ಭಟ್ರು-ರಾಘವೇಂದ್ರ ವಿವಾದ: ಟಿವಿ ಹಕ್ಕುಗಳಿಗಾಗಿಯೇ ಸಿನಿಮಾ ಮಾಡ್ತಿದ್ದಾರಾ? ಥಿಯೇಟರ್ ಕಥೆಯೇನು?
ಕೊರೊನಾ ಬಳಿಕ ಭಾರತೀಯ ಚಿತ್ರರಂಗ ಬದಲಾಗಿದೆ. ಜನರು ಸಿನಿಮಾ ನೋಡುವ ಅಭಿರುಚಿ ಬದಲಾಗಿದೆ. ಥಿಯೇಟರ್‌ಗಳಿಗೆ ಓಟಿಟಿಗಳು ಕಾಂಪಿಟೇಷನ್ ಕೊಡುತ್ತಿವೆ. ಇನ್ನೊಂದು ಕಡೆ ಸಿನಿಮಾ ನೋಡುವುದಕ್ಕೆ ಥಿಯೇಟರ್‌ಗೆ ಬರುತ್ತಿಲ್ಲ ಅನ್ನೋ ಆರೋಪವಿದೆ.
ಈ ಮಧ್ಯೆ ಪ್ಯಾನ್ ಇಂಡಿಯಾ, ಕಂಟೆಂಟ್ ಸಿನಿಮಾಗಳು ಅಂತ ಕನ್ನಡ ಚಿತ್ರರಂಗ ಹಂಗೂ ಹಿಂಗೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. 2022ಯಲ್ಲಿ ಭಾರತೀಯ ಚಿತ್ರರಂಗಗಳ ಪೈಕಿ ಸ್ಯಾಂಡಲ್‌ವುಡ್ ಮೋಸ್ಟ್ ಸಕ್ಸಸ್‌ಫುಲ್ ಸಿನಿಮಾರಂಗ. ಹೀಗಿದ್ದರೂ ನಿರ್ಮಾಪಕರು, ನಿರ್ದೇಶಕರು ಸ್ಯಾಟಲೈಟ್ ಹಕ್ಕುಗಳು, ಡಿಜಿಟಲ್ ಹಕ್ಕುಗಳ ಮೇಲೆನೇ ಅವಲಂಬಿತರಾಗಿದ್ದಾರೆ.
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸ್ಯಾಂಡಲ್‌ವುಡ್ ಮಂದಿಗೆ ಸ್ಯಾಟಲೈಟ್ ಹಕ್ಕುಗಳು ಮುಖ್ಯವೇ? ಈ ಪ್ರಶ್ನೆ ಎರಡು ದಿನಗಳ ಹಿಂದೆ ನಡೆದ ಯೋಗರಾಜ್ ಭಟ್ಟರು ಹಾಗೂ ಜೀ ಮನರಂಜನಾ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ನಡುವಿನ ವಿವಾದವೇ ಸಾಕ್ಷಿ. ಅಸಲಿಗೆ ಕನ್ನಡ ಚಿತ್ರರಂಗ ಹಕ್ಕುಗಳನ್ನು ಹಬ್ಬಿಸಿಯೇ ಸಿನಿಮಾ ಮಾಡುತ್ತಿದೆಯಾ? ಅಸಲಿಗೆ ಸಿನಿಮಾ ಮೇಕಿಂಗ್ ಹಿಂದಿನ ವ್ಯವಹಾರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಭಟ್ರು-ಹುಣಸೂರು ಆಡಿಯೋ ವಿವಾದ!
ಕೆಲವು ದಿನಗಳ ಹಿಂದೆ ಯೋಗರಾಜ್ ಭಟ್ ಆಡಿಯೋ ಒಂದು ಲೀಕ್ ಆಗಿತ್ತು. ವಾಟ್ಸಾಪ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಸಿಟ್ಟಿಗೆದ್ದಿದ್ದ ಯೋಗರಾಜ್ ಭಟ್ಟರು ಜೀ ಕನ್ನಡದ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ವಿರುದ್ಧ ಕಿಡಿಕಾರಿದ್ದರು. 'ಪದವಿ ಪೂರ್ವ' ಅನ್ನೋ ಸಿನಿಮಾವನ್ನು ಆಶ್ವಾಸನೆ ಕೊಟ್ಟು ಖರೀದಿ ಮಾಡದೇ ಇರೋದಕ್ಕೆ ಸಿಟ್ಟಿಗೆದ್ದಿದ್ದರು. ಇದೇ ಆಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಕನ್ನಡ ಚಿತ್ರರಂಗಕ್ಕೆ ಸ್ಯಾಟಲೈಟ್ ಹಕ್ಕು ಅಷ್ಟೊಂದು ಮುಖ್ಯವೇ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.

ಟಿವಿ, ಡಿಜಿಟಲ್ ಹಕ್ಕುಗಳಿಗಾಗಿ ಸಿನಿಮಾ?
ಯೋಗರಾಜ್ ಭಟ್‌ರ ಆಡಿಯೋ ಲೀಕ್ ಆಗುತ್ತಿದ್ದಂತೆ ಕನ್ನಡದ ಫಿಲ್ಮ್ ಮೇಕರ್ಸ್ ಮನರಂಜನಾ ವಾಹಿನಿಯನ್ನು ಮೇಲೆ ಇಷ್ಟೊಂದು ಡಿಪೆಂಡ್ ಆಗಿದ್ದಾರಾ? ಥಿಯೇಟರ್‌ಗಳ ಮೇಲೆ ನಂಬಿಕೆನೇ ಇಲ್ಲವೇ? ಅನ್ನೋ ಚರ್ಚೆಯಂತೂ ನಡೆಯುತ್ತಿದೆ. ಯಾಕಂದ್ರೆ, ಯೋಗರಾಜ್ ಭಟ್‌ರಂತಹ ಜನಪ್ರಿಯ ನಿರ್ದೇಶಕರು ಹಾಗೂ ನಿರ್ಮಾಪಕರು ಟಿವಿ ಹಕ್ಕುಗಳ ಮೇಲೆ ಇಷ್ಟೊಂದು ಡಿಪೆಂಡ್ ಆಗಿದ್ದಾರಾ? ಅನ್ನೋ ಪ್ರಶ್ನೆನೂ ಎದ್ದಿದೆ. ಅಸಲಿಗೆ ಕನ್ನಡ ಚಿತ್ರರಂಗದ ಶೇ.90ರಷ್ಟು ಮಂದಿ ಟಿವಿ, ಡಿಜಿಟಲ್ ಹಾಗೂ ಡಬ್ಬಿಂಗ್ ಹಕ್ಕುಗಳ ಮೇಲೆನೇ ಅಲಂಬಿಸಿದ್ದಾರೆ ಎನ್ನುತ್ತಿವೆ ಮೂಲಗಳು.

ಕನ್ನಡ ಸಿನಿಮಾ ನಿರ್ಮಾಣದ ಲೆಕ್ಕಾಚಾರವೇನು?
"ಸದ್ಯ ನಿರ್ಮಾಪಕರು ಮೂರು ಹಕ್ಕುಗಳನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. ಸ್ಯಾಟಲೈಟ್ ರೈಟ್ಸ್, ಡಿಜಿಟಲ್ ರೈಟ್ಸ್ ಹಾಗೇ ಡಬ್ಬಿಂಗ್ ರೈಟ್ಸ್ ಅನ್ನು ಮೇಲೆ ಸಿನಿಮಾ ಮಾಡಬೇಕಾ ಬೇಡ್ವಾ ಅನ್ನೋದು ನಿರ್ಧಾರ ಆಗುತ್ತೆ. ಒಬ್ಬ ನಟನ ಸಿನಿಮಾ ಎಂಟರ್‌ಟೈನ್ಮೆಂಟ್ ಚಾನೆಲ್ ಎಷ್ಟು ಕೋಟ್ ಮಾಡುತ್ತೆ. ಹಾಗೇ ಅಮೆಜಾನ್, ಜೀ5, ವೂಟ್ ಹೀಗೆ ಓಟಿಟಿಯಲ್ಲಿ ಎಷ್ಟು ಹಣ ಸಿಗಬಹುದು? ಬೇರೆ ಭಾಷೆಗಳಿಗೆ ಡಬ್ಬಿಂಗ್ ಎಷ್ಟಕ್ಕೆ ಹೋಗುತ್ತೆ ಅನ್ನೋ ಲೆಕ್ಕಾಚಾರ ಹಾಕಿ ಸಿನಿಮಾ ಮಾಡ್ತಾರೆ. ಉದಾಹರಣೆಗೆ ಒಬ್ಬ ನಟನ ಸಿನಿಮಾ ಈ ಮೂರು ಹಕ್ಕುಗಳಿಗೆ ನಾಲ್ಕು ಕೋಟಿ ಸಿಗುತ್ತೆ ಅಂದ್ರೆ, ಆ ಸಿನಿಮಾ ಬಜೆಟ್ ಮೂರೂವರೆ ಕೋಟಿ ಅಂತ ಇಟ್ಟುಕೊಳ್ಳುತ್ತಾರೆ. ಆ ಧೈರ್ಯದ ಮೇಲೆ ಸಿನಿಮಾ ಮಾಡುತ್ತಾರೆ. ಆದರೆ, ಸಿನಿಮಾ ರಿಲೀಸ್ ಆದ್ಮೇಲೆ ಈ ಹಕ್ಕುಗಳ ಲೆಕ್ಕಾಚಾರ ತಲೆಕೆಳಗಾದರೆ, ಆಗ ಪೇಚಿಗೆ ಸಿಕ್ಕಿಕೊಳ್ಳುತ್ತಾರೆ." ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ನಿರ್ದೇಶಕರು.

ಚಿತ್ರಮಂದಿಗಳ ಮೇಲೆ ನಂಬಿಕೆ ಇಲ್ವಾ?
ಸೂಪರ್‌ಸ್ಟಾರ್ ಸಿನಿಮಾಗಳಿಗೆ ಎಲ್ಲಾ ಕಡೆಯಿಂದಲೂ ಬೇಡಿಕೆ ಇದೆ. ಇವರ ಸಿನಿಮಾ ಸ್ಯಾಟಲೈಟ್, ಓಟಿಟಿ ಹಾಗೂ ಡಬ್ಬಿಂಗ್ ಅಂತ ಉತ್ತಮ ಮೊತ್ತಕ್ಕೆ ಸೇಲ್ ಆಗುತ್ತೆ ಅನ್ನೋ ನಂಬಿಕೆ ಇದೆ. ಆದರೆ, ಹೊಸಬರ ಸಿನಿಮಾಗಳಿಗೆ ಈ ಮೂರು ಹಕ್ಕುಗಳಿಂದ ಬಂಡವಾಳ ಬರೋದು ಅನುಮಾನ. ಹೀಗಾಗಿ ಥಿಯೇಟರ್‌ನಿಂದ ಬರುವ ಹಣದ ಮೇಲೆ ಲಾಭ-ನಷ್ಟದ ಲೆಕ್ಕಾಚಾರ ನಿಂತಿರುತ್ತೆ. ಅಸಲಿಗೆ ಸಿನಿಮಾ ಮಂದಿಗೆ ಥಿಯೇಟರ್ ಮೇಲೆ ನಂಬಿಕೆ ಇಲ್ವಾ? ಜನರು ಚಿತ್ರಮಂದಿರಕ್ಕೆ ಕರೆದುಕೊಂಡು ಬರೋಕೆ ಆಗಲ್ವಾ? ಇಲ್ಲಾ ಥಿಯೇಟರ್‌ಗಳಲ್ಲೂ ಸೂಪರ್‌ಸ್ಟಾರ್ ಸಿನಿಮಾಗಳು ಓಡುತ್ತಿಲ್ವಾ? ಇಂತಹದ್ದೊಂದು ಅನುಮಾನವಂತೂ ಇದ್ದೇ ಇದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿರೋ ಸ್ಯಾಂಡಲ್‌ವುಡ್ ಈ ಮಟ್ಟಿಗೆ ಟಿವಿ, ಓಟಿಟಿ ಹಿಡಿತದಿಂದ ಹೊರಬದಲು ಸಾಧ್ಯವೇ ಇಲ್ಲವೇ? ಅನ್ನೋ ಪ್ರಶ್ನೆ ಈಗ ಸಿನಿಮಾ ಮಂದಿ ಮುಂದಿನೇ ಇದೆ.


Click it and Unblock the Notifications











