ಶಿವಣ್ಣ+ ಪ್ರಭುದೇವ+ ರಾಕ್‌ಲೈನ್+ಯೋಗ್‌ಭಟ್=ಕರಟಕ ದಮನಕ: ಟೈಟಲ್ or ಸ್ಟೋರಿ?
ವಿಕಟಕವಿ ಹಾಗೂ ನಿರ್ದೇಶಕ ಯೋಗರಾಜ್ ಭಟ್ 'ಗಾಳಿಪಟ 2' ಪ್ರೇಕ್ಷಕರಿಗೆ ಇಷ್ಟ ಆಗಿದೆ. ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಇದೇ ಖುಷಿಯಲ್ಲಿ ಹೊಸ ಸಿನಿಮಾವನ್ನು ಕೈಗೆತ್ತುಕೊಂಡಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣವನ್ನು ಸಿಕ್ಕಾಪಟ್ಟೆ ಜೋಷ್‌ನಲ್ಲಿ ಆರಂಭ ಮಾಡಿದ್ದಾರೆ.
ಯೋಗರಾಜ್ ಭಟ್ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್ ಇದೇ ಮೊದಲು. ಹಾಗೇ ಶಿವಣ್ಣ ಹಾಗೂ ಪ್ರಭುದೇವ ಕಾಂಬಿನೇಷನ್ ಕೂಡ ಇದೇ ಮೊದಲು. ರಾಕ್ ಲೈವ್ ವೆಂಕಟೇಶ್, ಶಿವಣ್ಣ, ಪ್ರಭುದೇವ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್‌ನಲ್ಲಿ ಬರ್ತಿರೋ ಹೊಸ ಸಿನಿಮಾ ಸಿನಿಪ್ರಿಯರಲ್ಲಿ ಕುತೂಹಲವನ್ನು ದುಪ್ಪಟ್ಟು ಮಾಡಿರೋದಂತೂ ಸತ್ಯ. ಈ ಮಧ್ಯೆ ಯೋಗರಾಜ್ ಭಟ್ ಸಿನಿಮಾ ಬಗ್ಗೆ ಚಿಕ್ಕದೊಂದು ಹಿಂಟ್ ಕೊಟ್ಟಿದ್ದಾರೆ. ಅದು ಸಿನಿಪ್ರಿಯರ ತಲೆಯೊಳಗೆ ಹುಳ ಬಿಟ್ಟಂತಾಗಿದೆ.
ಸಿನಿಪ್ರಿಯರ ತಲೆಯೊಳಗೆ ಹುಳ ಬಿಟ್ಟ ಭಟ್ರು
ಯೋಗರಾಜ್ ಭಟ್ ಮುಂದಿನ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಅದರಲ್ಲೂ ಇದು ಬಿಗ್ ಬಜೆಟ್ ಸಿನಿಮಾ ಆಗಿರೋದರಿಂದ ಭಟ್ರು ಫುಲ್ ಜೋಷ್‌ನಲ್ಲಿ ಶೂಟಿಂಗ್ ಆರಂಭಿಸಿದ್ದಾರೆ. ಈಗಾಗಲೇ ಹಲವು ಭಾಗದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಈ ಮಧ್ಯೆ ಸಿನಿಪ್ರಿಯರ ತಲೆಗೆ ಹುಳವನ್ನೂ ಬಿಟ್ಟಿದ್ದಾರೆ.

ಯೋಗರಾಜ್ ಭಟ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ನಾಲ್ಕವರ ಹೆಸರಿದೆ. ಮೇಲೆ ಶ್ರೀ ಶಿವಣ್ಣ+ ಶ್ರೀ ಪ್ರಭುದೇವ ಅಂತಿದೆ. ಅದೇ ಕೆಳಗೆ ಶ್ರೀ ರಾಕ್‌ಲೈನ್ ವೆಂಕಟೇಶ್ + ಶ್ರೀ ಯೋಗರಾಜ್ ಭಟ್ ಅಂತಿದೆ. ಮಧ್ಯೆ K ಮುಂದೆ ಕರಟಕ D ಮುಂದೆ ದಮನಕ ಅಂತಲೂ ಇದೆ. ಇದೇ ಮುಂದಿನ ಸಿನಿಮಾ ಅಂತ ಬರೆದುಕೊಂಡಿದ್ದಾರೆ.
ಕರಕಟ ದಮನಕ ಹಿನ್ನೆಲೆ ಏನು?
'ಕರಟಕ' ಹಾಗೂ 'ದಮನಕ' ಅನ್ನೋ ಎರಡು ಪದಗಳನ್ನು ಡಿಕೋಡ್ ಮಾಡಲು ಹೋದರೆ, ಪಂಚತಂತ್ರದ ಕಡೆ ಹೋಗುತ್ತೆ. ಪಂಚತಂತ್ರದ ಕಥೆಯಲ್ಲಿ ಕರಟಕ ಹಾಗೂ ದಮನಕ ಎಂಬುದು ಎರಡು ನರಿಗಳು. ಇವು ಕಾಡಿನ ರಾಜ ಸಿಂಹದ ಮಂತ್ರಿಗಳು. ಎರಡೂ ಬೇರೆ ಸ್ವಭಾವ ಹೊಂದಿದ್ದು, ಸಿಂಹರಾಜನ ಕಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಹೀಗಾಗಿ ಯೋಗರಾಜ್ ಭಟ್ಟರು ಪಂಚತಂತ್ರದ ತಿರುಳನ್ನು ತಮ್ಮ ಕಥೆಯಲ್ಲಿ ತೆಗೆದುಕೊಂಡು ಬಂದಿದ್ದಾರಾ? ಸಿನಿಮಾದಲ್ಲಿ ಶಿವಣ್ಣ ಹಾಗೂ ಪ್ರಭುದೇವ ಅವರ ಪಾತ್ರಗಳು 'ಕರಟಕ' ಹಾಗೂ 'ದಮನಕ'ವನ್ನುಹೋಲುತ್ತವಾ? ಹೀಗೆ ನೂರಾರು ಪ್ರಶ್ನೆಗಳಂತೂ ಹುಟ್ಟಿಕೊಂಡಿವೆ.

ಸಿನಿಮಾ ಶುರುವಾಗಿದೆ ಶೂಟಿಂಗ್
ಪ್ರಭುದೇವ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ ಈಗಾಗಲೇ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ಆರಂಭ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭುದೇವ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ ಜೋಷ್‌ನಲ್ಲೇ ಭಾಗಿಯಾಗಿದ್ದಾರೆ.
ವಿಶೇಷ ಅಂದರೆ, ಬಹಳ ದಿನಗಳ ಬಳಿಕ ರಾಕ್‌ಲೈನ್ ವೆಂಕಟೇಶ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದ್ಹಾಗೆ, ಇದು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ 47ನೇ ಸಿನಿಮಾ. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ರಾಕ್‌ಲೈನ್ ಕಾಣಿಸಿಕೊಳ್ಳುತ್ತಿದ್ದು, ನಾಲ್ವರು ದಿಗ್ಗಜರು ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ.
ಸಿನಿಮಾದ ಕತೆಯೇನು?
ಯೋಗರಾಜ್ ಭಟ್ ಹಳ್ಳಿಯಲ್ಲಿ ನಡೆಯೋ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಸಿನಿಮಾವನ್ನು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಸಿನಿಮಾದ ಕಥೆಯ ಬಗ್ಗೆ ಕುತೂಹಲ ಸಹಜವಾಗಿಯೇ ಮೂಡಿದೆ.
ಶಿವಣ್ಣ ಹಾಗೂ ಪ್ರಭುದೇವ ಇಬ್ಬರಿಗೂ ಒಬ್ಬೊಬ್ಬರು ನಾಯಕಿಯರು. 'ಜೇಮ್ಸ್' ಸಿನಿಮಾದಲ್ಲಿ ನಟಿಸಿರೋ ಪ್ರಿಯಾ ಆನಂದ್ ಹಾಗೂ 'ಗಾಳಿಪಟ 2' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಿಶ್ವಿಕಾ ನಾಯ್ಡು ಈ ಸಿನಿಮಾದಲ್ಲಿದ್ದಾರೆ. ವಿ ಹರಿಕೃಷ್ಣ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಈ ಸಿನಿಮಾಗಿದೆ.


Click it and Unblock the Notifications











