Yuva weekend box office: 3 ದಿನ.. 3 ರಜೆ.. 'ಯುವ' ಕೈ ಹಿಡಿದರಾ ಕನ್ನಡಿಗರು?
ಯುವ ರಾಜ್‌ಕುಮಾರ್ ಮೊದಲ ಸಿನಿಮಾ 'ಯುವ' ಕಳೆದ ವಾರ ಅದ್ಧೂರಿಯಾಗಿ ಬಿಡುಗಡೆಯಾಗಿತ್ತು. 'ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ', 'ರಾಜಕುಮಾರ'ದಂತಹ ಮೆಗಾ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಸಂತೋಷ್ ಆನಂದ್‌ರಾಮ್ 'ಯುವ'ನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿಯನ್ನು ಹೊತ್ತಿದ್ದರು.
ಪುನೀತ್ ರಾಜ್‌ಕುಮಾರ್ ಅಗಲಿದ ಬಳಿಕ ಅಭಿಮಾನಿಗಳು ಕೂಡ ಯುವ ರಾಜ್‌ಕುಮಾರ್‌ಗೆ ಸಿನಿಮಾ ಮಾಡುವಂತೆ ದುಂಬಾಲು ಬಿದಿದ್ದರು. ಪುನೀತ್ ಬಳಿಕ ಆ ಜಾಗದಲ್ಲಿ ಯುವನನ್ನು ನೋಡುವುದಕ್ಕೆ ಬಯಸಿದ್ದರು. ಅವರ ಒತ್ತಾಸೆಯ ಮೇಲೆ ಸಂತೋಷ್ ಆನಂದ್‌ರಾಮ್ 'ಯುವ' ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದರು. ಆ ಸಿನಿಮಾ ಈಗ ರಿಲೀಸ್ ಆಗಿ ಮೂರು ದಿನಗಳಾಗಿವೆ.

ಯುವ ರಾಜ್‌ಕುಮಾರ್ ಮೊದಲ ಸಿನಿಮಾ ಹೇಗಿರುತ್ತೆ? ಅನ್ನೋ ಪ್ರಶ್ನೆಗಳಿಗೆ ಉತ್ತರನೂ ಸಿಕ್ಕಿದೆ. ಕಳೆದ ಮೂರು ದಿನಗಳು ರಜೆ ಇತ್ತು. ಜೊತೆ ಪರೀಕ್ಷೆಗಳು ಮುಗಿಯುವ ಹಂತದಲ್ಲಿವೆ. ಇವೆಲ್ಲವನ್ನೂ ಲೆಕ್ಕಾಚಾರ ಹಾಕಿ ಬಿಡುಗಡೆ ಮಾಡಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣ, ಸಂತೋಷ್ ಆನಂದ್‌ರಾಮ್ ನಿರ್ದೇಶನ, ರಾಜ್‌ಕುಮಾರ್ ಕುಟುಂಬದ ಕುಡಿಯ ಎಂಟ್ರಿ. ಇವೆಲ್ಲವೂ 'ಯುವ' ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿತ್ತು. ಹಾಗಿದ್ರೆ ಮೊದಲ ಮೂರು ದಿನಗಳ ಕಲೆಕ್ಷನ್ ಬಗ್ಗೆ ವಿತರಕರ ವಲಯದಲ್ಲಿ ರಿಪೋರ್ಟ್ ಏನಿದೆ? ತಿಳಿಯಲು ಮುಂದೆ ಓದಿ.
'ಯುವ' ಮೂರನೇ ದಿನ ಕಲೆಕ್ಷನ್ ಏನು?
ಯುವ ರಾಜ್‌ಕುಮಾರ್ ಸಿನಿಮಾದ ಕಲೆಕ್ಷನ್ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್‌ಗಳ ನಿರೀಕ್ಷೆ ಹುಸಿಯಾಗಿದೆ. ದೊಡ್ಡ ಮಟ್ಟದ ಓಪನಿಂಗ್ ಸಿನಿಮಾಗೆ ಸಿಕ್ಕಿಲ್ಲ. ಆದರೂ, ಯುವ ನಾಯಕನ ಸಿನಿಮಾಗೆ ಇದೂವರೆಗೂ ಸಿಕ್ಕಿರುವ ರಿಯಾಕ್ಷನ್ ಉತ್ತಮ ಎನ್ನುವ ಟಾಕ್ ಕೂಡ ಇದೆ. ಅಂದ್ಹಾಗೆ ಮೂರನೇ ದಿನ ಅಂದರೆ ನಿನ್ನೆ (ಮಾರ್ಚ್ 31) ಕರ್ನಾಟಕದಾದ್ಯಂತ ಸುಮಾರು 1.80 ಕೋಟಿ ರೂಪಾಯಿ ಗಳಿಕೆ ಮಾಡಿದೆ ಅಂತ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
3 ದಿನಗಳ ಕಲೆಕ್ಷನ್ ಏನು?
ಹೊಂಬಾಳೆ ಫಿಲ್ಮ್ಸ್ ಅಂತಹ ಸಂಸ್ಥೆ ನಿರ್ಮಾಣ ಮಾಡಿದ್ದರಿಂದ 'ಯುವ' ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಓಪನಿಂಗ್ ಸಿಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಮೊದಲ ದಿನದಿಂದ ಮೂರನೇ ದಿನದವರೆಗೂ ಏಕರೂಪದ ಕಲೆಕ್ಷನ್ ಆಗಿದೆ. ಮೊದಲ ಮೂರು ದಿನಗಳಲ್ಲಿ ಸಿನಿಮಾ 5.50 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಯುವ ಬಾಕ್ಸಾಫೀಸ್ ಕಲೆಕ್ಷನ್ (3 ದಿನ)
- ಮೊದಲ ದಿನ - 2.10 ಕೋಟಿ ರೂಪಾಯಿ
- ಎರಡನೇ ದಿನ - 1.60 ಕೋಟಿ ರೂಪಾಯಿ
- ಮೂರನೇ ದಿನ - 1.80 ಕೋಟಿ ರೂಪಾಯಿ
- ಒಟ್ಟು - 5.50 ಕೋಟಿ ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಹೇಗಿದೆ ರೆಸ್ಪಾನ್ಸ್?
'ಯುವ' ಸಿನಿಮಾಗೆ ಕರ್ನಾಟಕದಾದ್ಯಂತ ಸಾಧಾರಾಣ ಓಪನಿಂಗ್ ಸಿಕ್ಕಿದೆ. ರಜೆ ಇದ್ದರೂ ನಿರೀಕ್ಷೆ ಮಾಡಿದಷ್ಟು ಮಂದಿ ಥಿಯೇಟರ್‌ಗೆ ಬಂದಿಲ್ಲ. ಬೆಂಗಳೂರಿನಲ್ಲಿ ಅತಿ ಹೆಚ್ಚು 3.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಉಳಿದಂತೆ ಮಂಡ್ಯ, ಹಾಸನ, ದಾವಣಗೆರೆ, ಬಳ್ಳಾರಿ, ತುಮಕೂರು, ಹೊಸಪೇಟೆ, ಚಿತ್ರದುರ್ಗ, ಹುಬ್ಬಳ್ಳಿ ಭಾಗಗಳಲ್ಲಿ ಉತ್ತಮ ಕಲೆಕ್ಷನ್ ಆಗಿದೆ ಎಂದು ಕರ್ನಾಟಕ ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಡ್ಡಿ ಆಗುತ್ತಿರುವುದು ಎಲ್ಲಿ?
'ಯುವ' ಸಿನಿಮಾ ಬಿಡುಗಡೆ ಬಗ್ಗೆನೇ ಹಲವು ಪ್ರಶ್ನೆಗಳು ಎದ್ದಿವೆ. ಐಪಿಎಲ್ ಆರಂಭ ಆದ ಬೆನ್ನಲ್ಲೇ 'ಯುವ' ಸಿನಿಮಾ ಬಿಡುಗಡೆಯಾಗಿದೆ. ಹೀಗಾಗಿ ಮ್ಯಾಚ್ ಶುರುವಾಗುವ ಸಮಯದಲ್ಲಿ ಥಿಯೇಟರ್‌ನ ಆಕ್ಯೂಪೆನ್ಸಿ ಕಮ್ಮಿಯಾಗಿದೆ. ಇನ್ನೊಂದು ಕಡೆ ಇನ್ನೂ ಎಗ್ಸಾಂ ಮೂಡಿನಿಂದ ಜನರು ಹೊರಬಂದಿಲ್ಲ. ಈ ಎರಡು ಕಾರಣಗಳು ಬಹುಶ: 'ಯುವ'ಗೆ ಅಡೆತಡೆಯಾಗಿರಬಹುದು.
ಸೂಚನೆ: ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ಬಾಕ್ಸಾಫೀಸ್ ಬಗ್ಗೆ ಇನ್ನು ಮಾಹಿತಿ ಹಂಚಿಕೊಂಡಿಲ್ಲ. ಇದು ಕನ್ನಡ ಚಿತ್ರರಂಗದ ಹಲವು ವಲಯಗಳಿಂದ ಮಾಹಿತಿ ಕಲೆ ಹಾಕಿ ಬಾಕ್ಸಾಫೀಸ್ ವರದಿಯನ್ನು ಸಿದ್ಧಪಡಿಸಲಾಗಿದೆ.


Click it and Unblock the Notifications











