Appu-Yuva Rajkumar:"ಬೆಂಗಳೂರಿಗೆ ಸಾವಿರ ಜನ ಬರ್ತಾರೆ, ಹೋಗ್ತಾರೆ, ಇಲ್ಲಿರೋದು ಒಬ್ಬರೇ ಅಪ್ಪು.. ಲೋಕಲ್.."
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಚೊಚ್ಚಲ ಬಾರಿಗೆ ಹೀರೋ ಆಗಿ ನಟಿಸಿದ ಸಿನಿಮಾ 'ಅಪ್ಪು' ಇಂದು (ಮಾರ್ಚ್ 14) ರಿ-ರಿಲೀಸ್ ಆಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ದಿನದಂದೇ 'ಅಪ್ಪು' ಸಿನಿಮಾವನ್ನು ಮರುಬಿಡುಗಡೆ ಮಾಡಿದ್ದು ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಮಂದಿರಗಳಿಗೆ ಬಂದು ಮತ್ತೆ ಸಿನಿಮಾ ನೋಡುತ್ತಿದ್ದಾರೆ.
ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ 'ಅಪ್ಪು' ಮರು ಬಿಡುಗಡೆಯಾಗಿದೆ. ಫ್ಯಾನ್ಸ್ ಶೋಯಿಂದ ಹಿಡಿದು ಇವತ್ತಿನ ಇಡೀ ಶೋ ಹೌಸ್‌ಫುಲ್ ಆಗಿದೆ. ಪುನೀತ್ ಹಾಗೂ ದೊಡ್ಮೆನೆ ಅಭಿಮಾನಿಗಳು, ಸಿನಿಪ್ರೇಮಿಗಳು ಮತ್ತೆ 'ಅಪ್ಪು' ಸಿನಿಮಾವನ್ನು ಕಣ್ತುಂಬಿಕೊಂಡಿದ್ದಾರೆ. ಇದೇ ಸಂಭ್ರಮದಲ್ಲಿ ಯುವ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ತಾಯಿ ಮಂಗಳಾ ರಾಘವೇಂದ್ರ ರಾಜ್‌ಕುಮಾರ್ ಸಿನಿಮಾವನ್ನು ವೀಕ್ಷಿಸಿದ್ದಾರೆ.

'ಅಪ್ಪು' ಸಿನಿಮಾವನ್ನು ಅಭಿಮಾನಿಗಳ ಜೊತೆ ಕೂಡ ಯುವರಾಜ್‌ಕುಮಾರ್ ವೀಕ್ಷಿಸಿದ್ದಾರೆ. ಈ ವೇಳೆ 'ಅಪ್ಪು' ಸಿನಿಮಾದ ಶೂಟಿಂಗ್ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಯಾಕಂದ್ರೆ, ಇಡೀ ಸಿನಿಮಾ ಶೂಟಿಂಗ್ ಮಾಡುವಾಗ ಯುವರಾಜ್‌ಕುಮಾರ್ ಜೊತೆಯಲ್ಲಿ ಇದ್ದರು. ಅಲ್ಲದೆ ಅಂದು ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ್ದರು. 23 ವರ್ಷಗಳ ಬಳಿಕ ರಿ ರಿಲೀಸ್ ಆದಾಗ ಫಸ್ಟ್ ಡೇ ಫಸ್ಟ್ ಶೋ ನೋಡಿ ಕ್ರೇಜ್ ಹೇಗಿತ್ತು ಅನ್ನೋದನ್ನು ಹಂಚಿಕೊಂಡಿದ್ದಾರೆ.
"ನಾನು ಯೋಚನೆ ಮಾಡುತ್ತಿದ್ದೆ. ಇದು ರಿಲೀಸ್ ಅಥವಾ ರಿ-ರಿಲೀಸಾ ಅಂತ. ಯಾಕಂದ್ರೆ ಈ ಸಿನಿಮಾ ರಿಲೀಸ್ ಆದಾಗ ಫಸ್ಟ್ ಡೇ ಫಸ್ಟ್ ಶೋ ನೋಡಿದ್ದೆ. ಈಗ ರಿ ರಿಲೀಸ್ ಆದಾಗಲೂ ಫಸ್ಟ್ ಡೇ ಫಸ್ಟ್ ಶೋ ನೋಡುತ್ತಿದ್ದೇನೆ. ಅದೇ ಎನರ್ಜಿ ಇದೆ. ಅದೇ ಜೋಷ್ ಇದೆ. ಈ ಸಿನಿಮಾ ಮೊದಲ ಬಾರಿಗೆ ನೋಡಿದಾಗ ಎಷ್ಟು ಖುಷಿ ಆಯ್ತೋ ಅಷ್ಟೇ ಖುಷಿಯಾಗಿದೆ. ಫ್ಯಾನ್ಸ್ ಎಂಜಾಯ್ ಮಾಡುತ್ತಿದ್ದಾರೆ. ಮ್ಯೂಸಿಕ್ ಆಗಲಿ, ಸ್ಟೋರಿಯಾಗಲಿ ಈಗ ನೋಡಿದರೂ ಹೊಸತು ಅಂತ ಅನಿಸುತ್ತಿದೆ." ಎಂದು ಯುವ ರಾಜ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
'ಅಪ್ಪು' ಸಿನಿಮಾದ ಶೂಟಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಎಲ್ಲೆಲ್ಲಿ ಶೂಟಿಂಗ್ ಮಾಡಿದ್ದರು. ಹಾಡುಗಳ ಶೂಟಿಂಗ್ ಹೇಗಾಯ್ತು ಅಂತ ಹೇಳಿದ್ದಾರೆ. "ಈ ಸಿನಿಮಾದ ಇಡೀ ಶೂಟಿಂಗ್ ಮಾಡುವಾಗ ಇದ್ದೀನಿ. ರಾಮಯ್ಯ ಕಾಲೇಜಿನಲ್ಲಿ ಶೂಟಿಂಗ್ ಮಾಡಿದರು. ನಮ್ಮ ಮನೆಯ ಹತ್ತಿರ ಶೂಟ್ ಮಾಡಿದ್ದಾರೆ. ಸದಾಶಿವನಗರದಲ್ಲಿ ಸಿಕ್ಕಾಪಟ್ಟೆ ಶೂಟ್ ಮಾಡಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿ ಶೂಟಿಂಗ್ ಮಾಡಿದ್ದಾರೆ. ಎಲ್ಲಿಂದಲೋ ಆರಂಭವೋ ಹಾಡನ್ನು ಕುಲುಮನಾಲಿಯಲ್ಲಿ ಶೂಟಿಂಗ್ ಮಾಡಿದ್ವಿ. ನಾನು ಆ ಹಾಡಿನ ಇಡೀ ಶೂಟಿಂಗ್‌ನಲ್ಲಿ ಜೊತೆಗೆ ಇದ್ದೆ. ನಾನು ಮೊದಲ ಬಾರಿಗೆ ಅಲ್ಲಿನ ಬೆಟ್ಟ ಹಾಗೂ ಸ್ನೋ ನೋಡಿದ್ದು ಈ ಹಾಡಿನ ಮುಖಾಂತರವೇ. ಎಲ್ಲಾ ನೆನಪುಗಳು ವಾಪಸ್ ಬರುತ್ತಿವೆ" ಎಂದಿದ್ದಾರೆ.

ಹಾಗೇ ಪುನೀತ್ 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಪ್ರತಿವರ್ಷ ಅವರ ಹುಟ್ಟುಹಬ್ಬ ಆಚರಣೆ ಜೋರಾಗಿ ಆಗುತ್ತಲೇ ಇದೆ. 50ನೇ ವರ್ಷವನ್ನಂತೂ ತುಂಬಾನೇ ಜೋರಾಗಿ ಮಾಡುತ್ತಿದ್ದಾರೆ. ಪ್ರತಿಯೊಂದು ಏರಿಯಾ, ಊರು, ಹಳ್ಳೀ ಫ್ಯಾನ್ಸ್ ಎಲ್ಲರೂ ಅವರವರ ಮಟ್ಟಿಗೆ ಏನಾಗುತ್ತಿದೆಯೋ ಎಲ್ಲರೂ ಸೆಲೆಬ್ರೆಟ್ ಮಾಡುತ್ತಿದ್ದಾರೆ. ಅನ್ನದಾನ, ರಕ್ತದಾನ, ಕ್ರಿಕೆಟ್ ಮ್ಯಾಚ್ ನಡೀತಿದೆ, ಕಬಡ್ಡಿ ಮ್ಯಾಚ್ ನಡೀತಿದೆ. ಪ್ರತಿವರ್ಷ ಅವರನ್ನು ಮೆರೆಸುವುದಂತೂ ನಡೀತಾನೇ ಇದೆ." ಎಂದು ಯುವರಾಜ್‌ಕುಮಾರ್ ಹೇಳಿದ್ದಾರೆ.
ಇನ್ನು 'ಅಪ್ಪು' ಸಿನಿಮಾದ ಡೈಲಾಗ್ ಹೇಳಿ ಅಭಿಮಾನಿಗಳನ್ನು ಹುರಿದುಂಬಿಸಿದ್ದಾರೆ. "ಆ ಸಾಂಗ್ ಮತ್ತು ಜನರ ಎನರ್ಜಿ ಇದೆಯಲ್ಲ ಅದು ಕೂರುವುದಕ್ಕೆ ಬಿಡುವುದಿಲ್ಲ. ಎಲ್ಲರನ್ನೂ ಎಬ್ಬಿಸುತ್ತಿದೆ. ಸಖತ್ ಎಂಜಾಯ್ ಮಾಡುತ್ತಿದ್ದೇನೆ. ಎಲ್ಲರೂ ಅಷ್ಟೇ ಎಂಜಾಯ್ ಮಾಡುತ್ತಿದ್ದಾರೆ, ಪ್ರತಿಯೊಬ್ಬರು ಬಂದು ನೋಡಲೇಬೇಕು. ಯಾವಾಗಲೂ ಹೇಳೋದು ಒಂದೇ ಡೈಲಾಗ್. ಬೆಂಗಳೂರಿಗೆ ಸಾವಿರ ಜನ ಬರ್ತಾರೆ ಹೋಗ್ತಾರೆ. ಇಲ್ಲಿ ಇರೋದು ಅವರು ಒಬ್ಬರೇ ಅಪ್ಪು.. ಲೋಕಲ್.." ಎಂದು ಕೊನೆಯಲ್ಲಿ ಯುವರಾಜ್‌ಕುಮಾರ್ ಡೈಲಾಗ್ ಬಿಟ್ಟಿದ್ದಾರೆ.


Click it and Unblock the Notifications











