ನೀವೂ ರಶ್ಮಿಕಾ ಮಂದಣ್ಣ ರೀತಿ ಮಿಂಚ್ಬೇಕಾ? ಈ ಕಾಸ್ಟ್ಯೂಮ್ ಎಲ್ಲಿ ಸಿಗುತ್ತೆ? ರೇಟ್ ಎಷ್ಟು?
ಕನ್ನಡದ ಕ್ರಶ್ ಆಗಿದ್ದ ರಶ್ಮಿಕಾ ಮಂದಣ್ಣ ನಂತರ ಭಾರತದ ಕ್ರಶ್ ಆಗಿ ಬದಲಾಗಿ ಈಗ ಬಾಲಿವುಡ್, ಟಾಲಿವುಡ್ ಗಳಲ್ಲೆಲ್ಲಾ ಬೇಡಿಕೆಯ ನಟಿ. ಆಕೆಯ ಚಿತ್ರಗಳಂತೆಯೇ ಜನರ ಗಮನ ಸೆಳೆಯುತ್ತಿರೋದು ರಶ್ಮಿಕಾ ಫ್ಯಾಷನ್ ಸೆನ್ಸ್. ತಾರೆಯರೆಲ್ಲಾ ತಮ್ಮೊಂದಿಗೆ ಸ್ಟೈಲಿಸ್ಟ್, ಡಿಸೈನರ್ಸ್, ಮೇಕಪ್ ಆರ್ಟಿಸ್ಟ್ ಗಳ ದೊಡ್ಡ ತಂಡವನ್ನೇ ಹೊಂದಿರ್ತಾರೆ. ಏರ್ಪೋರ್ಟ್ ಆಗ್ಲಿ, ಅವಾರ್ಡ್ ಫಂಕ್ಷನ್ ಆಗ್ಲಿ ಎಲ್ಲೂ ಒಂದು ತಲೆಗೂದಲು ಕೂಡಾ ಆಚೀಚೆ ಆಗದಂತೆ ಪರ್ಫೆಕ್ಟ್ ಆಗಿ ಕಾಣೋದು ಈಗಿನ ಟ್ರೆಂಡ್.
ರಶ್ಮಿಕಾ ಮಂದಣ್ಣ ಕೂಡಾ ಸ್ಟೈಲ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಸಿನಿಮಾ, ಜಾಹೀರಾತುಗಳು, ಸಾರ್ವಜನಿಕ ಸಮಾರಂಭಗಳು ಮಾತ್ರ ಅಲ್ಲ, ಇನ್‌ಸ್ಟಾಗ್ರಾಂ ಪೋಸ್ಟ್‌ಗಳಲ್ಲೂ ಪರ್ಫೆಕ್ಟ್ ಆಗಿ ತನ್ನ ಫ್ಯಾಷನ್ ಸೆನ್ಸ್‌ಗಾಗಿ ರಶ್ಮಿಕಾ ಹೆಸರು ಮಾಡಿದ್ದಾರೆ. ಏಪ್ರಿಲ್ 5ಕ್ಕೆ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ. ಎಲ್ಲೆಡೆ ಅಭಿಮಾನಿಗಳ ದೊಡ್ಡ ಬಳಗವನ್ನೇ ಹೊಂದಿರೋ ಈ ಕೊಡಗಿನ ಕುವರಿಯ ಕೆಲವು ಸಖತ್ ಕಾಸ್ಟ್ಯೂಮ್‌ಗಳ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ರಶ್ಮಿಕಾ ರೀತಿ ನೀವೂ ಸೂಪರ್ ಸ್ಟೈಲಿಶ್ ಆಗಿ ಕಾಣೋಕೆ ಈ ಡ್ರೆಸ್‌ಗಳು ಖಂಡಿತಾ ಸಹಾಯ ಮಾಡುತ್ತವೆ. ಆದರೆ, ಜೇಬಿನಲ್ಲಿ ಸಿಕ್ಕಾಪಟ್ಟೆ ದುಡ್ಡು ಇರಬೇಕಷ್ಟೇ. ಈ ಬಿಳಿ ಬಣ್ಣದ ಫ್ರಾಕ್ ನೆನಪಿದೆಯಲ್ವಾ? ರಶ್ಮಿಕಾ ಅದೆಷ್ಟು ಕ್ಯೂಟ್ ಆಗಿ ಈ ಡ್ರೆಸ್‌ನಲ್ಲಿ ಕಾಣ್ತಿದ್ರು ಅಲ್ವಾ? ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಬಂದಿದ್ದೇ ತಡ, ಸಾವಿರಾರು ಕಾಮೆಂಟ್‌ಗಳಲ್ಲಿ ಮುಕ್ಕಾಲು ಪಾಲು "ಲುಕ್ಕಿಂಕ್ ಕ್ಯೂಟ್", "ಕ್ಯೂಟೆಸ್ಟ್" ಎನ್ನುವುದೇ ಇತ್ತು.
ಈ ಮಾತುಗಳೇನೂ ಸುಳ್ಳಲ್ಲ ಬಿಡಿ. ಜಿಮ್ಮರ್‌ಮ್ಯಾನ್ ಎನ್ನುವ ಫ್ಯಾಷನ್ ಬ್ರಾಂಡ್‌ನ ಈ ಡ್ರೆಸ್ ನಿಜಕ್ಕೂ ರಶ್ಮಿಕಾಗೆ ಒಂದು ಫ್ರೆಶ್ ಲುಕ್ ಕೊಟ್ಟಿತ್ತು. ಈ ಬಿಳಿ ಮತ್ತು ಪಿಂಕ್ ಹೂಗಳ ಲವ್ ಲಾರ್ನ್ ಫ್ಲೋರಲ್ ಫ್ಲಟರ್ ಡ್ರೆಸ್ ಆನ್ ಲೈನ್‌ನಲ್ಲಿ ಜಿಮ್ಮರ್‌ಮ್ಯಾನ್ ವೆಬ್‌ಸೈಟ್‌ನಲ್ಲಿ ನೀವೂ ಕೊಳ್ಳಬಹುದು. ಆದರೆ, ಇದು ಆಸ್ಟ್ರೇಲಿಯನ್ ಬ್ರ್ಯಾಂಡ್ ಆಗಿರೋದ್ರಿಂದ ಪೇಮೆಂಟ್ ಡಾಲರ್‌ನಲ್ಲೇ ಮಾಡ್ಬೇಕು ಅಷ್ಟೇ. ಆದರೂ, ನೀವು ರಶ್ಮಿಕಾ ತೊಟ್ಟಿದ್ದ ಈ ಡ್ರೆಸ್ ನೋಡಿ ಕೊಳ್ಳುವ ಮನಸ್ಸು ಮಾಡಿದರೆ, ಕೇವಲ 63,000 ರೂಪಾಯಿ ರೆಡಿ ಇಟ್ಕೊಂಡ್ರೆ ಸಾಕಾಗುತ್ತೆ.
ಮಾಡ್ರನ್ ಡ್ರೆಸ್‌ಗಳಲ್ಲಿ ಕಾಣುವಷ್ಟೇ ಮುದ್ದಾಗಿ ರಶ್ಮಿಕಾ ಸೀರೆಯಲ್ಲೂ ಮಿಂಚೋದು ಸುಳ್ಳಲ್ಲ. ಈ ಕಪ್ಪು ಬಣ್ಣದ ಸಿಂಪಲ್ ಎನಿಸುವ ಸೀರೆಯನ್ನೇ ತಗೊಳ್ಳಿ. ಹಾಗೇ ಬರೀ ಸೀರೆ ನೋಡಿದ್ರೆ ಸಾಧಾರಣ ಅನ್ನಿಸೋದು, ರಶ್ಮಿಕಾ ಉಟ್ಟಾಗ ಮಾತ್ರ ವಾವ್ ! ಎನಿಸುವಂತಿದೆ. ಅಂದ್ಹಾಗೆ, ಇದು ಅಪ್ಪಟ ದೇಸಿ ಬ್ರ್ಯಾಂಡ್ ರಾ ಮ್ಯಾಂಗೋನ ಕಲೆಕ್ಷನ್. ಸಂಜಯ್ ಗಾರ್ಗ್ ಅನ್ನೋ ಡಿಸೈನರ್ ಒಡೆತನದ ಈ ಬ್ರ್ಯಾಂಡ್ ಪರಿಸರ ಸ್ನೇಹಿ ಬಟ್ಟೆಗಳಿಗೆ ಹೆಸರುವಾಸಿ.

ರಶ್ಮಿಕಾ ತೊಟ್ಟಿರೋ ಈ ಕಪ್ಪು ರೇಷ್ಮೆ ಸೀರೆ ನಮ್ಮ ದೇಶದಲ್ಲೇ ತಯಾರಾಗಿದ್ದು, ಹಾಗಾಗಿ ನೀವು ಸುಲಭವಾಗಿ ಕೊಳ್ಳಬಹುದು. ಮೃದುವಾದ ರೇಷ್ಮೆಯ ಈ ಸೀರೆ ಬಹುತೇಕ ಪ್ಲೇನ್, ಕಂಡೂ ಕಾಣದಂತ ಬಂಗಾರದ ರೇಕಿನ ಗೆರೆ ಅದಕ್ಕೊಂದು ಕ್ಲಾಸ್ ಲುಕ್ ಕೊಟ್ಟಿದೆ. ಸೀರೆಗೆ ಒಪ್ಪುವಂತೆ ವಿ ನೆಕ್‌ನ ಸ್ಲೀವ್ ಲೆಸ್ ಬ್ಲೌಸ್ ಧರಿಸಿದ್ದಾರೆ ರಶ್ಮಿಕಾ ಮಂದಣ್ಣ. ನೀವೂ ಈ ಸೀರೆ ಕೊಳ್ಳಬೇಕೆಂದರೆ, ರಾ ಮ್ಯಾಂಗೋ ವೆಬ್‌ಸೈಟ್‌ನಲ್ಲಿ ಚೆಕ್ ಮಾಡಬಹುದು. ಬೆಲೆ ಜಸ್ಟ್ 80,000 ರೂಪಾಯಿಗಳು.
'ನೀವು ಸೀರೆ ಅಂದ್ರಿ, ನಂಗೀಗ ಸೀರೆ ಬಿಟ್ಟು ಬೇರೆ ತೋಚ್ತಿಲ್ಲ' ಎನ್ನುವ ಸಾಲುಗಳ ಜೊತೆಗೇ ರಶ್ಮಿಕಾ ಶೇರ್ ಮಾಡಿದ್ದು ಈ ಝಗಮಗಿಸುವ ಫೋಟೋವನ್ನ ನೋಡಿದವರ ಎದೆಗೆ ಕಿಚ್ಚು ಹಚ್ಚಿದ ಈ ಫೋಟೋದಲ್ಲಿ ರಶ್ಮಿಕಾ ನಗು-ಅಂದದಷ್ಟೇ ಆ ಸೀರೆಯೂ, ಅದರ ಸೌಂದರ್ಯವೂ ಹೊಳೆದಿದ್ದು ಸುಳ್ಳಲ್ಲ. ಸೆಕ್ವಿನ್ ವರ್ಕ್ ಮತ್ತು ಕಟ್ದಾನಾ ಕುಸುರಿ ಕೆಲಸ ಇರೋ ಈ ಬ್ಲಶ್ ಪಿಂಕ್ ಬಣ್ಣದ ಸೀರೆ ಸಾವನ್ ಗಾಂಧಿ ಅನ್ನೋ ಡಿಸೈನರ್‌ನ ಕ್ರಿಯೇಶನ್. ಬಹಳ ಸೂಕ್ಷ್ಮವಾದ ಮಿರರ್ ಮತ್ತು ಥ್ರೆಡ್ ವರ್ಕ್ ಇರೋ ಈ ಸೀರೆ ಕಾಣುವಷ್ಟೇನೂ ಭಾರವಿಲ್ಲವಂತೆ. ಅದೇ ಶೇಡ್‌ನ ಲೈಟ್ ಕಲರ್ ಡೀಪ್ ನೆಕ್ ಲೈನ್ ಸ್ಲೀವ್ ಲೆಸ್ ಬ್ಲೌಸ್ ತೊಟ್ಟ ರಶ್ಮಿಕಾ ಈ ಲುಕ್ಗೆ ಮತ್ತಷ್ಟು ಬ್ರೈಟ್ ನೆಸ್ ಕೊಟ್ಟಿದ್ದು ಕೂದಲ ಆ ಪುಟ್ಟ ಬನ್.
ಸಿಂಪಲ್ ಆಗಿ ಒಂದೇ ಕಲ್ಲಿನ ಕಿವಿಯೋಲೆ ಮಾತ್ರ ಧರಿಸಿದ್ರೂ ಈ ಸೀರೆ ಸುಂದರಿಯ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದ ಪರಿ ಮಾತ್ರ ಸಖತ್ ಬಿಡಿ. ಅಂದ್ಹಾಗೆ ಈ ಡಿಸೈನರ್ ಸೀರೆಯ ಬೆಲೆ 1.59 ಲಕ್ಷ ರೂಪಾಯಿ. ಈ ಎಲ್ಲಾ ಕಾಸ್ಟ್ಯೂಮ್‌ಗಳು ಭಾರೀ ದುಬಾರಿ ಎನಿಸಬಹುದು. ಆದರೆ, ಮುದ್ದು ಮುಖದ ರಶ್ಮಿಕಾ ಮಂದಣ್ಣ ದೇವತೆಯ ರೀತಿ ಕಾಣೋದ್ರಲ್ಲಿ ಇವುಗಳ ಪಾತ್ರ ಬಹಳ ದೊಡ್ಡದು ಅನ್ನೋದು ಮಾತ್ರ ಅಷ್ಟೇ ಸತ್ಯ.


Click it and Unblock the Notifications











