ಲವರ್ ಬಾಯ್ ಅಲ್ಲ 'ಮನದ ಕಡಲು' ಹೀರೊ.. ಸುಮುಖ್ ರಗಡ್ ಲುಕ್ ಹೇಗಿದೆ ನೋಡಿ
ಯೋಗರಾಜ್ ಭಟ್ ನಿರ್ದೇಶಿಸಿದ 'ಮನದ ಕಡಲು' ಸಿನಿಮಾ ಚಿತ್ರರಂಗಕ್ಕೆ ಪರಿಚಯವಾಗಿದ್ದ ಹೀರೋ ಸುಮುಖ್. ಚೊಚ್ಚಲ ಸಿನಿಮಾದಲ್ಲಿಯೇ ಗಮನ ಸೆಳೆದಿದ್ದ ಯುವ ಕನ್ನಡ ಚಿತ್ರರಂಗಕ್ಕೆ ಒಬ್ಬ ಒಳ್ಳೆಯ ಹೀರೋ ಆಗಬಹುದೆಂಬ ಭರವಸೆಯನ್ನು ಮೂಡಿಸಿದ್ದರು. ಯೋಗರಾಜ್ ಭಟ್ ಅಂತಹ ನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದರೂ ಚೊಚ್ಚಲ ಸಿನಿಮಾ ಗೆಲ್ಲಿಲ್ಲ. ಆದರೆ, ಸುಮುಖ್ ಪರ್ಫಾಮೆನ್ಸ್ ಮಾತ್ರ ಜನರಿಗೆ ಇಷ್ಟ ಆಗಿತ್ತು.
'ಮನದ ಕಡಲು' ಸಿನಿಮಾ ಬಳಿಕ ಸುಮುಖ್ ಸೈಲೆಂಟ್ ಆಗಿದ್ದರು. ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್ ಇರಲಿಲ್ಲ. ಆದ್ರೀಗ ದಿಢೀರನೇ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ಇನ್ನೂ ಸಿನಿಮಾದ ಟೈಟಲ್ ರಿವೀಲ್ ಮಾಡಿಲ್ಲ. ಹೊಸ ಲುಕ್ ಅಂತೂ ಸಿನಿ ಪ್ರೇಮಿಗಳ ಮನಸ್ಸು ಕದ್ದಿದೆ. ಚೊಚ್ಚಲ ಸಿನಿಮಾದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕಂಡಿದ್ದ ಸುಮುಖ್ ರಗಡ್ ಲುಕ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ.

ಯೋಗರಾಜ್ ಭಟ್ ಬತ್ತಳಿಕೆಯಲ್ಲಿ ಬಂದ 'ಮನದ ಕಡಲು' ಸಿನಿಮಾದಲ್ಲಿ ಲವರ್ ಬಾಯ್ ಲುಕ್ ಕೊಟ್ಟಿದ್ದ ಸುಮುಖ್ ಈಗ ಮಾಸ್ ಹೀರೋ. ಚಾಕಲೇಟ್ ಹೀರೋದಿಂದ ಹೊಸ ಅವತಾರದಲ್ಲಿ ಪ್ರತ್ಯಕ್ಷ ಆಗಿರುವ ಈ ಪೋಸ್ಟರ್ ಪ್ರಾಮಿಸಿಂಗ್ ಆಗಿದೆ.
ಸ್ಯಾಂಡಲ್‌ವುಡ್‌ನ ಯುವ ನಟ ಸುಮುಖ್ ಹುಟ್ಟುಹಬ್ಬದ ಅಂಗವಾಗಿ ಇನ್ನೂ ಹೆಸರಿಡದ ಹೊಸ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಗಣೇಶ ಪೇಟಿಂಗ್ ಮುಂದೆ ಕೈಯಲ್ಲಿ ಪೇಂಟ್ ಬಾಕ್ಸ್ ಹಿಡಿದು ನಿಂತಿರುವ ಸುಮುಖ್‌ಗೆ ಅವನ ನಿಷ್ಠೆ ತಲೆಬಾಗುವುದಿಲ್ಲ. ಅದು ಜ್ವಾಲೆಯಂತೆ ಹತ್ತಿ ಉರಿಯುತ್ತದೆ ಎಂಬ ಅಡಿ ಬರಹ ಕೊಡಲಾಗಿದೆ. ಇದು ಸಿನಿ ಪ್ರೇಮಿಗಳನ್ನು ಸೆಳೆದಿದೆ. ಈ ಬಾರಿ ಚಾಕಲೇಟ್ ಹೀರೋ ಅಲ್ಲ. ಮಾಸ್ ಹೀರೋ ಅಂತ ಈ ಪೋಸ್ಟರ್ ಸಾರಿ ಹೇಳಿದಂತೆ ಇದೆ.
ಈ ಸಿನಿಮಾದ ನಿರ್ದೇಶಕರು ಯಾರು?
ಸುಮುಖ್ ಚೊಚ್ಚಲ ಸಿನಿಮಾಗೆ ಯೋಗರಾಜ್ ಭಟ್ ಆಕ್ಷನ್ ಕಟ್ ಹೇಳಿದ್ದರೆ, ಈ ಸಿನಿಮಾವನ್ನು ಸಂಜಯ್ ಕೆಕೆ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂಜಯ್ ಕೆಕೆ ಗುರುತಿಸಿಕೊಂಡಿದ್ದಾರೆ. ಸುಮುಖ್ ಎರಡನೇ ಸಿನಿಮಾಗೆ ಇವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸುತ್ತಿರುವ ಸಂಜಯ್‌ಗೆ ಇದು ಚೊಚ್ಚಲ ಸಿನಿಮಾ. ಈ ಸಿನಿಮಾಗೆ ನಿರ್ದೇಶನದ ಜೊತೆಗೆ ಕಥೆ ಕೂಡ ಇವರೇ ಹೆಣೆದಿದ್ದಾರೆ.
ನೈಜ ಕಥೆಯಲ್ಲಿ ಸುಮುಖ್
ಅಂದ್ಹಾಗೆ ಈ ಸಿನಿಮಾ ನೈಜ ಘಟನೆಯನ್ನು ಆಧರಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಂಜಯ್ ಚೊಚ್ಚಲ ಸಿನಿಮಾದಲ್ಲಿಯೇ ರಿಯಲ್ ಸ್ಟೋರಿಯನ್ನು ಹೇಳೋದಿಕ್ಕೆ ಹೊರಟ್ಟಿದ್ದು ಕುತೂಹಲ ಕೆರಳಿಸಿದೆ. ಬೆಂಗಳೂರಿನಲ್ಲಿ ನಡೆದ ಸತ್ಯ ಘಟನೆಯೊಂದನ್ನು ಸಿನಿಮಾ ರೂಪಕ್ಕಿಳಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ಕಥೆಯನ್ನು ರೆಡಿ ಮಾಡಿಕೊಳ್ಳುತ್ತಲೇ ಇದ್ದಾರೆ. ಇದೀಗ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು, ಈ ಸಿನಿಮಾದಲ್ಲಿ ಸುಮುಖ್ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಸಂಜಯ್ ಹಾಗೂ ಸುಮುಖ್ ಅವರ ಹೊಸ ಸಾಹಸಕ್ಕೆ ರಾಯಲ್ ಫೈ ಎಂಟರ್ಟೈನ್ಮೆಂಟ್ ಬಂಡವಾಳ ಹಾಕುತ್ತಿದೆ. ಇದು ಬರೀ ಪೋಸ್ಟರ್ ಅಷ್ಟೇ. ಇನ್ನೂ ಉಳಿದ ಮಾಹಿತಿ ಮುಂದಿನ ದಿನಗಳಲ್ಲಿ ಚಿತ್ರತಂಡ ನೀಡಲಿದೆ.


Click it and Unblock the Notifications











