ಲೂಸ್ ಮಾದ ಯೋಗಿ- ಅದಿತಿ ಪ್ರಭುದೇವಗೆ ಇಷ್ಟು ವಯಸ್ಸಾಯ್ತಾ?
ಮೊನ್ನೆ ಮೊನ್ನೆಯಷ್ಟೇ ನವ ಯುವಕನಂತೆ ಕಾಣಿಸುತ್ತಿದ್ದ ಲೂಸ್ ಮಾದ ಯೋಗಿ ಮತ್ತು ಶಾನೆ ಟಾಪಗವ್ಳೆ ಬೆಡಗಿ ಅದಿತಿ ಪ್ರಭುದೇವಗೆ ವಯಸ್ಸಾಗಿದೆ! ಬಿಳಿಗೂದಲು, ನೆರಿಗೆಗಳು ಮೂಡಿವೆ. ಯಂಗ್ ಆಗಿದ್ದ ಇಬ್ಬರೂ ಇದ್ದಕ್ಕಿದ್ದಂತೆ ವೃದ್ಧರಾಗಿದ್ದಾರೆ.
ಇದಕ್ಕೆ ಕಾರಣ 'ಒಂಬತ್ತನೇ ದಿಕ್ಕು'. ದಯಾಳ್ ಪದ್ಮನಾಭನ್ ನಿರ್ದೇಶನದ 'ಒಂಬತ್ತನೆ ದಿಕ್ಕು' ಚಿತ್ರದಲ್ಲಿ ಯೋಗಿ ಮತ್ತು ಅದಿತಿ ವಯೋವೃದ್ಧರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಒಳಗೊಂಡ ವಿಭಿನ್ನ ಪ್ರಯೋಗ. ಜತೆಗೆ ಜನರಿಗೆ ಆಪ್ತವಾಗುವಂತಹ ಪ್ರೇಮ ಕಥೆಯೂ ಇದೆಯಂತೆ.
ಇಲ್ಲಿ ಯೋಗಿ-ಅದಿತಿ ಪ್ರೀತಿ ಪ್ರೇಮದಿಂದ ಶುರುವಾಗಿ ಸಂಸಾರ, ಮಕ್ಕಳು-ಮೊಮ್ಮಕ್ಕಳು ಸಾವಿನವರೆಗಿನ ಬದುಕಿನ ಫೋಟೊಗಳನ್ನು ದಯಾಳ್ ಪದ್ಮನಾಭನ್ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಎಲ್ಲ ಘಟನೆಗಳೂ ಒಂದು ಬಿಟ್ ಸಾಂಗ್‌ನಲ್ಲಿಯೇ ನಡೆದು ಹೋಗುತ್ತದೆಯಂತೆ. ಮುಂದೆ ಓದಿ...

ಒಂದು ಬಿಟ್ ಸಾಂಗ್‌ನಲ್ಲಿ ಎಲ್ಲವೂ
ಚಿತ್ರದಲ್ಲಿ ಯೋಗಿ ಮತ್ತು ಅದಿತಿ ನಡುವೆ ಪ್ರೀತಿ ಮೂಡಿ, ಅವರಿಗೆ ಮದುವೆಯಾಗಿ, ತಂದೆ ತಾಯಿಯಾಗಿ, ಮಗನಿಗೆ ಮದುವೆ ಮಾಡಿ, ಕೊನೆಗೆ ಗೋಡೆಯ ಮೇಲಿನ ಫ್ರೇಂ ಕೂಡ ಆಗುತ್ತಾರೆ. ಇವೆಲ್ಲವೂ ಒಂದೇ ಬಿಟ್ ಸಾಂಗ್‌ನಲ್ಲಿ ಮುಗಿದುಹೋಗುತ್ತದೆ.

ಹಿಂಜರಿಯದೆ ಮಾಡಿದ ಯೋಗಿ-ಅದಿತಿ
ಸಾಮಾನ್ಯವಾಗಿ ನಾಯಕ ನಾಯಕಿಯರು ತಮ್ಮ ಗ್ಲಾಮರ್‌ಗೆ ಹಿನ್ನಡೆಯುಂಟುಮಾಡುವ ವಯಸ್ಸಾದ ಪಾತ್ರಗಳೆಂದರೆ ನಟಿಸಲು ಹಿಂಜರಿಯುತ್ತಾರೆ. ಆದರೆ ಅದಿತಿ ಮತ್ತು ಯೋಗಿ ಇಬ್ಬರೂ ಹೇಳಿದ ಕೂಡಲೇ ಖುಷಿಯಿಂದ ಒಪ್ಪಿಕೊಂಡು ನಟಿಸಿದ್ದಾರೆ ಎಂದು ದಯಾಳ್ ಹೇಳಿಕೊಂಡಿದ್ದಾರೆ.

ಜೀವನದ ವಿಭಿನ್ನ ಹಂತಗಳು
ಚಿತ್ರದಲ್ಲಿ ನಾಯಕ, ನಾಯಕಿಯನ್ನು ನೋಡಿದ ಕೂಡಲೇ ತನ್ನ ಇಡೀ ಜೀವನವನ್ನು ಕಲ್ಪಿಸಿಕೊಳ್ಳುತ್ತಾನೆ. ಪ್ರೇಮ ನಿವೇದನೆ ಮಾಡುವುದರಿಂದ ಆರಂಭವಾಗಿ ಜೀವನದ ಬೇರೆ ಬೇರೆ ಹಂತಗಳನ್ನು ಕಲ್ಪಿಸಿಕೊಳ್ಳುತ್ತಾನೆ. ಇವುಗಳನ್ನು ದೃಶ್ಯ ರೂಪದಲ್ಲಿ ತೋರಿಸುವುದಿಲ್ಲ. ಬದಲಾಗಿ ಫೋಟೊಗಳ ಮೂಲಕವೇ ತೋರಿಸಲಾಗುತ್ತದೆ.

ಕೊನೆಯಲ್ಲಿ ಶೂಟಿಂಗ್
ಯೋಗಿ ಮತ್ತು ಅದಿತಿ ವಿಭಿನ್ನ ಗೆಟಪ್‌ಗಳಲ್ಲಿ ಫೋಟೊಶೂಟ್‌ಗೆ ಒಳಗಾಗಿದ್ದಾರೆ. ಸಂಪೂರ್ಣ ಸಿನಿಮಾ ಶೂಟಿಂಗ್ ಮುಗಿದ ಬಳಿಕ ಕೊನೆಯಲ್ಲಿ ಈ ಹಾಡನ್ನು ಶೂಟ್ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ವೇಳೆಗೆ ಚಿತ್ರ ಬಿಡುಗಡೆಯಾಗಬೇಕಿತ್ತು. ಲಾಕ್‌ಡೌನ್ ಮುಗಿದ ಬಳಿಕ ಸೆನ್ಸಾರ್ ಆಗಿ ತೆರೆಗೆ ಬರಲಿದೆ.


Click it and Unblock the Notifications











