳಿದ್ದಾರೆ.
ಅಂದ್ಹಾಗೆ 'ಜಂಗಲ್ ಮಂಗಲ್' ಇದೊಂದು ಅರೆ ಮಲೆನಾಡಿನಲ್ಲಿ ನಡೆಯುವ ಕಥೆ. ಈ ಸಿನಿಮಾವನ್ನು ನಿರ್ದೇಶಕ ರಕ್ಷಿತ್ ಕುಮಾರ್ ಹಾಗೂ ಅವರ ಒಂದಷ್ಟು ಮಂದಿ ಸ್ನೇಹಿತರೆಲ್ಲ ಸೇರಿಕೊಂಡು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಂದ್ಹಾಗೆ ರಕ್ಷಿತ್ ಹತ್ತು ವರ್ಷಗಳಿಂದ ಕನ್ನಡ ಹಾಗೂ ತುಳು ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಅವರಿಗೆ ಚೊಚ್ಚಲ ಸಿನಿಮಾ. " ಅರೆ ಮಲೆನಾಡಿನಲ್ಲಿ ನಡೆಯುವ ಕಥೆಯಾಗಿದ್ದರೂ, ಯೂನಿವರ್ಸಲ್ ಸಬ್ಜೆಕ್ಟ್ ಎನ್ನಬಹುದು. ಎಲ್ಲಾ ಪ್ರಾಂತ್ಯದಲ್ಲೂ ನಡೆಯುವ ಕಥೆಯೂ ಹೌದು." ಎಂದು ನಿರ್ದೇಶಕರು ಹೇಳಿದ್ದಾರೆ.
'ಜಂಗಲ್ ಮಂಗಲ್' ಸಿನಿಮಾದ ಪ್ರಮುಖ ಪಾತ್ರದಲ್ಲಿ ಯಶ್ ಶೆಟ್ಟಿ ನಟಿಸಿದ್ದರೆ, ಇವರಿಗೆ ನಾಯಕಿಯಾಗಿ ಹರ್ಷಿತಾ ರಾಮಚಂದ್ರ ನಟಿಸಿದ್ದಾರೆ. ಇವರೊಂದಿಗೆ ಉಗ್ರಂ ಮಂಜು, ಬಲ ರಾಜವಾಡಿ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯಕ್ಕೀಗ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.
ಇನ್ನು ನಾಯಕ ಯಶ್ ಶೆಟ್ಟಿ ಈ ಸಿನಿಮಾ ಬಗ್ಗೆ ವಿಶ್ವಾಸದಲ್ಲಿದ್ದಾರೆ. "ನನಗೆ ನಾಯಕನಾಗಿಯೇ ನಟಿಸಬೇಕೆಂಬ ಆಸೆ ಇಲ್ಲ. ನಟನಾಗಿ ಗುರುತಿಸಿಕೊಳ್ಳಬೇಕಷ್ಟೇ. ಆದರೆ ನಾನು ಮೊದಲು ನಾಯಕನಾಗಿ ನಟಿಸಿದ ಚಿತ್ರ 'ಸೂಜಿದಾರ'. ಅದನ್ನು ಒಪ್ಪಿಕೊಳ್ಳುವುದಕ್ಕೆ ಕಥೆಯೇ ಕಾರಣ. ಆನಂತರ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸಲು ಕಥೆಯೇ ಕಾರಣ. ನಿಜ ಹೇಳಬೇಕೆಂದರೆ ಈ ಸಿನಿಮಾದ ಕಥೆಯೇ ನಿಜವಾದ ನಾಯಕ" ಎಂದು ನಾಯಕ ಯಶ್ ಶೆಟ್ಟಿ ಹೇಳಿದ್ದಾರೆ.


Click it and Unblock the Notifications











