ಮೈಸೂರಿನ 'ಗರಡಿ' ಮನೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಸಾಹಸ ನಿರ್ದೇಶಕ ಕೌರವ ವೆಂಕಟೇಶ್
ನಿರ್ದೇಶಕ ಯೋಗರಾಜ್ ಭಟ್ ಎರಡೆರಡು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾನ್ಯವಾಗಿ ಒಂದು ಸಿನಿಮಾ ಮುಗಿದ ಬಳಿಕ ಇನ್ನೊಂದು ಸಿನಿಮಾ ಕೈಗೆತ್ತಿಗೊಳ್ಳುವ ಭಟ್ಟರು, 'ಗರಡಿ' ಸಿನಿಮಾದ ಪ್ರೀಪ್ರೊಡಕ್ಷನ್ ಕೆಲಸ ಆರಂಭ ಮಾಡಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಇನ್ನ ಬಿಡುಗಡೆಯಾಗಬೇಕಿದೆ. ಅಷ್ಟರಲ್ಲೇ 'ಗರಡಿ' ಸಿನಿಮಾ ಆರಂಭಿಸಿರುವುದು, ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಯೋಗರಾಜ್ ಭಟ್ ನಿರ್ದೇಶನದ 'ಗಾಳಿಪಟ 2' ಚಿತ್ರೀಕರಣ ಬಹುತೇಕ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಬ್ಯುಸಿಯಾಗಿರುವ ಭಟ್ಟರು ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಅದುವೇ 'ಗರಡಿ' ಯಶಸ್ ಸೂರ್ಯ ನಟಿಸುತ್ತಿರುವ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಯೋಗರಾಜ್ ಭಟ್ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದ್ದು, ಯೋಗರಾಜ್ ಭಟ್ ಮೈಸೂರಿನ ಗರಡಿ ಮನೆಯಲ್ಲಿದ್ದಾರೆ.

'ಗರಡಿ' ಮನೆಯಲ್ಲಿ ಯೋಗರಾಜ್ ಭಟ್ ಶೋಧ
ಯೋಗರಾಜ್ ಭಟ್ 'ಗಾಳಿಪಟ 2' ಚಿತ್ರದ ಜೊತೆಯಲ್ಲಿಯೇ 'ಗರಡಿ' ಸಿನಿಮಾವನ್ನೂ ಆರಂಭಿಸಿದ್ದು, ಮೈಸೂರಿನ ಗರಡಿ ಮನೆಗಳಿಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. 'ಗರಡಿ' ಅನ್ನುವ ಟೈಟಲ್ ಇಟ್ಟಿರುವುದರಿಂದ ಸಿನಿಮಾ ಕಥೆ ಗರಡಿ ಮನೆ, ಕುಸ್ತಿ ಸುತ್ತ ಸಾಗುತ್ತೆ ಎನ್ನವುದನ್ನು ಊಹಿಸಬಹುದು. ಸಿನಿಮಾದ ಚಿತ್ರೀಕರಣ ಆರಂಭಕ್ಕೂ ಮುನ್ನ ನಿರ್ದೇಶಕ ಯೋಗರಾಜ್ ಹಾಗೂ ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ಮೈಸೂರಿನ ಗರಡಿ ಮನೆಗೆ ನುಗ್ಗಿದ್ದಾರೆ. ಅಲ್ಲಿನ ಕುಸ್ತಿಪಟುಗಳೊಂದಿಗೆ ಕುಸ್ತಿಯ ಬಂಗಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.

ಸಾಹಸ ದೃಶ್ಯದಿಂದಲೇ 'ಗರಡಿ' ಸಿನಿಮಾ ಆರಂಭ
ಸೋಶಿಯಲ್ ಮೀಡಿಯಾದಲ್ಲಿ ಯೋಗರಾಜ್ ಭಟ್ ಹಾಗೂ ಕೌರವ ವೆಂಕಟೇಶ್ ಇಬ್ಬರೂ ಕುಸ್ತಿ ಪಟುಗಳೊಂದಿಗೆ ಸಮಾಲೋಚನೆ ಮಾಡುವ ವಿಡಿಯೋ ಹರಿದಾಡುತ್ತಿದೆ. ಹೀಗಾಗಿ ಯೋಗ್‌ರಾಜ್ ಭಟ್ಟರು ಸಾಹಸ ದೃಶ್ಯದಿಂದಲೇ ಮೊದಲು 'ಗರಡಿ' ಸಿನಿಮಾದ ಶೂಟಿಂಗ್ ಆರಂಭ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಸಹಜವಾಗಿ ಲವ್ ಸ್ಟೋರಿ ಹಿಂದೆ ಬೀಳುವ ವಿಕಟಕವಿ ಯೋಗರಾಜ್ ಭಟ್ ಈ ಬಾರಿ ಆಕ್ಷನ್ ಸಿನಿಮಾವನ್ನು ನಿರ್ದೇಶಿಸುತ್ತಾರೆ ಎನ್ನಲಾಗಿದೆ.

ಯಶಸ್ ಸೂರ್ಯ ಜೊತೆ ರಚಿತಾ ರಾಮ್
ನಿರ್ದೇಶಕ ಯೋಗರಾಜ್ ಭಟ್, ನಟ ಯಶಸ್ ಸೂರ್ಯ, ನಟಿ ರಚಿತಾ ರಾಮ್ ಈ ಮೂವರೂ ಇದೇ ಮೊದಲ ಬಾರಿಗೆ ಒಂದೇ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಯೋಗರಾಜ್ ಭಟ್ ನಿರ್ದೇಶನದಲ್ಲಿ ರಚಿತಾ ರಾಮ್ ಕೆಲಸ ಮಾಡುತ್ತಿರುವುದು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟ ಯಶಸ್ ಸೂರ್ಯ ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ 'ಗರಡಿ' ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಕೆರಳಿಸಿದೆ.

'ಗರಡಿ' ಸಿನಿಮಾದ ನಿರ್ಮಾಣ ಬಿಸಿ ಪಾಟೀಲ್
'ಗರಡಿ' ಸಿನಿಮಾವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಪತ್ನಿ ವನಜಾ.ಬಿ.ಪಾಟೀಲ್ ಹಾಗೂ ಪುತ್ರಿ ಸೃಷ್ಟಿ ಪಾಟೀಲ್ ನಿರ್ಮಾಣ ಮಾಡುತ್ತಿದ್ದಾರೆ. ಬಿ.ಸಿ ಪಾಟೀಲ್ ಬಹಳ ದಿನಗಳ ಬಳಿಕ ಮತ್ತೆ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದು, ಈ ಸಿನಿಮಾದಲ್ಲಿ ಒಂದು ಪಾತ್ರವನ್ನು ಮಾಡಲಿದ್ದಾರೆ ಎನ್ನಲಾಗಿದೆ. 'ಗರಡಿ' ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರ ನಟಿಸಬಹುದು ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ. ಇನ್ನು ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ, ಜಯಂತ ಕಾಯ್ಕಿಣಿ ಸಾಹಿತ್ಯ ರಚಿಸಲಿದ್ದಾರೆ.


Click it and Unblock the Notifications











